ರಮ್ಮಿ ಆಟ; ಆಧುನಿಕ ಕಾಟ

Most read

ಆನ್‌ಲೈನ್ ಜೂಜಾಟದ ವಿರುದ್ಧ ಧ್ವನಿ ಎತ್ತಿರುವ ‘ರಮ್ಮಿ ಆಟ’ ಎನ್ನುವ ಚಲನಚಿತ್ರವನ್ನು ಉಮರ್ ಷರೀಫ್‌ ರವರು ನಿರ್ದೇಶಿಸಿ ನಿರ್ಮಿಸಿದ್ದು ಸಿನೆಮಾದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆ ಗೊಂಡಿದೆ. ಇದೇ ಸೆಪ್ಟಂಬರ್ 20 ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಈ ಸಿನೆಮಾದ ಹಿನ್ನೆಲೆಯಲ್ಲಿ ಬರೆದಿದ್ದಾರೆ ರಂಗಕರ್ಮಿ ಶಶಿಕಾಂತ ಯಡಹಳ್ಳಿ.

ಜೂಜು ಎನ್ನುವುದು ಬಲು ಪುರಾತನವಾದದ್ದು. ಮಹಾಭಾರತದಲ್ಲಿ ಪಗಡೆ ಜೂಜಾಟಕ್ಕೆ ಪಾಂಡವರು ಸರ್ವಸ್ವವನ್ನೂ ಸೋತು ಕೊನೆಗೆ ಹೆಂಡತಿಯನ್ನೇ ಪಣಕ್ಕಿಟ್ಟು ಜೂಜಾಡಿ ವನವಾಸಕ್ಕೆ ತೆರಳಿದ್ದು ಗೊತ್ತಿರುವ ಸಂಗತಿ. ಆದರೆ ಯುಗಗಳೇ ಉರುಳಿದರೂ ಮನುಜರಿಗೆ ಈ ಜೂಜಿನ ಮೋಹ, ದಿಢೀರ್ ಆಗಿ ಹಣ ಮಾಡುವ ದಾಹ ಮಾತ್ರ ಕಡಿಮೆಯಾಗಿಲ್ಲ. ಜೂಜಾಟಗಳಲ್ಲೇ ಜಗತ್ತಿನಾದ್ಯಂತ ಅತೀ ಹೆಚ್ಚು ಬಳಕೆಯಲ್ಲಿರುವುದು ಇಸ್ಪೇಟ್ ಆಟ. ಅದರಲ್ಲೂ ಈ ರಮ್ಮಿ ಎನ್ನುವುದು ಹಳ್ಳಿಗಳಿಂದ ಅಂತಾರಾಷ್ಟ್ರೀಯ ವ್ಯಾಪ್ತಿಯನ್ನು ಪಡೆದುಕೊಂಡಿದೆ. ಇಸ್ಪೇಟ್ ಆಟಕ್ಕಾಗಿಯೇ ಅನೇಕಾನೇಕ ಕ್ಲಬ್ ಗಳನ್ನು ಸ್ಥಾಪಿಸಲಾಗಿದೆ. ಟೈಂ ಪಾಸ್ ನಿಂದ ಹಿಡಿದು ಹಣಕ್ಕಾಗಿಯೇ ಆಡಲಾಗುವ ರಮ್ಮಿಗೆ ಜೂಜಾಟಗಳಲ್ಲೇ ಮೊದಲ ಸ್ಥಾನ.

