24 ವರ್ಷದ ಭೀಮನಿಗೆ ದೊಡ್ಡ ಅಭಿಮಾನಿಗಳ ಬಳಗ: ಭವಿಷ್ಯದ ಅಂಬಾರಿ ಆನೆ ಭೀಮನ ಕಥೆ DCF ಜೊತೆ

Most read

ಅಭಿಮನ್ಯು ನಂತರ ಅಂಬಾರಿ ಆನೆ ಯಾವುದು ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ ಈಗಿನಿಂದಲೇ ಉತ್ತರ ಹುಡುಕಲು ಶುರು ಮಾಡಿದಂತೆ ಕಾಣುತ್ತಿದೆ. ಸದ್ಯ ಮೂರನೇ ಬಾರಿಗೆ ದಸರಾದಲ್ಲಿ ಭಾಗವಹಿಸಿರುವ ಭೀಮ ಆನೆ ಭವಿಷ್ಯದ ಅಂಬಾರಿ ಆನೆ ಆಗುವ ಎಲ್ಲಾ ಲಕ್ಷಣಗಳು ಇದೆ ಎನ್ನಲಾಗುತ್ತಿದೆ. ಭೀಮನಿಗೆ ಅಷ್ಟು ದೊಡ್ಡ ಮಟ್ಟದ ಅಭಿಮಾನಿಗಳು ಇರೋದು ಯಾಕೆ? ಆತನ ವಿಶೇಷತೆ ಏನು? ಎಲ್ಲವನ್ನೂ ತಿಳಿಯೋಣ.

ಈ ಕುರಿತು ಜಿಲ್ಲಾ ಅರಣ್ಯಾಧಿಕಾರಿ (ವೈಲ್ಡ್ ಲೈಫ್ ಸೆಂಚ್ಯೂರಿ) ಡಿಸಿಎಫ್ ಪ್ರಭು ಗೌಡ ಅವರು ಕನ್ನಡ ಪ್ಲಾನೆಟ್ ಜೊತೆ ಮಾತನಾಡಿದ್ದು, ಅದರ ಸಂಪೂರ್ಣ ಸಂದರ್ಶನ ವಿವರ ಇಲ್ಲಿದೆ.

ಪ್ರಶ್ನೆ: ಭೀಮ ಎಂದರೆ ಎಲ್ಲರಿಗೂ ಅಚ್ಚುಮೆಚ್ಚಿನ ಆನೆ, ಭೀಮ ಸಿಕ್ಕಿದ್ದು ಹೇಗೆ?

ಡಿಸಿಎಫ್ ಪ್ರಭು ಗೌಡ: ಸುಮಾರು 2002ರಲ್ಲಿ ನಾಗರಹೊಳೆ ಅಭಯಾರಣ್ಯದ ಮತ್ತಿಗೆ ಗೂಡು ವಲಯದ ಭೀಮನಕಟ್ಟೆ ಎಂಬಲ್ಲಿ ತಾಯಿಯಿಂದ ಬೇರ್ಪಟ್ಟು ಎರಡು ವರುಷದ ಗಂಡಾನೆ ಮರಿಯನ್ನು ನಮ್ಮ ಸಿಬ್ಬಂದಿಗಳು ಗುರುತು ಮಾಡಿದರು. ಅಧಿಕಾರಿಗಳ ಸೂಚನೆ ಮೇರೆಗೆ ಅದನ್ನು ಮತ್ತಿಗೆ ಗೂಡು ಕ್ಯಾಂಪ್‌ಗೆ ಕರೆತಂದು ಬಾಟಲಿಯಲ್ಲಿ ಹಾಲುಣಿಸಿ ಪೋಷಿಸಿ ಭೀಮ ಎಂದು ಹೆಸರಿಟ್ಟು ಸಾಕಲಾಯಿತು. ಆನೆ ಸೋಷಿಯಲ್ ಆಗಿರುವ ಪ್ರಾಣಿ ಆದರಿಂದ ಭೀಮ ನಮ್ಮೊಂದಿಗಿರುವ ಮನುಷ್ಯ ಅನ್ನೊತರ ಆಗಿದೆ.

