ಅರಣ್ಯ ಭೂಮಿ ಒತ್ತುವರಿ ದೂರಿನ ಬಗ್ಗೆ ಸಚಿವ ಬೋಸರಾಜು ಮೊದಲ ಪ್ರತಿಕ್ರಿಯೆ ಏನು ಗೊತ್ತಾ?

Most read

ನಾನು ಯಾವುದೇ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಲ್ಲ ಎಂದು ಸಣ್ಣನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಸಮರ್ಥನೆ ಮಾಡಿಕೊಂಡಿದ್ದಾರೆ.

ರಾಜ್ಯಪಾಲರಿಗೆ ದೂರು ನೀಡಿರುವ ಹಿನ್ನೆಲೆ ಸ್ಪಷ್ಟನೆ ನೀಡಿರುವ ಸಚಿವ ಎನ್.ಎಸ್.ಬೋಸರಾಜು, ನನ್ನ ಪತ್ನಿ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು. 1987ರಲ್ಲಿ ಪಟ್ಟಾದಾರರಿಂದ ಕೃಷಿ ಭೂಮಿ ಖರೀದಿ ಮಾಡಿದ್ದೇನೆ. 2022ರಲ್ಲಿ ಅರಣ್ಯ ಇಲಾಖೆಯವರು ನೋಟಿಸ್ ಕಳುಹಿಸಿದ್ದರು. ನೋಟಿಸ್ ವಿರುದ್ಧ ಕಲಬುರಗಿ ಹೈಕೋರ್ಟ್‌ಲ್ಲಿ ಮೆಟ್ಟಿಲೇರಿದ್ದೆ. ಕೋರ್ಟ್‌ಲ್ಲಿ ಆ ಕೇಸ್ ರದ್ದುಗೊಂಡಿದೆ. ಹೀಗಾಗಿ ಸಮಸ್ಯೆ ಬಗೆಹರಿದಿದೆ ಎಂದಿದ್ದಾರೆ.

ನಮಗೆ ಮಾತ್ರವಲ್ಲ ಒಟ್ಟು 1700 ಎಕರೆ ಪ್ರದೇಶದ ಸರ್ವೇ ನಂಬರ್ ಗಳಿಗೂ ನೋಟಿಸ್ ಕಳುಹಿಸಿದ್ದರು. ಎಲ್ಲಾ ಸರ್ವೇ ನಂಬರ್‌ನವರು ನ್ಯಾಯಾಲಯಕ್ಕೆ ಹೋಗಿದ್ದಾರೆ. 1987ರಲ್ಲಿ ಭೂಮಿ ಖರೀದಿ ಮಾಡುವಾಗ, ಭೂಪರಿವರ್ತನೆ ವೇಳೆ ನಾನು ಯಾವುದೇ ಅಧಿಕಾರದಲ್ಲಿ ಇರಲಿಲ್ಲ. ಪ್ರಥಮ ಬಾರಿಗೆ ನಾನು ಶಾಸಕನಾಗಿದ್ದೇ 1999ರಲ್ಲಿ, ಮಂತ್ರಿಯಾಗಿದ್ದು ಒಂದೂವರೆ ವರ್ಷದ ಹಿಂದೆ. ಮಂತ್ರಿಯಾಗಿ ಪ್ರಭಾವ ಬೀರಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ತಮ್ಮ ಪತ್ನಿ ಹೆಸರಿನಲ್ಲಿ ರಾಯಚೂರಿನಲ್ಲಿ 5 ಎಕರೆ ಮೀಸಲು ರಕ್ಷಿತ ಅರಣ್ಯ ಪ್ರದೇಶ ಒತ್ತುವರಿ ಮಾಡಿ ಲೇವೋಟ್ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲಹಳ್ಳಿ ಸೋಮವಾರ ರಾಜ್ಯಪಾಲರಿಗೆ ದೂರು ನೀಡಿದ್ದರು.

More articles

Latest article