Thursday, December 12, 2024

ಕನ್ನಡ ಉಳಿಸಿ ಬೆಳೆಸುವ ಪ್ರಯತ್ನ ಮತ್ತು ಪ್ರಯೋಗ

Most read

ಆಂಗ್ಲ ಭಾಷೆಯಲ್ಲಿ ಪ್ರೌಢಿಮೆ, ಪಾಠ ಮಾಡಲು ಸೂಕ್ತ ತರಬೇತಿ ಇಲ್ಲದೇ ಹೋದರೆ ಮಕ್ಕಳಿಗೆ ಅತ್ತ ಇಂಗ್ಲೀಷೂ ಇಲ್ಲ, ಇತ್ತ ಕನ್ನಡವೂ ಇಲ್ಲ ಎನ್ನುವ ಸ್ಥಿತಿಯಾಗಿ, ಬಾಣಲೆಯಿಂದ ಬೆಂಕಿಗೆ ಎನ್ನುವ ಪರಿಸ್ಥಿತಿ ಮಕ್ಕಳದ್ದು, ಹೆತ್ತವರದ್ದು. ಪರಿಸ್ಥಿತಿಯ ಗಂಭೀರತೆಯನ್ನು ಸರಕಾರ ಮನಗಾಣದೇ ಹೋದರೆ ನಮ್ಮ ವಿದ್ಯಾರ್ಥಿಗಳು ನಾಳೆ ಹೇಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಲ್ಲರು? ಡಾ. ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಶುಪಾಲರು.

ನಾವು ಮತ್ತೊಂದು ಕನ್ನಡ ರಾಜ್ಯೋತ್ಸವದ ಸಂಭ್ರಮದ ನಿರೀಕ್ಷೆಯಲ್ಲಿದ್ದೇವೆ. ನಾಡು, ನುಡಿಯ ಹಿರಿಮೆ ಗರಿಮೆಗಳನ್ನು ಉಳಿಸಿ ಬೆಳೆಸುವ ಹೊಣೆ ಹೊತ್ತ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕುವೆಂಪು ಭಾಷಾಭಾರತಿ, ರಂಗಾಯಣ, ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿಯಂತಹ ಸರಕಾರದ ಅಧೀನ ಸಂಸ್ಥೆಗಳು ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಲೇ ಇವೆ. ಆದರೆ ಈ ನಾಡಿನ ಭವಿಷ್ಯವಾಗಿರುವ ಎಳೆಯ ಮಕ್ಕಳಿಗೆ ಕನ್ನಡದ ಮೇಲೆ ಪ್ರೀತಿ ಹುಟ್ಟುವಂತೆ ಮಾಡಬಲ್ಲ, ಭಾಷೆ-ಭಾವದ ಮೂಲಕ ತಮ್ಮ ವ್ಯಕ್ತಿತ್ವ ಕಟ್ಟಿಕೊಳ್ಳುವುದಕ್ಕೆ ಪ್ರಬಲ ಮಾಧ್ಯಮವಾಗಿರುವ ಕನ್ನಡ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಸಮರ್ಥವಾಗಿ ಬಲಗೊಳಿಸದಿದ್ದರೆ ಮತ್ತು ಪರಿಣಾಮಕಾರಿಯಾಗುವಂತೆ ಮಾಡದಿದ್ದರೆ ಕನ್ನಡ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರೀಕ್ಷಿತ ಯಶಸ್ಸು ಸಿಗುವುದು ಕಷ್ಟ ಸಾಧ್ಯವೆನ್ನಬಹುದೇನೋ?

