ಹಂದಿ ಹೋಲಿಕೆಯೂ ಕುಮಾರಸ್ವಾಮಿ ವರ್ತನೆಯೂ

Most read

ತನಗೆ ಎದುರಾಡಿದವರನ್ನು, ತನ್ನ ವಿರುದ್ಧ ಆರೋಪ ಮಾಡಿದವರನ್ನು ನಿಂದಿಸಿ ಆತ್ಮವಿಶ್ವಾಸ ಕುಂದಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದ ಕುಮಾರಸ್ವಾಮಿಯವರಿಗೆ ಅಧಿಕಾರಿಯೊಬ್ಬರು ಹೀಗೆ ದಿಟ್ಟವಾಗಿ ಉತ್ತರಿಸಿದ್ದು ಬೇರೆಲ್ಲ ಪೊಲೀಸ್ ಅಧಿಕಾರಿಗಳಿಗೆ ಬಲ ಕೊಡುವಂತಹುದ್ದಾಗಿದೆ. ಇಂತಹ ಸಮಯಸಾಧಕ ರಾಜಕಾರಣಿಗಳನ್ನು ಎದುರಿಸಿ ನಿಲ್ಲುವ ಧೈರ್ಯವನ್ನು ಅಧಿಕಾರಿಯೊಬ್ಬರು ತೋರಿಸಿದ್ದು ಸ್ತುತ್ಯರ್ಹವಾಗಿದೆ. ಆಧಾರ ರಹಿತ ನಿಂದನಾಸ್ತ್ರಗಳ ಮೂಲಕವೇ ಎಲ್ಲರನ್ನೂ ಹೆದರಿಸಬಹುದು ಎನ್ನುವ ದುರಹಂಕಾರ ಪೀಡಿತ ಕುಮಾರಸ್ವಾಮಿಯವರಿಗೆ ಇದು ಪಾಠವಾಗಬೇಕಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

“ಹಂದಿಗಳೊಂದಿಗೆ ಗುದ್ದಾಡಿದರೆ ಇಬ್ಬರಿಗೂ ಕೊಳಕು ಹಾಗೂ ಅದನ್ನು ಹಂದಿಯೂ ಇಷ್ಟಪಡುತ್ತದೆ” ಎಂದು ಖ್ಯಾತ ಮಾನವತಾವಾದಿ ಸಾಹಿತಿ ಜಾರ್ಜ್ ಬರ್ನಾರ್ಡ್ ಷಾ ಹೇಳಿದ ಮಾತು ಕರ್ನಾಟಕದ ಅವಕಾಶವಾದಿ ರಾಜಕಾರಣಿ ಕುಮಾರಸ್ವಾಮಿಯವರಿಗೆ ಅತ್ಯಂತ ಸೂಕ್ತವಾಗಿ ಹೋಲಿಕೆಯಾಗುತ್ತದೆ ಎಂದು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ರವರಿಗೆ ಅದು ಹೇಗೆ ಗೊತ್ತಾಯಿತೋ ಗೊತ್ತಿಲ್ಲ. ಆದರೆ ಅವರು ಹೇಳಿದ್ದರಲ್ಲಿ ಸ್ವಲ್ಪವೂ ಅತಿಶಯೋಕ್ತಿ ಇಲ್ಲ.

ಯಾಕೆಂದರೆ, ಜೆಡಿಎಸ್ ಎನ್ನುವ ಜಾತಿವಾದಿ ಪಕ್ಷದ ಏಕಮೇವ ಅವಕಾಶವಾದಿ ನಾಯಕ ಕುಮಾರಸ್ವಾಮಿಯವರ ರಾಜಕೀಯ ಪಯಣದ ಹಾದಿಯನ್ನು ಗಮನಿಸಿದರೆ ಪರನಿಂದನೆ ಹಾಗೂ ಅವಕಾಶವಾದವನ್ನು ಹೊರತುಪಡಿಸಿ ಬೇರೇನೂ ಇಲ್ಲ. ಸೈದ್ಧಾಂತಿಕ ಬದ್ದತೆ, ರಾಜಕೀಯ ಪ್ರಬುದ್ಧತೆ ಮೊದಲೇ ಇಲ್ಲ. ಬೇರೆಯವರ ಟೀಕೆಗಳನ್ನು ಸಹಿಸುವ ತಾಳ್ಮೆಯಂತೂ ಇಲ್ಲವೇ ಇಲ್ಲ.

