“ಒಳಗೊಳ್ಳುವಿಕೆ-ಮುಂದಣ ಹೆಜ್ಜೆ”

Most read

ಮಾರುಕಟ್ಟೆ ಆಧಾರಿತ ತತ್ವದ ಹಿಂದಿನ ಧನದಾಹ, ಧರ್ಮ, ಸಂಸ್ಕೃತಿಯ ಮಾರುವೇಷದಲ್ಲಿ ನಮ್ಮ ಮೈಮರೆಸುತ್ತಿರುವ ಈ ಹೊತ್ತಲ್ಲಿ ಶಿಕ್ಷಣ, ಆರೋಗ್ಯದಂತಹ, ವಿಷಯಗಳಲ್ಲಿ ಜನಪ್ರತಿನಿಧಿಗಳ ಬದ್ಧತೆಯನ್ನು ಪ್ರಶ್ನೆ ಮಾಡದಿದ್ದರೆ ಜನ ಸಾಮಾನ್ಯರು ಒಳಗೊಳ್ಳುವ ಅವಕಾಶ ಶಾಶ್ವತವಾಗಿ ಕಳೆದು ಹೋದೀತು. ?- ಡಾ. ಉದಯ ಕುಮಾರ ಇರ್ವತ್ತೂರು.

ಎಲ್ಲರನ್ನು ಒಳಗೊಳ್ಳುವುದು ನಮ್ಮ ಆಡಳಿತ ಮತ್ತು ಅಭಿವೃದ್ಧಿಯ ಉದ್ದೇಶ ಎನ್ನುವುದನ್ನು ಇದುವರೆಗೆ ಆಡಳಿತ ನಡೆಸಿದ ಮತ್ತು ನಡೆಸುತ್ತಿರುವ ಸರಕಾರಗಳು ಹೇಳುತ್ತಲೇ ಬಂದಿವೆ. ಒಳಗೊಳ್ಳುವುದು ಎಂದರೇನು? ಆಡಳಿತದಲ್ಲಿ ಮತ್ತು ಅಭಿವೃದ್ಧಿಯಲ್ಲಿ ಇದು ಹೇಗೆ ಕಾರ್ಯಾಚರಿಸುತ್ತದೆ?. ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಜನಸಮುದಾಯವನ್ನು ಒಳಗೊಳ್ಳುವಂತೆ ಮಾಡುವ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ? ಇಂತಹ ಉದ್ದೇಶದ ಈಡೇರಿಕೆಗೆ ಎದುರಾಗುತ್ತಿರುವ ಸವಾಲುಗಳೇನು?

