ಬಿಜೆಪಿಯಿಂದ ಹೊರ ಬಂದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅಧಿಕೃತವಾಗಿ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. ಇದರ ಬೆನ್ನಲ್ಲೇ ಈಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸಿಪಿ ಯೋಗೇಶ್ವರ್ ಅವರನ್ನು ಕಣಕ್ಕಿಸುತ್ತಿದೆ. ನಾಳೆ ಬೆಳಿಗ್ಗೆ ನಾಮಪತ್ರ ಸಲ್ಲಿಸುತ್ತೇವೆ ಅದಕ್ಕೆ ಸಮಯ ನಿಗದಿಯಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಸಿಪಿ ಯೋಗೇಶ್ವರ್ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಎಐಸಿಸಿ ಅಧ್ಯಕ್ಷರಿಗೆ ಕಳಿಸಿದ್ದು ಅವರು ತೀರ್ಮಾನ ಮಾಡುತ್ತಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇವೆ ನಾನು ಸಿಎಂ ಡಿಕೆ ಸುರೇಶ್ ಇನ್ನಿತರ ನಾಯಕರು ಬರುತ್ತೇವೆ. ಎಲ್ಲಾ ಕಾರ್ಯಕರ್ತರು ಅಲ್ಲಿಗೆ ಬರಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಮೂಲಕ ಡಿಕೆಶಿ ಅಧಿಕೃತವಾಗಿ ಯೋಗೇಶ್ವರ್ ಅವರೇ ಅಭ್ಯರ್ಥಿ ಎಂಬುದನ್ನು ಈ ಸಮಯದಲ್ಲಿ ಘೋಷಣೆ ಮಾಡಿದ್ದಾರೆ.
ಮಾಜಿ ಸಚಿವ, ಬಿಜೆಪಿ ಮುಖಂಡ ಸಿ ಪಿ ಯೋಗೇಶ್ವರ್ ಅವರು ಪಕ್ಷ ತೊರೆದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಡಾ. ಎಂ ಸಿ ಸುಧಾಕರ್, ಮಾಜಿ ಸಂಸದ ಡಿ ಕೆ ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯ ಡಾ. ಜಿ.ಸಿ. ಚಂದ್ರಶೇಖರ್, ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಶಾಸಕರಾದ ಮಾಗಡಿ ಬಾಲಕೃಷ್ಣ, ಡಾ ರಂಗನಾಥ್, ಕದಲೂರು ಉದಯ್, ರವಿ ಗಣಿಗ, ಪೊನ್ನಣ್ಣ, ಎಂಎಲ್ಸಿಗಳಾದ ಪುಟ್ಟಣ್ಣ, ನಜೀರ್ ಅಹ್ಮದ್, ದಿನೇಶ್ ಗೂಳಿಗೌಡ, ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತೀಕ್, ಮತ್ತಿತರರು ಉಪಸ್ಥಿತರಿದ್ದರು.