ಕಾಲಕಾಲಕ್ಕೆ ಜೂಜಾಟಗಳಲ್ಲಿ ಬದಲಾವಣೆಗಳು ಆಗುತ್ತಲೇ ಬಂದಿದೆ. ಅದೇ ರೀತಿ ಈಗ ಈ ರಮ್ಮಿ ಆಟ ಕೂಡಾ ಮ್ಯಾನ್ಯುವಲ್ ಆಟದಿಂದ ಡಿಜಿಟಲ್ ಆಟವಾಗಿ ಆಧುನೀಕರಣಗೊಂಡಿದೆ. ಎದುರಿದ್ದ ವ್ಯಕ್ತಿಗಳ ಜೊತೆ ಆಡುತ್ತಿದ್ದ ಈ ಜೂಜಾಟ ಈಗ ಕಣ್ಣಿಗೆ ಕಾಣದ ಅನಾಮಧೇಯ  ವ್ಯಕ್ತಿಗಳ ಜೊತೆ ಮೊಬೈಲ್ ಸಾಧನದ ಮೂಲಕ ಆಡುವ, ಹಣ ಹೂಡುವ, ಗೆಲುವಿನ ಥ್ರಿಲ್ ಹಾಗೂ ಸೋಲುಗಳ ನೋವು ಅನುಭವಿಸುವ ತಾಣವಾಗಿದೆ. ಈ ಮಾಯಾವಿ ಆಟದಲ್ಲಿ ಸೋತವರೆಷ್ಟೋ, ಸಾಲದ ಸುಳಿಯಲ್ಲಿ ಸಿಕ್ಕವರೆಷ್ಟೋ, ಹಣ ಆಸ್ತಿ ಕಳೆದುಕೊಂಡವರೆಷ್ಟೋ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡು ಸತ್ತವರೆಷ್ಟೋ ಲೆಕ್ಕ ಇಟ್ಟವರಿಲ್ಲ. 

ಇಂತಹ ಅನಾಹುತಕಾರಿ ಆಧುನಿಕ ಕಾಟದ ಕುರಿತು ‘ರಮ್ಮಿ ಆಟ’ ಎನ್ನುವ ಚಲನಚಿತ್ರವನ್ನು ಉಮರ್ ಷರೀಫ್‌ ರವರು ನಿರ್ದೇಶಿಸಿ ನಿರ್ಮಿಸಿದ್ದು ಇದೇ ಸೆಪ್ಟಂಬರ್ 20 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನೆಮಾದ ಕುರಿತು ಪತ್ರಿಕಾಗೋಷ್ಟಿಯನ್ನು ಸೆ.16 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ರವರು ಟ್ರೈಲರ್ ರಿಲೀಸ್ ಮಾಡಿದರೆ ಈ ಚಲನಚಿತ್ರದ ಹಾಡನ್ನು ಬಿಡುಗಡೆ ಮಾಡುವ ಹೊಣೆಗಾರಿಕೆ ನನಗೆ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ನನ್ನ ಅನ್ನಿಸಿಕೆಗಳನ್ನು ಅಲ್ಲಿ ಹೀಗೆ ಹಂಚಿಕೊಂಡೆ-

ಪ್ರಚೋದನಾತ್ಮಕ ಹಾಗೂ ಪ್ರಯೋಗಾತ್ಮಕ ಸಿನೆಮಾಗಳ ನಡುವೆ ಜಾಗೃತಿ ಮೂಡಿಸುವ ‘ರಮ್ಮಿ ಆಟ’ ದಂತಹ ಚಲನಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದ ಉಮರ್ ಷರೀಫ್ ರವರ ಸಾಹಸ ಪ್ರಶಂಸನೀಯ.  ಷರೀಫ್ ರವರು ಹೊಸ ಯುವ ಕಲಾವಿದರನ್ನು ಹಾಕಿಕೊಂಡು ತುಂಬಾ ರಿಸ್ಕ್ ತೆಗೆದುಕೊಂಡು ಈ ಸಿನೆಮಾ ನಿರ್ಮಿಸಿದ್ದಾರೆ.

