ಜನವರಿ 17, 2016ರಂದು ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡ. ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ರಿಸರ್ಚ್ ಸ್ಕಾಲರ್ ಆಗಿದ್ದ ವೇಮುಲಾ ಬದುಕಿನಲ್ಲಿ ಮಹತ್ವಾಕಾಂಕ್ಷೆ ಇಟ್ಟುಕೊಂಡು, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ಚಿಂತನೆಗಳ ಮುಖಾಂತರ ಸಾಮಾಜಿಕ ಬದಲಾವಣೆಯಲ್ಲಿ ಕನಸುಗಳನ್ನು ಕಂಡಿದ್ದ ಯುವಕ. ಆದರೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಿಗಳು ನಡೆಸಿದ ಹುನ್ನಾರಕ್ಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಸ್ಕಾಲರ್ಶಿಪ್ ನಿಲ್ಲಿಸಿ ಹಾಸ್ಟೆಲಿನಿಂದ ಹೊರಹಾಕಿದ್ದ ಕಾರಣಕ್ಕೆ ಹತಾಶೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ .ಈ ಕಾರಣಕ್ಕೆ ರೋಹಿತ್ ವೇಮುಲಾ ಸಾವು ಒಂದು ಸಾಂಸ್ಥಿಕ ಹತ್ಯೆ ಎಂದೇ ಸಾಬೀತಾಗಿದೆ. ಮೇಲು ಕೀಳು, ಅಸಮಾನತೆಗಳಿಲ್ಲದ ಉತ್ತಮ ಸಮಾಜವೊಂದರ ಕನಸು ಕಂಡಿದ್ದ ರೋಹಿತ್ ವೇಮುಲಾ ಬರೆದಿದ್ದ ಆ ಪತ್ರವನ್ನು ಪತ್ರಕರ್ತ ಹರ್ಷಕುಮಾರ್ ಕುಗ್ವೆ ಅನುವಾದಿಸಿದ್ದಾರೆ.
ಗುಡ್ ಮಾರ್ನಿಂಗ್,
ಈ ಪತ್ರವನ್ನು ನೀವು ಓದೋವಾಗ ನಾನಿರೋದಿಲ್ಲ. ಕೋಪ ಮಾಡ್ಕೋಬೇಡಿ. ನಂಗೊತ್ತು, ನಿಮ್ಮಲ್ಲಿ ಹಲವರು ನಿಜಕ್ಕೂ ನನ್ ಬಗ್ಗೆ ಕಾಳಜಿ ತೋರ್ಸಿದ್ರಿ, ನನ್ನ ಪ್ರೀತ್ಸಿದ್ರಿ ಮತ್ತು ಚೆಂದ ನೋಡ್ಕೊಂಡ್ರಿ. ಯಾರ ಮೇಲೂ ನಂಗೆ ದೂರುಗಳಿಲ್ಲ. ಯಾವಾಗ್ಲೂ ನಂಗೆ ಸಮಸ್ಯೆಯಿದ್ದಿದ್ದು ನನ್ಜೊತೆಗೇನೇ. ನನ್ನ ದೇಹ ಮತ್ತು ಆತ್ಮದ ನಡುವಿನ ಕಂದಕ ದೊಡ್ಡದಾಗ್ತಿರೋ ಭಾವನೆ ಮೂಡ್ತಿದೆ. ಮತ್ತು ನಾನು ರಾಕ್ಷಸನಾಗ್ಬಿಟ್ಟಿದ್ದೀನಿ.
ಯಾವಾಗ್ಲೂ ಒಬ್ಬ ಬರಹಗಾರ ಆಗ್ಬೇಕು ಅನ್ನೋದು ನನ್ ಬಯಕೆ ಆಗಿತ್ತು. ಕಾರ್ಲ್ ಸೇಗನ್ ತರಾ. ಕೊನೆಗೆ, ನನ್ನಿಂದ ಬರೆಯೋಕೆ ಸಾಧ್ಯವಾಗ್ತಿರೋದು ಇದೊಂದು ಪತ್ರವನ್ನ ಮಾತ್ರ.
