ಒಳಮೀಸಲಾತಿ ಬೇಡ ಎನ್ನುವ ನೈತಿಕತೆ, ಹಕ್ಕು ಯಾರಿಗೂ ಇರುವುದಿಲ್ಲ : ದೇವನೂರ ಮಹಾದೇವ ಸಂದರ್ಶನ

Most read

 ಒಳ ಮೀಸಲಾತಿ ಕುರಿತು ಗಂಭೀರ ವಾದ ವಿವಾದ, ಸಂವಾದ, ಮಾತುಕತೆಗಳು ನಡೆಯುತ್ತಿವೆ. ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ದೇವನೂರ ಮಹಾದೇವ ಅವರು ತಮ್ಮ ಖಚಿತ ಹಾಗೂ ಸ್ಪಷ್ಟ ನಿಲುವುಗಳನ್ನು ಈ ಸಂದರ್ಶನದ ಮೂಲಕ ತಿಳಿಸಿದ್ದಾರೆ. 2024ರ ಸೆಪ್ಟೆಂಬರ್ ತಿಂಗಳ "ಅಂಬೇಡ್ಕರ್‌ವಾದ" ಮಾಸಿಕಕ್ಕಾಗಿ ಸಂಪಾದಕ- ಡಾ. ರವಿಕುಮಾರ್ ಬಾಗಿ ಅವರು ನಡೆಸಿದ ದೇವನೂರ ಮಹಾದೇವ ಅವರ ಸಂದರ್ಶನವನ್ನು ಅದರ ಮಹತ್ವಕ್ಕಾಗಿ ಕನ್ನಡ ಪ್ಲಾನೆಟ್ ಇಲ್ಲಿ ಪ್ರಕಟಿಸುತ್ತಿದೆ- ಸಂ.

ಪ್ರಶ್ನೆ: ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದರ ಬಗ್ಗೆ ತಮ್ಮ ಅಭಿಪ್ರಾಯವೇನು?

ದೇಮ: ಒಳಮೀಸಲಾತಿ ಬಗ್ಗೆ ಯಾರೇ ಎಷ್ಟೇ ಹೋರಾಟ ಮಾಡಿದರೂ- ಸಂಸತ್ ಆಗಲಿ ಅಥವಾ ಸುಪ್ರೀಂ ಕೋರ್ಟ್‌ ನ ವಿಸ್ತೃತ ಪೀಠವಾಗಲಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ನಮ್ಮ ಸಂಸತ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ಭರವಸೆ ಇಲ್ಲದ ಇಂಥಹ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ ನ ಏಳು ಜನರ ವಿಸ್ತೃತ ಪೀಠವು ಒಳಮೀಸಲಾತಿ ಪರವಾಗಿ ತೀರ್ಪು ನೀಡಿ, ಹಸಿರು ನಿಶಾನೆ ತೋರಿದೆ. ಏಳು ನ್ಯಾಯಾಧೀಶರ ಪೀಠವು 6:1 ಬಹುಮತದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ನೀಡುವುದರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದೆ. ಇಷ್ಟಾಗುವುದರ ಹಿನ್ನೆಲೆಯಲ್ಲಿ ಕಳೆದ ಮೂರು ದಶಕಗಳಿಂದಲೂ ಒಳಮೀಸಲಾತಿಗಾಗಿ ಸತತವಾಗಿ ನಡೆದ ಹೋರಾಟಗಳು ಹಾಗೂ ಅದು ಉಂಟುಮಾಡಿದ ವಾತಾವರಣವು ತನ್ನೆಲ್ಲಾ ಮಿತಿಗಳ ನಡುವೆ ಒತ್ತಡ ತಂದಿರುವುದನ್ನು ಗಮನಿಸಬೇಕು. ಈಗ ಸುಪ್ರೀಂ ಕೋರ್ಟ್ ನ ವಿಸ್ತೃತ ಪೀಠದ ಈ ತೀರ್ಪಿನಿಂದಾಗಿ ಷೆಡ್ಯೂಲ್ಡ್ ಕ್ಯಾಸ್ಟ್‌ನ ಒಳಕ್ಷೋಭೆ ಕಮ್ಮಿ ಆದಂತಾಯ್ತು. ಸುಪ್ರೀಂ ಕೋರ್ಟ್ ನ ತೀರ್ಪನ್ನು ಸ್ವಾಗತಿಸುವೆ.