ಈಗ ದೇಶಾದ್ಯಂತ ಆನ್ ಲೈನ್ ಗೇಮಿಂಗ್ ಎನ್ನುವ ಆಧುನಿಕ ಜೂಜಿನ ಹಾವಳಿ ಅತಿಯಾಗಿದೆ. ಮೊಬೈಲ್ ಸಾಧನದ ಮೂಲಕ ಅನಾಮಧೇಯರ ಜೊತೆ ಜೂಜಾಟವಾಡುವ ಅಸಂಖ್ಯಾತ ವ್ಯಸನ ಪೀಡಿತರು ಎಲ್ಲವನ್ನೂ ಕಳೆದು ಕೊಂಡಿದ್ದಾರೆ. ಆನ್ ಲೈನ್ ಗೇಮಿಂಗ್ ತಯಾರಿಸಿ ಯುವಜನರನ್ನು ಜೂಜಾಟವಾಡಲು ಪ್ರೇರೇಪಿಸಿ ಹಣ ಲೂಟಿಮಾಡಲು ದೊಡ್ಡ ಕಂಪನಿಗಳು ನಿರ್ಮಾಣಗೊಂಡಿವೆ.

ಈ ಆನ್ ಲೈನ್ ಗೇಮಿಂಗ್ ಎನ್ನುವ ಆಧುನಿಕ ಜೂಜಾಟ ಆಡಿಸುವವರ ಹಾಗೂ ಆಡುವವರ ಜಾಲ ಜಗದಗಲ ಹಬ್ಬಿದೆ. ಎಲ್ಲೋ ಇನ್ಯಾವುದೋ ದೇಶದಲ್ಲಿ ಕುಳಿತ ನುರಿತ ಬೇಟೆಗಾರರು ಮೊಬೈಲ್ ನಲ್ಲಿ ಲಾಭದಾಸೆಯ ಬೋಣಿಟ್ಟು ಆಟದ ಹೆಸರಲ್ಲಿ ಜೂಜಾಟಗಾರರ ಹಣವನ್ನು ಲೂಟಿ ಮಾಡುತ್ತಾರೆ. ಬರುವ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದ್ದರೂ ಜೂಜಾಟದ ವ್ಯಸನಕ್ಕೆ ದಾಸರಾದ ಲಕ್ಷಾಂತರ ಜನ ಆಟದ ಮೋಜಿಗೆ ಮರಳಾಗಿ ಹಣದ ಜೊತೆ ಬದುಕನ್ನೂ ಕಳೆದುಕೊಂಡಿದ್ದಾರೆ.

ಈ ಆನ್ ಲೈನ್ ಗೇಮಿಂಗ್ ಎನ್ನುವ ಆಧುನಿಕ ಜೂಜಿನ ವ್ಯಾಪಕತೆ ಬೃಹತ್ ಆಗಿ ಬೆಳೆದಿದೆ. ಭಾರತದಲ್ಲಿ 118 ಕ್ಕೂ ಹೆಚ್ಚು ಆನ್ ಲೈನ್ ಗೇಮಿಂಗ್ ಕಂಪನಿಗಳು ಆನ್ ಲೈನ್ ಆಟದ ಹೆಸರಲ್ಲಿ ಜನರ ಹಣವನ್ನು ಅಧಿಕೃತವಾಗಿ ಲೈಸನ್ಸ್ ಪಡೆದೇ ಲೂಟಿ ಮಾಡುತ್ತಿವೆ. ಹೀಗೆ ಲೂಟಿ ಮಾಡಿದ ಹಣದಲ್ಲಿ ಅವು 28% ಜಿಎಸ್ಟಿ ತೆರಿಗೆಯನ್ನು ಸರಕಾರಕ್ಕೆ ಕೊಡಬೇಕು. ಆದರೆ ಅದನ್ನೂ ಕೊಡದೇ ಕಳ್ಳಾಟವಾಡುತ್ತವೆ. ಇತ್ತೀಚೆಗೆ ಕೇಂದ್ರ ಜಿಎಸ್ಟಿ ಗುಪ್ತಚರ ಮಹಾ ನಿರ್ದೇಶನಾಲಯದ (ಡಿಜಿಜಿಐ) ವಾರ್ಷಿಕ ವರದಿಯಲ್ಲಿ ಹೇಳಿದಂತೆ 34 ಆನ್ ಲೈನ್ ಗೇಮಿಂಗ್ ಕಂಪನಿಗಳಿಂದ ಕಟ್ಟಲಾಗದೆ ಬಾಕಿ ಉಳಿಸಿಕೊಂಡ ತೆರಿಗೆ ಮೊತ್ತವೇ 1.1 ಲಕ್ಷ ಕೋಟಿಯಷ್ಟಿದೆ. ಅದಕ್ಕಾಗಿ ಈ ಕಂಪನಿಗಳಿಗೆ ಶೋಕಾಸ್ ನೋಟೀಸ್ ಕೊಡಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ದೂರಿದೆ. 

