ಪುರುಷೋತ್ತಮ ಬಿಳಿಮಲೆಯವರ ʼಹುಡುಕಾಟʼ ಪುಸ್ತಕ ಬಿಡುಗಡೆ

Most read

ಪ್ರೊ. ಪುರುಷೋತ್ತಮ ಬಿಳಿಮಲೆಯವರು ಕಳೆದ ನಾಲ್ಕು ದಶಕಗಳಿಂದ ಜಾನಪದ ಸಂಶೋಧನೆ ಹಾಗೂ ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ದುಡಿದವರು. ಈ ಅವಧಿಯಲ್ಲಿ ಅವರು ಬರೆದ 30 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳಲ್ಲಿ 12 ನ್ನು ಆಯ್ದು ʼಹುಡುಕಾಟʼ ಹೆಸರಿನಲ್ಲಿ ಚಿರಂತ್‌ ಪ್ರಕಾಶನವು ಪ್ರಕಟಿಸಿದೆ. ಈ ಪುಸ್ತಕದ ಬಿಡುಗಡೆ ಸಮಾರಂಭವು ನಾಳೆ ಸಂಜೆ (10-10-2024) ಬೆಂಗಳೂರಿನ ಮಹದೇವ ದೇಸಾಯಿ ಮುಖ್ಯ ಸಭಾಂಗಣದಲ್ಲಿ ನಡೆಯಲಿದೆ. ಹುಡುಕಾಟದ ಒಂದು ಲೇಖನದ ಆಯ್ದ ಭಾಗ ಇಲ್ಲಿದೆ

ಪುರಾಣ ಮತ್ತು ಕಾವ್ಯಗಳನ್ನು ಅಭ್ಯಾಸ ಮಾಡುವಾಗ ನಾವು ಪ್ರತಿಮೆ, ಪ್ರತೀಕ, ಸಂಕೇತ, ರೂಪಕ, ಚಿಹ್ನೆ,  ಇತ್ಯಾದಿ ಪದಗಳನ್ನು ಬಳಸುತ್ತೇವೆ. ಅವು ಮಾನವನ ಕಲ್ಪನೆಯಲ್ಲಿ ಭಾಷೆಯ ಮೂಲಕ ಮೂಡಿರುವ ವಿಸ್ಮಯಕಾರೀ  ಅಂಶಗಳನ್ನು ವಿವರಿಸಲು ನಮಗೆ ಸಹಾಯ ಮಾಡುತ್ತವೆ. ಇಂಥ ಕಡೆಗಳಲ್ಲಿ ಭಾಷೆಯು ವಾಸ್ತವದ ಅಥವಾ ವ್ಯಾವಹಾರಿಕವಾದ ಅರ್ಥಗಳನ್ನು ತ್ಯಜಿಸಿ ಬೇರೆಯದೇ ಆದ ಒಂದು ಹಂತವನ್ನು ತಲುಪುತ್ತದೆ. ಕೆಳಗಿನ ಒಂದು ತುಳುಕತೆಯನ್ನು ಗಮನಿಸೋಣ-

ಕಥೆಯ ಹೆಸರು ‘ಬಾಳೆ ಮೀನು-ಮುಗುಡು ಮೀನು’. ಕರಾವಳಿ ಕರ್ನಾಟಕದ ತುಳು ಮಾತನಾಡುವ ಪ್ರದೇಶಗಳಲ್ಲಿ ಈ ಕಥೆ ತುಂಬ ಜನ ಪ್ರಿಯವಾಗಿದೆ. ‘ಕತೆ ಹೀಗಿದೆ-