ನಮ್ಮ ಆಸುಪಾಸಿನ ಕನ್ನಡ ಶಾಲೆಗಳನ್ನು ಗಮನಿಸಿದರೆ ನಮಗೆ ಕನ್ನಡ ಶಾಲೆಗಳು ಯಾಕೆ ಸೋಲುತ್ತಿವೆ ಎನ್ನುವುದು ಮನವರಿಕೆಯಾಗುತ್ತದೆ. ಅಂಗೈ ಹುಣ್ಣು ನೋಡಲು ಕನ್ನಡಿ ಬೇಕಾಗಿಲ್ಲ. ಮುಂದಾಲೋಚನೆಯಿಲ್ಲದ ಬೇಕಾ ಬಿಟ್ಟಿ ನೀತಿಗಳಿಂದ ಬಹುಮಟ್ಟಿಗೆ ಕನ್ನಡ ಶಾಲೆಗಳನ್ನು ನಿಸ್ತೇಜವಾಗಿ ಮಾಡುವ ಮೂಲಕ ಸರಕಾರ, ಹೆತ್ತವರನ್ನು, ಮಕ್ಕಳನ್ನು ಆತಂಕಕ್ಕೆ ಈಡು ಮಾಡುತ್ತಿದ್ದಾರೆ. ಅತ್ತ ಶಿಕ್ಷಣದ ಮಾರುಕಟ್ಟೆ ವಿಸ್ತರಿಸುತ್ತಿರುವ ಖಾಸಗೀ ವಲಯ, ಸರಕಾರೀ ಶಾಲೆಗಳ ವೈಫಲ್ಯವನ್ನು ವೈಭವೀಕರಿಸುವ ಮೂಲಕ ಹೆತ್ತವರ ಮತ್ತು ಮಕ್ಕಳ ಆತಂಕವನ್ನೇ ಬಂಡವಾಳ ಮಾಡಿಕೊಂಡು ತನ್ನ ಸಂಸ್ಥೆಯಲ್ಲಿ ದಾಖಲಾತಿ ಪ್ರಮಾಣವನ್ನು ಏರಿಸಿಕೊಳ್ಳುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸುವ ಮುಂದಾಲೋಚನೆಯಿಲ್ಲದ, ಕ್ರಮಗಳನ್ನು ಕೈಗೊಳ್ಳುವ ಮೂಲಕ ಈಗಾಗಲೇ ಇರುವ ಸಮಸ್ಯೆಗೆ ತುಪ್ಪ ಸುರಿಯುವ ಕೆಲಸವೂ ಆಗುತ್ತಿದೆ. ಇದರ ಮಧ್ಯೆಯೂ ಸರಕಾರೀ ಶಾಲೆಯಲ್ಲಿರುವ ಹಲವು ಶಿಕ್ಷಕರು, ತಾವು ಸರಕಾರದ ಸಹಾಯದ ಮೂಲಕ ಶಿಕ್ಷಣ ಪಡೆದಿರುವ ಕಾರಣದಿಂದಲೋ ಅತ್ಯುತ್ತಮ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ವಿದ್ಯಮಾನವೂ ನಮ್ಮ ಕಣ್ಣ ಮುಂದಿದೆ. ‌

ಸರ್ಕಾರಿ ಶಾಲೆಯೊಂದರ ದುಸ್ಥಿತಿ ( ಕೃಪೆ : ಗೂಗಲ್)

