ಮಲದ ಗುಂಡಿಯ ಸ್ವಚ್ಛತೆಗಾರರು- ಸಮೀಕ್ಷೆ ಏನು ಹೇಳುತ್ತದೆ?

Most read

ಗುರುತಿಸಲಾದ ಮಲಹೊರುವ ಕಾರ್ಮಿಕರ ಪೈಕಿ 43,797 ಮಂದಿಯ ಸಾಮಾಜಿಕ ವರ್ಗೀಕರಣ ತನ್ನ ಬಳಿ ಇದೆ ಎಂದು ಸರಕಾರ ಹೇಳಿದೆ. ಅದರ ಪ್ರಕಾರ 97.2% ಮಂದಿ ಎಸ್ ಸಿ ಸಮುದಾಯದವರು. ಎಸ್ ಟಿ ಗಳು, ಒಬಿಸಿಗಳು ಮತ್ತು ಇತರರ ಪಾಲು ತಲಾ ಸುಮಾರು 1% –ಅಭಿನಯ್ ಲಕ್ಷ್ಮಣ್, ದಿ ಹಿಂದೂ. (ಕನ್ನಡಕ್ಕೆ : ಶ್ರೀನಿವಾಸ ಕಾರ್ಕಳ).

ಭಾರತದ ನಗರಗಳು ಮತ್ತು ಪಟ್ಟಣಗಳಲ್ಲಿ ಅಪಾಯಕಾರಿ ಮ್ಯಾನ್‌ ಹೋಲ್‌ ಗಳು ಮತ್ತು ಸೆಪ್ಟಿಕ್ ಟ್ಯಾಂಕ್ ಗಳನ್ನು ಯಾರು ಸ್ವಚ್ಛಗೊಳಿಸುತ್ತಾರೆ ಎಂಬುದನ್ನು ತಿಳಿಯುವ ಉದ್ದೇಶದಿಂದ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಸಮೀಕ್ಷೆಯನ್ನು ನಡೆಸಲಾಯಿತು. ಈ ನಿಟ್ಟಿನಲ್ಲಿ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 3000 ಕ್ಕೂ ಅಧಿಕ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಂದ ಸಂಗ್ರಹಿಸಲಾದ ಸರಕಾರಿ ದತ್ತಾಂಶದ ಪ್ರಕಾರ,  ಅಲ್ಲಿ ಕೆಲಸ ಮಾಡುವ 38,000 ಕಾರ್ಮಿಕರ ಪೈಕಿ 91.9% ಮಂದಿ ಪರಿಶಿಷ್ಟ ಜಾತಿ (ಎಸ್ ಸಿ), ಪರಿಶಿಷ್ಟ ಪಂಗಡ (ಎಸ್ ಟಿ) ಮತ್ತು ಇತರ ಹಿಂದುಳಿದ ಸಮುದಾಯಗಳಿಗೆ (ಒಬಿಸಿ) ಸೇರಿದವರಾಗಿದ್ದಾರೆ! ಮಾಹಿತಿ ಸಂಗ್ರಹಿಸಲಾದ ಈ ಪೌರ ಕಾರ್ಮಿಕರ ಪೈಕಿ 68.9% ಮಂದಿ ಎಸ್ ಸಿ ಗಳು, 14.7% ಮಂದಿ ಒಬಿಸಿಗಳು, 8% ಮಂದಿ ಎಸ್ ಟಿ ಗಳು, ಕೇವಲ 8% ಮಂದಿ ಸಾಮಾನ್ಯ ವರ್ಗದವರು.

2019- 2023 ರ ನಡುವೆ ಕನಿಷ್ಠ 377 ಮಂದಿ ಕಾರ್ಮಿಕರು ಅಪಾಯಕಾರಿ ಮ್ಯಾನ್‌ ಹೋಲ್‌ ಗಳು ಮತ್ತು ಸೆಪ್ಟಿಕ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವಾಗ ಮೃತರಾಗಿದ್ದಾರೆ. ಇದು ಸರಕಾರವೇ ಸಂಸತ್ ನಲ್ಲಿ ಮಂಡಿಸಿರುವ ಮಾಹಿತಿ.