ಹಿಂದಿನ ಕಾಲದಲ್ಲಿ ಅಧಿಕಾರ ಎನ್ನುವುದು ರಾಜ ಮಹಾರಾಜರ ಕೈಯಲ್ಲಿ ಇತ್ತು. ಆನಂತರ ಅಂದರೆ ಆಧುನಿಕತೆಯ ಆರಂಭದ ಸಮಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಹಿಡಿತವಿದ್ದ ಕಾರಣ ಅದು ವಸಾಹತುಶಕ್ತಿಯ ಕೈಯಲ್ಲಿ ಕೇಂದ್ರೀಕೃತವಾಯಿತು. ಸಾಮ್ರಾಜ್ಯಶಾಹಿ ವ್ಯವಸ್ಥೆ ವಸಾಹತುಗಳನ್ನು ಮಿತಿಮೀರಿ ಶೋಷಣೆ ಮಾಡಲು ಹೊರಟ ಕಾರಣ ವಸಾಹತುಗಳು ಬಿಡುಗಡೆ ಹೊಂದಲು ಮುಂದಾದ ಪರಿಣಾಮವಾಗಿ ಸ್ವಾತಂತ್ರ್ಯ ಚಳುವಳಿಯ ಬೀಜಾಂಕುರವಾಯಿತು. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ರಾಷ್ಟ್ರೀಯತೆಯ ಚಳುವಳಿ ವೇಗ ಪಡೆದುಕೊಳ್ಳ ಬೇಕಾದರೆ ಈ ಒಳಗೊಳ್ಳುವಿಕೆಯ ತತ್ವ ಕೆಲಸ ಮಾಡಬೇಕಾಯಿತು. ನಮ್ಮ ರಾಷ್ಟ್ರೀಯ ಚಳುವಳಿಯ ನಾಯಕರು, ವಸಾಹತುಶಾಹಿಯ ವಿರುದ್ಧ ದೊಡ್ಡ ಹೋರಾಟ ಸಂಘಟಿಸುವ ಹೊತ್ತಿಗೆ, ಇಡೀ ದೇಶದ ಜನ ಸಮುದಾಯವನ್ನು ಈ ಹೋರಾಟದಲ್ಲಿ ಸೇರಿಸಿಕೊಳ್ಳುವ ಅಗತ್ಯ ತುಂಬಾ ಇತ್ತು. “ನಮಗೆ ಯಾರಾದರೇನು? ಮೆದುಳು ಕಿವಿಯನ್ನು ಅನುಸರಿಸಿ, ಹೊಟ್ಟೆ ಬಾಯಿಯನ್ನು ಅನುಸರಿಸುವಷ್ಟು ದಿನ ನಮಗೆ ಯಾರಾದರೇನು? ಏನಾದರೇನು? ಎನ್ನುವುದು ಜನಸಾಮಾನ್ಯರ ಅಭಿಪ್ರಾಯವಾಗಿತ್ತು. ನಮ್ಮ ಕನಸು, ಕಾಳಜಿ ಸೇರಿ ನಾವು ಒಂದು ಸಮುದಾಯವಾಗಿ ನಮ್ಮ ಭವಿಷ್ಯ ನಾವೇ ನಿರ್ಧರಿಸುವ ಹಾಗೆ ಆಗಬೇಕಿದ್ದರೆ, ಒಂದು ಸಾಂಘಿಕ ಹೋರಾಟದ ಮೂಲಕ ವಸಾಹತು ಶಕ್ತಿಯನ್ನು ಹಿಮ್ಮೆಟ್ಟಿಸಬೇಕು ಎನ್ನುವುದೇ ರಾಷ್ಟ್ರೀಯ ಹೋರಾಟದ ನಾಯಕರ ಮನವಿಯಾಗಿತ್ತು. ಆದರೆ ಇದನ್ನು ಒಪ್ಪುವುದು ಕೆಲವರಿಗೆ ಸುಲಭವಾಗಿರಲಿಲ್ಲ? ಯಾಕೆಂದರೆ ತಮ್ಮ ಶ್ರೇಷ್ಠತೆಗೆ ಎಲ್ಲಿ ಸಂಚಕಾರ ಬರುತ್ತದೋ ಎನ್ನುವ ಅಭದ್ರತೆ. ಅಂತಹ ಅಭಿಪ್ರಾಯ ಇದ್ದವರಿಗೆ ಬ್ರಿಟಿಷರು ಎಂದೂ ವೈರಿಗಳಾಗಿ ಕಾಣಲೇ ಇಲ್ಲ. ಸ್ವಾತಂತ್ರ್ಯ ಚಳುವಳಿ ಫಲ ನೀಡಿ ಸ್ವತಂತ್ರರಂತೂ ಆಗಿದ್ದೇವೆ ಬಿಡಿ.