ಕರ್ನಾಟಕದ ರಾಜಕಾರಣದಲ್ಲಿ ತಂದೆಯ ನಾಮಬಲ ಹಾಗೂ ಅದೃಷ್ಟದ ಜೊತೆಗೆ ಸನ್ನಿವೇಶಗಳನ್ನು ಹೇಗೆ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು ಎನ್ನುವ ಜಾಣ್ಮೆ ಕುಮಾರಸ್ವಾಮಿಯವರಿಗೆ ಶ್ರೀರಕ್ಷೆಯಾಗಿದೆ. ರಾಜ್ಯ ರಾಜಕಾರಣದಲ್ಲಿ ಹಿಟ್ ಆಂಡ್ ರನ್ ರಾಜಕಾರಣಿ ಎಂದೇ (ಕು)ಖ್ಯಾತಿ ಪಡೆದಿರುವ ಕುಮಾರಣ್ಣ ಇಲ್ಲಿಯವರೆಗೂ ಬೇರೆಯವರ ಮೇಲೆ ಮಾಡಿದ ಯಾವುದೇ ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದೇ ಇಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ.

ಕುಮಾರಸ್ವಾಮಿ

“ಬುಟ್ಟಿಯಲ್ಲಿ ಹಾವಿದೆ ಆಗ ಬಿಡುತ್ತೇನೆ, ಈಗ ಬಿಡುತ್ತೇನೆ, ಬಿಟ್ಟೇ ಬಿಡುತ್ತೇನೆ, ಈಗ ಬೇಡ ಆದಾಗ ಬಿಡುತ್ತೇನೆ” ಎಂದು ಎದುರಾಳಿಗಳನ್ನು ಆತಂಕಕ್ಕೆ ದೂಡಿ ಬ್ಲಾಕ್ ಮೇಲ್ ರಾಜಕಾರಣ ಮಾಡುವ ಕುಮಾರಣ್ಣನ ಪೆನ್ ಡ್ರೈವ್ ಪ್ರಸಂಗ ಜನಜನಿತವಾಗಿದೆ. ಅಧಿವೇಶನದಲ್ಲಿ ಪೆನ್ ಡ್ರೈವ್ ಒಂದನ್ನು ಎತ್ತಿ ಹಿಡಿದು ಇದರಲ್ಲಿ ‘ಆಳುವ ಪಕ್ಷದ ನಾಯಕರ ಜಾತಕವೇ ಇದೆ’ ಎಂದು ಹೇಳಿ ಸುದ್ದಿಯಾಗಿದ್ದೇ ಬಂತು, ಆದರೆ ಇಲ್ಲಿಯವರೆಗೂ ಅದರಲ್ಲಿ ಏನಿದೆ ಎಂದು ತೋರಿಸಲೂ ಇಲ್ಲ, ದಾಖಲೆಗಳನ್ನು ಬಿಡುಗಡೆ ಮಾಡಲೂ ಇಲ್ಲ. ಸುಳ್ಳು ಸುದ್ದಿ ಹರಡಿ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡುವುದನ್ನು ಬಿಡಲೇ ಇಲ್ಲ.

ಈಗ ಕುಮಾರಸ್ವಾಮಿಯವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಎಫ್ ಐ ಆರ್ ದಾಖಲಾಗಿದೆ. ಕೋರ್ಟಲ್ಲಿ ಜಾಮೀನೂ ಸಿಕ್ಕಿದೆ. ಲೋಕಾಯುಕ್ತ ವಿಶೇಷ ತನಿಖಾ ತಂಡ (SIT) ದಿಂದ ತನಿಖೆಯೂ ಆಗುತ್ತಿದೆ. ಕೇಂದ್ರ ಸಚಿವರಾದ ಕುಮಾರಸ್ವಾಮಿಯವರ ವಿರುದ್ಧ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡಿ ಎಂದು ರಾಜ್ಯಪಾಲರಿಗೆ ಲೋಕಾಯುಕ್ತರು ಪತ್ರ ಬರೆದದ್ದೂ ಆಗಿದೆ.

