ಮನರಂಜನೆ ಹೆಸರಲ್ಲಿ ಮೌಢ್ಯಾಚಾರ; ಬಿಗ್ ಬಾಸ್ ಎನ್ನುವ ವಿಕಾರ

Most read

ಹಿಂದೂ ಧರ್ಮದ ಹೆಸರಲ್ಲಿ ಜನರನ್ನು ಒಗ್ಗೂಡಿಸಿ ಹಿಂದುತ್ವವನ್ನು ಹೇರುವ ಹಾಗೂ ಜಾತ್ಯಾತೀಯ ದೇಶವನ್ನು ಹಿಂದುತ್ವವಾದಿ ರಾಷ್ಟ್ರ ಮಾಡುವ ಹುನ್ನಾರಗಳು ನಡೆಯುತ್ತಿವೆ. ಈ ರೀತಿಯ ಮತಾಂಧತೆಯ ಭಾಗವಾಗಿಯೇ ಸ್ವರ್ಗ ನರಕ ಕಾನ್ಸೆಪ್ಟಿನ ಬಿಗ್ ಬಾಸ್ ಕಾರ್ಯಕ್ರಮಗಳು ನಿರ್ಮಾಣವಾಗುತ್ತಿವೆ. ಮನರಂಜನೆಯ ಮೂಲಕ ಸನಾತನ ಮೌಢ್ಯವನ್ನು ಪುನರುತ್ಥಾನಗೊಳಿಸುವ ಕೆಲಸವನ್ನು ಬಿಗ್ ಬಾಸ್ 11 ನೇ ಆವೃತ್ತಿ ಮಾಡುತ್ತಿದೆ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.

ಬಿಗ್ ಬಾಸ್ ಎನ್ನುವ ಬೃಹನ್ನಾಟಕದ 11 ನೇ ಆವೃತ್ತಿ ಸೆ.29 ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಿದೆ. ಮನರಂಜನೆ ಹೆಸರಲ್ಲಿ ವ್ಯಕ್ತಿಗಳ ಒಳಗಿನ ವಿಕೃತಿಯನ್ನು ಸೃಷ್ಟಿಸಿ ತೋರಿಸುವ, ಖಾಸಗಿತನವನ್ನು ಸಾರ್ವಜನಿಕ ಪ್ರದರ್ಶನದ ಸರಕಾಗಿ ವಿಜೃಂಭಿಸುವ ರಿಯಾಲಿಟಿ ಶೋ ಮತ್ತೆ ಪ್ರಾರಂಭವಾಗಿದೆ. 

ಇಲ್ಲಿವರೆಗೂ ತಂದಿಕ್ಕಿ ತಮಾಷೆ ತೋರಿಸುವ, ಜಗಳ ಹಚ್ಚಿ ಮೆಚ್ಚುಗೆ ಗಳಿಸುವ, ವಿವಾದಗಳನ್ನು ಹುಟ್ಟು ಹಾಕಿ ಟಿಆರ್ಪಿ ಹೆಚ್ಚಿಸಿಕೊಂಡು ಲಾಭಗಳಿಸುವ ಉದ್ದೇಶದಿಂದ ಬಿಗ್ ಬಾಸ್ ಶೋ ಪ್ರಸಾರವಾಗುತ್ತಿತ್ತು. ಮತ್ತೊಬ್ಬರ ಜಗಳ ಪ್ರೇಮ ವಿರಹ ಮಾತ್ಸರ್ಯಗಳತ್ತ ಜನರು ಅಪಾರವಾದ ಕುತೂಹಲ ತೋರುವ ದೌರ್ಬಲ್ಯವನ್ನೇ ಬಳಸಿಕೊಂಡು, ವ್ಯಕ್ತಿಗಳ ಒಳಗಿನ ಸಣ್ಣತನಗಳನ್ನೇ ಕೇಂದ್ರವಾಗಿರಿಸಿಕೊಂಡು  ಬಿಗ್ ಬಾಸ್ ಎನ್ನುವ ಟಿವಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. 