ರಾಷ್ಟ್ರೀಯ ಹೋರಾಟ

ದೇಶದ ಆಗು ಹೋಗುಗಳು, ಎಲ್ಲ ಜನವರ್ಗದ ಜನರ ಆಶೋತ್ತರಗಳನ್ನು ಆಧರಿಸಿ ನಿರ್ಧರಿತವಾಗುವ ಒಂದು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯೇ ಎಲ್ಲರನ್ನು ಒಳಗೊಳ್ಳುವ ಆಡಳಿತ ನೀತಿ. ಅಭಿವೃದ್ಧಿ ನೀತಿ ಕೂಡಾ ಇದೇ ರೀತಿಯಾಗಿದ್ದು ಅಭಿವೃದ್ಧಿಯ ಫಲ ಸಮಾಜದ ಎಲ್ಲ ವರ್ಗಗಳಿಗೂ ಲಭ್ಯವಾಗುವಂತಿರುತ್ತದೆ. ಇಂತಹ ಒಂದು ವ್ಯವಸ್ಥೆಯಲ್ಲಿ ಅಧಿಕಾರ ಎನ್ನುವುದು ಒಂದು ಕಡೆ ಸಾಂದ್ರವಾಗಿ ಕೇಂದ್ರೀಕೃತವಾಗದೇ ಸಮುದಾಯದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುತ್ತದೆ. ಇದನ್ನು ಬಹಳ ಸರಳವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕರೆಯುತ್ತೇವೆ. ಎಲ್ಲ ಏಳು ಬೀಳುಗಳ ನಡುವೆ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಎಲ್ಲರ ಧ್ವನಿಗೂ ಅವಕಾಶವಿರುವ ತಾತ್ವಿಕ ಮತ್ತು ಗಣತಾಂತ್ರಿಕ ಪ್ರಜಾಪ್ರಭುತ್ವ ನಮ್ಮದಾಗಿತ್ತು. ವಾಸ್ತವಿಕವಾಗಿ ನಿರೀಕ್ಷಿತ ಫಲ ದೊರೆಯದೇ ಹೋಗಲು ದೀರ್ಘಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ಕಾರಣವೆಂದು ಹೇಳಲಾಯಿತು.

2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ಅನೇಕ ಕಾರಣಗಳನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್.ಡಿ.ಎ ಒಕ್ಕೂಟ  ಅಧಿಕಾರಕ್ಕೆ ಬಂದಿತು. ಆನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಒಳಗೊಳ್ಳುವ ಪ್ರಕ್ರಿಯೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಹಿನ್ನಡೆಯಾಗಿರುವುದನ್ನು ಕಾಣಬಹುದಾಗಿದೆ. 2014ರ ನಂತರ ಈ ಮೊದಲಿನಂತೆ ಒಳಗೊಳ್ಳುವ ಪ್ರಕ್ರಿಯೆಗೆ ಒಂದು ತಾಂತ್ರಿಕ ಪ್ರಯತ್ನವೂ ಪೇಲವವಾಗಿರುವುದು ಮಾತ್ರವಲ್ಲ, ಜನಧ್ವನಿ ವ್ಯಕ್ತ ಪಡಿಸುವ ಪ್ರಜಾತಾಂತ್ರಿಕ ವಿಧಾನಗಳನ್ನೂ ಮೈಲಿಗೆಯಾಗಿಸುವ ಹುನ್ನಾರಗಳು ಮಾನ್ಯತೆ ಪಡೆದುಕೊಳ್ಳುವ ರೀತಿಯಲ್ಲಿ ಅಧಿಕಾರ ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ಅಭಿವೃದ್ಧಿಯ ದರ, ಹಸಿವಿನ ಸೂಚ್ಯಂಕ, ಸಾಮಾಜಿಕ ಅಸಮಾನತೆ, ಪತ್ರಿಕಾ ಸ್ವಾತಂತ್ರ್ಯ, ಆಡಳಿತ ವಿಕೇಂದ್ರೀಕರಣ, ಅಧಿಕಾರದ ದುರ್ಬಳಕೆ, ಆಡಳಿತದ ಎಲ್ಲ ವ್ಯವಸ್ಥೆಗಳಲ್ಲಿ ಪಾರದರ್ಶಕತೆಯ ಕೊರತೆ, ದೇಶದ ನ್ಯಾಯಾಂಗ, ಕಾನೂನು ಸುವ್ಯವಸ್ಥೆ, ತನಿಖಾ ಸಂಸ್ಥೆ ಇತ್ಯಾದಿಗಳೆಲ್ಲವೂ ಸಾರ್ವಭೌಮ ಸರಕಾರದ ನಿರ್ದೇಶನದಂತೆ ನಡೆಯುವ ಬದಲು ಪಕ್ಷ ನಿಷ್ಠ ಆಡಳಿತ ಧೋರಣೆಯ ಏಕಮುಖೀ ಚಿಂತನೆಯ ನಾಯಕರ ಆಣತಿಯಂತೆ ನಡೆಯುವ ಸ್ಥಿತಿ ಇದೆ ಎಂದರೆ ತಪ್ಪಾಗಲಾರದು.

ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಮತ್ತು ವಿದೇಶೀ ನೀತಿಗಳು ಕೇಂದ್ರೀಕರಣದ ಸ್ವರೂಪ ಪಡೆಯುತ್ತಾ ಸಾಗುತ್ತಿದೆ. ದೇಶದ ಆಡಳಿತ ಮತ್ತು ಅಭಿವೃದ್ಧಿ ನೀತಿಯ ಮೇಲೆ ಉದ್ಯಮ ವಲಯದ ಅದರಲ್ಲಿಯೂ ಗುಜರಾತ್ ಮೂಲದ ಉದ್ಯಮ ವಲಯದ ಹಿಡಿತ ಬಲಗೊಳ್ಳುತ್ತಲೇ ಹೋಗುತ್ತಿರುವುದನ್ನು ಗಮನಿಸಬಹುದು. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಇರುವುದು ಹಣ ಮತ್ತು ಸಂಪತ್ತು. ಇದರ ಪರಿಣಾಮವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳು ಸಡಿಲವಾಗಿ, ಅಧಿಕಾರ ಕೇಂದ್ರೀಕರಣಗೊಳ್ಳುವ ಪ್ರಕ್ರಿಯೆ ಇನ್ನಷ್ಟು ವೇಗದಲ್ಲಿ ಮುಂದುವರಿಯಬಹುದು. ಈ ರೀತಿಯ ಪರಿವರ್ತನೆಗಳು ಆಗುವಾಗ ಜನ ಸಮುದಾಯದಲ್ಲಿ ಈ ಕುರಿತ ಚರ್ಚೆ, ಸಂವಾದಗಳನ್ನು ಹುಟ್ಟು ಹಾಕುವುದು ಸಂಶೋಧಕರ, ಶಿಕ್ಷಕರ, ಬುದ್ಧಿವಂತರ ಜವಾಬ್ದಾರಿ. ಇಂತಹ ಅಪಾಯಕಾರಿ ಸ್ಥಿತಿಯನ್ನು ನಿಯಂತ್ರಿಸುವಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ಪ್ರಮುಖ ಪಾತ್ರ ವಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಚೈತನ್ಯ ತುಂಬಿದ ನಿದರ್ಶನಗಳು ಬಹಳ ಇವೆ. ನಮ್ಮ ದೇಶದಲ್ಲಿ ಇಂದು ಈ ಎರಡು ಕ್ಷೇತ್ರಗಳನ್ನು ಸ್ಥಾಪಿತ ಹಿತಾಸಕ್ತಿಗಳು ಸತ್ವಹೀನ ಗೊಳಿಸಲು ಪ್ರಯತ್ನಿಸುತ್ತಿವೆ.