ಸಿದ್ದರಾಮಯ್ಯನವರ ವಿರುದ್ಧದ ತನಿಖೆಗೆ ಒಂದೇ ದಿನದಲ್ಲಿ ಅನುಮತಿ ಕೊಟ್ಟ ರಾಜ್ಯಪಾಲರು ಕುಮಾರಸ್ವಾಮಿಯವರ ವಿರುದ್ಧ ತನಿಖೆಗೆ ಯಾಕೆ ಅನುಮತಿ ಕೊಟ್ಟಿಲ್ಲ ಎಂದು ಕಾಂಗ್ರೆಸ್ಸಿಗರು ಪ್ರಶ್ನಿಸಿದ್ದರಲ್ಲಿ ತಪ್ಪೇನಿರಲಿಲ್ಲ. ಲೋಕಾಯುಕ್ತರು ರಾಜ್ಯಪಾಲರಿಗೆ ಬರೆದ ಪತ್ರ ಸೋರಿಕೆಯಾಗಿದ್ದು ಹೇಗೆ ಎಂದು ರಾಜ್ಯಪಾಲರು ಸರಕಾರಕ್ಕೆ ಪತ್ರ ಬರೆದರು. ಲೋಕಾಯುಕ್ತ ಕಚೇರಿಯಿಂದಲೇ ಸರಕಾರಕ್ಕೆ ಅನಧಿಕೃತವಾಗಿ ಸಲ್ಲಿಕೆಯಾಗಿದೆ ಎಂಬುದು ಬಿಜೆಪಿಗರ ಆರೋಪ. ‘ರಾಜಭವನದ ಸಚಿವಾಲಯದಿಂದಲೇ ಕುಮಾರಸ್ವಾಮಿಯವರ ಪ್ರಕರಣ ಕುರಿತ ಮಾಹಿತಿ ಸೋರಿಕೆಯಾಗಿದೆ, ಹೀಗಾಗಿ ಸಚಿವಾಲಯದ ಪಾತ್ರದ ಕುರಿತು ತನಿಖೆ ನಡೆಸಲು ಅನುಮತಿ ಕೊಡಿ’ ಎಂದು ಲೋಕಾಯುಕ್ತ ಎಸ್ ಐ ಟಿ ಅಧಿಕಾರಿಯಾದ ಎಂ.ಚಂದ್ರಶೇಖರ್ ರವರು ರಾಜ್ಯಪಾಲರಿಗೆ ಪತ್ರಬರೆದರು.

ಇದರಿಂದಾಗಿ ಕುಮಾರಸ್ವಾಮಿ ಕೆಂಡಾಮಂಡಲವಾದರು. ಎಲ್ಲಿ ರಾಜ್ಯಪಾಲರು ಒತ್ತಡಕ್ಕೊಳಗಾಗಿ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡುತ್ತಾರೋ, ಎಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಸಂಗ ಬರುತ್ತದೋ ಎಂದು ಆತಂಕದಿಂದ ದೆಹಲಿಯಿಂದ ಓಡಿ ಬಂದರು. ಗಂಗೇನಹಳ್ಳಿ ಡಿನೋಟಿಫಿಕೇಶನ್ ಹಗರಣದ ವಿಚಾರಣೆಗೆ ಒಳಗಾಗಲು ಲೋಕಾಯುಕ್ತ ಕಚೇರಿಗೆ ಬಂದ  ಕುಮಾರಣ್ಣ ಮೊದಲು ಮಾಡಿದ ಕೆಲಸವೇ ‘ನಾಳೆ ಅಧಿಕಾರಿಯ ವಿರುದ್ಧ ದಾಖಲೆ ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿಕೆ ಕೊಟ್ಟಿದ್ದು. ತನ್ನ ಮೇಲೆ ಆರೋಪ ಮಾಡಿದ, ತನ್ನನ್ನು ಭ್ರಷ್ಟಾಚಾರದ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಿದ ಲೋಕಾಯುಕ್ತದ ಅಧಿಕಾರಿಗಳ ಮೇಲೆ ಆರೋಪ ಮಾಡುವ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ರಾಜ್ಯಪಾಲರು ಮತ್ತು ಕುಮಾರಸ್ವಾಮಿ

ದಾಖಲೆ ಬಿಡುಗಡೆ ಮಾಡುತ್ತಾರೆಂದು ಸೆ.28 ರಂದು ಕುಮಾರಣ್ಣ ಕರೆದ ಸುದ್ದಿಗೋಷ್ಠಿಗೆ ಬಂದಿದ್ದ ಸುದ್ದಿ ಮಾಧ್ಯಮಗಳಿಗೆ ಲೋಕಾಯುಕ್ತ ಅಧಿಕಾರಿಯ ಮೇಲೆ ಬಾಯಿಮಾತಿನಲ್ಲೇ ಇಲ್ಲಸಲ್ಲದ ಆರೋಪ ಮಾಡಿದರೇ ಹೊರತು ಯಾವುದೇ ಸಾಕ್ಷಿ ಪುರಾವೆ ದಾಖಲೆ ಬಿಡುಗಡೆ ಮಾಡಲಿಲ್ಲ.  ಗಾಳಿಯಲ್ಲಿ ಗುಂಡು ಹೊಡೆದು ಸದ್ದು ಮಾಡುವ ಚಾಳಿ ಬಿಡಲಿಲ್ಲ.