ಅಪಾಯಕಾರಿ ಸ್ವಚ್ಛತಾ ಕಾರ್ಯ

ಮ್ಯಾನ್‌ ಹೋಲ್‌ ಗಳು ಮತ್ತು ಸೆಪ್ಟಿಕ್ ಟ್ಯಾಂಕ್ ಗಳಲ್ಲಿ ಕೆಲಸ ಮಾಡುವವರು ಯಾರು ಎಂಬ ಮಾಹಿತಿಯನ್ನು ಸಂಗ್ರಹಿಸುವುದು ಸಾಮಾನ್ಯವಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ. NAMASTE ಕಾರ್ಯಕ್ರಮದ ಅಂಗವಾಗಿ ಇದನ್ನು ಮಾಡಲಾಗುತ್ತದೆ. ಅಪಾಯಕಾರಿ ಸ್ವಚ್ಛತಾ ಕಾರ್ಯ ನಡೆಸುವಾಗ ಸಂಭವಿಸಬಹುದಾದ ಸಾವುಗಳನ್ನು ತಡೆಯುವ ಉದ್ದೇಶದಿಂದ ಎಲ್ಲ ಮ್ಯಾನ್‌ ಹೋಲ್‌ ಕೆಲಸಗಳನ್ನು ಯಂತ್ರಗಳ ಮೂಲಕ ಮಾಡುವ ಯೋಜನೆಯಿದು.

ಮಲಹೊರುವ ಕಾರ್ಮಿಕರ (ಮ್ಯಾನ್ಯುವಲ್ ಸ್ಕಾವೆಂಜರುಗಳ) ಸ್ವ ಉದ್ಯೋಗ ಯೋಜನೆ ಮತ್ತು ಪುನರ್ವಸತಿ (SRMS) ಯೋಜನೆಗೆ ಬದಲಿಯಾಗಿ ಈ ಯೋಜನೆಯನ್ನು 2023-24 ರಲ್ಲಿ ತರಲಾಯಿತು. ಒಂದು ಪದ್ಧತಿಯಾಗಿ ʼಮಲ ಹೊರುವ ಪದ್ಧತಿʼ ಈಗಾಗಲೇ ಕೊನೆಗೊಂಡಿದೆ, ಈಗ ಆಗಬೇಕಿರುವುದೇನೆಂದರೆ ಅಪಾಯಕಾರಿ ಮ್ಯಾನ್‌ ಹೋಲ್‌ ಗಳು ಮತ್ತು ಸೆಪ್ಟಿಕ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವ ಕೆಲಸದ ಸಮಸ್ಯೆಗಳನ್ನು ಪರಿಹರಿಸುವುದು ಎಂಬುದು ಇಲ್ಲಿ ಒಕ್ಕೂಟ ಸರಕಾರದ ತರ್ಕ. ಉದ್ಯೋಗವಾಗಿ  ಮಲಹೊರುವ ಪದ್ಧತಿಯ ನಿರ್ಬಂಧ ಮತ್ತು ಆ ಕಾರ್ಮಿಕರ ಪುನರ್ವಸತಿ ಕಾಯಿದೆಯಲ್ಲಿ ‘ಮಲಹೊರುವ ಪದ್ಧತಿ’ಯನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬ ನೆಲೆಯಲ್ಲಿ ಈ ವ್ಯತ್ಯಾಸವನ್ನು ಅದು ಪರಿಗಣಿಸಿದೆ.