ಸ್ವಾತಂತ್ರ್ಯಾನಂತರದ ದಿನಗಳಿಂದ ತೊಂಭತ್ತರ ದಶಕದ ವರೆಗೂ ಸಮಾಜದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದುದು ಶಿಕ್ಷಣ ಮತ್ತು ಸಾಹಿತ್ಯ ವಲಯ. ಅದು ಮೀಸಲಾತಿ ಇರಬಹುದು, ಖಾಸಗೀಕರಣ ಇ ರಬಹುದು, ಮೂಢನಂಬಿಕೆ ಇರಬಹುದು, ಕೋಮುವಾದ ಇರಬಹುದು, ಪರಿಸರ, ಲಿಂಗ ಸಮಾನತೆ ಇತ್ಯಾದಿ ಯಾವುದೇ ವಿಷಯ ಸಾಮಾಜಿಕ ಆಯಾಮ ಪಡೆದುಕೊಂಡಿದ್ದರೆ ಆ ಕುರಿತು ಮುಕ್ತ ಚರ್ಚೆಯಾಗುತ್ತಿತ್ತು. ಸರಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಆಗೊಮ್ಮೆ ಈಗೊಮ್ಮೆ ವಿಪರೀತವಾಗಿ ವರ್ತಿಸಿದ ಸಂದರ್ಭಗಳು ಇರಬಹುದಾದರೂ ಚಳುವಳಿಗಳಿಗೆ ಅಪಾಯವಿರಲಿಲ್ಲ. ಆದರೆ ಆನಂತರದ ದಿನಗಳಲ್ಲಿ ಚರ್ಚೆ, ವಾದ, ಸಂವಾದಗಳಿಗೆ ಅವಕಾಶಗಳು ಇಳಿಮುಖವಾಗುತ್ತಾ ಬಂದು, 2014ರ ನಂತರವಂತೂ ಸತ್ಯಾಗ್ರಹ, ಚಳುವಳಿ, ವಿರೋಧ ನಡೆಸುವುದೆಂದರೆ ರಾಷ್ಟ್ರ ವಿರೋಧಿ ಕೆಲಸ ಎನ್ನುವಲ್ಲಿಗೆ ಬಂದು ನಿಂತಿದೆ.

ಶಿಕ್ಷಣ ರಂಗದಲ್ಲಿರುವ ಹಳೆ ತಲೆಮಾರಿನ ಹಲವು ವಿದ್ವಾಂಸರು ನೇಪಥ್ಯಕ್ಕೆ ಸರಿದರೆ, ಇನ್ನು ಕೆಲವರ ಬಾಯಿಮುಚ್ಚಿಸಲಾಗಿದೆ. ಕೆಲವು ಕಡೆ ಶಾಶ್ವತವಾಗಿ ಮೌನವಾಗಿರಿಸುವ ಮಟ್ಟಿಗೆ ಅಧಿಕಾರದ ಅಸಹಾಯಕತೆಯೋ, ದೌರ್ಜನ್ಯವೋ ಮುಂದುವರಿದಿದೆ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ರಾಜಕೀಯವನ್ನು ಪ್ರಜ್ಞಾಪೂರ್ವಕವಾಗಿ ಕಲುಷಿತಗೊಳಿಸಿ, ವಿದ್ಯಾರ್ಥಿಗಳು ತಾವು ಯಾರ ಪರವಾಗಿ ಏನು ಮಾಡುತ್ತಿದ್ದೇವೆ, ನಮ್ಮ ಸಮಸ್ಯೆಗಳೇನು? ಅವುಗಳಿಗೆ ಕಾರಣವೇನು? ಎಂದು ತಿಳಿಯದೇ ಒಟ್ಟಾರೆ ಗೊಂದಲದಲ್ಲಿದ್ದಾರೆ. ಸಾರ್ವಜನಿಕ ಶಿಕ್ಷಣ ರಂಗ ಬಲಹೀನವಾಗುತ್ತಿದೆ. ಸರಕಾರವೇ ಸರಕಾರದ ವ್ಯವಸ್ಥೆಯನ್ನು ಯಾಕೆ ಬಲಹೀನವನ್ನಾಗಿ ಮಾಡುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದ್ದರೆ ನಮ್ಮ ಸರಕಾರದ ಆಧಾರಗಳಾದ ಜನಪ್ರತಿನಿಧಿಗಳನ್ನು ನೋಡಿದರೆ ಕೆಲವೊಂದು ಒಳನೋಟಗಳು ದೊರೆಯುತ್ತವೆ.