ಸರಕಾರೀ ವ್ಯವಸ್ಥೆಯಲ್ಲಿಯೂ ಕಲಿಕೆಯ ಸಮಸ್ಯೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ, ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನೂ ಕೆಲವು ಶಿಕ್ಷಕರು ನಡೆಸುತ್ತಾ ಬರುತ್ತಿದ್ದಾರೆ. ಆದರೆ ಸರಕಾರ ಮಾತ್ರ ಗಾಯಕ್ಕೆ ಬ್ಯಾಂಡೇಜ್ ಹಚ್ಚುವ ಕೆಲಸ ಮಾಡುವಲ್ಲಿಯೇ ಸುಸ್ತಾದಂತಿದೆ. ಶಿಕ್ಷಣ ಮತ್ತು ಸಂಸ್ಕೃತಿಯಂತಹ ಮಹತ್ವದ ಇಲಾಖೆಯ ಆಶೋತ್ತರಗಳನ್ನು ಈಗಿನ ಸರಕಾರ ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಸೀಮಿತ ಅನುಭವದ ಹಿನ್ನಲೆಯಲ್ಲಿ ಶಿಕ್ಷಣ ರಂಗದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಯಾವೆಲ್ಲ ರೀತಿಯಲ್ಲಿ ಆರಂಭಿಸಬಹುದು ಎನ್ನುವ ಕುರಿತು ಕೆಲವೊಂದು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಸರಕಾರದ ಪ್ರಾಥಮಿಕ ಶಾಲೆಗಳಲ್ಲಿ ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಸರಿಯಾಗಿ ಪಾಠ ಪ್ರವಚನಗಳು ನಡೆಯುವಂತೆ ಮಾಡಬೇಕಾದದ್ದು ಪ್ರಸ್ತುತ ಸರಕಾರ ತೆಗೆದುಕೊಳ್ಳಬೇಕಿರುವ ಮೊತ್ತ ಮೊದಲ ಕ್ರಮ. ಪ್ರಾಯಶಃ ಶ್ರೀಯುತ ವೀರಪ್ಪ ಮೊಯಿಲಿಯವರು ಮುಖ್ಯ ಮಂತ್ರಿಯಾಗಿರುವ ವೇಳೆ, ರ್ಯಾಂಕ್ ವಿಜೇತರಾದ ಪ್ರತಿಭಾವಂತರನ್ನು ಯಾವುದೇ ಪ್ರವೇಶ ಪರೀಕ್ಷೆ, ಅರ್ಜಿ ಸಲ್ಲಿಕೆ ಇಲ್ಲದೇ, ನೇರ ನೇಮಕಾತಿ ಮಾಡುವ ಕ್ರಮ ಕೈಗೊಂಡಿದ್ದರು ಎನ್ನುವುದು ನೆನಪು. ಸರಕಾರ ತಮ್ಮ ಪ್ರತಿಭೆಯನ್ನು ಪುರಸ್ಕರಿಸಿದ ಕಾರಣದಿಂದ ಶಿಕ್ಷಕರಾಗಿ ಆಯ್ಕೆಯಾದವರು ಅಂತಹ ಶಿಕ್ಷಕರು ಬಹಳ ಜವಾಬ್ದಾರಿಯಿಂದ ದುಡಿದಂತಹ ಉದಾಹರಣೆಗಳಿವೆ. ಮೀಸಲಾತಿಯನ್ನು ಪರಿಗಣಿಸಿಯೇ ಅಂತಹ ಆಯ್ಕೆಯನ್ನು ಈಗಿನ ಶ್ರೀ ಸಿದ್ಧರಾಮಯ್ಯ ನೇತೃತ್ವದ ಸರಕಾರವೂ ಮಾಡುವ ಮೂಲಕ ಸರಕಾರೀ ಪ್ರಾಥಮಿಕ ಶಾಲೆಗಳಿಗೆ ಮತ್ತು ಪ್ರೌಢಶಾಲೆಗಳಿಗೆ ಬಲ ನೀಡಬೇಕಾಗಿದೆ.

ಸರಕಾರೀ ವ್ಯವಸ್ಥೆಯ ದೊಡ್ಡ ದೌರ್ಬಲ್ಯವೇ ಮೂಲಭೂತ ಸೌಕರ್ಯಗಳಿಲ್ಲದಿರುವುದು. ಶಾಲೆಗಳಲ್ಲಿ ಸ್ವಚ್ಛ ಪರಿಸರ, ಶೌಚಾಲಯ, ಸಾಕಷ್ಟು ಗಾಳಿ ಬೆಳಕುಗಳಿರುವ, ಗಾಳಿ ಮಳೆಗಳಿಗೆ ಅಲ್ಲಾಡದಿರುವ ಕಟ್ಟಡ ಒದಗಿಸುವುದು ಸರಕಾರದಿಂದ ಆಗದಿರುವ ಕೆಲಸವೇನಲ್ಲ. ದೆಹಲಿಯಲ್ಲಿ ಆಮ್‍ಆದ್ಮಿ ಪಕ್ಷದ ಸರಕಾರ ಸರಕಾರೀ ಶಾಲೆಗಳಲ್ಲಿ ಖಾಸಗೀ ಶಾಲೆಗಳಿಗಿಂತ ಹೆಚ್ಚಿನ ಸೌಕರ್ಯ ಒದಗಿಸುವ ಮೂಲಕ ಸರಕಾರೀ ವ್ಯವಸ್ಥೆಯಲ್ಲಿ ಇಚ್ಛಾಶಕ್ತಿ ಇರುವ ಶಿಕ್ಷಣ ಮಂತ್ರಿಗಳಿದ್ದರೆ ಯಾವ ಬದಲಾವಣೆಯನ್ನು ಬೇಕಿದ್ದರೂ ತರಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಅಂತಹ ಇಚ್ಛಾಶಕ್ತಿಯನ್ನು ನಮ್ಮ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪನವರೂ ಪ್ರದರ್ಶಿಸಿದರೆ, ಕನ್ನಡಮ್ಮನೂ ಹೆಮ್ಮೆಪಟ್ಟಾಳು.

