ಸಿ ಎಂ ಪತ್ನಿಯಾದ ಮಾತ್ರಕ್ಕೆ ಅವರು ಪರಿಹಾರವನ್ನು ಪಡೆದುಕೊಳ್ಳಲು ಅನರ್ಹರೇ?

Most read

ಮುಖ್ಯಮಂತ್ರಿಯವರ ಪತ್ನಿಯಾದ ಮಾತ್ರಕ್ಕೆ ಅವರು ತನ್ನ ಪರಿಹಾರವನ್ನು ಪಡೆದುಕೊಳ್ಳಲು ಅನರ್ಹರೇ?  ಸಮಾಜದ ಮುಖ್ಯಸ್ಥಾನಮಾನ ಹೊಂದಿದ ವ್ಯಕ್ತಿಗಳ ಪತ್ನಿಯರಿಗೆ ಸ್ವತಂತ್ರ ವ್ಯಕ್ತಿತ್ವ ಇಲ್ಲವೇ? ಪ್ರಮುಖ ಹುದ್ದೆಯಲ್ಲಿದ್ದವರ ಪತ್ನಿಯರ ಹಕ್ಕನ್ನು ಉಳಿದ ಹೆಣ್ಣುಮಕ್ಕಳ ಹಕ್ಕುಗಳಿಗಿಂತ ಮೊಟಕು ಗೊಳಿಸಲಾಗುತ್ತದೆಯೇ? ಇದು ನಿಜಕ್ಕೂ ಸ್ತ್ರೀ ಘನತೆಯ ವಿಷಯ ಶಾಂತಾ ಕುಮಾರಿ, ಕಲಾವಿದೆ.

ಹಲವಾರು ದಿನಗಳಿಂದ ಮುಡಾ ಹಗರಣವೆಂಬ ವಿಚಾರವನ್ನಿಟ್ಟುಕೊಂಡು ಪ್ರತಿನಿತ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜೀನಾಮೆ ನೀಡಿ ಎಂದು ಪ್ರತಿಪಕ್ಷಗಳು ಮತ್ತು ಮಾಧ್ಯಮಗಳು ಅರಚುತ್ತಿರುವುದನ್ನು ನೋಡಿದಾಗ ಇವರಾರು ಚಕಾರವೆತ್ತದಿರುವ ವಿಷಯವೊಂದು ಮನದಾಳದಲ್ಲಿ ಚುಚ್ಚುತ್ತಿದೆ.

ಇದುವರೆಗೂ ಶ್ರೀ ಸಿದ್ದರಾಮಯ್ಯನವರ ಪತ್ನಿ ಶ್ರೀಮತಿ ಪಾರ್ವತಿಯವರು ಮಾಧ್ಯಮದ ಮುಂದೆ ಬಂದಿದ್ದೇ ಇಲ್ಲ. ಶ್ರೀ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಪದಗ್ರಹಣ ಸಂದರ್ಭದಲ್ಲಿ ಕೂಡಾ ಅವರು ಕಂಡ ನೆನಪಿಲ್ಲ. ಮಾಧ್ಯಮಗಳೂ ಕೂಡಾ ಅವರನ್ನು ಕಂಡು ಸಂದರ್ಶನ ಮಾಡಿದ್ದು ವಿರಳವೋ ಅಥವಾ ಇಲ್ಲವೇ ಇಲ್ಲವೊ ಅನ್ನುವಷ್ಟು ಅವರು ಮಾಧ್ಯಮ ಜಗತ್ತಿಗೆ ಅಪರಿಚಿತರು!! ನಟ ಪ್ರಥಮ್ ತನ್ನ ಹೆಂಡತಿ ಹೇಗಿರ್ತಾರೆ ಅಂದರೆ ಸಿದ್ಧರಾಮಯ್ಯನವರ ಪತ್ನಿ ತರ ಮಾಧ್ಯಮ ಮತ್ತು ಸೋಶಿ ಯಲ್ ಮೀಡಿಯಾಗಳಿಂದ ಬಲು ದೂರ ಎಂದು ಉದಾಹರಿಸುವ ಮಟ್ಟಿಗೆ ಶ್ರೀ ಸಿದ್ದರಾಮಯ್ಯನವರ ಪತ್ನಿ ತಮ್ಮ ಖಾಸಗಿತನವನ್ನು ಕಾಪಾಡಿ ಕೊಂಡಿದ್ದಾರೆ. ಇದು ಅವರ ವೈಯಕ್ತಿಕ ಆಯ್ಕೆಯೊ ಅಥವಾ ಕುಟುಂಬದ ಆಯ್ಕೆಯೊ ಅದು ಅಪ್ರಸ್ತುತ.  ಆದರೆ ಈಗ ಅವರ ಸ್ತ್ರೀಧನ ವೆಂಬ ಆಸ್ತಿಯ ವಿಚಾರವನ್ನು ಎಳೆದು ಮಾತಾಡುವಾಗಲೂ ಅವರ ಅಸ್ತಿತ್ವವನ್ನು ಅಲ್ಲಗಳೆಯಲಾಗಿದೆ. ಇದು ನಿಜಕ್ಕೂ ಸ್ತ್ರೀ ಘನತೆಯ ವಿಷಯ. ಇದುವರೆಗೂ ಅವರನ್ನು ಈ ಬಗ್ಗೆ ಯಾವ ಮಾಧ್ಯಮ ಕೂಡಾ ವಿವರವಾದ ಹೇಳಿಕೆ ಪಡೆದದ್ದು ನನ್ನ ಗಮನಕ್ಕೆ ಬಂದಿಲ್ಲ.  ಈ ಬಗ್ಗೆ ಅವರೇನು ಹೇಳುತ್ತಾರೆ ಅನ್ನುವುದು ಮಾಧ್ಯಮಗಳಿಗೆ ಅಷ್ಟೊಂದು ನಿರ್ಲಕ್ಷ್ಯದ ವಿಚಾರವಾಗಿ ಸಿದ್ಧರಾಮಯ್ಯನವರನ್ನು A1 ಆರೋಪಿಯನ್ನಾಗಿ ಮಾಡುವುದೇ ಹುನ್ನಾರ ಎಂಬಂತೆ ಹಠಕ್ಕೆ ಬಿದ್ದಿವೆ ಮಾಧ್ಯಮಗಳು ಹಾಗೂ ಪ್ರತಿಪಕ್ಷಗಳು!!

