‘ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚಿಸಿ’: ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ

Most read

ಬೆಂಗಳೂರು: ಎಲ್ಲ ನೇಮಕಾತಿ ಪ್ರಕ್ರಿಯೆಗಳು ಒಂದು ವರ್ಷದೊಳಗೆ ಪೂರ್ಣಗೊಳಿಸುವುದು, ಎಲ್ಲ ನೇಮಕಾತಿ ಪ್ರಾಧಿಕಾರಗಳ ಸಹಾಯವಾಣಿಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸೇರಿದಂತೆ ಹಲವು ವಿಷಯಗಳ ಅನುಷ್ಠಾನದ ಕುರಿತು ನೇಮಕಾತಿ ಪ್ರಾಧಿಕಾರಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಇತರೆ ನೇಮಕಾತಿ ಪ್ರಾಧಿಕಾರಗಳಲ್ಲಿ ಚಾಲ್ತಿಯಲ್ಲಿರುವ ಹಾಗೂ ಮುಂಬರುವ ನೇಮಕಾತಿ ಪ್ರಕ್ರಿಯೆಗಳಲ್ಲಿ ತಮ್ಮ ಕೆಲವು ಸಲಹೆಗಳನ್ನು ಪರಿಗಣಿಸಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸಂಬಂಧಪಟ್ಟ ಎಲ್ಲ ಇಲಾಖೆಯ ಮುಖ್ಯಸ್ಥರು ಹಾಗೂ ನೇಮಕಾತಿ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲು ಸಚಿವರು ಪತ್ರದ ಮೂಲಕ ಕೆಲವು ಸಲಹೆಗಳನ್ನು ನೀಡಿದ್ದಾರೆ.

– ಎಲ್ಲ ಗ್ರೂಪ್ ‘ಸಿ’ ಪರೀಕ್ಷೆಗಳು ಒಂದೇ ಪಠ್ಯ ಕ್ರಮವನ್ನು ಹೊಂದಿರುವುದರಿಂದ, ಎಲ್ಲಾ ಗ್ರೂಪ್ ‘ಸಿ’ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಾಧಿಕಾರಗಳು ಒಂದೇ ಪರೀಕ್ಷೆಯನ್ನು ನಡೆಸಬೇಕು.

– ಒಎಂಆರ್ ಆಧಾರಿತ ಲಿಖಿತ ಪರೀಕ್ಷೆಯ ಬದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಪರಿಚಯಿಸಬೇಕು.

– ಕೇಂದ್ರ ಮತ್ತು ರಾಜ್ಯ ನೇಮಕಾತಿ ಏಜೆನ್ಸಿಗಳು ನಡೆಸುವ ಪರೀಕ್ಷೆಗಳು ದಿನಾಂಕಗಳು ಕಾಕತಾಳೀಯವಾಗಿ ಒಮ್ಮೆಲೇ ಬರುವುದರಿಂದ ಹಲವು ಪರೀಕ್ಷೆಗಳ ದಿನಾಂಕಗಳನ್ನು ಅನೇಕ ಬಾರಿ ಪರಿಷ್ಕರಿಸಲಾಗಿದೆ. ಈ ಗೊಂದಲ ನಿವಾರಿಸಲು ಕೇಂದ್ರ ಮತ್ತು ರಾಜ್ಯ ನೇಮಕಾತಿ ಏಜೆನ್ಸಿಗಳ ನಡುವೆ ಸಂವಹನವನ್ನು ಖಾತ್ರಿಪಡಿಸುವ ಅವಶ್ಯಕತೆ ಇದ್ದು, ಅಭ್ಯರ್ಥಿಗಳು ಅರ್ಹರಾಗಿರುವ ಎಲ್ಲ ಪರೀಕ್ಷೆಗಳನ್ನೂ ಬರೆಯುವ ಹಕ್ಕನ್ನು ಎತ್ತಿಹಿಡಿಯಬೇಕು.

– ಒಂದೇ ದಿನ ನಡೆಸುವ 2 ಪರೀಕ್ಷೆಗಳಿಗೆ 2 ವಿವಿಧ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸುವ ಮೂಲಕ ಅಭ್ಯರ್ಥಿಗಳಿಗೆ ಗೊಂದಲ ಮೂಡಿಸುವುದನ್ನು ತಪ್ಪಿಸಬೇಕು.

– ಒಮ್ಮೆ 1:3 ಪಟ್ಟಿಯನ್ನು ಪ್ರಕಟಿಸಿ ನಂತರ 1:1 ಪಟ್ಟಿಯನ್ನು ಪ್ರಕಟಿಸಲು ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಲು ಸುಮಾರು 6 ತಿಂಗಳು ಕಾಲವನ್ನು ತೆಗೆದುಕೊಳ್ಳುತ್ತದೆ. ಸಮಯವನ್ನು ಉಳಿಸಲು ಮತ್ತು ಪ್ರಕ್ರಿಯಯನ್ನು ವೇಗಗೊಳಿಸಲು ವಿವಿಧ ನೇಮಕಾತಿ ಪ್ರಾಧಿಕಾರಿಗಳು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಾಧ್ಯವವಿರುವ ಕಡೆ ಕಂದಾಯ ವಿಭಾಗ ಸಂಖ್ಯೆ (RD ಸಂಖ್ಯೆ) ಬಳಕೆ ಮಾಡಬಹುದು.

– ಇತರ ನೇಮಕಾತಿ ಏಜೆನ್ಸಿಗಳಿಗೆ ಹೋಲಿಸಿದರೆ KEA ನಡೆಸುವ ಎಲ್ಲ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕಗಳು ದುಬಾರಿಯಾಗಿವೆ. ಇದರಿಂದ ಅಭ್ಯರ್ಥಿಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ. ಇದನ್ನು ತಪ್ಪಿಸಬೇಕು.

– KEA ಕನ್ನಡ ಕಡ್ಡಾಯ ಪರೀಕ್ಷೆ ನಡೆಸುವ ವಿಧಾನವನ್ನು ಮಾರ್ಪಡಿಸಿ KPSC ನಿಗದಿಪಡಿಸಿರುವ ಆದ್ಯತೆಯನ್ನು ಅನುಸರಿಸಬೇಕು.

– ಸರ್ಕಾರದ ಮುಂದಿನ 03 ವರ್ಷಗಳ ನೇಮಕಾತಿ ಯೋಜನೆಯನ್ನು ಮುಂಚಿತವಾಗಿ ವಿವಿಧ ನೇಮಕಾತಿ ಪ್ರಾಧಿಕಾರಗಳಿಗೆ ತಿಳಿಸಬೇಕು. ಇದರಿಂದ ನೇಮಕಾತಿ ಪ್ರಾಧಿಕಾರ ತಮ್ಮ ವಾರ್ಷಿಕ ಕ್ಯಾಲೆಂಡರ್ ಅನ್ನು ತಯಾರಿಸಬೇಕು.

– ಜೆಜೆಟೆಡ್ ಪ್ರೊಬೇಷನರ್ ಹುದ್ದೆಗಳಲ್ಲಿ ಕನ್ನಡವನ್ನು ಮಾಧ್ಯಮವಾಗಿಟ್ಟುಕೊಂಡು ಮುಖ್ಯ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆಯು ಅಂತಿಮ ಾಯ್ಕೆ ಪಟ್ಟಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿರುವುದ್ನ್ನು ಗಮನಿಸಲಾಗಿದೆ. ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸಬೇಕು ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.

More articles

Latest article