ವಿಜ್ಞಾನ, ನಕ್ಷತ್ರ, ಪ್ರಕೃತಿಯನ್ನ ಪ್ರೀತಿಸ್ದೆ; ಪ್ರಕೃತಿಯಿಂದ ಮನುಷ್ಯರು ಡಿವೋರ್ಸ್ ಪಡೆದು ಬಾಳಾ ಕಾಲ ಆಯ್ತು ಅನ್ನೋದನ್ನ ಅರಿಯದೆ ಮನುಷ್ಯರನ್ನ ಪ್ರೀತಿಸ್ದೆ. ನಮ್ಮ ಭಾವನೆಗಳೆಲ್ಲ ಸೆಕೆಂಡ್ ಹ್ಯಾಂಡು. ಇಲ್ಲಿ ಪ್ರೀತೀನ ರಚಿಸಲಾಗಿದೆ. ನಂಬಿಕೆಗಳಿಗೆ ಬಣ್ಣ ಬಳಿಯಲಾಗಿದೆ. ನಮ್ಮ ಸ್ವಂತಿಕೆಗೆ ಇಲ್ಲಿ ಬೆಲೆ ಬರೋದೇ ಕೃತಕ ಕಲೆಯಿಂದ. ನೋವುಣ್ಣದೆ ಪ್ರೀತ್ಸೋದು ನಿಜಕ್ಕೂ ಕಷ್ಟ.
ಈ ಜಗತ್ತು ಮನುಷ್ಯನನ್ನು ಅವನ ಮನಸ್ಸಿನ ಮೂಲಕ ಎಂದೂ ಪರಿಗಣಿಸಲೇ ಇಲ್ಲ. ನಭೋಮಂಡಲದ ನಕ್ಷತ್ರಗಳ ಧೂಳಿನಿಂದ ಮಾಡಲಾಗಿರೋ ಅತ್ಯದ್ಭುತ ವಸ್ತು ಈ ಮನುಷ್ಯ ಅಂತ ಎಂದೂ ಅವನನ್ನ ಗುರುತಿಸಲಿಲ್ಲ. ಅದು ಅಧ್ಯಯನ ಕ್ಷೇತ್ರದಲ್ಲಿ ಇರಲಿ, ಬೀದಿಗಳಲ್ಲಿ ಇರಲಿ, ರಾಜಕೀಯದಲ್ಲಿ ಇರಲಿ, ಬದುಕಿನಲ್ಲೇ ಇರಲಿ ಅಥವಾ ಸಾವಿನಲ್ಲೇ ಇರಲಿ ಮನುಷ್ಯನ ಮೌಲ್ಯ ಅನ್ನೋದು ಅವನ ತಕ್ಷಣದ ಐಡೆಂಟಿಟಿ ಹಾಗೂ ಸಮೀಪದ ಯಾವುದೋ ಒಂದು ಸಾಧ್ಯತೆಯ ಮಟ್ಟಕ್ಕಷ್ಟೇ ಇಳಿದುಬಿಟ್ಟಿದೆ. – ಒಂದು ವೋಟಿಗೆ; ಒಂದು; ಸಂಖ್ಯೆಗೆ; ಒಂದ್ ವಸ್ತುವಿಗೆ..
ಈ ರೀತಿಯ ಪತ್ರವನ್ನ ಮೊದಲನೇ ಸಲಕ್ಕೆ ಬರೀತಿದೀನಿ. ಇದು ಕೊನೇ ಪತ್ರದ ಮೊದಲ ಪ್ರಯತ್ನ. ಒಂದುವೇಳೆ ಇದೇನಾದ್ರೂ ನಿಮಗೆ ಅರ್ಥ ಕೊಡೋಕೆ ವಿಫಲವಾದ್ರೆ ಕ್ಷಮಿಸಿ.