NAMASTE  ಕಾರ್ಯಕ್ರಮದ ಗುರಿ ಮ್ಯಾನ್‌ ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್ ಗಳ ಸ್ವಚ್ಛತಾ ಕಾರ್ಯದಲ್ಲಿ ನೇರವಾಗಿ ತೊಡಗಿಕೊಂಡಿರುವ ಕಾರ್ಮಿಕರು. ಇದರಲ್ಲಿ ಡಿಸ್ಲಜ್ಜಿಂಗ್ ವಾಹನಗಳ ಚಾಲಕರು, ಹೆಲ್ಪರ್ ಗಳು, ಮಶೀನ್ ಆಪರೇಟರ್ ಗಳು ಮತ್ತು ಕ್ಲೀನರ್ ಗಳು ಸೇರಿದ್ದಾರೆ ಎಂದು ಸಚಿವಾಲಯ ಹೇಳುತ್ತದೆ.

ದೇಶದಾದ್ಯಂತ ಸಮೀಕ್ಷೆ ನಡೆಸಿ ಈ ಕಾರ್ಮಿಕರ ಮಾಹಿತಿ ಸಂಗ್ರಹಿಸುವುದು ಅವರಿಗೆ ಸುರಕ್ಷತಾ ತರಬೇತಿ ಕೊಡುವುದು, ಸಲಕರಣೆ ಒದಗಿಸುವುದು, ಬಂಡವಾಳ ಸಬ್ಸಿಡಿ ಕೊಡುವುದು  ಆ ಮೂಲಕ ಆವರನ್ನು ಸ್ಯಾನಿಟೇಶನ್ ಉದ್ಯಮಶೀಲರನ್ನಾಗಿ ಮಾಡುವುದು ಅದರ ಗುರಿ.

ಒಂದು ವರ್ಷದ ಹಿಂದೆ ಈ ಯೋಜನೆ ಆರಂಭವಾದ ಬಳಿಕ 3326 ನಗರ ಸ್ಥಳೀಯಾಡಳಿತ ಸಂಸ್ಥೆಗಳು (ULB) ಈ ಪ್ರಕ್ರಿಯೆ ಆರಂಭಿಸಿವೆ. 38,000 SSW (ಸೀವರ್ ಮತ್ತು ಸೆಪ್ಟಿಕ್ ಟ್ಯಾಂಕ್ ವರ್ಕರ್) ಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದುವರೆಗೆ 283 ULB ಗಳು ತಮ್ಮಲ್ಲಿ SSW ಗಳು ಇಲ್ಲ ಎಂದು ವರದಿ ಮಾಡಿವೆ. 2364 ULB ಗಳು ತಮ್ಮಲ್ಲಿ ತಲಾ 10 ಕ್ಕಿಂತ ಕಡಿಮೆ SSW ಗಳು ಇದ್ದಾರೆ ಎಂದು ವರದಿ ಮಾಡಿವೆ.

ಐದು ಲಕ್ಷ ನಗರ ಜನಸಂಖ್ಯೆಗೆ 100  ಸ್ಯಾನಿಟೇಶನ್ ಕಾರ್ಮಿರಿದ್ದಾರೆ ಎಂದು ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ  ಅಂದಾಜಿಸಿದೆ. ಇದರ ಆಧಾರದಲ್ಲಿ ಸರಕಾರವು ಹತ್ತು ವರ್ಷಗಳ ಬೆಳವಣಿಗೆ ದರವನ್ನು ಬಳಸಿಕೊಂಡು, 2021 ರ ಹೊತ್ತಿಗೆ ಭಾರತದ 4800 ನಗರ ಸ್ಥಳೀಯಾಡಳಿತಗಳು ಒಂದು ಲಕ್ಷ ಸ್ಯಾನಿಟೇಶನ್ ಕಾರ್ಮಿಕರನ್ನು ನೇಮಿಸಿಕೊಂಡಿದೆ ಎಂದು ಅಂದಾಜಿಸಿದೆ. ಒಂದು ಕೇಂದ್ರೀಯ ಡಾಟಾ ಬೇಸ್ ನಿರ್ಮಿಸುವ ಉದ್ದೇಶದಿಂದ ನಮಸ್ತೆ ಕಾರ್ಯಕ್ರಮವು ದೇಶದ ಎಲ್ಲ ಸ್ಯಾನಿಟೇಶನ್ ಕಾರ್ಮಿಕರ ಸಮೀಕ್ಷೆ ಮಾಡಲು ಉದ್ದೇಶಿಸಿದೆ.