ಮೊದಲಿಗೆ ಈ ಸ್ತ್ರೀಧನ ವೆಂಬ ವಿಚಾರದ ಬಗ್ಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ಬಹಳ ಘನತೆಯ ವಿಚಾರಗಳನ್ನು ಹೇಳಿದ್ದಾರೆ. ಈ ಸ್ತ್ರೀಧನ ದಿಂದ ಬಂದಂತಹ ಆಸ್ತಿಗೆ ಆಕೆಯೇ ಸಂಪೂರ್ಣ ವಾರಸುದಾರಳಾಗಿರಬೇಕು ಎಂದು ಒತ್ತಿ ಹೇಳುತ್ತಾ ಆಕೆಯ ಹಕ್ಕನ್ನು ಮಾನ್ಯ ಮಾಡುತ್ತಾರೆ.

ಇಲ್ಲಿ ಶ್ರೀಮತಿ ಪಾರ್ವತಿಯವರಿಗೆ ಮೂರು ಎಕರೆ ಭೂಮಿ ತವರು ಮನೆಯಿಂದ ಕುಂಕುಮಕ್ಕೆ ಬಂದ ಬಳುವಳಿ.  ಆ ಜಮೀನನ್ನು ಮೊದಲು ಸರ್ಕಾರ ನೋಟಿಫೈ ಮಾಡತ್ತೆ. ನಂತರ ಡಿನೋಟಿಫೈ ಮಾಡತ್ತೆ. ಆ ನಂತರವೂ ಅದನ್ನು ಲೇಔಟ್ ಮಾಡಲು ಬಳಸಿಕೊಳ್ಳಲಾಗುತ್ತದೆ. ಡಿನೋಟಿಫೈ ಆದ ಜಮೀನನ್ನು  ಬಳಸಿಕೊಂಡದ್ದು ಸರ್ಕಾರದ ತಪ್ಪು ಅಲ್ಲವೇ? ಇದಕ್ಕೆ ನೋಟಿಫೈ ಆದ ಜಮೀನಿಗಿಂತ ಹೆಚ್ಚಿನ ಸವಲತ್ತು ಕೇಳುವುದರಲ್ಲಿ ಬಹಳ ದೊಡ್ಡ ಅಪರಾಧವಿದೆ ಅಂತ ನನಗನಿಸುವುದಿಲ್ಲ. ಇದಾದ ನಂತರ ಅವರು ಅದಕ್ಕೆ ಪರಿಹಾರವನ್ನು ಕೇಳಿ ಹದಿನಾಲ್ಕು ಸೈಟುಗಳನ್ನು ಪಡೆದುಕೊಳ್ಳುತ್ತಾರೆ.  ಈ ದೇಶದಲ್ಲಿ ನೂರಾರು ಎಕರೆ ಸರ್ಕಾರಿ ಜಮೀನನ್ನು ಕೆರೆ ಗೋಮಾಳಗಳನ್ನು ನುಂಗಿ ನೀರು ಕುಡಿದಿರುವ ಧೀಮಂತ ರಾಜಕಾರಣಿಗಳಿರುವಾಗ ತಮ್ಮ ಜಮೀನು ಸರ್ಕಾರ ಬಳಸಿಕೊಂಡಿದ್ದಕ್ಕಾಗಿ ಪರಿಹಾರ ತೆಗೆದುಕೊಂಡಿದ್ದು ಬಹಳ ದೊಡ್ಡ ಅಪರಾಧವಾಗತ್ತೆ. ಇರಲಿ ಇದು ಬೇರೆಯದೇ ಚರ್ಚೆ.