ಕುಮಾರಸ್ವಾಮಿಯವರ ಹಗರಣಗಳ ಕುರಿತು ತನಿಖೆ ಮಾಡುತ್ತಿರುವ ಐಎಎಸ್  ಅಧಿಕಾರಿ ಎಂ. ಚಂದ್ರಶೇಖರ್ ವಿರುದ್ಧ ಆರೋಪಗಳ ಮಳೆಯನ್ನೇ ಕುಮಾರಣ್ಣ ಸುರಿಸಿದರು. “ಚಂದ್ರಶೇಖರ್ ಮಹಾಭ್ರಷ್ಟ, ಕಾನೂನುಬಾಹಿರವಾಗಿ ಕರ್ತವ್ಯ ಮಾಡುತ್ತಿರುವ ಅಧಿಕಾರಿ, ಸುದ್ದಿ ವಾಹಿನಿಯೊಂದರ ಜೊತೆ ಸೇರಿ ಸಂಚು ರೂಪಿಸಿ 100 ಕೋಟಿ ವಸೂಲಿ ಮಾಡಿದ್ದ, ತನ್ನ ಅಧೀನ ಅಧಿಕಾರಿಯಿಂದ 20 ಕೋಟಿ ಲಂಚ ಕೇಳಿದ್ದ. ಮಾನ್ಯತಾ ಟೆಕ್ ಪಾರ್ಕ್ ಎದುರು ರಾಜಕಾಲುವೆ ಮೇಲೆ ತನ್ನ ಹೆಂಡತಿ ಹೆಸರಲ್ಲಿ 38 ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟುತ್ತಿದ್ದಾನೆ” ಎಂದೆಲ್ಲಾ ಆರೋಪಿಸಿ ತನಿಖಾಧಿಕಾರಿಯ ಮೇಲೆ ತಮ್ಮ ಆಕ್ರೋಶವನ್ನು ಮಾಧ್ಯಮಗೋಷ್ಠಿಯಲ್ಲಿ ಹೊರ ಹಾಕಿದರು.

ಆಯ್ತು, ಆ ಅಧಿಕಾರಿ ಕಾನೂನು ಬಾಹಿರವಾಗಿ ಇಷ್ಟೆಲ್ಲಾ ಕೃತ್ಯಗಳನ್ನು ಮಾಡುತ್ತಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಬಹುದಾಗಿತ್ತು. ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದರಿಂದ ತಮ್ಮ ಪ್ರಭಾವ ಬಳಸಿ ಅಧಿಕಾರಿಯ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಬೇಕಿತ್ತು. ಆದರೆ ಇವ್ಯಾವುದನ್ನೂ ಮಾಡದೇ ತನ್ನ ಮೇಲೆ ತನಿಖೆ ಮಾಡುವ ಅಧಿಕಾರಿಯ ಮೇಲೆ ಅವಹೇಳನಕಾರಿ ಹಾಗೂ ಆಧಾರರಹಿತ ಆರೋಪ ಮಾಡುವ ಮೂಲಕ ಬೆದರಿಕೆಯನ್ನು ಒಡ್ಡಿದ್ದು ದುರಹಂಕಾರದ ಪರಮಾವಧಿಯಾಗಿದೆ. ಅಧಿಕಾರದ ದುರ್ಬಳಕೆಯಾಗಿದೆ.

ಕುಮಾರಸ್ವಾಮಿಗಳು ಮಾಧ್ಯಮಗೋಷ್ಠಿ ಯಲ್ಲಿ ಮಾಡಿದ ಆರೋಪಗಳಿಗೆ ಪ್ರತಿಯಾಗಿ ತಮ್ಮ ಸಹೊದ್ಯೋಗಿಗಳಿಗೆ ಪತ್ರವೊಂದನ್ನು ಬರೆಯುವ ನೆಪದಲ್ಲಿ ಕುಮಾರಸ್ವಾಮಿ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಚಂದ್ರಶೇಖರ್ ರವರು ಟಕ್ಕರ್ ಕೊಟ್ಟಿದ್ದಾರೆ.  ಅದು ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಸಿ ಹಂಗಿಸಿದ್ದಾರೆ.

” ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಆರೋಪಿ ಆರೋಪಿಯೇ. ನಮ್ಮನ್ನು ನಿಷ್ಪಕ್ಷಪಾತ ತನಿಖೆಯಿಂದ ಹಿಮ್ಮೆಟ್ಟಿಸಲು ಈ ತಂತ್ರ ಅನುಸರಿಸುತ್ತಿದ್ದಾರೆ. ಹಂದಿಗಳ ಜೊತೆ ಗುದ್ದಾಡಿದರೆ ಹೊಲಸು ಅಂಟಿಕೊಳ್ಳುತ್ತದೆ. ಆದರೂ ಕರ್ತವ್ಯ ನಿರ್ವಹಣೆಯಲ್ಲಿ ಅಪರಾಧಿಗಳು, ಆರೋಪಿಗಳನ್ನು ಎದುರಿಸದೇ ಇರಲು ಸಾಧ್ಯವಿಲ್ಲ” ಎಂದು ಲೋಕಾಯುಕ್ತ ಎಡಿಜಿಪಿ ಕುಮಾರಸ್ವಾಮಿಯವರನ್ನೇ ಉದ್ದೇಶಿಸಿ ಖಡಕ್ಕಾಗಿ ಪತ್ರಿಸಿದ್ದಾರೆ.

ಲೋಕಾಯುಕ್ತ ಎಡಿಜಿಪಿ ಮತ್ತು ಕುಮಾರಸ್ವಾಮಿ

ತನಗೆ ಎದುರಾಡಿದವರನ್ನು, ತನ್ನ ವಿರುದ್ಧ ಆರೋಪ ಮಾಡಿದವರನ್ನು ನಿಂದಿಸಿ ಆತ್ಮವಿಶ್ವಾಸ ಕುಂದಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದ ಕುಮಾರಸ್ವಾಮಿಯವರಿಗೆ ಅಧಿಕಾರಿಯೊಬ್ಬರು ಹೀಗೆ ದಿಟ್ಟವಾಗಿ ಉತ್ತರಿಸಿದ್ದು ಬೇರೆಲ್ಲ ಪೊಲೀಸ್ ಅಧಿಕಾರಿಗಳಿಗೆ ಬಲ ಕೊಡುವಂತಹುದ್ದಾಗಿದೆ. ಇಂತಹ ಸಮಯಸಾಧಕ ರಾಜಕಾರಣಿಗಳನ್ನು ಎದುರಿಸಿ ನಿಲ್ಲುವ ಧೈರ್ಯವನ್ನು ಅಧಿಕಾರಿಯೊಬ್ಬರು ತೋರಿಸಿದ್ದು ಸ್ತುತ್ಯರ್ಹವಾಗಿದೆ. ಆಧಾರ ರಹಿತ ನಿಂದನಾಸ್ತ್ರಗಳ ಮೂಲಕವೇ ಎಲ್ಲರನ್ನೂ ಹೆದರಿಸಬಹುದು ಎನ್ನುವ ದುರಹಂಕಾರ ಪೀಡಿತ ಕುಮಾರಸ್ವಾಮಿಯವರಿಗೆ ಇದು ಪಾಠವಾಗಬೇಕಿದೆ.

