ಕಲ್ಯಾಣ ಕರ್ನಾಟಕ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಗುರುರಾಜ ಕರ್ಜಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ; ವ್ಯಾಪಕ ವಿರೋಧ

Most read

ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶ ಹೆಚ್ಚಳದ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್‌ಡಿಬಿ) ಮಂಡಳಿ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆರ್ ಎಸ್ ಎಸ್ ಹಿನ್ನೆಲೆಯ ಡಾ. ಗುರುರಾಜ ಕರ್ಜಗಿ ಅಧ್ಯಕ್ಷತೆಯಲ್ಲಿ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿದೆ.

ನಿನ್ನೆ ಸುದ್ದಿ ಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮಾತನಾಡಿ, ಸತತವಾಗಿ SSLC ಫಲಿತಾಂಶದಲ್ಲಿ ಹಿಂದುಳಿಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ನೇತೃತ್ವದಲ್ಲಿ ಆರು ಜನ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ‘ಕರಜಗಿ ಅವರೊಂದಿಗೆ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಡಾ. ರುದ್ರೇಶ್, ಹಿರೇಮಠ ಸ್ವಾಮೀಜಿ, ಬಳ್ಳಾರಿಯ ಫಾದರ್ ಫ್ರಾನ್ಸಿಸ್, ಬೀದರ್‌ನ ಶಹೀನ್ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಅಬ್ದುಲ್ ಖದೀ‌ರ್ ಸದಸ್ಯರಾಗಿ ಇರಲಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಎನ್.ಬಿ. ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿಕೆ ಬೆನ್ನಲ್ಲೇ ಗುರುರಾಜ ಅವರಿಗೆ ಸಮಿತಿಯ ನೇತೃತ್ವ ನೀಡಿರುವುದಕ್ಕೆ ರಾಜ್ಯ ಸರಕಾರದ ವಿರುದ್ಧ ಸಾಕಷ್ಟು ಟೀಕೆ, ವಿರೋಧಗಳು ವ್ಯಕ್ತವಾಗುತ್ತಿವೆ.

ಬಿಜೆಪಿ-ಆರೆಸ್ಸೆಸ್‌ ಸಿದ್ಧಾಂತವನ್ನು ಪ್ರತಿಪಾದಿಸುವ ಗುರುರಾಜ ಕರಜಗಿ ಅವರ ಆಯ್ಕೆಯು ರಾಜ್ಯ ಕಾಂಗ್ರೆಸ್‌ ಸರಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಚಿಂತಕ ವಿ ಎಲ್ ನರಸಿಂಹಮೂರ್ತಿ ಫೇಸ್ಬುಕ್ ಪೋಸ್ಟ್ ನಲ್ಲಿ ಹೀಗೆಂದಿದ್ದಾರೆ, ನಮ್ಮದು ಜಾತ್ಯತೀತ ಸಿದ್ಧಾಂತದ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೇಸ್ ಸರ್ಕಾರದಲ್ಲಿ ಗುರುರಾಜ ಕರ್ಜಗಿಯಂತಹ ಸಂಘಿಯನ್ನು ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿರುವುದು ಅನಾಹುತಕಾರಿ ನಡೆ.

ಕಳೆದ ಹತ್ತು ವರ್ಷಗಳಿಂದ ಬರಿ ಕಲ್ಯಾಣ ಕರ್ನಾಟಕವಷ್ಟೇ ಅಲ್ಲ ಇಡಿ ಕರ್ನಾಟಕದ ಶಿಕ್ಷಣದ ಗುಣಮಟ್ಟ ಕುಸಿಯುವುದಕ್ಕೆ ಪ್ರಮುಖ ಕಾರಣ ಶೈಕ್ಷಣಿಕ ಸಂಸ್ಥೆಗಳು ಕೋಮುವಾದಿಗಳ ಹಿಡಿತಕ್ಕೆ ಸಿಕ್ಕಿರುವುದು. ಶಿಕ್ಷಣದ ಮೂಲ‌ ಉದ್ದೇಶವಾಗಿರುವ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಮಾನಸಿಕ ಸ್ವಾತಂತ್ರ್ಯ ಮತ್ತು ದೇಶದ ಸಂವಿಧಾನದ ಮೌಲ್ಯಗಳನ್ನು ಅಂತರ್ಗತ ಮಾಡಬೇಕಾದ ಶಿಕ್ಷಣ ವ್ಯವಸ್ಥೆ ಸಂಘಪರಿವಾರದ ಹಿಡಿತಕ್ಕೆ ಸಿಕ್ಕಿ ವರ್ಣಾಶ್ರಮದ ಧರ್ಮವನ್ನು ಸಮರ್ಥನೆ ಮಾಡಿಕೊಳ್ಳುವ ಮಟ್ಟಕ್ಕೆ ನಾಡಿನ ‌ಮಕ್ಕಳನ್ನು ಇಳಿಸಿದೆ.