ಪ್ರಶ್ನೆ: ಒಳಮೀಸಲಾತಿ ಜಾರಿ ಮಾಡುವ ಸಂದರ್ಭದಲ್ಲಿ ಕ್ರೀಮೀಲೆಯರ್ (ಕೆನೆಪದರ) ಅನ್ನು ಪರಿಗಣಿಸಬಹುದು ಎಂದೂ ಸಹ ಸುಪ್ರೀಂ ಕೋರ್ಟ್ ಹೇಳಿದೆ. ಇದರ ಅಗತ್ಯವಿಲ್ಲ ಎಂದೂ, ಇದು ದಲಿತರನ್ನು ಒಡೆಯುವ ಕೇಂದ್ರ ಸರ್ಕಾರದ ಇನ್ನೊಂದು ತಂತ್ರವೆಂಬ ಅಭಿಪ್ರಾಯವೂ ಇದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದೇಮ: ನೆನಪಿಡಿ: ಕೆನೆಪದರದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿಲ್ಲ. ಒಳಮೀಸಲಾತಿ ಅನುಷ್ಠಾನದ ವಿಚಾರದಲ್ಲಿ ಕೆನೆಪದರವನ್ನು ಅಗತ್ಯವಿದ್ದರೆ ಅನುಸರಿಸಬಹುದು ಎಂದು ಹೇಳಿದೆಯೇ ಹೊರತು, ಅಗತ್ಯವಾಗಿ ಪರಿಗಣಿಸಬೇಕೆಂದು ಜಡ್ಜ್‌ಮೆಂಟ್‌ ಮಾಡಿಲ್ಲ. ತೀರ್ಪು ನೀಡಿದ್ದರೆ ಇದಕ್ಕೆ ಮುಖಾಮುಖಿಯಾಗಬಹುದಿತ್ತು. ಹೀಗಿರುವಾಗ ಇಲ್ಲದ್ದನ್ನು ಎದುರಾಳಿಯಾಗಿಟ್ಟುಕೊಂಡು ಯಾಕೆ ಗುದ್ದಾಡಬೇಕು? ಬದಲಾಗಿ ಒಳಮೀಸಲಾತಿ ಅನುಷ್ಠಾನಕ್ಕೆ ಎದುರಾಗಬಹುದಾದ ಸಮಸ್ಯೆಗಳನ್ನು ಸಹನೆಯಿಂದ ನಿವಾರಿಸಿಕೊಳ್ಳುತ್ತ ಅಪಸ್ವರಗಳನ್ನು ಆದಷ್ಟೂ ಕಮ್ಮಿ ಮಾಡಿಕೊಂಡು ಅನುಷ್ಠಾನದ ಕಡೆಗೆ ಈಗ ಗಮನ ಕೊಡಬೇಕಾಗಿದೆ.

 ಆಮೇಲೆ, ನಿಮ್ಮ ಇದೇ ಪ್ರಶ್ನೆಯಲ್ಲಿ, ಸುಪ್ರೀಂ ಕೋರ್ಟ್ ನ ಕೆಲ ನ್ಯಾಯಾಧೀಶರು ಕೆನೆಪದರ ಪರಿಗಣಿಸಬಹುದು ಎಂದು ಹೇಳಿರುವುದಕ್ಕೆ, ಇದು ದಲಿತರನ್ನು ಒಡೆಯುವ ಕೇಂದ್ರ ಸರ್ಕಾರದ ತಂತ್ರವಿರಬೇಕೆಂದು ಶಂಕೆ ಹೇಳುತ್ತೀರಿ. ಸುಪ್ರೀಂ ಕೋರ್ಟ್ ಈ ಬಗ್ಗೆ ತೀರ್ಪು ನೀಡಿದ್ದರೆ ನಾನೂ ಅನುಮಾನಿಸುತ್ತಿದ್ದೆನೇನೊ. ತೀರ್ಪು ನೀಡಿಲ್ಲವಾದ್ದರಿಂದ ಅನುಮಾನಿಸುವುದಿಲ್ಲ. ಇಂಥ ಪ್ರಶ್ನೆ, ಉತ್ತರಗಳಲ್ಲೆ ನಾವು ಕಳೆದು ಹೋಗುತ್ತಿದ್ದೇವೆ.

ಪ್ರಶ್ನೆ: ಒಳಮೀಸಲಾತಿಗೆ ವಿರುದ್ಧವಾಗಿ ಉತ್ತರ ಭಾರತದಲ್ಲಿ ಚಮ್ಮಾರರು ಹೋರಾಟ ಮಾಡುತ್ತಿದ್ದಾರೆ ಅವರಿಗೆ ತಮ್ಮ ಸಲಹೆ ಏನು?