ಈ ಇಡೀ ಪ್ರಕರಣದಲ್ಲಿ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಪ್ರಶ್ನೆ ಮಾಡುವುದು ಅನಿವಾರ್ಯ.  ಮುಖ್ಯಮಂತ್ರಿಯವರ ಪತ್ನಿಯಾದ ಮಾತ್ರಕ್ಕೆ ಅವರು ತನ್ನ ಪರಿಹಾರವನ್ನು ಪಡೆದುಕೊಳ್ಳಲು ಅನರ್ಹರೇ?  ಅಕಸ್ಮಾತ್ ಮುಖ್ಯಮಂತ್ರಿಗಳು ಅಥವಾ ಅವರ ಪತ್ನಿ ಯಾವುದೇ ಪ್ರಭಾವ ಬೀರದೇ ಹೋದರೂ ಸಿದ್ದರಾಮಯ್ಯನವರ ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನ ತನ್ನಷ್ಟಕ್ಕೇ ಪ್ರಭಾವ ಬೀರುತ್ತದೆ. ಅದು ಸಾಮಾಜಿಕ ವ್ಯವಸ್ಥೆಯ ಅಲಿಖಿತ ನಿಯಮ.  ಅಂತಹ ಸಂದರ್ಭದಲ್ಲಿ ಅದು ಅವರ ಅಧಿಕಾರದ ದುರ್ಬಳಕೆಗಿಂತ ಅಧಿಕಾರಿಗಳ ದುರ್ಬಲ ವ್ಯಕ್ತಿತ್ವವೇ ಕಾರಣ ಅಲ್ಲವೇ?  ಹಾಗಾದರೆ ಸಮಾಜದ ಮುಖ್ಯಸ್ಥಾನಮಾನ ಹೊಂದಿದ ವ್ಯಕ್ತಿಗಳ ಪತ್ನಿಯರಿಗೆ ಸ್ವತಂತ್ರ ವ್ಯಕ್ತಿತ್ವ ಇಲ್ಲವೇ? ಇಂತಹ ವ್ಯಕ್ತಿಗಳ ಪತ್ನಿಯರು ಒಂದು ಸಮಾರಂಭಕ್ಕೆ ಕಾಲಿಟ್ಟರೇ ವಿಶೇಷ ಉಪಚಾರಗಳಿರುತ್ತವೆ.  ಸೆಲೆಬ್ರಿಟಿಗಳ ಪತ್ನಿಯರಿಗೆ ವಿಶೇಷ ಗೌರವವಿರುತ್ತದೆ..ಅವುಗಳಾವುವೂ ಕಾನೂನಿನ ಮೂಲಕ ಬರುವುದಲ್ಲ.  ಅಥವಾ ಅವರೇ ಕೇಳಿಪಡೆಯುವುದೂ ಅಲ್ಲ. ಒಂದು ವ್ಯವಸ್ಥೆಯಲ್ಲಿ  ಹೀಗೆ ಜನರೇ ಪ್ರಭಾವಿತರಾಗಿ ನಡೆದುಕೊಳ್ಳುವುದು ಸಹಜ ಸ್ವಾಭಾವಿಕ. ಹಾಗಾದರೆ  ಇಂತಹ ಪ್ರಮುಖ ಹುದ್ದೆಯಲ್ಲಿದ್ದವರ ಪತ್ನಿಯರ ಹಕ್ಕನ್ನು ಉಳಿದ ಹೆಣ್ಣುಮಕ್ಕಳ ಹಕ್ಕುಗಳಿಗಿಂತ ಮೊಟಕು ಗೊಳಿಸಲಾಗುತ್ತದೆಯೇ?