ಒಂದಾನೊಂದು ಊರಿನಲ್ಲಿ ಗಂಡ-ಹೆಂಡತಿ ಇಬ್ಬರಿದ್ದರಂತೆ. ಅವರು ಬಡವರಂತೆ. ಅವರಿಗೆ ಏಳು ಜನ ಗಂಡು ಮಕ್ಕಳು. ಅನಂತರ ಒಬ್ಬಳು ಮಗಳು ಹುಟ್ಟಿದಳು. ಗಂಡು ಮಕ್ಕಳಲ್ಲಿ ಆರು ಜನಕ್ಕೆ ಮದುವೆಯಾಯಿತು. ಏಳನೆಯವನು ಮನೆಯ ಹತ್ತಿರ ಒಂದು ಹೂವಿನ ಹಿತ್ತಲನ್ನು ಮಾಡಿದ. ಅದರಲ್ಲಿ ಹೂ ಆಯಿತು. ಹೂ ಆದದ್ದನ್ನು ಕೊಯ್ದ. ಹೂವಿನ ಚೆಂಡು ಕಟ್ಟಿಸಿದ. ಅದರಲ್ಲಿ ಒಂದನ್ನು ಬಾಗಿಲ ಮೇಲಿನ ದಾರಂದದಲ್ಲಿ ಇರಿಸಿದ. ಅನಂತರ ತನ್ನ ಅಣ್ಣಂದಿರ ಹೆಂಡಂದಿರಾದ ಅತ್ತಿಗೆಯವರಲ್ಲಿ ಹೇಳಿದ. “ಯಾರು ಈ ಹೂವಿನ ಚೆಂಡನ್ನು ತೆಗೆದು ತಲೆಗೆ ಮುಡಿಯುವರೋ ಅವರು ನನಗೆ ಹೆಂಡತಿಯಗುತ್ತಾರೆ”-ಎಂದು. ಇಷ್ಟು ಹೇಳಿ ಉಳಿದ ಹೂವನ್ನು ತಲೆಯ ಮೇಲೆ ಇರಿಸಿಕೊಂಡು ಹೊರಗಡೆಗೆ ಹೋದ. ಆತನು ಆ ಕಡೆ ಹೋದಾಗ ಗುಡ್ಡೆಗೆ ಸೊಪ್ಪು ತರಲೆಂದು ಹೋದ ಅವನ ತಂಗಿ ಮನೆ ಕಡೆ ಬಂದಳು. ಸೊಪ್ಪನ್ನು ಹಟ್ಟಿಗೆ ಹಾಕಿದಳು. ಕತ್ತಿ ಮತ್ತು ಮುಟ್ಟಾಳೆಯನ್ನು ಕೆಳಕ್ಕೆ ಇರಿಸಿದಳು. ಕೈ ಕಾಲು ಮುಖ ತೊಳೆದುಕೊಂಡು ಒಳಗೆ ಬಂದಳು. ಒಳಗೆ ಬರುವಾಗ ಅವಳ ಮೂಗಿಗೆ ಹೂವಿನ ಪರಿಮಳ ಬಂತು. ‘ಎಲ್ಲಿಂದಪ್ಪಾ ಇದು ಹೂವಿನ ಪರಿಮಳ’ ಎಂದುಕೊಂಡು ಬಾಗಿಲ ಮೇಲ್ಬದಿಗೆ ನೋಡಿದಳು. ಅದಕ್ಕೆ ಕೈ ಹಾಕಿದಳು. ಅಷ್ಟರಲ್ಲಿ ಅವಳ ಅತ್ತಿಗೆಯವರು ಹೇಳುತ್ತಾರೆ: “ಆ ಹೂವನ್ನು ಮುಡಿದವರು ಸಣ್ಣ ಭಾವನಿಗೆ ಹೆಂಡತಿಯಾಗುವರಂತೆ!”.

‘ಹೌದಾ…ಅವನು ಹೇಳಿದಾ ಅಂತ ಹೆಂಡತಿ ಆಗಲಿಕ್ಕೆ  ಸಾಧ್ಯವೇ?’ ಎಂದ ಆಕೆ ತಲೆ ಬಾಚಿ ಕಟ್ಟುವಳು. ಹಣೆಗೆ ಸೂರ್ಯನ ಬೊಟ್ಟು ಇಡುವಳು. ಹೂವಿನ ಚೆಂಡನ್ನು ತಲೆಗೆ ಮುಡಿದಳು.