ಕ್ಯಾಂಪ್ ಜನರಿಗೆ ಹಾಗೂ ನಗರ ಜನರು ಯಾಕೆ ಭೀಮನನ್ನು ಅಷ್ಟು ಇಷ್ಟ ಪಡುತ್ತಾರೆ ಎಂದರೆ‌, ಭೀಮ ತುಂಬಾ ತುಂಟ, ತುಂಬಾ ಆಕ್ಟಿವ್. ಆತ ಆಹಾರ ಬೇಕು, ತಿಂಡಿ ಬೇಕು ಎಂದರೆ ಶಬ್ದ ಮಾಡುವ ಮೂಲಕ ಜನರನ್ನು ಕೂಗಿ ಕರೆಯುತ್ತಾನೆ. ಜೊತೆಗೆ ಯಾರೇ ಭೀಮ ಎಂದು ಕೂಗಿದರು ಅದಕ್ಕೆ ಸ್ಪಂದಿಸುತ್ತಾನೆ. ಅಷ್ಟು ಸೂಕ್ಷ್ಮವಾಗಿ ನಮ್ಮ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತದೆ. ಜನರ ಬಳಿ ತುಂಬಾ ಸ್ನೇಹದಿಂದ ನಡೆದುಕೊಳ್ಳುತ್ತದೆ‌. ಹಾಗೆ ಜನರನ್ನು ತನ್ನತ್ತ ಸೆಳೆಯುವ ಗಾಂಭೀರ್ಯತೆ ಲಕ್ಷಣವನ್ನು ಭೀಮ ಹೊಂದಿದ್ದಾನೆ.

ಪ್ರಶ್ನೆ: ಭೀಮ ದಸರಾ ಸಮಯದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಾನೆ?

ಡಿಸಿಎಫ್ ಪ್ರಭು ಗೌಡ: ದಸರಾ ಮಹೋತ್ಸವದ ಅಂಗವಾಗಿ ನವರಾತ್ರಿ ವೇಳೆ ಅರಮನೆಯಲ್ಲಿ ರಾಜವಂಶಸ್ಥರಿಂದ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಪಟ್ಟದ ನಿಶಾನೆಯಾಗಿ ಭೀಮ ಆನೆ ಆಯ್ಕೆಯಾಗಿದೆ. ಇದರ ಜೊತೆ ಪಟ್ಟದ ಆನೆಯಾಗಿ ಕಂಜನ್ ಆಯ್ಕೆಯಾಗಿದೆ.

ಪ್ರಶ್ನೆ: ಅಭಿಮನ್ಯುವಿಗೂ ಭೀಮನಿಗೂ ಆಹಾರ ಪದ್ದತಿಯಲ್ಲಿ ಬದಲಾವಣೆ ಏನಾದರು ಇದೆಯೇ?

ಡಿಸಿಎಫ್ ಪ್ರಭು ಗೌಡ: ದಸರಾಗೆ ಆಗಮಿಸಿರುವ ಆನೆಗಳ ತಂಡದಲ್ಲಿ ಅತ್ಯಂತ ಕಿರಿಯ ಪ್ರಾಯದ ಆನೆ ಭೀಮ. ಅಭಿಮನ್ಯುವಿಗೆ ಹೋಲಿಸಿದರೆ ಭೀಮನಿಗೆ ಸ್ವಲ್ಪ ಜಾಸ್ತಿ ಆಹಾರವನ್ನು ಕೊಡುತ್ತೇವೆ. ಅಭಿಮನ್ಯು ಬೆಣ್ಣೆಯನ್ನು ತಿನ್ನೊದಿಲ್ಲ. ಆದರೆ ಭೀಮ ಬೆಣ್ಣೆ ಪ್ರಿಯ ಬೆಣ್ಣೆಯನ್ನು ಚನ್ನಾಗಿ ತಿಂತಾನೆ. ಕಳೆದ ಬಾರಿ ಒಂದು ದಿನಕ್ಕೆ 20 ಕೆಜಿಯಂತೆ 55 ದಿನದಲ್ಲಿ 1300 ಕೆಜಿಗೂ ಅಧಿಕ ತೂಕ ಜಾಸ್ತಿಯಾಗಿದ್ದ. ಈಗ ನೀವೇ ಊಹಿಸಿಕೊಳ್ಳಿ ಅಭಿಮನ್ಯುವಿಗಿಂತ ಎಷ್ಟು ಪ್ರಮಾಣದ ಆಹಾರವನ್ನು ಭೀಮನಿಗೆ ಕೊಡಲಾಗುತ್ತಿದೆ ಎಂದು.