ಚುನಾವಣೆಗಳ ಮೂಲಕ ಜನರನ್ನು ಪ್ರತಿನಿಧಿಸುವ ಕೆಲಸ ಇವತ್ತು ನಿಧಿ ಇದ್ದವರಿಗೆ ಮಾತ್ರ ಕೈಗೆಟಕುವ ಪರಿಸ್ಥಿತಿ ಇದೆ. ಇದಕ್ಕೆ ಸರಿಯಾಗಿ ಜನ ಸಾಮಾನ್ಯರೂ ಬುದ್ಧಿಯ ಬದಲು ಭಾವನೆಗಳಿಗೆ ದಾಸರಾಗಿದ್ದಾರೆ. ಈ ಎಲ್ಲ ಸಂಗತಿಗಳಿಂದ ನಮ್ಮ ಬಹುಪಾಲು ಜನಪ್ರತಿನಿಧಿಗಳು ‘ಮನಿರತ್ನ’ ‘ಗಣಿರತ್ನ’ ‘ಭೂರತ್ನ’ ಗಳಾಗಿ ಬಿಟ್ಟಿದ್ದಾರೆ. ಬಹುಪಾಲು ಶಾಸಕರಿಗೆ ವೈಯಕ್ತಿಕವಾಗಿ ಅವರದೇ ಆದ ಹೊನ್ನು ಬೆಳೆಯುವ ಕೈತೋಟಗಳಿವೆ. ಇನ್ನೊಂದೆಡೆ ಸಾಂಘಿಕವಾಗಿ, ವೈಯಕ್ತಿಕ ಮತ್ತು ವರ್ಗ ಹಿತಾಸಕ್ತಿಯನ್ನು ಕಾಯುವ ಉದ್ದೇಶವಿರುವ ಧರ್ಮ ಸಂಸ್ಕೃತಿ ಲೇಪಿತ ಸಿದ್ಧಾಂತ ಅವರ ರಕ್ಷಣೆಗೆ ಅನುಕೂಲಕರವಾಗಿದೆ. ಇದನ್ನು ಸ್ವಲ್ಪ ಮಟ್ಟಿಗೆ ತಿಳಿಯಾಗಿಸುವ ಶಕ್ತಿ ಇರುವುದು ಪತ್ರಿಕಾರಂಗಕ್ಕೆ ಮತ್ತು ಶಿಕ್ಷಣಕ್ಕೆ. ಪತ್ರಿಕಾರಂಗವೂ ಉದ್ಯಮವಾಗಿ ಪರಿವರ್ತನೆಯಾಗುತ್ತಿದ್ದು, ಪ್ರಾಯಶಃ ಜಗತ್ತಿನಲ್ಲಿ ಭಾರತದ ಪತ್ರಿಕೋದ್ಯಮದ ಸ್ಥಿತಿ ಹೇಗಿದೆ ಎನ್ನುವುದರ ವಿವರಗಳು ಕೂಡಾ ನಿರಾಶಾದಾಯಕವೇ.