ಅಷ್ಟಾಗುವಾಗ ಅಣ್ಣ ಬಂದ. ನೋಡುವಾಗ ಹೂವಿನ ಚೆಂಡು ಇಲ್ಲ. ಅತ್ತಿಗೆಯವರಲ್ಲಿ ಕೇಳಿದ. ‘ನಿನ್ನ ತಂಗಿ ಹೂವನ್ನು ಮುಡಿಗೇರಿಸಿದ್ದಾಳೆ’ ಎಂದರು. ಅದನ್ನು ಕೇಳಿದ ಅಣ್ಣನು ಅಂಗಳವನ್ನು ಕೆತ್ತಿಸಿದ. ಸೋಗೆಯ ಚಪ್ಪರ ಹಾಕಿಸಿದ. ಮಾವಿನೆಲೆಯ ತೋರಣ ಮಾಡಿಸಿದ. ವೀಳ್ಯದೆಲೆ ಅಡಿಕೆ ತರಿಸಿದ. ಮನೆಯ ಹಿಂದೆ ಅಚ್ಚುಬೆಲ್ಲದ ಒಲೆ ಹಾಕಿಸಿದ. ಸಾಮಾನು-ಸರಂಜಾಮು ತರಿಸಿದ. ಸೌದೆ ರಾಶಿ ರಾಶಿ ಬಂತು. ‘ನಾಡಿದ್ದು  ಮದುವೆಯಿದೆ’ ಎಂದು ಊರಿಗೆಲ್ಲ ಹೇಳಿದ. ಮೊದಲು ಸೋದರಮಾವ ಬಂದ. ಆಮೇಲೆ ನೆಂಟರು-ಇಷ್ಟರು ಬರತೊಡಗಿದರು. ಉರಿನವರೂ ಸೇರಿದರು. ಮದುವೆಯ ದಿನವೂ ಬಂತು. ವಾಲಗದವರು ವಾಲಗ ಊದಿದರು. ಡೋಲು ಬಾರಿಸಿದರು. ಅಡುಗೆ ಮನೆಯಲ್ಲಿ ಮದುವೆಯ ಊಟ ತಯಾರಾಗುತ್ತಾ ಇದೆ.  ಹೀಗೆ ಇರುವಾಗ,  ಆ ಕಡೆಯಲ್ಲಿ ಆ ಹುಡುಗಿ ಕಣ್ಣ ನೀರನ್ನು ಸುರಿಸಿಕೊಂಡು, ಮನಸ್ಸನ್ನು ಕರಗಿಸಿಕೊಂಡು, ಮನೆಯ ಹಿಂದಿನ ಬಾಗಿಲ ಬದಿಯಲ್ಲಿ ಕುಳಿತು ತೆಂಗಿನಕಾಯಿ ತುರಿಯುತ್ತಿದ್ದಳು. ಆಗ ಅಲ್ಲಿಗೆ ಎರಡು ಇಲಿಗಳು ಬಂದವು. ‘ ಅಕ್ಕಾ ಅಕ್ಕಾ ಕಣ್ಣಲ್ಲಿ ನರ‍್ಯಾಕೆ?’ ಎಂದು ಕೇಳಿದುವು. ಅಕ್ಕ ಕತೆ ಹೇಳಿದಳು.

ಆಗ ಇಲಿಗಳು, -‘ ಆಗಲಿ, ನಿನ್ನನ್ನು ಇಲ್ಲಿಂದ ಹೊರಗೆ ಕಳಿಸಲು ವ್ಯವಸ್ಥೆ ಮಾಡುತ್ತೇವೆ’ ಎಂದು ಹೇಳಿ, ಅವಳು ಕುಳಿತಲ್ಲಿಂದ, ಒಂದು ಸುರಂಗ ಕೊರೆಯಲು ಆರಂಭಿಸಿದವು. ಇವಳು ತೆಂಗಿನ ಕಾಯಿ  ಕೊಡುತ್ತಲೇ ಇದ್ದಳು. ಸುಮಾರು ಹೊತ್ತಾದಾಗ ಇಲಿಗಳು ಬಂದು’ ಅಕ್ಕಾ ಅಕ್ಕಾ, ಇಲ್ಲಿಂದ ಕೆರೆಬದಿಯ ಜಂಬುನೇರಳೆ ಮರದ ಬುಡದವರೆಗೆ ಒಂದು ಸುರಂಗ ಮಾಡಿದ್ದೇವೆ. ಯಾರಿಗೂ ಗೊತ್ತಾಗದಂತೆ ನೀನು ಹೋಗು’ ಎಂದವು. ಹುಡುಗಿಗೆ ಸಂತೋಷವಾಯಿತು. ಯಾರಿಗೂ ತಿಳಿಯದಂತೆ ಸುರಂಗಕ್ಕೆ ಇಳಿದಳು, ಕಣ್ಣೀರು ಹಾಕುತ್ತಾ  ಜಂಬುನೇರಳೆ ಮರದ ಬುಡ ತಲುಪಿದಳು. ಆಗಷ್ಟೇ ಬೆಳಗಾಗುತ್ತಿದೆ. ಜನರು ಸಿಂಗರಿಸಿಕೊಂಡು ಮದುವೆ ಮನೆಗೆ ಹೋಗುತ್ತಿದ್ದರು. ಯಾರಿಗೂ ಗೊತ್ತಾಗದಂತೆ ಅವಳು ಜಂಬುನೇರಳೆ ಮರವೇರಿ ಕುಳಿತಳು.