ಪ್ರಶ್ನೆ: ಭೀಮನಿಗಿರುವ ವರ್ಚಸ್ಸು ನೋಡಿದ್ರೆ ಅಭಿಮನ್ಯು ನಂತರ ಅಂಬಾರಿ ಹೊರುವ ಆನೆ ಇದೇ ಆಗಬಹುದ?

ಡಿಸಿಎಫ್ ಪ್ರಭು ಗೌಡ: ಆನೆಗಳಿಗೆ 60 ವರ್ಷ ಆದ ಬಳಿಕ ಹೆಚ್ಚು ಭಾರ ಹೊರಿಸುವಂತಿಲ್ಲ ಎಂಬ ನಿಯಮವಿದೆ. ಸದ್ಯ ಅಭಿಮನ್ಯುವಿಗೆ 58 ವರ್ಷ. ಇನ್ನು ಎರಡು ವರ್ಷ ಅವಕಾಶವಿದೆ. ಆತನ ಸಾಮರ್ಥ್ಯವನ್ನು ನೋಡಿಕೊಂಡು ಆನೆಗಳ ಆಯ್ಕೆ ಮಾಡಲಾಗುತ್ತದೆ. ಸದ್ಯ 24 ವಯಸ್ಸಿನ ಭೀಮ‌ 5000+ ಕೆಜಿ ತೂಕವನ್ನು ಹೊಂದಿದ್ದು, ಬಲಿಷ್ಠ ಆನೆ, ಮಟ್ಟಸವಾದ ಹೆಗಲು, ಎತ್ತರ, ತೂಕ ಇರುವ ಭೀಮ ಭವಿಷ್ಯದ ಅಂಬಾರಿ ಆನೆಯಾದರೂ ಅನುಮಾನವಿಲ್ಲ. ಮೊನ್ನೆಯಷ್ಟೇ ಗುಂಡಿನ ಅಭ್ಯಾಸಕ್ಕೆ ಕರೆದುಕೊಂಡು ಹೋಗಿದ್ದೆವು ಆಗ ಅವನಿಗೆ ಚೈನ್ ಹಾಕದೇ ಕರೆದುಕೊಂಡು ಹೋಗಿದ್ದೆವು. ಅಷ್ಟು ಶಬ್ದ ಬಂದರು ಸಹ ಜಗ್ಗದೆ ಇರೋದನ್ನು ನಾವು ಗಮನಿಸಿದ್ದೇವೆ. ಎಲ್ಲವನ್ನೂ ನಿಭಾಹಿಸುವ ಸ್ಥೈರ್ಯ ಅವನಲ್ಲಿದೆ.

ಪ್ರಶ್ನೆ: ಭೀಮನ ಕತೆ ಆಯ್ತು ಭೀಮನ ಜೊತೆ ಇರೋ ಮಾವುತ ಹಾಗೂ ಕಾವಾಡಿಗರ ಬಗ್ಗೆ ಹೇಳೋದಾದ್ರೆ?

ಡಿಸಿಎಫ್ ಪ್ರಭು ಗೌಡ: ಭೀಮ ಸಿಕ್ಕಿದ್ದು ಒಂದು ರೋಚಕ ಕತೆ. ಅದರ ಜೊತೆ ಜೊತೆಯಲ್ಲೆ ಬೆಳೆದು ಅದನ್ನು ಚುರುಕಿನಿಂದ ಬೆಳೆಸಿದ ಮಾವುತ ಗುಂಡು ಅವರ ಪಾತ್ರ ಕೂಡ ದೊಡ್ಡದೆ‌. ಭೀಮ ಅಷ್ಟು ತಮಾಷೆ, ಅಷ್ಟು ಚುರುಕಿದ್ದಾನೆ ಅಂದ್ರೆ ಅದರ ಮಾವುತ ಕೂಡ ಅಷ್ಟೇ ತಮಾಷೆ ಚುರುಕು ಇರುತ್ತಾರೆ‌. ಮಾವುತ ಗುಂಡು ಕೂಡ ಎಲ್ಲರ ಬಳಿ ತಮಾಷೆಯಾಗಿ ಮಾತಾಡುತ್ತಾ ಅವರ ಬಳಿ ಬೆರೆತುಬಿಡುತ್ತಾರೆ‌. ಅವರು ಹೇಗಿದ್ದಾರೊ ಅದೇ ರೀತಿ ಇದನ್ನು ತಯಾರು ಮಾಡಿದ್ದಾರೆ. ಚಿಕ್ಕಂದಿನಿಂದಲೂ ಭೀಮನನ್ನು ಗುಂಡು ಹಾಗೂ ಕವಾಡಿಗ ನಂಜುಂಡಸ್ವಾಮಿ ಅವರೇ ಬೆಳೆಸಿದ್ದರಿಂದ ಅದು ಕನ್ನಡ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತದೆ‌. ಜೊತೆಗೆ ಮನುಷ್ಯನಂತೆ ವರ್ತಿಸುತ್ತದೆ. ಎಲ್ಲರ ಜೊತೆ ಸ್ನೇಹಿತನಂತಿರುತ್ತಾನೆ.