ಇಷ್ಟೆಲ್ಲಾ ನೋಟೀಸ್ ಕೊಟ್ಟರೂ ತೆರಿಗೆ ಪಾವತಿಸದೇ ಕಳ್ಳಾಟ ಆಡುತ್ತಿರುವ ಈ ಲೂಟಿಕೋರ ಗೇಮಿಂಗ್ ಕಂಪನಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಜಾರಿ ನಿರ್ದೇಶನಾಲಯ (ED), RBI, ಆದಾಯ ತೆರಿಗೆ ಇಲಾಖೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಗಳೆಲ್ಲವೂ ಒಳಗೊಂಡಂತೆ ‘ಅಂತರ್ ಇಲಾಖಾ ಸಮಿತಿ’ ಯೊಂದರ ರಚನೆಗೂ ಸಿಬಿಐಸಿ ತೀರ್ಮಾನಿಸಿದೆಯಂತೆ. 

ಇನ್ನು ವಿದೇಶಗಳಲ್ಲಿ ಕೇಂದ್ರ ಕಚೇರಿ ಹೊಂದಿ ನೋಂದಣಿಯಾಗದೇ ಅಕ್ರಮವಾಗಿ ಭಾರತದಲ್ಲಿ ಕಾರ್ಯಾಚರಣೆ ನಡೆಸುವ 658 ಗೇಮಿಂಗ್ ಕಂಪನಿಗಳನ್ನು ಡಿಜಿಜಿಐ ಪತ್ತೆ ಹಚ್ಚಿದ್ದು ಅದರಲ್ಲಿ 167 ಕಂಪನಿಗಳ ವೆಬ್ ಸೈಟ್ ಕಾರ್ಯಾಚರಣೆಯನ್ನು ಬ್ಯಾನ್ ಮಾಡಲು ಸೂಚನೆ ನೀಡಿದೆಯಂತೆ. 

ದೇಶದ ಕಾನೂನಿಗೆ ಒಳಪಡದೇ ಇರುವ ಈ ಅಕ್ರಮ ಕಂಪನಿಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಯಾಕೆಂದರೆ ಈ ಕಂಪನಿಗಳು ಬೇರೆ ದೇಶಗಳಿಂದ ಅಪರೇಟ್ ಆಗುತ್ತವೆ. ಮಾಲ್ವಾ, ಸೈಪ್ರೆಸ್, ವರ್ಜಿನ್ ಐಲ್ಯಾಂಡ್ ನಂತಹ ಅನೇಕ ಬೇನಾಮಿ ಕಂಪನಿಗಳ ಮಾಲೀಕರನ್ನು ಪತ್ತೆ ಹಚ್ಚುವುದೇ ಅಸಾಧ್ಯವಾಗಿದೆ. ತೆರಿಗೆ ತಪ್ಪಿಸಿಕೊಳ್ಳಲು ಬಹುತೇಕ ಆನ್ ಲೈನ್ ಕಂಪನಿಗಳು ಆಗಾಗ ತಮ್ಮ ಯು ಆರ್ ಎಲ್ ವಿಳಾಸ ಹಾಗೂ ವೆಬ್ ಸೈಟ್ ಹೆಸರನ್ನು ಬದಲಾಯಿಸುತ್ತಲೇ ಇರುತ್ತವೆ. ತೆರಿಗೆ ವಂಚನೆಯಲ್ಲಿ ಆನ್ ಲೈನ್ ಗೇಮಿಂಗ್ ಸೆಕ್ಟರ್ ಭಾರತದಲ್ಲೇ ಮುಂಚೂಣಿಯಲ್ಲಿದೆ ಎಂದು ಡಿಜಿಜಿಐ ವರದಿ ಹೇಳುತ್ತದೆ. 