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಂತೂ ದಿನದಿಂದ ದಿನಕ್ಕೆ ಬಲಹೀನಗೊಳ್ಳತ್ತಾ ಸಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೇ ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದ ವರೆಗಿನ ಪರಿಸ್ಥಿತಿ ಅಯೋಮಯವಾಗಿದೆ. ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಖಾಸಗೀಕರಣಗೊಳ್ಳುತ್ತಿದೆ. ಖಾಸಗೀಕರಣವಾದಾಗ ಅಗತ್ಯ ಬಿದ್ದರೆ ಕೇಸರೀಕರಣವೂ ಸುಲಭವೇ. ಮೇಲ್ನೋಟಕ್ಕೆ ಉನ್ನತ ಶಿಕ್ಷಣ ವಲಯದ ವಿಶ್ವವಿದ್ಯಾನಿಲಯಗಳು ಸಮಸ್ಯೆಯಲ್ಲಿವೆ, ಕಾಲೇಜುಗಳಿಗೆ ಸರಕಾರ ಅಗತ್ಯವಿದ್ದಷ್ಟು ಮಹತ್ವ ನೀಡುತ್ತಿಲ್ಲವೆನಿಸಿದರೂ, ನಿಜವಾದ ಕಾರಣ ಇಷ್ಟು ಸರಳವಾಗಿದೆ ಅನಿಸುತ್ತಿಲ್ಲ. ಶಿಕ್ಷಣರಂಗ ದಿನದಿಂದ ದಿನಕ್ಕೆ ನಿಸ್ತೇಜವಾಗುತ್ತಿರುವುದು, ಈ ದೇಶದಲ್ಲಿ ಪ್ರಜಾಪ್ರಭುತ್ವ ಆಡಳಿತದಲ್ಲಿ ಮತ್ತು ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆಯ ಮಟ್ಟ ಕುಸಿಯುತ್ತಿರುವುದರ ಸೂಚನೆ.

ಭಾರತದಲ್ಲಿ ಆಗುತ್ತಿರುವ ಅಭಿವೃದ್ಧಿಯ ಫಲ ಕೆಲವರಿಗಷ್ಟೇ ಸಿಕ್ಕಿ ಬಡವ ಶ್ರೀಮಂತರ ನಡುವಿನ ವ್ಯತ್ಯಾಸ ಹೆಚ್ಚುತ್ತಲೇ ಹೋಗುತ್ತಿರುವುದು, ದೇಶದ ಮೂಲ ಮತ್ತು ಸ್ವರೂಪಾತ್ಮಕ ಸಾಮರ್ಥ್ಯವಾಗಿರುವ ಬಹುತ್ವದ ಬೇರುಗಳು ಸಡಿಲ ಗೊಳ್ಳುತ್ತಿರುವುದು, ಮಾರುಕಟ್ಟೆ ಆಧಾರಿತ ತತ್ವದ ಹಿಂದಿನ ಧನಧಾಹ, ಧರ್ಮ, ಸಂಸ್ಕೃತಿಯ ಮಾರುವೇಷದಲ್ಲಿ ನಮ್ಮ ಮೈಮರೆಸುತ್ತಿರುವ ಈ ಹೊತ್ತಲ್ಲಿ ಶಿಕ್ಷಣ, ಆರೋಗ್ಯದಂತಹ, ವಿಷಯಗಳಲ್ಲಿ ಜನಪ್ರತಿನಿಧಿಗಳ ಬದ್ಧತೆಯನ್ನು ಪ್ರಶ್ನೆ ಮಾಡದಿದ್ದರೆ ಜನ ಸಾಮಾನ್ಯರು ಒಳಗೊಳ್ಳುವ ಅವಕಾಶ ಶಾಶ್ವತವಾಗಿ ಕಳೆದು ಹೋದೀತು. ಸರಕಾರದ ಗುರಿ ಮತ್ತು ದಾರಿ ಜನರಾಗಬೇಕೇ ಹೊರತು ಹಣವಾಗಬಾರದು. ಎನ್ನುವುದನ್ನು ಸರಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಕಿವಿಹಿಂಡಿ ಹೇಳಬೇಕಿರುವ ಜನರೇ ಕಾಂಚಾಣದೆದುರು ಕುರುಡರಾದರೆ ಕಾಯುವವರು ಯಾರು?

ಡಾ. ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ- ನ್ಯಾಯದೇವತೆಯ ಸ್ವರೂಪ ಬದಲಾದರೆ ನ್ಯಾಯಾಂಗ ವ್ಯವಸ್ಥೆ ಬದಲಾದೀತೆ?

More articles

Latest article