ದೇಮ: ಹೌದು, ಒಳಮೀಸಲಾತಿಗೆ ವಿರುದ್ಧವಾಗಿ ಉತ್ತರ ಭಾರತದಲ್ಲಿ ಚಮ್ಮಾರರ ಹೋರಾಟ ಇನ್ನು ಮೇಲೆ ಹೆಚ್ಚಲೂ ಬಹುದು. ಆದರೆ ಇದು ಅನಿರೀಕ್ಷಿತವಲ್ಲ. ತುಂಬಾ ಹಿಂದೆಯೇ ಈ ಬಗ್ಗೆ ಮಾತಾಡಿದ್ದೆ. ಹೀಗಿದ್ದೂ, ಒಳಮೀಸಲಾತಿಗೆ ಅಪಸ್ವರ, ಪ್ರತಿಭಟನೆ- ಉತ್ತರ ಭಾರತ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಕಾಣಿಸಿಕೊಳ್ಳಬಹುದು.

ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ತದನಂತರ, ಒಳಮೀಸಲಾತಿ ಬೇಕೆಂಬ ಆಕಾಂಕ್ಷಿಗಳ ನೈತಿಕ ಬೇಡಿಕೆಯು ಈಗ ಹಕ್ಕಾಗಿದೆ. ಎಲ್ಲರೂ ಒಪ್ಪಿಕೊಂಡರೆ ಆರೋಗ್ಯಕರ. ಯಾರಿಗೂ ಬೇಡ ಎಂದು ಹೇಳುವ ನೈತಿಕತೆಯಾಗಲಿ ಹಕ್ಕಾಗಲಿ ಈಗ ಇರುವುದಿಲ್ಲ. ಅಪಸ್ವರ ಇರುವವರು ತಮ್ಮ ಒಳಪಂಗಡಕ್ಕೆ ಏನು ಬೇಕು ಎಂದು ಕೇಳಬಹುದಷ್ಟೆ. ಮತ್ತೊಮ್ಮೆ ಹೇಳುವೆ- ಇನ್ನೊಬ್ಬರಿಗೆ ಒಳಮೀಸಲಾತಿ ಬೇಡ ಅನ್ನುವುದಕ್ಕೆ ಯಾರಿಗೂ ಹಕ್ಕಾಗಲಿ, ನೈತಿಕತೆಯಾಗಲಿ ಇರುವುದಿಲ್ಲ.

ಪ್ರಶ್ನೆ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ಮಾತು ಕೊಟ್ಟಿತ್ತು. ಆದರೆ ಈಗ ಅದರ ಬಗ್ಗೆ ಬಾಯಿ ಬಿಡುತ್ತಿಲ್ಲ. ಹೀಗಿರುವಾಗ ಸರ್ಕಾರಕ್ಕೆ ಯಾವ ರೀತಿ ಒತ್ತಡ ಹಾಕಬೇಕು?

ದೇಮ: ಒಂದು ವ್ಯವಸ್ಥೆ, ಒಂದು ಸರ್ಕಾರದ ನಡಿಗೆಯನ್ನು ಸರಳಗೊಳಿಸಿ ನೋಡುತ್ತಿರುವುದರಿಂದ ನಿಮಗೆ ಹೀಗೆ ಅನ್ನಿಸುತ್ತಿರಬಹುದು. ಯಾವುದೇ ಒಂದು ಕುಟುಂಬ ಅಥವಾ ಸರ್ಕಾರವು ಅಪಸ್ವರಗಳು ಇರುವ ಸಮಸ್ಯೆ ಬಗೆಹರಿಸಿಕೊಳ್ಳುವಾಗ, ಎಲ್ಲರನ್ನೂ ಒಲಿಸಿಕೊಂಡು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಒಳಮೀಸಲಾತಿ ಬೇಡ ಅನ್ನುವ ಸಚಿವರು, ಶಾಸಕರು- ಪಕ್ಷವನ್ನೂ ಒಮ್ಮತಕ್ಕೆ ತಂದು ಅನುಷ್ಠಾನ ಗೊಳಿಸಬೇಕಾಗುತ್ತದೆ. ಹೀಗೆಲ್ಲಾ ಸರ್ಕಸ್ ಮಾಡದಿದ್ದರೆ ಸರ್ಕಾರವೇ ಅಲ್ಲಾಡಲೂಬಹುದು. ಇದನ್ನು ಅರ್ಥ ಮಾಡಿಕೊಂಡು ನಾವು ಸರ್ಕಾರದ ಮೇಲೆ ಮೊದಲು ನೈತಿಕ ಒತ್ತಡ ತರಬೇಕಾಗಿದೆ. ಜೊತೆಗೇ ಜನಾಭಿಪ್ರಾಯ ರೂಪಿಸಬೇಕಾಗುತ್ತದೆ.