ಇತ್ತ ಮದುವೆಯ ಮನೆಯಲ್ಲಿ ಮದುಮಗಳೇ ಇಲ್ಲ.  ಎಲ್ಲ ಕಡೆ ಹುಡುಕಿದರು. ಹಟ್ಟಿಯಲ್ಲಿ ಕರು ಹತ್ತಿರ ಇಲ್ಲ, ತೋಟದಲ್ಲಿ ಬಾಳೆ ಬುಡದಲ್ಲಿ ಇಲ್ಲ, ಅಟ್ಟದಲ್ಲಿ ಬೆಲ್ಲದೊಂದಿಗೆ ಇಲ್ಲ. ನೀರಿನ ಹತ್ತಿರ ಪಾತ್ರೆಯೊಂದಿಗೆ ಇಲ್ಲ. ಬಚ್ಚಲು ಮನೆಯಲ್ಲಿ ಸದ್ದು ಕೇಳುವುದೇ ಇಲ್ಲ. ಅಡುಗೆ ಮನೆಯಲ್ಲಿ ಒಗ್ಗರಣೆ ಇಲ್ಲ. ಎಲ್ಲಿಯೂ ಇಲ್ಲ. ಮನೆಯವರಿಗೆ ಗಡಿಬಿಡಿ ಉಂಟಾಯಿತು. ಜನರು ಕಂಗಾಲಾದರು. ಇನ್ನೇನು ಮಾಡುವುದೆಂದು ಚಿಂತಿತರಾದರು. ಈ ಕಡೆ ಮರದಲ್ಲಿ ಕುಳಿತ ಮದುಮಗಳ ಕಣ್ಣೀರು ಹರಿದೂ ಹರಿದೂ ಮರದ ಬುಡದಲ್ಲಿ ಒಂದು ಕೆರೆಯೇ ಸಿದ್ಧವಾಯಿತು. ಮದುವೆಗೆಂದು ಹೋಗುವ ಬಡ ಮುದಕಿಯೊಬ್ಬಳು ಆ ಕೆರೆಯ ಬದಿಯಲ್ಲಿ ನಡೆದು ಬಂದಳು. ಆಕೆಗೆ ಒಳ್ಳೆಯ ಕೆರೆಯ ನೀರು ಕಂಡಿತು. ಮುಖ ತೊಳೆಯಲೆಂದು ಕೆರೆಗೆ ಇಳಿದಳು. ಮುಖ ತೊಳೆದು ನೆಟ್ಟಗೆ ನಿಲ್ಲುವಾಗ  ಆಕೆಯ ಬೆನ್ನಿಗೆ ಒಂದು ತೊಟ್ಟು ನೀರು ಬಿದ್ದಿತು. ಅಜ್ಜಿ ಮೇಲೆ ನೋಡಿದಳು. ನೋಡುವಾಗ ಹುಡುಗಿ ಮರದಲ್ಲಿ ಇರುವುದು ಕಂಡಿತು. ಅವಳ ಕಣ್ಣಿಂದ ಕಣ್ಣೀರು ಟಪ್ ಟಪ್ ಅಂತ ಕೆಳಗೆ ಬೀಳುತ್ತಿತ್ತು. ‘ಇದೇನಪ್ಪ ಕಲಿಕಾಲ!’ ಅಂತ ಅಜ್ಜಿಗೆ ಅಚ್ಚರಿಯಾಯಿತು. ಆಗ ಆ ಹುಡುಗಿ ಹೇಳಿದಳು –

‘ಅಜ್ಜಿ…. ಅಜ್ಜಿ…. ನಾನು ಇಲ್ಲಿ ಇದ್ದೇನೆಂದು ಮನೆಯಲ್ಲಿ ಯಾರಿಗೂ ಹೇಳಬೇಡಿ’.