ರಾಜ್ಯಗಳಿಂದ ಆಗಿರುವ ಪ್ರಯತ್ನಗಳು

ಕೇರಳ, ರಾಜಸ್ತಾನ, ಜಮ್ಮು ಕಾಶ್ಮೀರ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸಮೀಕ್ಷಾ ಕೆಲಸವನ್ನು ಮುಗಿಸಿವೆ. ಆಂಧ್ರಪ್ರದೇಶ, ಬಿಹಾರ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ, ಮತ್ತು ಮಹಾರಾಷ್ಟ್ರ ಸೇರಿದಂತೆ 17 ರಾಜ್ಯಗಳಲ್ಲಿ ಈ ಪ್ರಕ್ರಿಯೆ ಮುಂದುವರಿದಿದೆ. ಛತ್ತೀಸ್ ಗಢ, ಮೇಘಾಲಯ, ಪಶ್ಚಿಮ ಬಂಗಾಳ ರಾಜ್ಯಗಳು ಇನ್ನಷ್ಟೇ ಈ ಕೆಲಸ ಆರಂಭಿಸಬೇಕಿದೆ. ತಮಿಳುನಾಡು ಮತ್ತು ಒಡಿಶಾ ರಾಜ್ಯಗಳು ತಮ್ಮದೇ ಆದ SSW ಗಳಿಗಾಗಿನ ಕಾರ್ಯಕ್ರಮವನ್ನು ನಡೆಸುತ್ತಿವೆ. ಇವು ಈ ಕಾರ್ಯಕ್ರಮದಡಿಯ ಮಾಹಿತಿಯನ್ನು ಕೇಂದ್ರಕ್ಕೆ ವರದಿ ಮಾಡುತ್ತಿಲ್ಲ.

ಕೇರಳ, ಕರ್ನಾಟಕ ಮೊದಲಾದ ರಾಜ್ಯಗಳು ವಿಶೇಷ ಶಿಬಿರಗಳಲ್ಲಿ ಕಾರ್ಮಿಕರ ಸಮೀಕ್ಷೆ ಮಾಡಲು ಮಾಹಿತಿ ಶಿಕ್ಷಣ, ಸಂವಹನ (ಐಇಸಿ) ಅಭಿಯಾನಗಳನ್ನು ನಡೆಸುತ್ತಿವೆ. ಆಂಧ್ರದಲ್ಲಿ ಈ ಸಮೀಕ್ಷೆಗಾಗಿ ನಗರ ಸ್ಥಳೀಯಾಡಳಿತ ಸಂಸ್ಥೆಗಳು ಕಾರ್ಮಿಕರ ಮನೆಗಳಿಗೆ ಭೇಟಿ ನೀಡುತ್ತಿವೆ. ಸುಮಾರು 30% ಸಮೀಕ್ಷೆ ಮುಗಿದಿದೆ ಎಂದು ಆ ರಾಜ್ಯಗಳ ದತ್ತಾಂಶಗಳು ತೋರಿಸುತ್ತಿವೆ.

2023-24 ರ ಆರ್ಥಿಕ ವರ್ಷದ ಕೊನೆಗಾಗುವಾಗ 31,999 SSW ಗಳ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಸಚಿವಾಲಯವು ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಪರ್ಯಾಯ ಉದ್ಯೋಗಕ್ಕಾಗಿ 191 ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ 2.26 ಕೋಟಿ ರುಪಾಯಿಯಷ್ಟು ಬಂಡವಾಳ ಸಬ್ಸಿಡಿ ಕೊಡಲಾಗಿದೆ ಎಂದು ಅದು ಹೇಳಿದೆ. ಅದೇ ಹೊತ್ತಿನಲ್ಲಿ ಸ್ಯಾನಿಟೇಶನ್ ಸಂಬಂಧಿತ ಯೋಜನೆಗಳಿಗಾಗಿ 413 ಸ್ಯಾನಿಟೇಶನ್ ಕಾರ್ಮಿಕರು ಮತ್ತು ಅವರ ಅವಲಂಬಿತರು 10.6 ಕೋಟಿ ರುಪಾಯಿಯಷ್ಟು ಬಂಡವಾಳ ಸಬ್ಸಿಡಿ ಪಡೆದಿದ್ದಾರೆ.