ಇಲ್ಲಿ, ಹೋರಾಟಗಾರರು ಪ್ರತಿಕ್ರಿಯಾತ್ಮಕವಾಗಿರಬಾರದು. ಯಾರೇ ಏನೇ ಹೇಳಲಿ ಆ ಕಡೆ ನೋಡದೆ ತಾವು ಹೇಳಬೇಕಾಗಿರುವುದಷ್ಟನ್ನು ಮಾತ್ರ ಹೇಳಬೇಕು. ಜೊತೆಗೆ  ಹಂತ ಹಂತವಾಗಿ ಹೋರಾಟವನ್ನು ತೀವ್ರ ಮತ್ತು ವ್ಯಾಪಕಗೊಳಿಸುತ್ತಾ ಹೋಗಬೇಕು.

 ಆಮೇಲೂ ಈ ಸರ್ಕಾರಕ್ಕೆ ಅನುಷ್ಠಾನಗೊಳಿಸುವುದು ಕಷ್ಟ ಅನ್ನಿಸಿದರೆ, (1) ಯಾವ ಜನಪ್ರತಿನಿಧಿಗಳು ಇದಕ್ಕೆ ಕಾರಣರೋ, ಅವರ ಮೇಲೆ ಕಣ್ಣಿಡಬೇಕು. ಮುಂದಿನ ಚುನಾವಣೆಯಲ್ಲಿ ಅವರೊ, ಅವರ ಸಂತಾನವೊ ಗೆಲ್ಲದಂತೆ ವಾತಾವರಣ ಸೃಷ್ಟಿಸಬೇಕು. (2) ಕೊನೆಗೆ, ತಮಗೆ ಮೀಸಲಾತಿ ಬೇಕೆನ್ನುವ ಒಳಪಂಗಡವು ‘ನಮಗೆ ಒಳಮೀಸಲಾತಿ ಮೊದಲು ತನ್ನಿ’ ಎಂದು ಡಿಮ್ಯಾಂಡ್ ಇಡಬೇಕಾಗುತ್ತದೆ. ಇದಕ್ಕೆ ಪ್ರಬಲ ವ್ಯಾಪಕ ಹೋರಾಟ ರೂಪಿಸ ಬೇಕಾಗುತ್ತದೆ.