ಅಜ್ಜಿ ಹೇಳಿದಳು – ‘ ನಾನು ಕಂಡದ್ದನ್ನು ಹೇಳುತ್ತೇನೆ, … ನೀನಿಲ್ಲಿ ಯಾಕೆ ಕುಳಿತೆ ಮೊದಲು ಹೇಳು’ 

ಆಗ ಆ ಹುಡುಗಿ ನಡೆದ ಎಲ್ಲ ಕಥೆಯನ್ನು ಹೇಳಿ ‘ಇದನ್ನು ಮನೆಯಲ್ಲಿ ಮಾತ್ರ ಹೇಳಬೇಡ, ಹೇಳಿದರೆ ನನ್ನನ್ನು ನನ್ನ ಅಣ್ಣನಿಗೆ ಕೊಟ್ಟು ಮದುವೆ ಮಾಡುತ್ತಾರೆ. ನಿನ್ನ ಉಪಕಾರಕ್ಕೆ ಈ ಉಂಗುರ ಕೊಡ್ತೇನೆ’ ಎಂದು,  ಕೈ ಬೆರಳಲ್ಲಿದ್ದ  ಚಿನ್ನದ ಉಂಗುರವನ್ನು ಅಜ್ಜಿಗೆ ಕೊಟ್ಟಳು. ‘ಆಯಿತು ಮಗಾ, ನಾನಿದನ್ನು ಯಾರಿಗೂ ಹೇಳುವುದಿಲ್ಲ’ ಎಂದು ಅಜ್ಜಿ ಮದುವೆ ಮನೆಗೆ ಹೋದಳು. ಮದುವೆ ಮನೆಯಲ್ಲಿ  ಊಟದ ಸಿದ್ಧತೆ ನಡೆಯುತ್ತಿತ್ತು. ಜನರ ನಡುವಿನಲ್ಲಿ ಅಜ್ಜಿಯೂ ಊಟಕ್ಕೆ ಕುಳಿತಳು. ಊಟಕ್ಕೆ ಬಾಳೆಎಲೆ ಹಾಕುತ್ತಾ ಬಂದರು. ಅದರ ಮೇಲೆ ನೀರು ತಳೆಯುತ್ತಾ ಬಂದರು. ಮದುಮಗನೇ ಅನ್ನ ಬಡಿಸಿಕೊಂಡು ಬಂದ. ಅಜ್ಜಿಗೂ ಅನ್ನ  ಬಳಸಿದ. ಇನ್ನೊಂದು ಸೌಟು ಬಳಸಲೆಂದು ಅನ್ನವನ್ನು ತಂದಾಗ ‘ಬೇಡ ….ಬೇಡ’ ಎಂದು ಅಜ್ಜಿ ಕೈ ಮುಂದೆ ಮಾಡಿದಳು. ಆಗ ಅವಳ ಕೈಯಲ್ಲಿದ್ದ ಉಂಗುರ ಮದುಮಗನಿಗೆ ಕಂಡಿತು. ಆಗ ಅವನು ‘ಅಜ್ಜೀ…. ಈ ಉಂಗುರ ಎಲ್ಲಿ ಸಿಕ್ಕಿತು? ಎಂದು ಕೇಳುತ್ತಾನೆ. ಅಜ್ಜಿ ಹೇಳುತ್ತಾಳೆ. “ನಾನು ಬರುವಾಗ ಜಮನೇರಳೆ ಮರದ ಅಡಿಯಲ್ಲಿ ಒಂದು ಕೆರೆ ನೋಡಿದೆ. ಅದು ಕಣ್ಣೀರಿನ ಕೆರೆ. ಒಂದು ಹೆಣ್ಣು ಮರದ ಮೇಲೆ ಕುಳಿತು ಕಣ್ಣೀರು ಸುರಿಸುತ್ತಿದ್ದಳು. ‘ನಾನಿಲ್ಲಿ ಇದ್ದೇನೆಂದು ಯಾರಿಗೂ ಹೇಳಬೇಡಿ’ ಎಂದು ಈ ಉಂಗುರವನ್ನು ನನಗೆ ಕೊಟ್ಟಳು” ಎಂದಳು. ಮದುಮಗಳು ಅಲ್ಲಿ ಇದ್ದಾಳೆಂದು ಎಲ್ಲರಿಗೂ ತಿಳಿಯಿತು.