ಬಹುಶಃ ಪ್ರಪಂಚವನ್ನ ಅರ್ಥ ಮಾಡಿಕೊಳೋದ್ರಲ್ಲಿ ನಾನು ತಪ್ಪಿದೆ ಅನ್ಸುತ್ತೆ. ಪ್ರೀತಿ, ನೋವು, ಬದುಕು, ಸಾವು ಇವನ್ನೆಲ್ಲಾ ಅರ್ಥ ಮಾಡ್ಕೊಳೋದ್ರಲ್ಲಿ ಸೋತೆ. ಆತುರವೇನೂ ಇರ್ಲಿಲ್ಲ, ನಾನು ಓಡ್ತಾನೇ ಇದ್ದೆ. ಬದುಕು ಪ್ರಾರಂಭಿಸೋ ಹತಾಶೆಯಿಂದ ಓಡ್ತಿದ್ದೆ. ಕೆಲವರಿಗೆ ಬದುಕೇ ಒಂದು ಶಾಪ. ಆದ್ರೆ ನಂಗೆ, ನನ್ನ ಹುಟ್ಟೇ ಮಾರಾಣಾಂತಿಕ ಅಪಘಾತವಾಗ್ಬಿಟ್ಟಿತ್ತು. ನನ್ನ ಬಾಲ್ಯದ ಏಕಾಂಗಿತನದಿಂದ ನಾನು ಎಂದೂ ಚೇತರಿಸಿಕೊಳ್ಳಲಾರೆ. ನನ್ನ ಗತದ ಒಡಲಿಂದ ಬಂದ ಪಾಪಿ ಕೂಸು ನಾನು.
ಈ ಕ್ಷಣದಲ್ಲಿ ನಂಗೆ ನೋವಾಗ್ತಿಲ್ಲ, ದುಃಖವಾಗ್ತಿಲ್ಲ; ಖಾಲಿ ಖಾಲಿ ಅನಿಸ್ತಿದೆ. ನನ್ನ ಬಗ್ಗೆ ನನಗೇ ಕಾಳಜಿಯಿಲ್ಲ. ಇದು ಅಸಹ್ಯ. ಹಾಗಾಗೇ ಈ ಕೆಲಸ ಮಾಡ್ತಿದೀನೇನೋ.
ಜನ ನನ್ನನ್ನ ಹೇಡಿ ಅಂತ ಜರೀಬಹುದು. ನಾನು ಹೋದ್ಮೇಲೆ ಸ್ವಾರ್ಥಿ, ಮೂರ್ಖ ಅನ್ಬಹುದು. ಅದರ ಬಗ್ಗೆ ನಂಗೇನೂ ಚಿಂತೆಯಿಲ್ಲ. ಪುನರ್ ಜನ್ಮದ ಕತೆಗಳಲ್ಲಿ, ಭೂತ, ಪ್ರೇತಗಳಲ್ಲಿ ನಂಗೆ ನಂಬಿಕೆಯಿಲ್ಲ. ಏನಾದ್ರೂ ನಂಬೋದಿದ್ರೆ ಅದು ನಾನು ನಕ್ಷತ್ರಗಳವರೆಗೆ ಪ್ರಯಾಣಿಸಬಲ್ಲೆ ಅನ್ನೋದನ್ನ ಮಾತ್ರ ಮತ್ತು ಇತರೆ ಪ್ರಪಂಚಗಳ ಬಗ್ಗೆ ತಿಳಿದುಕೊಳ್ಳಬಲ್ಲೆ ಅನ್ನೋದನ್ನ ಮಾತ್ರವೇ.
