ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 8ಕ್ಕೆ ಮುಂದೂಡಿಕೆ: Bail is a Rule. Jail is Exception ಎಂದು ವಾದಿಸಿದ ವಕೀಲರು

Most read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಚಿತ್ರನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಲಾಗಿದೆ.

ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ವಾದ ಮುಕ್ತಾಯಗೊಂಡ ನಂತರ ಪ್ರತಿವಾದಿಸಲು ಸರ್ಕಾರಿ ಅಭಿಯೋಜಕರು ಮಂಗಳವಾರಕ್ಕೆ ಸಮಯ ಕೋರಿದರು. ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಮನವಿಯ ಮೇರೆಗೆ ವಿಚಾರಣೆಯನ್ನು ಅ.8ಕ್ಕೆ ಮುಂದೂಡಲಾಯಿತು.

ಪ್ರಕರಣದ ಎ-1 ಆರೋಪಿ ಪವಿತ್ರಾಗೌಡ ಜಾಮೀನು ಅರ್ಜಿಯೂ ಮಂಗಳವಾರಕ್ಕೆ ಮುಂದೂಡಿಕೆಯಾಯಿತು. ಪವಿತ್ರ ಗೌಡ ಪರವಾಗಿ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದಿಸುತ್ತಿದ್ದಾರೆ.

57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಿತು. ಆರೋಪಿ ದರ್ಶನ್ ಪರವಾಗಿ ಪ್ರಖ್ಯಾತ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು. ಬೇಲ್ ಈಸ್ ಎ ರೂಲ್, ಜೈಲ್ ಈಸ್ ಎಕ್ಸೆಪ್ಷನ್. ಸೆಷನ್ಸ ಕೋರ್ಟ್, ಹೈಕೋರ್ಟ್ ಜಾಮೀನು ನೀಡಲು ಹಿಂಜರಿಯಬಾರದು. ನ್ಯಾಯಾಲಯಗಳಿಗೆ ಸ್ವತಃ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಈ ಮಾತನ್ನು ಹೇಳಿದ್ದಾರೆ ಎಂದು ಅವರು ವಾದಿಸಿದರು.

ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಲು ವಿಳಂಬ ಮಾಡುವಂತಿಲ್ಲ. 3 ದಿನ ವಿಳಂಬ ಮಾಡಿದ್ದಕ್ಕೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ ಎಂದು ಅವರು ಹೇಳಿದರು.

ರಿಮ್ಯಾಂಡ್‌ ಅರ್ಜಿಯಲ್ಲಿ ಸಾಕ್ಷಿಗಳ ಮಾಹಿತಿ ನೀಡಿಲ್ಲ. ಯಾವ ದಾಖಲೆ ಸಂಗ್ರಹಿಸಿದ್ದಾರೆಂದು ಮಾಹಿತಿ ನೀಡಬೇಕು. ಎಲ್ಲೆಲ್ಲಿ ತನಿಖೆ ನಡೆಸಿದ್ದಾರೆಂದು ಮಾಹಿತಿ ನೀಡಬೇಕು. ಕೇಸ್‌ ಡೈರಿಯಲ್ಲಿ ಸಾಕ್ಷಿಗಳ ಹೇಳಿಕೆ ದಾಖಲಿಸಬೇಕು. ಆದರೆ ಇದ್ಯಾವುದೂ ಆಗಿಲ್ಲ ಎಂದು ವಕೀಲ ಸಿ.ವಿ ನಾಗೇಶ್‌ ವಾದಿಸಿದರು.

ದರ್ಶನ್ ವಿರುದ್ಧ ಸಾಕ್ಷ್ಯಗಳು ಫ್ಯಾಬ್ರಿಕೇಟೆಡ್ ಎಂದ ಅವರು ತನಿಖೆಯಲ್ಲಿ ಪೊಲೀಸರು ನಿಯಮ ಪಾಲಿಸಿಲ್ಲ. ಎಲ್ಲಾ ಮಾಹಿತಿ ಇದ್ರೂ ಪೊಲೀಸರು ಸುಮ್ಮನೆ ಇದ್ದರು. ಇದು ದರ್ಶನ್ ರನ್ನ ಪ್ರಕರಣದಲ್ಲಿ ಸಿಲುಕಿಸುವ ಸಂಚು ಎಂದು ವಾದಿಸಿದರು. ಚಾರ್ಜ್ ಶೀಟ್ ನಲ್ಲಿರುವ ಸಣ್ಣಪುಟ್ಟ ದೋಷಗಳನ್ನೂ ಬಿಡದೆ ಪಟ್ಟಿ ಮಾಡಿದ ಅವರು ತಮ್ಮ ಕಕ್ಷಿದಾರರಿಗೆ ಜಾಮೀನು‌‌ ನೀಡುವಂತೆ ಮನವಿ ಮಾಡಿದರು.

More articles

Latest article