ಮದುಮಗಳನ್ನು ಕರೆತರಲೆಂದು ಮದುಮಗಳ ಮನೆಯವರೆಲ್ಲ ಕೆರೆಯ ಬದಿಯ ಮರದ ಬಳಿಗೆ ಹೋದರು. ಹೋಗಿ ನೋಡುವಾಗ ಮದುಮಗಳು ಮರದ ಮೇಲೆ ಕುಳಿತಿದ್ದಾಳೆ. ಆಗ ಅಪ್ಪ ಮಗಳನ್ನು ನೋಡಿ ಹೇಳಿದ:

‘ ಯಾರು ಮಗಳೆ ಸಣ್ಣ ಮದುಮಗಳೆ

ಬಂದ ನೆಂಟರು ಬೇಸತ್ತಿದ್ದಾರೆ

ಹಾಕಿದ ಚಪ್ಪರ ವಾಲುತ್ತಿದೆ

ತುಂಡು ಮಾಡಿಟ್ಟ ಎಲೆಗಳು ಬಾಡುತ್ತಿವೆ

ಮಾಡಿಟ್ಟ ಅನ್ನ ಹಾಳಾಗುತ್ತಿದೆ

ತಟ್ಟೆಯಲ್ಲಿರುವ ವೀಳ್ಯದೆಲೆ ಬಾಡುತ್ತಿದೆ

ಅಡಿಕೆ ಹೋಳಿಗೆ ಧೂಳು ಹತ್ತಿದೆ

ಮಲ್ಲಿಗೆ ಚೆಂಡು ಮಸುಕಾಗುತ್ತಿದೆ 

ಒಮ್ಮೆ ಇಳಿಯೇ ಸಣ್ಣ ಮದುಮಗಳೇ

ಒಮ್ಮೆ ಇಳಿಯೇ ಸಣ್ಣ ಮದುಮಗಳೇ’

ಆಗ ಮರದ ಮೇಲಿಂದ ಮದುಮಗಳು ಹೇಳುತ್ತಾಳೆ:

‘ಯಾರು ಬಂದವರು ಕೆಳಗೆ,

ಬಂದದ್ದು ಅಪ್ಪನೇ ಹೌದಾದರೆ ಕೇಳು,

ಬಂದ ನೆಂಟರಿಗೆ ಬೇಸರವಾಗಲಿ

ಹಾಕಿದ ಚಪ್ಪರ ಬಿದ್ದು ಹೋಗಲಿ

ಕಡಿದಿಟ್ಟ ಎಲೆಗಳು ಬಾಡಿ ಹೋಗಲಿ

ಮಾಡಿದ ಅನ್ನ ಹುಳಿತು ಹೋಗಲಿ

ತುಂಡರಿಸಿದ ವೀಳ್ಯದೆಲೆ ಬಾಡಿ ಹೋಗಲಿ

ಅಡಿಕೆಗೆ ಧೂಳು ಹಿಡಿಯಲಿ

ಮಲ್ಲಿಗೆ ಚೆಂಡು ಬಾಡಿ ಹೋಗಲಿ

ನಿನ್ನೆವರೆಗೆ ಅಪ್ಪ ಎಂದು ಕರೆಯುತ್ತಿದ್ದವವನ್ನು

ಇಂದಿಂದ ಮಾವ ಎಂದು ಹೇಗೆ ಕರೆಯಲಿ?

ನಾನಿಳಿಯಲಾರೆ, ಮರದಿಂದ ನಾನಿಳಿಯಲಾರೆ’ 

ಹೀಗೆ ಅಮ್ಮ ಮತ್ತು ಅಣ್ಣಂದಿರು ಕರೆದಾಗ ಆಕೆ ಅದೇ ಉತ್ತರ ಕೊಡುತ್ತಾಳೆ.