ಕೆಲವಾರು ಆಯ್ದ ವ್ಯಕ್ತಿಗಳನ್ನು ನೂರು ದಿನ ಮನೆಯೊಂದರಲ್ಲಿ ಕೂಡಿ ಹಾಕಿ ಆಟದ ಹೆಸರಲ್ಲಿ ಎಲ್ಲಾ ನಮೂನಿಯ ಮಂಗಾಟಗಳನ್ನು ಸೃಷ್ಟಿಸಿ ವೀಕ್ಷಕರನ್ನು ಮರುಳುಮಾಡಿ ಕೋಟಿಗಳ ಲೂಟಿ ಮಾಡುವ ಕಾರ್ಯಕ್ರಮ ಇದಾಗಿದೆ. ಈ ಭವ್ಯವಾದ ಸೆಟ್ ನಲ್ಲಿ ವಿವಾದಗಳು ಹೆಚ್ಚಿದಷ್ಟೂ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ. ವಿಕೃತತೆ ಅತಿಯಾದಷ್ಟೂ ಜನಪ್ರಿಯತೆ ಜಾಸ್ತಿಯಾಗುತ್ತದೆ. ಜಗಳಗಳು ತಾರಕಕ್ಕೇರಿದಷ್ಟೂ ಟಿಆರ್ಪಿ ರೇಟಿಂಗ್ ಮೇಲೇರುತ್ತದೆ. 

ಇಲ್ಲಿ ಎಲ್ಲವೂ ಕೃತ್ರಿಮ. ಬಿಗ್ ಬಾಸ್ ಆಟದಲ್ಲಿ ಭಾಗವಹಿಸುವ ಸ್ಪರ್ಧಿಗಳ ನಗು ಅಳು, ನಡೆ ನುಡಿ, ಜಗಳ ವರ್ತನೆ, ಟಾರ್ಗೆಟ್, ಅಸೈನ್ಮೆಂಟ್ ಎಲ್ಲವೂ ಪೂರ್ವಯೋಜಿತ. ಈ ನಕಲಿ ಲೋಕದ ವಿದ್ಯಮಾನಗಳು ಅಸಲಿ ಎನ್ನುವ ಭ್ರಮೆಯನ್ನು ಸೃಷ್ಟಿಸಿ ವೀಕ್ಷಕರನ್ನು ಆಕರ್ಷಿಸುವ ಕಾರ್ಯಕ್ರಮವೇ ಬಿಗ್ ಬಾಸ್. ಇದರಲ್ಲಿ ಭಾಗವಹಿಸುವ ಬಹುತೇಕರಿಗೆ ಇರುವ ಮಾನದಂಡಗಳೇನೆಂದರೆ ಅವರು ಸೆಲಿಬ್ರಿಟಿಯಾಗಿ ಒಂದಿಷ್ಟು ಹೆಸರು ಮಾಡಿರಬೇಕು ಇಲ್ಲವೇ ಸಮಾಜದಲ್ಲಿ ವಿವಾದಿತ ವ್ಯಕ್ತಿಗಳಾಗಿರಬೇಕು. ಅಂತವರನ್ನು ಹುಡುಕಿ, ಅವರವರ ಯೋಗ್ಯತೆಗೆ ತಕ್ಕಂತೆ ಪೇಮೆಂಟ್ ಫಿಕ್ಸ್ ಮಾಡಿ ಬಿಗ್ ಬಾಸ್ ಮನೆಗೆ ಕರೆತಂದು ಕೂಡಿ ಹಾಕಲಾಗುತ್ತದೆ. ವಿವಿಧ ಆಟಗಳ ಹೆಸರಲ್ಲಿ ಮಂಗಾಟಗಳನ್ನು ಸೃಷ್ಟಿಸಲಾಗುತ್ತದೆ. ವೈಯಕ್ತಿಕ ನಿಂದನೆ ಬೋಧನೆ, ರಾಗ ದ್ವೇಷ, ಪ್ರೀತಿ ಭೀತಿಗಳನ್ನು ಹುಟ್ಟಿಸಲಾಗುತ್ತದೆ. ಇದೆಲ್ಲವನ್ನೂ ಮ್ಯಾನೇಜ್ ಮಾಡಲು ಮಹಾ ಸೆಲೆಬ್ರಿಟಿಯಾದ ಜನಪ್ರಿಯ ನಾಯಕ ನಟ ಸುದೀಪ್ ರವರನ್ನು ಬಳಸಿಕೊಳ್ಳಲಾಗುತ್ತಿದೆ.

