ಮಸೀದಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಲ್ಲ: ಹೈಕೋರ್ಟ್

Most read

ಮಸೀದಿ ಆವರಣದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ವ್ಯಕ್ತಿಗಳ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ‘ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆ ಹೇಗೆ ಕೆರಳಿಸುತ್ತದೆ, ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

‘ಹಿಂದೂ, ಮುಸಲ್ಮಾನರು ಸೌಹಾರ್ದತೆಯಿಂದ ಜೀವಿಸುತ್ತಿದ್ದೇವೆ ಎಂದು ಸ್ವತಃ ದೂರುದಾರರೇ ಹೇಳಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ- 1860ರ (ಐಪಿಸಿ) ಕಲಂ 295ಎ (ಧಾರ್ಮಿಕ ಭಾವನೆ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ’. ಈ ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

2023 ರ ಸೆಪ್ಟೆಂಬರ್ 24 ರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಐತ್ತೂರು ಗ್ರಾಮದ ಕಡಬ-ಮರ್ದಾಳ ರಸ್ತೆಯಲ್ಲಿರುವ ಮಸೀದಿ ಆವರಣಕ್ಕೆ ನುಗ್ಗಿದ್ದ ಕೆಲವು ಅಪರಿಚಿತ ವ್ಯಕ್ತಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗಿದ್ದರು. ಬ್ಯಾರಿ ಸಮುದಾಯಕ್ಕೆ ಸೇರಿದವರನ್ನು ಬದುಕಲ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಮರುದಿನ, ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ಮಸೀದಿಯವರು ಪೊಲೀಸರಿಗೆ ದೂರು ನೀಡಿದ್ದರು. ಕೆಲವು ಯುವಕರು ಬೈಕ್‌ಗಳಲ್ಲಿ ಮಸೀದಿ ಸುತ್ತಿದ್ದಲ್ಲದೆ, ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿರುವ ಸಿಸಿಟಿವಿ ದೃಶ್ಯವನ್ನೂ ಅವರು ಒದಗಿಸಿದ್ದರು.

ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ತೀರ್ಪು ನೀಡಿ ಕಡಬ ಬಿಳಿನೆಲೆ ನಿವಾಸಿಗಳಾದ ಕೀರ್ತನ್ ಕುಮಾ‌ರ್ ಮತ್ತು ಸಚಿನ್ ಕುಮಾರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295ಎ, 447 ಮತ್ತು 506 ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕಡಬ ಪೊಲೀಸರು ಈ ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.

More articles

Latest article