ಆದರೆ ಉಳಿದವರ ಹಾಗೆ ಮದುಮಗ ಹಿಂದಿರುಗಿ ಹೋಗುವುದಿಲ್ಲ ಆತ ಸರಸರನೆ ಮರವೇರುತ್ತಾನೆ. ಅವನು ಮರವೇರುವುದನ್ನು ಕಂಡು ಆಕೆ ಮರದ ಟೊಂಗೆ ಟೊಂಗೆಗಳಲ್ಲಿ ಓಡುತ್ತಾಳೆ. ಮದುಮಗ ಟೊಂಗೆ ಟೊಂಗೆಗಳಲ್ಲಿ ಹಿಂಬಾಲಿಸುತ್ತಾನೆ. ಆಕೆ ಎಲೆ ಎಲೆಗಳ  ಮೇಲೇರಿ ನಡೆಯುತ್ತಾಳೆ. ಆತನೂ ಎಲೆ ಎಲೆಯ ಮೇಲೆ  ನಡೆದ. ಆಕೆ ಎಲೆಯ ತುತ್ತ ತುದಿಯಲ್ಲಿ ನಿಂತಳು. ಆತನೂ ಎಲೆಯ ತುತ್ತ ತುದಿಗೆ ತಲುಪಿದ. ಆಗ ಆಕೆ ಸರಕ್ಕನೆ ಕೆರೆಗೆ ಜಿಗಿಯುತ್ತಾಳೆ. ಆತನೂ ಜಿಗಿಯುತ್ತಾನೆ. ಅವಳು ಮೀಸೆಯಿರದ ಬಾಳೆ ಮೀನಾಗಿ ಪರಿವರ್ತನೆ ಹೊಂದಿದಳು. ಆತ ಮೀಸೆಯಿರುವ  ಮುಗುಡು ಮೀನಾಗಿ ಪರಿವರ್ತನೆ ಹೊಂದಿದ. ಎರಡೂ ಮೀನುಗಳು ನೀರಿನಲ್ಲಿ ಈಜುತ್ತಿದ್ದವು. ಆ ಎರಡು ಮೀನುಗಳನ್ನು ಈಗಲೂ ಒಟ್ಟು ಮಾಡಿ ಬೇಯಿಸುವುದಿಲ್ಲ.

ಹೆಚ್ಚು ಕಡಿಮೆ ಇದೇ ಆಶಯವನ್ನು ಹೊಂದಿರುವ ನೂರಾರು ಕತೆಗಳು ಕರ್ನಾಟಕದಲ್ಲಿ  ಲಭಿಸುತ್ತವೆ. ನನ್ನ ವೈಯಕ್ತಿಕ ಸಂಗ್ರಹದಲ್ಲಿ ಈ ಕಥೆಯ 22 ಭಿನ್ನ ಪಠ್ಯಗಳಿವೆ.

ಕತೆಯು ಮೇಲ್ನೋಟಕ್ಕೆ ಅಣ್ಣ ತಂಗಿಯರ ಲೈಂಗಿಕ ಸಂಬಂಧದ ನಿಷೇಧದ ಕುರಿತಾಗಿದೆ ಎಂಬುದು ಸ್ಪಷ್ಟ. ಆದರೂ ಇಲ್ಲಿ ಒಂದು ಪ್ರಶ್ನೆಯಿದೆ-ಅಣ್ಣ ಮದುವೆಯಾಗುತ್ತಾನೆ ಎಂದು ಗೊತ್ತಿದ್ದೂ ತಂಗಿ ಯಾಕೆ ಹೂವು ಮುಡಿಯುತ್ತಾಳೆ? ಅಣ್ಣ ತಂಗಿ ಪರಿವೆಯಿಲ್ಲದ ಕಾಡಿಗೆ ತಂಗಿ ಯಾಕೆ ಓಡುತ್ತಾಳೆ?

ಇಂಥ ವಿಶ್ಲೇಷಣೆಗೆ ಹುಡುಕಾಟ ಪುಸ್ತಕ ಓದಿ.

More articles

Latest article