ಚಿತ್ರ ಕೃಪೆ : ಗೂಗಲ್

ಬಹಳಷ್ಟು ಕಡೆಗಳಲ್ಲಿ ಸರಕಾರೀ ಶಾಲೆಗಳಿಗೆ ಸಹಾಯ ಮಾಡಲು ದಾನಿಗಳು, ಹಳೆ ವಿದ್ಯಾರ್ಥಿಗಳು ಆಸಕ್ತರಾಗಿರುತ್ತಾರೆ. ಆದರೆ ಇಂತಹ ಅವಕಾಶಗಳನ್ನು ಬಳಸಿಕೊಳ್ಳಲು ಬಹಳಷ್ಟು ಸಂದರ್ಭಗಳಲ್ಲಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರೇ ಇರುವುದಿಲ್ಲ. ಸರಿಯಾದ ನಾಯಕತ್ವವೇ ಇಲ್ಲದಿದ್ದರೆ ಇನ್ನು ಶಾಲೆಯ ಅಭಿವೃದ್ಧಿಯಂತೂ ದೂರದ ಮಾತು. ನನ್ನ ಅನುಭವದಲ್ಲಿಯೇ ಬಹಳಷ್ಟು ಕಡೆಗಳಲ್ಲಿ ಮುಖ್ಯ ಅಧ್ಯಾಪಕ/ಪಿಕೆಯರ ಆಸಕ್ತಿಯಿಂದ ಉತ್ತಮ ರೀತಿಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಿಕೊಂಡಿರುವ ದೃಷ್ಟಾಂತಗಳಿವೆ. ಆದ್ದರಿಂದ ಎಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದೆಯೋ ಅಂತಹ ಕಡೆ ತಕ್ಷಣ ಹುದ್ದೆ ಭರ್ತಿಮಾಡಿ, ಅವರಿಗೆ ಜವಾಬ್ದಾರಿ ನೀಡಿ. ಸಮಾಜ, ಸರಕಾರೀ ವ್ಯವಸ್ಥೆಯಲ್ಲಿರುವ ದೋಷಗಳ ಕೊರತೆಗಳ ಬಗ್ಗೆ ಮಾತ್ರ ಮಾತನಾಡಿದರೆ, ಅದೇ ಸಮಾಜವು ಖಾಸಗೀ ಶಿಕ್ಷಣ ವ್ಯವಸ್ಥೆಯ ಧನಾತ್ಮಕ ಅಂಶಗಳ ಬಗ್ಗೆ ಮಾತನಾಡುತ್ತದೆ. ಆದ್ದರಿಂದ ಸರಕಾರ ಶಿಕ್ಷಣರಂಗದಲ್ಲಿ ಜವಾಬ್ದಾರಿ ಹೊರುವ ಗಟ್ಟಿ ಹೆಗಲುಗಳನ್ನು ಹುಡುಕಿ, ಅವರ ಮೇಲೆ ಜವಾಬ್ದಾರಿ ಹಾಕಿದರೆ, ಖಂಡಿತವಾಗಿಯೂ ಉತ್ತಮ ಫಲವನ್ನು ನಿರೀಕ್ಷಿಸಬಹುದು. ಆದರೆ ಇದೆಲ್ಲ ಹಸಿರು ಹುಲ್ಲುಗಾವಲು ಎಂದು ಕೊಂಡರೆ ದೇವರೇ ಗತಿ.

