Thursday, December 12, 2024

ಕಳಸಾ-ಬಂಡೂರಿ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ: ಖಂಡ್ರೆ ವಿಶ್ವಾಸ

Most read

ಕರ್ನಾಟಕದ ಬಹುದಿನಗಳ ಬೇಡಿಕೆಯಾದ ಮಹಾದಾಯಿ ನದಿ ನೀರಿಗೆ ಸಂಬಂಧಿಸಿದ ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರೀಯ ವನ್ಯ ಜೀವಿ ಮಂಡಳಿ ತನ್ನ ಅನುಮೋದನೆ ನೀಡಲಿದೆ ಎಂಬ ವಿಶ್ವಾಸವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬುಧವಾರ ನವದೆಹಲಿಯಲ್ಲಿ ಕೇಂದ್ರ ಅರಣ್ಯ, ಹವಾಮಾನ ಬದಲಾವಣೆ ಹಾಗೂ ಪರಿಸರ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ, ತಮ್ಮ ಇಲಾಖೆಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದು, ಈ ಯೋಜನೆ ಕುರಿತಂತೆ ಆಶಾದಾಯಕ ಚರ್ಚೆ ಆಗಿದೆ ಎಂದು ತಿಳಿಸಿರುವುದಾಗಿ ಖಂಡ್ರೆ ಹೇಳಿದರು.

ಮಹದಾಯಿ ನದಿಯ ಎರಡು ಉಪನದಿಗಳಾದ ಕಳಸಾ ಮತ್ತು ಬಂಡೂರಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಈ ಯೋಜನೆಗೆ ಗೋವಾ ರಾಜ್ಯ ಸರ್ಕಾರ ತಕರಾರು ಮಾಡುತ್ತದೆ. ಆದರೆ, 2018ರ ಆಗಸ್ಟ್ 14ರಂದು ಮಹಾದಾಯಿ ನದಿ ನೀರು ವಿವಾದ ನ್ಯಾಯಾಧಿಕರಣ ನೀಡಿರುವ ವರದಿ ಸಹಿತವಾದ ನಿರ್ಣಯದಲ್ಲಿ ಕಳಸಾ-ಬಂಡೂರಿ ಯೋಜನೆಯಡಿ 3.9 ಟಿಎಂಸಿ ನೀರನ್ನು ತಿರುಗಿಸಲು ಅವಕಾಶ ನೀಡಿದೆ. ಆದರೆ ಇದಕ್ಕೆ ಪರಿಸರ ತೀರುವಳಿ ಅನುಮೋದನೆ ಅಗತ್ಯ ಎಂದು ಹೇಳಿದೆ ಎಂಬ ಅಂಶವನ್ನು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಮಂಡಳಿ ಸಭೆಗೆ ಮನವರಿಕೆ ಮಾಡಿಸಿದ್ದಾರೆ ಎಂದು ತಿಳಿಸಿದರು.

ಅಲ್ಲದೆ ಕೇಂದ್ರೀಯ ಜಲ ಆಯೋಗ 2022ರ ಡಿಸೆಂಬರ್ 29ರ ತನ್ನ ಪತ್ರದಲ್ಲಿ ಕಳಸಾ ಬಂಡೂರಿ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಿದೆ ಎಂಬ ವಿಷಯದೊಂದಿಗೆ ಕುಡಿಯುವ ನೀರಿನ ಯೋಜನೆಗಳ ಸಂಬಂಧ ಸುಪ್ರೀಂಕೋರ್ಟ್ ತೀರ್ಪುಗಳನ್ನೂ ಉಲ್ಲೇಖಿಸಿದ್ದು, ನಿನ್ನೆಯ ಸಭೆಯಲ್ಲಿ ಫಲಪ್ರದವಾದ ಮತ್ತು ಸಕಾರಾತ್ಮಕವಾದ ಚರ್ಚೆ ಆಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಮುಂದಿನ ಸಭೆಯಲ್ಲಿ ಅನುಮೋದನೆ ದೊರಕುವ ನಿರೀಕ್ಷೆ ಇದೆ ಎಂದು ಈಶ್ವರ ಖಂಡ್ರೆ ತಿಳಿಸದರು.

ಈ ಸಂಬಂಧ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ವತಿಯಿಂದ ಮಂಡಳಿಗೆ ವಿವರವಾದ ಪತ್ರ ಬರೆಯಲಾಗುವುದೂ ಎಂದೂ ಖಂಡ್ರೆ ತಿಳಿಸಿದರು.

More articles

Latest article