ಮಲಹೊರುವ ಪದ್ಧತಿಗೆ ಅಂತ್ಯ

ಈ ಹಿಂದಿನ ಎಸ್ ಆರ್ ಎಮ್ ಎಸ್ ಯೋಜನೆಯ ಅಡಿಯಲ್ಲಿ ಸರಕಾರವು 2018 ರ ತನಕ 58,098  ಮಲಹೊರುವ ಕಾರ್ಮಿಕರನ್ನು ಗುರುತಿಸಿತ್ತು. ಆನಂತರ ಎಂದೂ ಮಲಹೊರುವ ಕಾರ್ಮಿಕರನ್ನು ಗುರುತಿಸಿಲ್ಲ. ಮಲಹೊರುವ ಪದ್ಧತಿ ಇದೆ ಎಂಬ 6500 ಕ್ಕೂ ಅಧಿಕ ದೂರುಗಳನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ ಎಂದು ಅದು ಹೇಳಿಕೊಂಡಿದೆ.

ಗುರುತಿಸಲಾದ ಮಲಹೊರುವ ಕಾರ್ಮಿಕರ ಪೈಕಿ 43,797 ಮಂದಿಯ ಸಾಮಾಜಿಕ ವರ್ಗೀಕರಣ ತನ್ನ ಬಳಿ ಇದೆ ಎಂದು ಸರಕಾರ ಹೇಳಿದೆ. ಅದರ ಪ್ರಕಾರ 97.2% ಮಂದಿ ಎಸ್ ಸಿ ಸಮುದಾಯದವರು. ಎಸ್ ಟಿ ಗಳು, ಒಬಿಸಿಗಳು ಮತ್ತು ಇತರರ ಪಾಲು ತಲಾ ಸುಮಾರು 1%.

2018  ರ ತನಕ ಮಲಹೊರುವ ಕಾರ್ಮಿಕರು ಎಂದು ಗುರುತಿಸಲಾದ ಎಲ್ಲ 58,098 ಮಂದಿಗೆ ಏಕಗಂಟಿನಲ್ಲಿ 40,000 ರುಪಾಯಿ ನಗದು ವರ್ಗಾಯಿಸಲಾಗಿದೆ ಎಂದು ಸಚಿವಾಲಯದ ಕಡತಗಳು ಹೇಳುತ್ತಿವೆ. ಅದೇ ಹೊತ್ತಿನಲ್ಲಿ ಅವರ ಪೈಕಿ 18,880 ಮಂದಿ ಪರ್ಯಾಯ ಉದ್ಯೋಗದಲ್ಲಿ ಕೌಶಲ ತರಬೇತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2022 ನೇ ಇಸವಿಗಾಗುವಾಗ 2051 ಮಂದಿ ಪರ್ಯಾಯ ವ್ಯಾಪಾರ ವ್ಯವಹಾರ ಶುರು ಮಾಡಲು ಸದರಿ ಯೋಜನೆಯಡಿ ಸಾಲ ಪಡೆಯುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮೂಲ : ಅಭಿನಯ್ ಲಕ್ಷ್ಮಣ್, ದಿ ಹಿಂದೂ, ಸೆಪ್ಟಂಬರ್ 29, 2024
ಕನ್ನಡಕ್ಕೆ : ಶ್ರೀನಿವಾಸ ಕಾರ್ಕಳ.

ಈ ಸುದ್ದಿ ಓದಿ- http://ಜಾತಿ ಗಣತಿ, ಒಳ ಮೀಸಲಾತಿ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ : ಸಿಎಂ ಸಿದ್ದರಾಮಯ್ಯ https://kannadaplanet.com/siddaramaiah-said-about-casye-census-and-ola-misalathi/

More articles

Latest article