ಈಗಾಗಲೇ ಸಂಘಪರಿವಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಮಾಡಿರುವ ಅನಾಹುತಗಳನ್ನು ಸರಿದಾರಿಗೆ ತರಲು ದಶಕಗಳೇ ಬೇಕು. ಇಂತಹ ಸಂದರ್ಭದಲ್ಲಿ ಮತ್ತೆ ಮತ್ತೆ ಸಂಘಪರಿವಾರದ ಹಿನ್ನಲೆಯ ವ್ಯಕ್ತಿಯ ಕೈಗೆ ನೀತಿ ಕಲ್ಯಾಣ ಕರ್ನಾಟಕದಂತಹ ಭಾಗದ ಬಗ್ಗೆ ನಿರೂಪಣೆಗಳನ್ನು ರೂಪಿಸುವ ಜವಾಬ್ದಾರಿ ಕೊಡುವುದು ಕೋಮುವಾದದಕ್ಕೆ ನೀರೆರೆದಂತೆ‌.

ಸರ್ಕಾರ ಈ‌ ಕೂಡಲೇ ಗುರುರಾಜ ಕರ್ಜಗಿಯನ್ನು ವಜಾ ಮಾಡಿ ಸಂವಿಧಾನದ ಮೌಲ್ಯಗಳಲ್ಲಿ ಗೌರವ ಹೊಂದಿರುವವರನ್ನು ನೇಮಕ ಮಾಡುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ನ್ಯಾಯ ಒದಗಿಸಲಿ ಎಂದು ಹೇಳಿದ್ದಾರೆ.

ಕಲಬುರಗಿ ವಿವಿಯ ನಂದಕುಮಾರ್ ಅವರ ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಗುರುರಾಜ ಕರ್ಜಗಿಯವರು ಸನಾತನಿ ಸಂತತಿಯ ಅವಕಾಶವಾದಿ ಹಾಗೂ ಸಂಘ ಪರಿವಾರದ ವ್ಯಕ್ತಿ ಎನ್ನುವುದು ಈಗಾಗಲೇ ನಾಡಿನ ಪ್ರಜ್ಞಾವಂತ ನಾಗರೀಕರಿಗೆ ತಿಳಿದಿರುವಂತದ್ದೆ. ಅವರು ಕರ್ನಾಟಕದ ವಿವಿಧೆಡೆ ಕಾರ್ಯಕ್ರಮಗಳು ಆಯೋಜನೆಗೊಳ್ಳುವುದು ಕೇಶವ ಕೃಪೆಯಿಂದ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಮೂಲಕವೇ ಅವರು ಇವತ್ತು ಶಿಕ್ಷಣ ತಜ್ಞರಾದವರು.

ಕೇವಲ ಭಾವನಾತ್ಮಕ ಮಾತುಗಳ ಮೂಲಕವೇ ಸಾಮಾನ್ಯ ಜನರನ್ನು ಮೂಡರನ್ನಾಗಿಸುವಲ್ಲಿ ನಿಸ್ಸಿಮರು. ಇಂತಹ ವ್ಯಕ್ತಿಯನ್ನು ಅದರಲ್ಲೂ ಮುಖ್ಯವಾಗಿ ಜಾತಿ ವಿನಾಶದ ಕ್ರಾಂತಿಯ ನೆಲವಾದ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟದ ಸುಧಾರಣ ಸಮಿತಿಗೆ ಸರ್ಕಾರ ಈ ಮನುವಾದದ ಪ್ರತಿಪಾದಕರನ್ನು ನೇಮಿಸಿರುವುದು ಒಪ್ಪಲಾಗದು. ಕರ್ನಾಟಕ ಸರ್ಕಾರವು ಗುರುರಾಜ ಕರ್ಜಿಗಿಯವರ ನೇಮಕ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು.