ಕಳೆದ ಹತ್ತು ಆವೃತ್ತಿಗಳನ್ನು ನೋಡಿಯಾಗಿದೆ. ಮನರಂಜನೆಯ ಹೆಸರಲ್ಲಿ ಏನೇನು ಮಾಡಲಾಗಿದೆ ಎಂಬುದೂ ಗೊತ್ತಿದೆ. ಆದರೆ ಈಗ ಈ 11 ನೇ ಆವೃತ್ತಿ ಮಾತ್ರ ಜನರಲ್ಲಿ ವೈದಿಕಶಾಹಿ ಬಿತ್ತಿ ಬೆಳೆದ ನಂಬಿಕೆಗೆ ಇಂಬು ಕೊಡುವಂತಿದೆ. ಸನಾತನಿ ಮನುವಾದಿಗಳು ಬಹುಜನರನ್ನು ಶೋಷಿಸಲು ಹುಟ್ಟು ಹಾಕಿದ ಸ್ವರ್ಗ ನರಕದ ಪರಿಕಲ್ಪನೆಯನ್ನು ಬಿಗ್ ಬಾಸ್ ಮೂಲಕ ಮರುಸೃಷ್ಟಿಸುವ ಮಹತ್ಕಾರ್ಯವನ್ನು ಮಾಡಲಾಗುತ್ತಿದೆ. ಈ 11 ನೇ ಆವೃತ್ತಿಯ ಥೀಮ್ ಸ್ವರ್ಗ ನರಕ ಎನ್ನುವುದೇ ಆಗಿದೆ.

“ಈ ಜನ್ಮದಲ್ಲಿ ಪುಣ್ಯ ಮಾಡಿದವರು ಸುಖದ ಸುಪ್ಪತ್ತಿಗೆಯಾದ ಸ್ವರ್ಗಕ್ಕೆ ಹೋಗುತ್ತಾರೆ ಹಾಗೂ ಮರುಜನ್ಮದಲ್ಲಿ ಮೇಲ್ಜಾತಿಯಲ್ಲಿ ಹುಟ್ಟುತ್ತಾರೆ. ಹಾಗೂ ಈ ಜನ್ಮದಲ್ಲಿ ಪಾಪಕೃತ್ಯಗಳನ್ನು ಎಸಗಿದವರು ನೇರವಾಗಿ ಕಠೋರ ನರಕಕ್ಕೆ ಹೋಗಿ ನಾನಾ ನಮೂನೆಯ ಘನಘೋರ ಶಿಕ್ಷೆಗೆ ಒಳಗಾಗುತ್ತಾರೆ ಮತ್ತು ಮರುಜನ್ಮದಲ್ಲಿ ಕ್ರಿಮಿ ಕೀಟ ಪ್ರಾಣಿ ಅಷ್ಟೇ ಯಾಕೆ ಕೀಳು ಕುಲದಲ್ಲಿ ಜನಿಸುತ್ತಾರೆ” ಎನ್ನುವುದೇ ಬ್ರಾಹ್ಮಣಶಾಹಿ ತನ್ನ ವರ್ಣವ್ಯವಸ್ಥೆಯನ್ನು ಖಾಯಂಗೊಳಿಸಲು ಸೃಷ್ಟಿಸಿದ ‘ಕರ್ಮಸಿದ್ಧಾಂತ’ವಾಗಿದೆ. ಇದನ್ನೇ ವೈದಿಕರ ವೇದ ಪುರಾಣಗಳು ಸಮರ್ಥಿಸಿಕೊಳ್ಳುತ್ತಲೇ ಬಂದಿವೆ. 

“ಸ್ವರ್ಗ ಲೋಕ ಮರ್ತ್ಯಲೋಕ ಬೇರಿಲ್ಲಾ ಕಾಣಿರೋ, ಸತ್ಯವ ನುಡಿವುದೇ ಸ್ವರ್ಗಲೋಕ, ಮಿಥ್ಯವ ನುಡಿವುದೇ ಮಿಥ್ಯ ಲೋಕ. ಆಚಾರವೇ ಸ್ವರ್ಗ, ಅನಾಚಾರವೇ ನರಕ” ಎಂದು ಬಸವಣ್ಣನವರು ಸನಾತನಿಗಳ ಸ್ವರ್ಗ-ನರಕ ಕಲ್ಪನೆಯನ್ನೇ ಬುಡಮೇಲು ಮಾಡಿದ್ದಾರೆ. ಆದರೂ ಸಾವಿರಾರು ವರುಷಗಳಿಂದ, ಧರ್ಮದ ಹೆಸರಲ್ಲಿ ಜನರ ಮೆದುಳಲ್ಲಿ ಬಿತ್ತಿದ ಸ್ವರ್ಗ ನರಕ ಕರ್ಮಾದಿ ಮೌಢ್ಯಗಳು ಕಡಿಮೆ ಏನಾಗಿಲ್ಲ. ಈ ಮೌಢ್ಯಾಚರಣೆಗೆ ಯಾವ ಧರ್ಮಗಳೂ ಹೊರತಲ್ಲ. ಜನರನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ಶಾಸ್ತ್ರ ಸಂಕಥನಕ್ಕಿಂತ ಬೇರೆ ಪ್ರಭಾವಶಾಲಿ ಅಸ್ತ್ರಗಳು ಪುರೋಹಿತರ ಬಳಿ ಇಲ್ಲ. ಈ ನಂಬಿಕೆ ಅಳಿದು ಹೋದರೆ ಎಲ್ಲಾ ಮತ ಧರ್ಮಗಳ ಪುರೋಹಿತಶಾಹಿಗಳು ಹುಟ್ಟು ಹಾಕಿದ ಧರ್ಮಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ, ಅಸಮಾನತೆ ಅಳಿಯುತ್ತದೆ. ಹಾಗೆ ಆಗುವುದು ಯಾವುದೇ ಧರ್ಮದ ಗುರುಗಳಿಗೆ ಅಪಥ್ಯವೆನಿಸುತ್ತದೆ.