ಇಂತಹ ನಿಂದನಾಸ್ತ್ರ ವಿಫಲವಾದಾಗ ಇನ್ನೊಂದು ರೀತಿಯ ಭಾವನಾತ್ಮಕ ಅಸ್ತ್ರ ಪ್ರಯೋಗವನ್ನು ಕುಮಾರಣ್ಣ ಮಾಡುವುದರಲ್ಲಿ ಸಿದ್ಧ ಹಸ್ತರು. “ಯಾರು ದೇವೇಗೌಡರ ಕುಟುಂಬಕ್ಕೆ ಕಣ್ಣೀರು ಹಾಕಿಸುತ್ತಾರೋ ಅವರು ಸರ್ವನಾಶವಾಗುತ್ತಾರೆ” ಎಂದು ಇನ್ನೊಂದು ಅಸ್ತ್ರ ಬಿಟ್ಟಿದ್ದಾರೆ. ದೇವೇಗೌಡರಾಗಲಿ ಹಾಗೂ ಅವರ ಸಂತಾನವಾದ ಕುಮಾರಣ್ಣ, ರೇವಣ್ಣನವರಾಗಲೀ ಕಣ್ಣೀರು ಹಾಕಿ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ನಾಟಕವನ್ನು ಆಡುತ್ತಲೇ ಬಂದಿರುವುದು ಕನ್ನಡಿಗರಿಗೆ ಗೊತ್ತಿರುವ ಸಂಗತಿ. ಇಂತವರಿಗೆ ಕಣ್ಣೀರು ಹಾಕಿಸಿದವರು ಸರ್ವನಾಶವಾಗುತ್ತಾರಂತೆ. ಹಾಗಾದರೆ ದೇವೇಗೌಡರ ಮಗ ಮೊಮ್ಮಕ್ಕಳು ಮಹಿಳೆಯರ ಮೇಲೆ ಅತ್ಯಾಚಾರ ಮಾಡಬಹುದು, ಭ್ರಷ್ಟಾಚಾರ ಮಾಡಬಹುದು, ಗಣಿಹಣ ನುಂಗಬಹುದು, ಭೂಮಿ ಕಬಳಿಸಬಹುದು. ಅದನ್ನೆಲ್ಲಾ ಯಾರೂ ಪ್ರಶ್ನಿಸಲೇ ಬಾರದು. ಕೇಸ್ ದಾಖಲಿಸ ಬಾರದು, ತನಿಖೆಗೆ ಆದೇಶಿಸ ಬಾರದು, ಜೈಲಿಗೆ ಕಳುಹಿಸ ಬಾರದು. ಹಾಗೇನಾದರೂ ಮಾಡಿದರೆ ಈ ದೇವೇಗೌಡರ ಫ್ಯಾಮಿಲಿಯವರಿಗೆ ಕಣ್ಣೀರು ಬರುತ್ತದೆ. ಕಣ್ಣೀರಿಗೆ ಕಾರಣರಾದವರು ಸರ್ವನಾಶವಾಗುತ್ತಾರಂತೆ.

ದೇವೇಗೌಡರ ಕುಟುಂಬದ ಕುಡಿಗಳು ಮಾಡಿದ ಅನಾಚಾರದಿಂದ ಅದೆಷ್ಟೋ ಜನರು ಕಷ್ಟದಲ್ಲಿದ್ದಾರೆ. ದೇವೇಗೌಡರ ಸರಕಾರಿ ಬಂಗಲೆಯಲ್ಲಿ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣನವರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯರು ಹಾಗೂ ಅವರ ಕುಟುಂಬದವರು ಪ್ರತಿ ದಿನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ದೇವೇಗೌಡರ ಕುಟುಂಬದಿಂದಾಗಿ ಕಣ್ಣೀರು ಹಾಕಿದವರೆಲ್ಲರ ನೋವು, ನಿಟ್ಟುಸಿರು, ಶಾಪಗಳೇ ಇವತ್ತು ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಬೇಲ್ ಮೇಲೆ ಇರುವಂತಾಗಿದೆ. ಒಬ್ಬ ಮೊಮ್ಮಗ ಈಗಲೂ ಜೈಲುವಾಸಿಯಾಗಬೇಕಿದೆ. ನೊಂದವರ ಕಣ್ಣೀರು ದೇವೇಗೌಡರ ಕುಟುಂಬವನ್ನೇ ಸರ್ವನಾಶ ಮಾಡುತ್ತಿದೆ. ಅವಕಾಶವಾದಿ ಬ್ಲಾಕ್ ಮೇಲ್ ರಾಜಕಾರಣಕ್ಕೂ ಇಂದಿಲ್ಲಾ ನಾಳೆ ಕೊನೆ ಬಂದೇಬರುತ್ತದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು, ಪತ್ರಕರ್ತರು.

ಈ ಸುದ್ದಿ ಓದಿದ್ದೀರಾ?- ಹಂದಿಗಳ ಜೊತೆ ಗುದ್ದಾಡಬಾರದು: HDK ಮಾತಿಗೆ ಲೋಕಾಯುಕ್ತ ADGP ಚಂದ್ರಶೇಖರ್ ಟಾಂಗ್

More articles

Latest article