ಈ ಪತ್ರ ಓದ್ತಿರೋ ನೀವು ನಂಗೇನಾದ್ರೂ ಮಾಡಬಹುದಾದ್ರೆ, ಕಳೆದ ಏಳು ತಿಂಗಳಿನ ಫೆಲೋಶಿಪ್ ಹಣ ಒಂದು ಲಕ್ಷದ ಎಪ್ಪತ್ತೈದು ಸಾವಿರ ರುಪಾಯಿ ಇನ್ನೂ ಬರ್ಬೇಕು. ಅದು ನನ್ನ ಕುಟುಂಬದವ್ರಿಗೆ ತಲುಪೋ ಹಾಗೆ ಮಾಡಿ. ರಾಮ್ಜಿಗೆ ನಲವತ್ತು ಸಾವಿರದಷ್ಟು ಸಾಲ ಹಿಂದಿರುಗಿಸ್ಬೇಕು. ಅವ್ನು ಅದನ್ಯಾವತ್ತೂ ವಾಪಸ್ಸು ಕೇಳಿಲ್ಲ. ದಯವಿಟ್ಟು ನಂಗೆ ಬರೋ ಹಣದಲ್ಲಿ ಅದನ್ನ ತೀರಿಸಿಬಿಡಿ.
ನನ್ನ ಅಂತ್ಯಕ್ರಿಯೆ ಶಾಂತವಾಗಿ, ಸುಗಮವಾಗಿ ನಡೀಲಿ. ಹಿಂಗೆ ಕಾಣಿಸ್ಕೊಂಡ್ ಹಂಗೆ ಮರೆಯಾಗ್ಬಿಟ್ಟ ಅನ್ನೋಹಾಗೆ ವರ್ತಿಸಿ. ನನಗಾಗಿ ಕಣ್ಣೀರು ಹಾಕೋದು ಬೇಡ. ಜೀವಂತವಾಗಿದ್ದಾಗ ಇದ್ದುದಕ್ಕಿಂತ್ಲೂ ಸತ್ತಮೇಲೆ ನಾನು ಖುಷಿಯಾಗಿರ್ತೀನಿ ಅನ್ನೋದು ಗೊತ್ತಿರ್ಲಿ.
“ಇರುಳ ಮರೆಯಿಂದ ನಕ್ಷತ್ರಗಳ ವರೆಗೆ”
ಉಮಾ ಅಣ್ಣ, ಈ ಕೆಲಸಕ್ಕೆ ನಿಮ್ಮ ರೂಮನ್ನ ಉಪಯೋಗಿಸ್ತಿರೋದಕ್ಕೆ ಕ್ಷಮೆ ಇರ್ಲಿ
ನಿರಾಸೆ ಮೂಡಿಸಿದ್ದಕ್ಕೆ `ಎಎಸ್ಎ’ ಕುಟುಂಬದ ಕ್ಷಮೆ ಕೋರ್ತೀನಿ. ನೀವೆಲ್ರೂ ನನ್ನನ್ನ ತುಂಬಾ ಪ್ರೀತಿಸಿದ್ರಿ. ನಿಮ್ಮೆಲ್ಲರ ಉಜ್ವಲ ಭವಿಷ್ಯಕ್ಕಾಗಿ ಹಾರೈಸ್ತೀನಿ.
ಹಾಂ.. ಫಾರ್ಮಾಲಿಟಿಗಳನ್ನ ಬರೆಯೋದೇ ಮರೆತ್ಬಿಟ್ಟೆ ನೋಡಿ.
ನನ್ನ ಸಾವಿಗೆ ಯಾರೂ ಹೊಣೆಗಾರರಲ್ಲ. ಯಾರೂ ನನ್ನನ್ನ ತಮ್ಮ ಕೃತ್ಯಗಳಿಂದಾಗಲೀ, ಮಾತ್ನಿಂದಾಗಲೀ ಇದಕ್ಕೆ ಉತ್ತೇಜಿಸ್ಲಿಲ್ಲ.
ಇದು ನನ್ನ ನಿರ್ಧಾರ ಮತ್ತು ಇದಕ್ಕೆ ನಾನೊಬ್ನೇ ಜವಾಬ್ದಾರ.
ನಾನು ಹೋದ್ಮೇಲೆ ಈ ವಿಷಯವಾಗಿ ನನ್ನ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ತೊಂದರೆ ಕೊಡ್ಬೇಡಿ.
ಇಂತಿ
ರೋಹಿತ್ ವೇಮುಲ
ಕನ್ನಡಕ್ಕೆ : ಹರ್ಷಕುಮಾರ್ ಕುಗ್ವೆ