ಪ್ರಶ್ನೆ: ಉಳಿದ ಆನೆಗಳು ಹೇಗಿದೆ? ಜಂಬೂಸವಾರಿಯಲ್ಲಿ ಯಾವ ಆನೆಗಳನ್ನು ಬಳಸ್ತಿರಿ?

ಡಿಸಿಎಫ್ ಪ್ರಭು ಗೌಡ: 14 ಆನೆಗಳ ಆರೋಗ್ಯ ಚನ್ನಾಗಿದೆ. ವರಲಕ್ಷ್ಮೀ ಆನೆಯನ್ನು ನಾವು ದಸರಾಗೆ ಬಳಸಲ್ಲ ಆದರೆ ಅಭಿಮನ್ಯು ಜೊತೆ ನಾವು ಕ್ಯಾಂಪ್‌ನಲ್ಲಿ ಇರಿಸಿಕೊಳ್ಳುತ್ತೇವೆ. ಅಭಿಮನ್ಯುವನ್ನು ಶಾಂತರೀತಿಯಲ್ಲಿ ಇರಿಸಲು ವರಲಕ್ಷ್ಮಿ ದೊಡ್ಡ ಪಾತ್ರವನ್ನು ವಹಿಸುತ್ತದೆ‌. ಇನ್ನು ಅರಮನೆ ಪಟ್ಟದ ಆನೆಯಾಗಿ ಕಂಜನ್ ಆನೆ ಮತ್ತು ಭೀಮನನ್ನ ಆಯ್ಕೆ ಮಾಡಲಾಗಿದೆ. ಮಹೇಂದ್ರ, ಹಿರಣ್ಯ, ಲಕ್ಷ್ಮಿ ಆನೆಯನ್ನು ಶ್ರೀರಂಗಪಟ್ಟಣ ದಸರಾಗೆ ಆಯ್ಕೆ ಮಾಡಿ ಬಳಸಲಾಗಿದೆ. ಈಗ ಮೈಸೂರು ಜಂಬೂಸವಾರಿಗೆ ಅಭಿಮನ್ಯು ಜೊತೆ ಹಿರಣ್ಯ ಮತ್ತು ಲಕ್ಷ್ಮೀ ಎರಡು ಹೆಣ್ಣು ಆನೆಗಳು ಹೆಜ್ಜೆ ಹಾಕಲಿವೆ.

ಪ್ರಶ್ನೆ: ಮೈಸೂರು ಜಿಲ್ಲಾ ಅರಣ್ಯಾಧಿಕಾರಿಯಾಗಿ ( ವೈಲ್ಡ್‌ ಲೈಫ್ ಸೆಂಚ್ಯೂರಿ) ಇದು ನಿಮ್ಮ ಮೊದಲನೇ ದಸರಾ ಹೇಗನ್ನಿಸುತ್ತಿದೆ?

ಡಿಸಿಎಫ್ ಪ್ರಭು ಗೌಡ: ನಾಡ ಹಬ್ಬ ದಸರಾ ಅಂದ್ರೆ ವಿಶ್ವವಿಖ್ಯಾತವಾಗಿದ್ದು, ಲಕ್ಷಾಂತರ ಜನ ಬರ್ತಾರೆ ಜಂಬೂಸವಾರಿ ನೋಡಲು ಬರ್ತಾರೆ. ಇಂತಹ ಒಂದು ಅದ್ಬುತ ಹಬ್ಬವನ್ನು ನಿರ್ವಹಣೆ ಮಾಡ್ತಿರೋದು ಸಂತೋಷದ ವಿಷಯ. ಎಲ್ಲರೂ ನಾಡಹಬ್ಬಕ್ಕೆ ಬಂದು ಜಂಬೂಸವಾರಿ ವೀಕ್ಷಿಸಿ ಎಂದು ಹೇಳುತ್ತೇನೆ… ಧನ್ಯವಾದಗಳು…

More articles

Latest article