Thursday, December 12, 2024

ಸಿದ್ದಾರ್ಥ ಟ್ರಸ್ಟ್ ಗೆ ಭೂಮಿಯೇ ಮಂಜೂರಾಗಿಲ್ಲ:ನಿವೇಶನ ಕೇಳಿದ ಅರ್ಜಿಯನ್ನೇ ವಾಪಸ್ ಪಡೆಯಲಾಗಿದೆ; ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

Most read

ಆತುರಗಾರನಿಗೆ ಬುದ್ದಿ ಮಟ್ಟ ಎಂಬ ಗಾದೆ ಬಿಜೆಪಿ ಮುಖಂಡರನ್ನು ನೋಡಿಯೇ ರೂಢಿಗೆ ಬಂದಿರಬೇಕು. ಒಂದಲ್ಲ, ಎರಡಲ್ಲ ಹಲವು ಬಾರಿ ಆತುರಾತುರವಾಗಿ ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಲೇ ಬಂದಿದೆ. ಇದೀಗ ಈ ಸಾಲಿಗೆ ಮತ್ತೊಂದು ಎಡವಟ್ಟು ಸೇರ್ಪಡೆಯಾಗಿದೆ.


ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅಧ್ಯಕ್ಷರಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಭೂಮಿಯನ್ನೇ ಹಂಚಿಕೆ ಮಾಡದಿರುವಾಗ ಮರಳಿಸುವುದು ಹೇಗೆ ಸಾಧ್ಯ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಶ್ನಿಸಿದೆ. ಸಿದ್ದಾರ್ಥ ಟ್ರಸ್ಟ್ ಭೂಮಿಯನ್ನು ಮಂಜೂರು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದೆ ಎಂದು ಪ್ರದೇಶ ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ನೀಡಿದೆ.


ಟ್ರಸ್ಟ್ ಅರ್ಜಿಯನ್ನು ಹಿಂಪಡೆಯುತ್ತಿದ್ದಂತೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೆಐಎಡಿಬಿ ವತಿಯಿಂದ ಮಂಜೂರಾಗಿದ್ದ 5 ಎಕರೆ ಸಿಎ ನಿವೇಶನವನ್ನು ಬೇಷರತ್ ಆಗಿ ಹಿಂತಿರುಗಿಸಿರುವ ನಿಲುವು ಗಮನಿಸಿದರೆ ಅಕ್ರಮ ಮಂಜೂರಾತಿ ಪ್ರಕರಣ ನ್ಯಾಯಾಲಯ ಮೆಟ್ಟಿಲು ಏರುವ ಮುನ್ನವೇ ಖರ್ಗೆ ಕುಟುಂಬ ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯನವರ ಹಾದಿಯನ್ನೇ ತುಳಿದಿರುವುದು ಸಾಬೀತಾಗುತ್ತಿದೆ ಎಂದು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು.


ಇವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್, ಬಿಜೆಪಿ ಮತ್ತು ವಿಜಯೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ನಿವೇಶನ ಮಂಜೂರಾತಿಗೆ ಅರ್ಹವಾದ ಸಂಸ್ಥೆಗಳಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಆಯ್ಕೆಯಾಗಿತ್ತು ಅಷ್ಟೇ. ಈ ಟ್ರಸ್ಟ್ ಸೆಪ್ಟಂಬರ್ 20 ರಂದೇ ಅರ್ಜಿಯನ್ನು ಹಿಂಪಡೆಯುತ್ತೇವೆ ಎಂದು ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ವಿಜಯೇಂದ್ರ ಯಡಿಯೂರಪ್ಪ ಅವರೇ ನಿಮ್ಮ ಪ್ರೇರಣಾ ಟ್ರಸ್ಟ್ ಗೆ ಅಕ್ರಮವಾಗಿ ಮಂಜೂರು ಮಾಡಿಕೊಂಡಿರುವ ಭೂಮಿಯನ್ನು ಹಿಂತಿರುಗಿಸುವ ನೈತಿಕತೆಯನ್ನು ತೋರಿಸುವಿರಾ ಎಂದು ಪ್ರಶ್ನಿಸಿದೆ. ಶಾಲೆಯನ್ನು ನಿರ್ಮಿಸುತ್ತೇನೆ ಎಂದು ಅಕ್ರಮವಾಗಿ ನಿವೇಶನ ಪಡೆದು ಬಿರಿಯಾನಿ ಹೋಟೆಲ್ ನಿರ್ಮಿಸಿರುವ ಸೈಟ್ ಹಿಂತಿರುಗಿಸುವ ನೈತಿಕತೆ ತೋರುವಿರಾ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಪ್ರಶ್ನಿಸಿದೆ.


ಮೂರ್ಖರು ಯಾರಿದ್ದೀರಿ ಎಂದು ಕೇಳಿದರೆ ನಾವಿದ್ದೇವೆ ಎನ್ನುತ್ತಾರೆ BJP Karnataka ನಾಯಕರು! ಎಂದೂ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಒಬ್ಬರು RSS ಗೂ ನೀಡಿರುವ ಭೂಮಿಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಗೂ ಬಿಜೆಪಿಗೂ ವ್ಯತ್ಯಾಸ ಇರುವುದಿಲ್ಲ ಎಂದು ಹೇಳಿದ್ದಾರೆ.

More articles

Latest article