ಚಿತ್ರತಂಡ

ಕೇವಲ 34 ವಂಚಕ ಗೇಮಿಂಗ್ ಕಂಪನಿಗಳ ಸರಕಾರಕ್ಕೆ ಕೊಡಬೇಕಾದ ಜಿಎಸ್ಟಿ ತೆರಿಗೆಯೇ 1.1 ಲಕ್ಷ ಕೋಟಿ ಇದೆ ಎಂದರೆ ಈ ಕಂಪನಿಗಳ ಆದಾಯ ಇನ್ನೂ ನಾಲ್ಕು ಪಟ್ಟು ಅಂದರೆ 4.4 ಲಕ್ಷ ಕೋಟಿಯಷ್ಟಿರುತ್ತದೆ. ಇನ್ನು ಅನುಮತಿ ಪಡೆದ 118 ಕಂಪನಿಗಳ ಆದಾಯ ಎಷ್ಟಿರುತ್ತದೆ ಹಾಗೂ ಅನಧಿಕೃತವಾಗಿ ಲೂಟಿಗಿಳಿದ 658 ವಂಚಕ ಕಂಪನಿಗಳು ಅದೆಷ್ಟು ಬಿಲಿಯನ್ ಹಣವನ್ನು ಭಾರತದಿಂದ ಲೂಟಿ ಮಾಡುತ್ತಿರಬಹುದು ಎಂಬುದು ಊಹೆಗೂ ಮೀರಿದ್ದು. ಈ ದೇಶದ ಜನರ ಪರಿಶ್ರಮದ ಆದಾಯ ಹೀಗೆ ಜೂಜುಕೋರ ವಂಚಕ ಕಂಪನಿಗಳ ಪಾಲಾಗುತ್ತಿದ್ದರೂ ಕೇಂದ್ರ ಸರಕಾರ ಈ ವ್ಯವಹಾರವನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಆನ್ಲೈನ್ ಗೇಮಿಂಗ್ ಕಂಪನಿಗಳನ್ನೆಲ್ಲಾ ಬ್ಯಾನ್ ಮಾಡಿ ಜೂಜಾಟವನ್ನು ನಿಲ್ಲಿಸಿ ಎಂದು ಅದೆಷ್ಟೇ ವಿರೋಧ ಬಂದರೂ ಈ ಕಂಪನಿಗಳಿಂದ ಅಷ್ಟೋ ಇಷ್ಟೋ ತೆರಿಗೆ ಹಣ ಗಳಿಸುತ್ತಿರುವ ಸರಕಾರಕ್ಕೆ ನೊಂದವರ ಕೂಗು ಕೇಳುತ್ತಿಲ್ಲ. ಇಂತಹ ರಮ್ಮಿ ಜೂಜಾಟ ಆಡಲು ಪ್ರೇರೇಪಿಸುವ ದಗಲ್ಬಾಜಿ ಕಂಪನಿಗಳು ಆಯಾ ಭಾಷೆಯ ಸ್ಟಾರ್ ನಟರನ್ನು ಜಾಹೀರಾತಿಗೆ ಬಳಸಿಕೊಂಡು ಜನರನ್ನು ಜೂಜಾಟಕ್ಕೆ ಆಕರ್ಷಿಸುತ್ತವೆ. ಕರ್ನಾಟಕದಲ್ಲಿ ಸ್ಟಾರ್ ನಟ ಸುದೀಪ್ ರವರನ್ನೂ ಸಹ ಜಾಹೀರಾತಿಗೆ ಬಳಸಿಕೊಳ್ಳಲಾಗಿತ್ತು‌. ಅದಕ್ಕಾಗಿ ಕೋಟ್ಯಂತರ ಹಣವನ್ನು ಈ ಕಂಪನಿಗಳು ವ್ಯಯಮಾಡುತ್ತವೆ. ಆ ಹಣವೂ ಸಹ ಜನಸಾಮಾನ್ಯರಿಂದ ಲೂಟಿ ಮಾಡಿದ್ದೇ ಆಗಿರುತ್ತದೆ. 

