ಸತತ ಮಳೆಗೆ ತತ್ತರಿಸಿದ ಬೆಂಗಳೂರು; ಜಲಾವೃತವಾದ ಬಡಾವಣೆಗಳು, ಕೆರೆಗಳಂತಾದ ರಸ್ತೆಗಳು,

Most read

ಹೈರಾಣಾದ ವಾಹನ ಸವಾರರು; ಮುಂದಿನ 3 ಗಂಟೆ ಭಾರಿ ಮಳೆ, ಎಚ್ಚರ ವಹಿಸಿದರೆ ನಿಮಗೇ ಕ್ಷೇಮ
ಕಳೆದ ಶನಿವಾರ ಮತ್ತು ಭಾನುವಾರ ಸುರಿದ ಭಾರಿ ಮಳೆಗೆ ಬೆಂಗಳೂರು ಅಕ್ಷರಶಃ ನಲುಗಿಗ ಹೋಗಿದೆ. ಬಬುತೇಕ ಬಡಾವಣೆಗಳು ಜಲಾವೃತವಾಗಿದ್ದು ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಗಳಲ್ಲೇ ಎರಡು ಮೂರು ಅಡಿಯವರೆಗೂ ನೀರು ನಿಂತಿದ್ದು, ರಸ್ತೆ, ಚರಂಡಿ ಯಾವುದೂ ಕಾಣಿಸದೆ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಅಂಡರ್‌ ಪಾಸ್‌ ಗಳಲ್ಲಿ ನೀರು ನಿಂತು ವಾಹನಗಳು ಸಂಚರಿಸಲು ಅವಕಾಶವೇ ಇರಲಿಲ್ಲ. ರಾಜ್ಯ ರಾಜಧಾನಿಯ ಬಹುತೇಕ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗಿದ್ದು ಅನಾಹುತಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ‌
ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಕಚೇರಿ ಸೇರಿಕೊಳ್ಳುವವರು ಬೇಗ ಸೇರಿಕೊಂಡರೆ ಕ್ಷೇಮ. ಆಸ್ಪತ್ರೆಗಳಿಗೆ ಹೋಗುವವರು ಬೇಗ ಹೊರಡುವುದು ಉತ್ತಮ ಇನ್ನು ಅಂಗಡಿ, ಮಾರುಕಟ್ಟೆ ಮಾಲ್‌ ಗಳಿಗೆ ಹೋಗುವವರಿದ್ದರೆ ಬೇಗ ಹೋಗಿ ಬನ್ನಿ, ಇಲ್ಲವೇ ನಿಮ್ಮ ಕಾರ್ಯಕ್ರಮವನ್ನು ಮುಂದೂಡಿದರೆ ನೀವು ಸೇಫ್.
ಕೆ.ಆರ್. ಮಾರ್ಕೆಟ್ ಅಕ್ಷರಶಃ ಕೆರೆಯಂತಾಗಿದ್ದು, ಹೂ, ಹಣ್ಣು, ತರಕಾರಿ ವ್ಯಾಪಾರಿಗಳು ಮತ್ತು ಗ್ರಾಹಕರು ಪರದಾಡಬೇಕಾಯಿತು. ಇಲ್ಲಿ 2-3 ಅಡಿ ನೀರು ನಿಂತಿದ್ದು, ವ್ಯಾಪಾರವೇ ಇಲ್ಲದೆ ಬಂಡವಾಳಕ್ಕೂ ಲುಕ್ಸಾನು ಆಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದರು. ಈ ಮಾರುಕಟ್ಟೆ ಮತ್ತು ಟೌನ್ ಹಾಲ್ ರಸ್ತೆಯುದ್ದಕ್ಕೂ ನೀರು ನಿಂತಿದ್ದು ಸಾವಿರಾರು ವಾಹನ ಸವಾರರು ಸಂಚರಿಸಲಾಗದೆ ಕಷ್ಟಪಡುತ್ತಿದ್ದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಮತ್ತು ಗೃಹ ಕಚೇರಿಯ ಸುತ್ತಮುತ್ತಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಲ್ಲಿಯೂ ನೀರು ನಿಂತಿತ್ತು. ವಿಂಡ್ಲರ್ ಮ್ಯಾನ‌ರ್ ರೈಲ್ವೆ ಬ್ರಿಡ್ಜ್‌ ಮತ್ತು ಸ್ಯಾಂಕಿ ರಸ್ತೆ ಜಲಾವೃತವಾಗಿತ್ತು. ಬೆಂಗಳೂರು ಸೇರಿದಂತೆ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು ಬೆಂಗಳೂರಿನಲ್ಲಿ ರಜೆ ಘೋಷಿಸಲಾಗಿದೆ.
ವಿಲ್ಸನ್ ಗಾರ್ಡನ್ ಮುಖ್ಯರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ ರಾಜರಾಜೇಶ್ವರಿ ನಗರದ ಮೈಸೂರು ರಸ್ತೆಗಳಲ್ಲಿ ನೀರು ನಿಂತಿದ್ದ ದೃಶ್ಯಗಳು ಸರ್ವೇ ಸಾಮಾನ್ಯವಾಗಿದ್ದವು. ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯ ಗುಂಡಿಗಳಲ್ಲಿ ಆಟೋಗಳು ಸಿಲುಕಿದ್ದು, ಆಟೋಗಳನ್ನು ಮೇಲೆತ್ತಲು ಚಾಲಕರು ಪರದಾಡಬೇಕಾಯಿತು. ಸಂಪಂಗಿರಾಮನಗರದಲ್ಲಿ ನೀರು ಹರಿಯಲಾಗದೆ ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ನೀರಿನಲ್ಲಿ ಸಂಚರಿಸಿದ್ದರಿಂದ ಆಟೋ ಮತ್ತು ಬೈಕ್ ಗಳು ಕೆಟ್ಟು ನಿಂತಿದ್ದವು.
ಮಿಷನ್ ರಸ್ತೆ, ಡಬಲ್ ರೋಡ್, ಪುಲಿಕೇಶಿ ನಗರ, ರಾಜರಾಜೇಶ್ವರಿ ನಗರದ ಬೆಮೆಲ್‌ ಲೇ ಔಟ್‌ , ಬನಶಂಕರಿ, ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಗಳಲ್ಲೂ ನೀರು ನಿಂತಿದ್ದು, ವಾಹನ ಸವಾರರು ಹಿಡಿ ಶಾಪ ಹಾಕುತ್ತಿದ್ದರು. ನಾಗದೇವನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗಿದ್ದು, ನೀರನ್ನು ಹೊರಹಾಕಲು ನಿವಾಸಿಗಳು ಹರಸಾಹಸ ಪಡುತ್ತಿದ್ದರು.
ಒಟ್ಟಾರೆ ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಜನರು ಹೈರಾಣಾಗಿದ್ದು, ಮಳೆ ನಿಂತರೆ ಸಾಕಪ್ಪ ಎಂದು ಬೇಡಿಕೊಳ್ಳುವಂತಾಗಿತ್ತು.

More articles

Latest article