ಆಧುನಿಕ ಯಂತ್ರ ಯುಗದಲ್ಲಿ, ಬಹುಸಂಖ್ಯಾತ ದುಡಿಯುವ ವರ್ಗದ ಜನರಲ್ಲಿ ಈಗ ಸ್ವರ್ಗ ನರಕಗಳ ಕುರಿತು ಭಯವೇ ಇಲ್ಲವಾಗಿದೆ. ಕರ್ಮಸಿದ್ಧಾಂತ ವ್ಯಾಪಕವಾಗಿ ಪ್ರಶ್ನೆಗೆ ಒಳಗಾಗಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಬಿಗ್ ಬಾಸ್ ನಂತಹ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ಈ ಕರ್ಮಸಿದ್ಧಾಂತದ ಮೌಢ್ಯಾಚರಣೆಯ ನಂಬಿಕೆಯನ್ನು ಜನರಲ್ಲಿ ಗಟ್ಟಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಈ ದೇಶದಲ್ಲಿ ಹಿಂದುತ್ವವಾದಿ ಮತಾಂಧರ ಮೇಲಾಟ ಹೆಚ್ಚಾಗಿದೆ. ಹಿಂದುತ್ವ ಎಂದರೆ ವೈದಿಕಶಾಹಿ ಮನುಸ್ಮೃತಿಯ ಪ್ರತಿಪಾದನೆಯೇ ಆಗಿದೆ. ಸರ್ವರ ಸಮಾನತೆಯನ್ನು ಬಯಸುವ ಸಂವಿಧಾನವನ್ನು ಸರ್ವನಾಶ ಮಾಡಿ ವರ್ಣಾಶ್ರಮ ಆಧಾರಿತ ಮನುಸ್ಮೃತಿಯನ್ನು ಜಾರಿಗೆ ತರುವ ಪ್ರಯತ್ನ ಹಾಗೂ ಪ್ರಯೋಗಗಳನ್ನು ಸಂಘ ಪರಿವಾರದ ವೈದಿಕ ಮೆದುಳುಗಳು ಮಾಡುತ್ತಿವೆ. ಹೀಗಾಗಿ ಹಿಂದೂ ಧರ್ಮದ ಹೆಸರಲ್ಲಿ ಜನರನ್ನು ಒಗ್ಗೂಡಿಸಿ ಹಿಂದುತ್ವವನ್ನು ಹೇರುವ ಹಾಗೂ ಜಾತ್ಯಾತೀಯ ದೇಶವನ್ನು ಹಿಂದುತ್ವವಾದಿ ರಾಷ್ಟ್ರ ಮಾಡುವ ಹುನ್ನಾರಗಳು ನಡೆಯುತ್ತಿವೆ. ಈ ರೀತಿಯ ಮತಾಂಧತೆಯ ಭಾಗವಾಗಿಯೇ ಸ್ವರ್ಗ ನರಕ ಕಾನ್ಸೆಪ್ಟಿನ ಬಿಗ್ ಬಾಸ್ ಕಾರ್ಯಕ್ರಮಗಳು ನಿರ್ಮಾಣವಾಗುತ್ತಿವೆ. ಮನರಂಜನೆಯ ಮೂಲಕ ಸನಾತನ ಮೌಢ್ಯವನ್ನು ಪುನರುತ್ಥಾನಗೊಳಿಸುವ ಕೆಲಸವನ್ನು ಬಿಗ್ ಬಾಸ್ 11ನೇ ಆವೃತ್ತಿ ಮಾಡುತ್ತಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ

ಇದಕ್ಕೆ ಪೂರಕವಾಗಿ ಚೈತ್ರಾ ಕುಂದಾಪುರಳಂತಹ ಮತಿಹೀನ ಮತಾಂಧ ಉಗ್ರ ಹಿಂದುತ್ವವಾದಿ ಪ್ರಚಾರಕ ಹೆಣ್ಮಗಳನ್ನು ಬಿಗ್ ಬಾಸ್ ಆಟದ ಸ್ಪರ್ಧಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅನ್ಯಧರ್ಮೀಯರ ಮೇಲೆ ಕೆಂಡ ಕಾರುತ್ತಾ ಹಿಂದೂ ಧರ್ಮೀಯರ ಭಾವನೆಗಳನ್ನು ಕೆರಳಿಸುವ ಈ ಕೋಮುಕ್ರಿಮಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿರುವುದಕ್ಕೂ ಸ್ವರ್ಗ ನರಕ ಎನ್ನುವ ಕರ್ಮಸಿದ್ಧಾಂತದ ಪರಿಕಲ್ಪನೆಗೂ ಸಂಬಂಧವಿದೆ. ಈ ಚೈತ್ರಾ ಎನ್ನುವ ಮಹಿಳೆ ಕ್ರಿಮಿನಲ್ ಗಳ ಗುಂಪು ಕಟ್ಟಿಕೊಂಡು ಉದ್ಯಮಿಯನ್ನು ಬ್ಲಾಕ್ ಮೇಲ್ ಮಾಡಿ ಹಣ ವಂಚಿಸಿ ಜೈಲಿಗೆ ಹೋದವಳು. ಹಾಗೂ ಈಗ ಬೇಲ್ ನಲ್ಲಿ ಇರುವವಳು. ಇಂತಹ ಕ್ರಿಮಿನಲ್ ಹಿನ್ನಲೆ ಇರುವ ಮಹಿಳೆಯನ್ನು ಬಿಗ್ ಬಾಸ್ ಮನೆಗೆ ಕರೆಸಿದವರಿಗೆ ಅದ್ಯಾವ ನೈತಿಕ ಪ್ರಜ್ಞೆ ಇರಲು ಸಾಧ್ಯ? 

ಒಟ್ಟಾರೆಯಾಗಿ ಮನರಂಜನೆಯನ್ನೂ ಮೌಢ್ಯ ಪ್ರತಿಪಾದನೆಗೆ ಬಳಸಿಕೊಳ್ಳುತ್ತಿರುವ, ಮತಾಂಧರನ್ನು ಸ್ಪರ್ಧಾಳನ್ನಾಗಿಸಿದ ಈ ಬಿಗ್ ಬಾಸ್ ಎನ್ನುವ ಹೊಸ ಹುಚ್ಚರಾಟದ ರಿಯಾಲಿಟಿ ಶೋ ವನ್ನೇ ಬಹಿಷ್ಕರಿಸಬೇಕಿದೆ. ಹಣ ಕೊಟ್ಟರೆ ಖತರ್ನಾಕ್ ರಮ್ಮಿ ಆಟದ ಪ್ರಚಾರಕ್ಕೂ ಸಿದ್ದ, ಸಮಾಜಕ್ಕೆ ಯಾವುದೇ ರೀತಿಯ ಪ್ರಯೋಜನಕ್ಕೆ ಬರದ ಬಿಗ್ ಬಾಸ್ ನಂತಹ ವಿಕ್ಷಿಪ್ತ ಕಾರ್ಯಕ್ರಮದ ನಿರೂಪಕನಾಗಲೂ ಸಿದ್ದ ಎನ್ನುವ ಸುದೀಪ್ ಎನ್ನುವ ಜನಪ್ರಿಯ ನಟನ ಸಿನೆಮಾಗಳನ್ನು ವೀಕ್ಷಿಸುವುದನ್ನೇ ಪ್ರಜ್ಞಾವಂತರು ಬಿಡಬೇಕಿದೆ. ಸೌಹಾರ್ದತೆ ಬಿಟ್ಟು ಮತಾಂಧತೆ ಹಾಗೂ ಮೌಢ್ಯಗಳನ್ನು ಪ್ರತಿಪಾದಿಸುವ ಶಕ್ತಿ, ವ್ಯಕ್ತಿ ಹಾಗೂ ಕಾರ್ಯಕ್ರಮಗಳಿಂದ ಜನರೇ ದೂರಾಗಬೇಕಿದೆ. ಸೌಹಾರ್ದತೆ, ವೈಚಾರಿಕತೆ ಸಾರುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬರಬೇಕಿವೆ.

ಶಶಿಕಾಂತ ಯಡಹಳ್ಳಿ
ರಂಗಕರ್ಮಿ, ಪತ್ರಕರ್ತರು


ಇದನ್ನೂ ಓದಿಯಾರು ಏನೇ ಅಂದ್ರೂ ತಲೆಕೆಡಿಸ್ಕೋಬೇಡಿ ಸುದೀಪ್‌ ಸರ್‌

More articles

Latest article