ಪ್ರಶ್ನೆ: ಒಳಮೀಸಲಾತಿಯು ದಲಿತರ ಐಕ್ಯತೆಯನ್ನು ಮುರಿಯುತ್ತದೆ ಎಂಬ ವಾದವಿದೆ. ಹಾಗೆಯೇ ಒಳಮೀಸಲಾತಿಯು ದಲಿತರ ಐಕ್ಯತೆಯನ್ನು ಸಾಧಿಸುತ್ತದೆ ಎಂಬ ವಾದವೂ ಇದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದೇಮ: ಒಳಮೀಸಲಾತಿಯು ದಲಿತರ ಐಕ್ಯತೆಯನ್ನು ಮುರಿಯುತ್ತದೆ ಅಥವಾ ಸಾಧಿಸುತ್ತದೆ- ಎರಡೂ ನಿಜವಿರಬಹುದೇನೋ? ನಾವು ನಡೆದುಕೊಳ್ಳುವುದರ ಮೇಲೆ ಇದು ನಿಂತಿದೆ ಅನ್ನಿಸುತ್ತದೆ. ಈ ಹಿಂದೆ ಒಳಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ಉಂಟಾದ ದ್ವೇಷ, ಅಸೂಯೆ, ಅನುಮಾನಗಳು ಕಹಿ ಉಳಿಸಿವೆ. ಆಗ ಉಂಟಾದ ಗಾಯದ ಗುರುತು ಇನ್ನೂ ಇದೆ. ಕರ್ನಾಟಕದಲ್ಲಿ ಮಾದಾರ v/s ಹೊಲಾರ ಆಗಿಬಿಟ್ಟಿತು. ಪರಸ್ಪರ ಶತ್ರು ಎಂಬಂತೆ ಆಗಿಬಿಟ್ಟಿತ್ತು. ಇದೆಲ್ಲದರ ಪರಿಣಾಮ- ಮಾದಾರ ಮತ್ತು ಹೊಲಾರ ಈ ಇಬ್ಬರೂ ರಾಜಕೀಯ ಪ್ರಾತಿನಿಧ್ಯದ ಊರಾಚೆ ಎಸೆಯಲ್ಪಟ್ಟರು. ದಲಿತರನ್ನು ಬೇರೆಯವರು ರಾಜಕೀಯ ಅಸ್ಪೃಶ್ಯರನ್ನಾಗಿಸಿದ್ದಲ್ಲ, ತಾವೇ ಮಾಡಿಕೊಂಡರು. ಐಕ್ಯತೆ ಮುರಿಯಿತು. ಸುಸ್ತಾಗಿ, ಈಗ ಮತ್ತೆ ಒಡನಾಟ ಚಿಗುರುತ್ತಿದೆ. ಇನ್ನು ಮುಂದಾದರೂ ‘ನಾನು ಹೇಳಿದ್ದನ್ನೇ ಹೇಳಬೇಕು, ಹೇಳಿದ ರೀತಿಯಲ್ಲೆ ಹೇಳಬೇಕು’ ಎಂದು ಅಪಕ್ವವಾಗಿ ಯಾವುದೇ ಕೆಟಗರಿಯವರೂ ವಾದಿಸಬಾರದು.

ಒಳಮೀಸಲಾತಿ ಇದ್ದೂ ದಲಿತರ, ತಳ ಸಮುದಾಯಗಳ ಐಕ್ಯತೆಯನ್ನು ಉಳಿಸಬಹುದಾದ ಸಾಧ್ಯತೆ- ಅವರು ಒಟ್ಟಾಗಿ ಉಳಿದೆಲ್ಲಾ ಶೋಷಿತ ಸಮುದಾಯಗಳನ್ನು ಜೊತೆಗೂಡಿಸಿಕೊಂಡು ರಾಜಕೀಯ ಪ್ರಾತಿನಿಧ್ಯ ಪಡೆಯಲು ಅರಿವು ಮೂಡಿಸುವುದರಲ್ಲಿದೆ. ಎಲ್ಲಾ ಕ್ಷೇತ್ರಗಳ ಪ್ರಾತಿನಿಧ್ಯಕ್ಕೂ ಒಟ್ಟಾಗಿ ಹೋರಾಡ ಬೇಕಾಗಿದೆ. ಸಹಭಾಗಿ ಪ್ರಜಾಪ್ರಭುತ್ವ (Participatory Democracy) ಮುನ್ನೆಲೆಗೆ ತರಬೇಕಾಗಿದೆ. ಖಾಸಗಿಯಲ್ಲೂ ಮೀಸಲಾತಿಗೆ ಒತ್ತಡ ಹೇರಬೇಕಾಗಿದೆ. ಇಲ್ಲಿ ಸ್ಪೃಶ್ಯ-ಅಸ್ಪೃಶ್ಯ ತರಬಾರದು. ಇರುವ ಯಾರನ್ನೂ ಎಸ್‌ ಸಿ ಗುಂಪಿಗೆ ಸಲ್ಲ ಅನ್ನಬಾರದು. ಎಸ್‌ ಸಿ ಗುಂಪು ಎಚ್ಚೆತ್ತು ರಾಜಕೀಯ ಪ್ರಜ್ಞೆ ದಕ್ಕಿಸಿಕೊಂಡರೆ, ಮತ್ತಿತರ ಶೋಷಿತರನ್ನೂ ಜೊತೆಗೂಡಿಸಿಕೊಂಡು ಒಕ್ಕೊರಲಿನಿಂದ ಅದು ಹೇಳಿದ ಮಾತುಗಳು ಸರ್ಕಾರದಲ್ಲಿ ನಡೆಯುತ್ತದೆ. ಯಾವುದೇ ಪ್ರಾತಿನಿಧ್ಯಗಳಲ್ಲೂ ತಳ ಸಮುದಾಯಗಳಿಗೆ ಅಷ್ಟೊಂದು ವಂಚನೆ ನಡೆಯಲಾರದು- ಈ ರೀತಿ ಆಲೋಚಿಸುತ್ತಿರುವೆ.