ಇಲ್ಲಿ ವಿಶೇಷವಾಗಿ ತವರು ಮನೆಯ ಬಳುವಳಿ ಬಗ್ಗೆ ಹೆಣ್ಣುಮಕ್ಕಳಿಗೆ ಒಂದು ಭಾವನಾತ್ಮಕ ಬಂಧವಿರುತ್ತದೆ. ಅವರು  ಆ ಆಸ್ತಿ ಕಳೆದುಕೊಂಡಾಗ ಆ ಭಾವನಾತ್ಮಕ ನಷ್ಟಕ್ಕಾಗಿ  ಪರಿಹಾರದಲ್ಲಿ ಹೆಚ್ಚಿನದನ್ನು ನಿರೀಕ್ಷಿಸಿದರೆ  ತಪ್ಪೇನಿದೆ?  ಅಷ್ಟಕ್ಕೂ ಅದನ್ನು ಕೊಡುವ ಅಥವಾ ನಿರಾಕರಿಸುವ ಜವಾಬ್ದಾರಿ ಅಧಿಕಾರಿಗಳಿಗಿರುತ್ತದೆ. ಬಹುಶಃ ಒಬ್ಬ ಸಾಮಾನ್ಯ ಮಹಿಳೆಯಾಗಿ ತನ್ನ ಗಮನಕ್ಕೆ ಬರದೆ ಡಿನೋಟಿಫೈ ಆದ ಜಾಗವನ್ನು ಸರ್ಕಾರ ಬಳಸಿಕೊಂಡಿದ್ದಕ್ಕೆ ಹೆಚ್ಚಿನ ಪರಿಹಾರ ಬಯಸಿ ಹೋರಾಡಿದ್ದರೆ ಹಾಗೂ ಗೆದ್ದಿದ್ದರೆ ಇದೊಂದು ಯಶೋಗಾಥೆ!!! ಅಲ್ಲಿಗೆ ಸಿಎಂ ಪತ್ನಿಯಾದ ಕಾರಣ ಅವರಿಗೆ ಸಾಮಾನ್ಯ ಮಹಿಳೆಯರಿಗಿಂತ ಹಕ್ಕುಗಳು ಕಡಿಮೆಯಿರುತ್ತದೆ ಮತ್ತು ಬಾಧ್ಯತೆಗಳು ಹೆಚ್ಚಿರುತ್ತದೆ ಅಂತ ವ್ಯಾಖ್ಯಾನಿಸಬಹುದೆ?

ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯಿತಿ ಎಲ್ಲಾ ಕಡೆ ಹೆಸರಿಗೆ ಮಹಿಳೆಯರನ್ನು ಆರಿಸಿ ಅವರ ಗಂಡಂದಿರು ಆಳ್ವಿಕೆ ನಡೆಸುವ ಹಲವು ಹತ್ತು ಉದಾಹರಣೆಗಳು ನಮ್ಮ ಮುಂದಿವೆ.  ಆದರೆ ಪರೋಕ್ಷವಾಗಿ ಗಂಡನ ಸ್ಥಾನಮಾನದ ಪ್ರಭಾವ ಬೀರಿದೆ ಎಂಬ ಕಾರಣಕ್ಕೆ ಅವರ ಸ್ತ್ರೀಧನದ ಹಕ್ಕನ್ನೇ ಮೊಟಕು ಗೊಳಿಸುವ ಹೊಸ ಪರಂಪರೆ ಇದಾಗಿದೆ. ಒಟ್ಟಿನಲ್ಲಿ ಹೆಣ್ಣು ಗದ್ದುಗೆ ಏರಿದರೂ ಅಧಿಕಾರದ ಲಗಾಮು ಗಂಡಸರ ಹಿಡಿತದಲ್ಲಿ….ಗದ್ದುಗೆ ಏರಿದವರ ಹೆಂಡತಿಯಾದರೂ ಲಗಾಮು ಗಂಡಸರದೇ ಕೈಯ್ಯಲ್ಲಿ.

ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ ಕಾಂಗ್ರೆಸ್ ಬಲವಾಗಿರುತ್ತದೆ ಅವರನ್ನು ಕೆಳಗಿಳಿಸಿದರೆ ಆಪರೇಷನ್ ಕಮಲ ಶುರು ಮಾಡಬಹುದು ಎನ್ನುವ ಹುನ್ನಾರದಿಂದಲೇ ಈ ಕಡ್ಡಿಯನ್ನು ಗುಡ್ಡ ಮಾಡಿ ಬಿಂಬಿಸುತ್ತಿದ್ದಾರೆ ಎನ್ನುವುದು ಸರ್ವವಿಧಿತ. ಇದರಲ್ಲಿ ಯಾವತ್ತೂ ಮುನ್ನೆಲೆಗೆ ಬಾರದ ಅವರ ಪತ್ನಿಯ ಅಸ್ಮಿತೆ ಇವತ್ತೂ ಅಲಕ್ಷಿತಗೊಂಡಿದೆ ಎನ್ನುವುದು ಶೋಚನೀಯ.

ಶಾಂತಾಕುಮಾರಿ

ಕಲಾವಿದರು

ಇದನ್ನೂ ಓದಿ- http://ಸಿದ್ದರಾಮಯ್ಯ- ಸಿದ್ದ, ಬದ್ಧ, ಬುದ್ದನಾಗಬೇಕು…https://kannadaplanet.com/siddaramaiah-must-be-ready/

More articles

Latest article