ಇದೇ ಎಳೆಯನ್ನು ಇಟ್ಟುಕೊಂಡು, ಸ್ಟಾರ್ ನಟರು ಈ ಗ್ಯಾಂಬ್ಲಿಂಗ್ ಕಂಪನಿಗಳಿಗೆ ಮಾಡುವ ಜಾಹೀರಾತು ಪ್ರಚಾರದಿಂದ ಆಕರ್ಷಿತರಾಗಿ ಹೇಗೆ ಜನರು ಜೂಜಿನ ಬಲೆಯೊಳಗೆ ಸಿಲುಕಿಕೊಳ್ಳುತ್ತಾರೆ, ಹೇಗೆ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗುತ್ತಾರೆ ಎಂಬುದನ್ನು ಹೇಳುವ ಪ್ರಯತ್ನವನ್ನು ಉಮರ್ ಷರೀಫ್ ರವರ ‘ರಮ್ಮಿ ಆಟ’ ಸಿನೆಮಾ ಮಾಡಿದೆ. 

ಹಣಕ್ಕಾಗಿ ಪ್ರಚಾರಕ್ಕೆ ತೊಡಗುವ ಸೆಲೆಬ್ರೆಟಿಗಳಿರುವಾಗ, ಟ್ಯಾಕ್ಸಿಗಾಗಿ ಲೂಟಿಕೋರ ಕಂಪನಿಗಳಿಗೆ ಅನುಮತಿ ಕೊಡುವ ಸರಕಾರಗಳಿರುವಾಗ, ಹೇಗಾದರೂ ದಿಢೀರ್ ಆಗಿ ಹಣ ಸಂಪಾದಿಸಬೇಕೆಂಬ ಹಪಾಹಪಿ ಇರುವ ಜನರೂ ಇರುವಾಗ ಗೇಮಿಂಗ್ ಕಂಪನಿಗಳು ತಮ್ಮ ಲೂಟಿ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ದೇಶದ ಜನರನ್ನು ಆರ್ಥಿಕ ಸಂಕಷ್ಟಗಳಿಗೆ ಈಡು ಮಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಇಂತಹ ಜೂಜು ವ್ಯಸನದಿಂದ ದೂರ ಇರುವಂತೆ ಮಾಡುವ ಪರ್ಯಾಯವೊಂದೇ ಇಂದಿನ ಅಗತ್ಯವಾಗಿದೆ. ರಮ್ಮಿ ಆಟದಂತಹ ಆನ್ ಲೈನ್ ಗೇಮಿಂಗ್ ನಿಂದ ಆಗಬಹುದಾದ ದುಷ್ಪರಿಣಾಮಗಳನ್ನು ಸಿನೆಮಾ ಮೂಲಕ ತೋರಿಸುವ ಪ್ರಯತ್ನ ಶ್ಲಾಘನೀಯವಾಗಿದೆ. ಜನರನ್ನು ಯೋಚನೆಗೆ ಪ್ರೇರೇಪಿಸುವ, ಜೂಜಿನ ಅಪಾಯಗಳ ಕುರಿತು ಎಚ್ಚರಿಸುವ ಇಂತಹ ಚಲನಚಿತ್ರಗಳ ಅಗತ್ಯವೂ ಇದೆ.

ಆದರೆ ಎಷ್ಟು ಜನರಿಗೆ ಇಂತಹ ಸಿನೆಮಾಗಳು ತಲುಪುತ್ತವೆ ಎಂಬುದೇ ಪ್ರಶ್ನೆಯಾಗಿದೆ. ತಲುಪಿಸುವ ಪ್ರಯತ್ನವನ್ನು ಎಲ್ಲರೂ ಮಾಡಬೇಕಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ, ಪತ್ರಕರ್ತರು.
ಇದನ್ನೂ ಓದಿ- ಕನ್ನಡ ಚಿತ್ರ ರಂಗದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ?

More articles

Latest article