ಇತ್ತೀಚೆಗೆ ಕರ್ನಾಟಕ ಸರ್ಕಾರ ಕೈಗೊಳ್ಳುತ್ತೀರಿವ ಈ ರೀತಿಯ ನಿರ್ಧಾರ ಕಾರಣಕ್ಕೆ ನಮ್ಮಂತ ಬಹುತೇಕರು ಕರ್ನಾಟಕ ಸರ್ಕಾರವನ್ನು ಅನುಮಾನದಿಂದ ಮತ್ತು ಅಸಹನೆಯಿಂದ ನೋಡುವಂತ ಪರಿಸ್ಥಿತಿ ಬಂದೊದಗಿದೆ. ಇದು ಈ ಸರ್ಕಾರದ ನೈತಿಕತೆ ಕುಸಿತವನ್ನು ಎತ್ತಿ ತೋರಿಸುವಂತೆ ಕಾಣುತ್ತಿದೆ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ರಾಜಕೀಯ ಚಿಂತನೆಯಲ್ಲೇ ಆಗಿರುವ ಬಹು ದೊಡ್ಡ ಲೋಪವನ್ನು ತೋರಿಸುತ್ತದೆ. ಸಮಾಜದಲ್ಲಿ ಸೂಕ್ಷ್ಮ ಮತ್ತು ತೀಕ್ಷ್ಣವಾದ ರಾಜಕೀಯ ಪ್ರಜ್ಞೆಯನ್ನು ಬಿಟ್ಟು ಕೊಡುವುದು ಬಹು ಘೋರ ದುರಂತಕ್ಕೆಡೆ ಮಾಡಿಕೊಡುತ್ತದೆ ಎನ್ನುವುದು ಆಳುವ ಸರ್ಕಾರ ಅರಿತುಕೊಳ್ಳಬೇಕು.

ವೈಚಾರಿಕ ತಿಳುವಳಿಕೆ, ಅನಿಕೇತನ ಪ್ರಜ್ಞೆಯ ನೀತಿಯನ್ನು ಹಾಗೂ ಕವಿರಾಜ ಮಾರ್ಗಕಾರ ಹಾಕಿರುವ ವಿವೇಕ ತತ್ವಕ್ಕೆ ಬುನಾದಿ ಹಾಕುವಂತ ಶಿಕ್ಷಣ ತಜ್ಞರನ್ನು ನೇಮಿಸಿದರೆ ಶೈಕ್ಷಣಿಕವಾಗಿ ಹಿಂದುಳಿದ ಹೈದ್ರಾಬಾದ್ ಕರ್ನಾಟಕ ನಿಜವಾಗಿಯೂ ಕಲ್ಯಾಣ ಕರ್ನಾಟಕವಾಗುವುದು. ಈಗಿರುವುದು ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕವಾಗಿದೆ ಅಷ್ಟೇ. ಹಾಗಾಗಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಸಮಿತಿಗೆ ನೇಮಕಗೊಂಡ ಗುರುರಾಜ್ ಕರ್ಜಗಿಯವರನ್ನು ಕೈಬಿಟ್ಟು, ರಾಜ್ಯದ ಹಿರಿಯ ಬುದ್ಧಿಜೀವಿಗಳ,ಸಾಹಿತಿಗಳ ಸಲಹೆಗಳನ್ನು ಪಡೆದು ಸಮಿತಿ ಸದಸ್ಯರನ್ನು ನೇಮಕ ಮಾಡುವುದು ಒಳಿತು ಎಂದು ಹೇಳಿದ್ದಾರೆ.

‘ಈ ಸಮಿತಿಯು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಶಾಲೆಗಳಿಗೆ ಸಂಚರಿಸಿ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಜನವರಿ ಅಂತ್ಯ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ವರದಿ ನೀಡಲಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಹೆಚ್ಚಿಸಲು ಏನು ಸಿದ್ಧತೆ ನಡೆಸಬೇಕು ಎಂಬ ಬಗ್ಗೆ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತೂ ಸಲಹೆ ನೀಡಲಿದೆ’ ಎಂದು ಹೇಳಿದರು.

More articles

Latest article