ಕೆಲದಿನಗಳ ಹಿಂದೆ ಸರಕಾರ, ಸಾರ್ವಜನಿಕ ಶಿಕ್ಷಣ ರಂಗದಲ್ಲಿ ಉದ್ಯಮ ರಂಗದ ಸಾರ್ವಜನಿಕ ಹೊಣೆಗಾರಿಕೆಗಾಗಿ ವ್ಯಯಿಸಬೇಕಾದ ನಿಧಿಯಿಂದ ಸಹಾಯ ಪಡೆಯುವ ಕುರಿತು, ಸಾರ್ವಜನಿಕರಿಂದ ದೇಣಿಗೆ ಸಂಗ್ರಹದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವ ಕುರಿತು ಸೂಕ್ತ ನೀತಿ ರೂಪಿಸುವುದಾಗಿ ಹೇಳಲಾಗಿತ್ತು. ಇದು ಎಲ್ಲಿಯವರೆಗೆ ಬಂದಿದೆ? ಯಾವ ಕಾರ್ಯಯೋಜನೆ ರೂಪಿಸಲಾಗುತ್ತಿದೆಯೋ ಗೊತ್ತಿಲ್ಲ. ಈ ಕುರಿತು ಕೂಲಂಕಷವಾಗಿ ಅಧ್ಯಯನ ಮಾಡಿ ಅದಕ್ಕೊಂದು ಕಾರ್ಯಸಾಧ್ಯವಾಗುವ ಸ್ಪಷ್ಟ ನೀತಿ ರೂಪಿಸುವ ಮೂಲಕ ಸರಕಾರ ಶಿಕ್ಷಣರಂಗದ ಸುಧಾರಣೆಯ ಕುರಿತಂತೆ ತನಗಿರುವ ಇಚ್ಛಾಶಕ್ತಿಯನ್ನು ಸಾಬೀತು ಪಡಿಸಬೇಕಿದೆ. ಶಿಕ್ಷಣ ರಂಗದಲ್ಲಿ ಆಸಕ್ತಿ, ಅನುಭವಗಳಿರುವ ಜನರಿಂದ ಕೂಡಿದ ಕಾರ್ಯ ಪಡೆಯೊಂದನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಚನೆ ಮಾಡುವ ಮೂಲಕ ಕಾರ್ಯ ಆರಂಭ ಮಾಡಬೇಕಿದೆ. ಶಿಕ್ಷಣದಂತಹ ಮಹತ್ವದ ವಿಷಯಗಳ ಕುರಿತು ಸರಕಾರವಾಗಲೀ ಅಥವಾ ಸರಕಾರದ ಕಿವಿ ಹಿಂಡಬೇಕಿರುವ ವಿರೋಧ ಪಕ್ಷಗಳಾಗಲೀ ಈ ಕುರಿತು ಮಹತ್ವದ ಯಾವ ಕೆಲಸವನ್ನೂ ಮಾಡುತ್ತಿರುವ ಹಾಗೆ ಕಾಣುತ್ತಿಲ್ಲ.

ಶಿಕ್ಷಕರ ಸಂಘಟನೆಗಳು ಸಂಬಳ, ಸವಲತ್ತು, ಸೇವಾ ಭದ್ರತೆಯ ಕುರಿತು ಚರ್ಚೆಯನ್ನು ಗಂಭಿರವಾಗಿಯೇ ನಡೆಸುತ್ತಿದ್ದಾರೆ, ಅದು ನಡೆಸಬೇಕಾದದ್ದೇ. ಆದರೆ ಅದನ್ನು ಮೀರಿ ಶಿಕ್ಷಣರಂಗದ ಬಲ ಕುಗ್ಗಿಸುವ ವ್ಯವಸ್ಥೆ ಕುಲಗೆಡಲು ಕಾರಣವಾದ ವಿಷಯಗಳ ಕುರಿತೂ ಗಮನ ಹರಿಸುವ ಅಗತ್ಯ ಬಹಳ ಇದೆ. ಶಿಕ್ಷಕರ ಸಂಘಟನೆಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯಯೋಜನೆ ಒಂದನ್ನು ಸಿದ್ಧಪಡಿಸಿ, ಅದಕ್ಕೆ ಶಿಕ್ಷಕೇತರರ, ಹೆತ್ತವರ, ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಸಹಕಾರವನ್ನು ಕೋರುವ ಕೆಲಸಕ್ಕೆ ಮುಂದಾಗಬೇಕಿದೆ. ಬಹಳಷ್ಟು ಜನ ಶಿಕ್ಷಕರು ಈ ದಿಸೆಯಲ್ಲಿ ದುಡಿದು ಇತರರಿಗೆ ಮಾದರಿ, ಪ್ರೇರಣೆಯೂ ಆಗುತ್ತಿದ್ದಾರೆ. ಬಿಡಿ, ಬಿಡಿಯಾಗಿರುವ ಇಂತಹ ಪ್ರಯತ್ನ ಮತ್ತು ಪ್ರಯೋಗಗಳು ಒಂದು ಸಂಘಟಿತ ಸ್ವರೂಪವನ್ನು ಪಡೆಯುವ ಮೂಲಕ ಇನ್ನಷ್ಟು ಶಕ್ತಿ ಸಂಚಯಿಸಿಕೊಂಡು ಸಮಾಜದಲ್ಲಿ ಸಂಚಲನ ಉಂಟುಮಾಡಬೇಕು. ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಒಂದು ಪ್ರಯತ್ನಕ್ಕೆ ಚಾಲನೆ ದೊರೆಯಲಿ ಎಂದು ಹಾರೈಸೋಣ!

ಡಾ. ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ- ಕಾಂಗ್ರೆಸ್ ಪಕ್ಷದಲ್ಲೊಬ್ಬ ಆರ್.ಎಸ್‌.ಎಸ್‌ ಶಾಸಕ

More articles

Latest article