ಪ್ರಶ್ನೆ: ದಲಿತರು ಐಕ್ಯಗೊಂಡು ಹೋರಾಡಬೇಕಾದ ಹಲವು ಹೋರಾಟಗಳಿವೆ. ಈ ನಿಟ್ಟಿನಲ್ಲಿ ಈ ಹೊತ್ತಿಗೆ ಹೋರಾಟವನ್ನು ಹೇಗೆ ರೂಪಿಸಬೇಕು?

ದೇಮ: ನಾನೀಗ ‘ಜಂಗಮ ಕಲೆಕ್ಟೀವ್ಸ್’ನ ರಂಗ ಪ್ರಯೋಗಗಳು ಹಾಗೂ ಈ ಎಳೆಯರ ಗ್ರಹಿಕೆ, ಅಭಿವ್ಯಕ್ತಿ, ಆಲೋಚನೆಗಳ ಕಡೆ ನೋಡುತ್ತಿರುವೆ. ‘ದಕ್ಲ ದೇವಿ ಕಥಾ’ ಆಗಲಿ, ‘ಬಾಬ್ ಮರ‍್ಲೆ ಫ್ರಂ ಕೋಡಿಹಳ್ಳಿ’ ಆಗಲಿ ಕೇವಲ ನಾಟಕಗಳಾಗಿ ಉಳಿಯುವುದಿಲ್ಲ. ನಾಟಕದ ಎಲ್ಲೆ ಮೀರುತ್ತದೆ. ಕಂಪನಗಳನ್ನು ಉಂಟುಮಾಡುತ್ತ, ಚಲಿಸುತ್ತಾ ಸಮಾಜವನ್ನು ಆಳ್ವಿಕೆ ಮಾಡುತ್ತಿರುವ ಮೌಲ್ಯಗಳ ಬುಡ ಅಲ್ಲಾಡಿಸತೊಡಗುತ್ತದೆ.

ಈ ಹಿಂದೆ, ದಲಿತ ಸಂಘರ್ಷ ಸಮಿತಿಯು ದಲಿತ ಕೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟು ಅವರ ಜನ್ಮದಿನಾಚರಣೆಯನ್ನು ಆಚರಿಸಲು ಆರಂಭಿಸಿದಾಗ, ಇತರೆ ಸಮುದಾಯಗಳಿಂದ ಉಂಟಾದ ಪ್ರತಿರೋಧ, ದೌರ್ಜನ್ಯ, ದಲಿತರಿಗೆ ಉಂಟುಮಾಡಿದ ಗಾಯಗಳು ಒಂದೆರಡಲ್ಲ. ಛಲ ಬಿಡದೆ ದಸಂಸ ಅಂಬೇಡ್ಕರ್ ಜನ್ಮ ದಿನಾಚರಣೆಗೆ ಒಂದು ಆಂದೋಲನ ಸ್ವರೂಪ ನೀಡಿತು. ಮೊದಮೊದಲು ಬುಡಮೇಲು ಕೃತ್ಯದಂತೆ ಕಂಡಿದ್ದ ಅಂಬೇಡ್ಕರ್ ದಿನಾಚರಣೆ, ನಿಧಾನವಾಗಿ ಇತರೆಯವರಿಂದಲೂ ಒಪ್ಪಿತವಾಯ್ತು. ಅಷ್ಟೇಕೆ ಈಗ ಇತರೆಯವರೂ ಅಂಬೇಡ್ಕರ್ ಅವರನ್ನು ಒಳಗೊಳ್ಳುತ್ತಿದ್ದಾರೆ. ಆದರೆ ಇಷ್ಟಾಗುವುದಕ್ಕೆ ಹೆಚ್ಚೂ ಕಮ್ಮಿ ಅರ್ಧ ಶತಮಾನ ಹಿಡಿಯಿತು. ಇರಲಿ.

 ಮತ್ತೆ ಜಂಗಮ ಕಲೆಕ್ಟೀವ್ಸ್ ಗೆ ಬರುವೆ. ಅಯಾಸ್ಕಾಂತದಂತೆ ಇದು ಎಲ್ಲರನ್ನೂ ಸೆಳೆಯುತ್ತಿದೆ. ಈ ಸಮಾಜವು ಮಾನವೀಯವಾಗಿ ರೂಪಾಂತರವಾಗಲು, ಈ ಹಿಂದೆ ದಲಿತ ಸಂಘರ್ಷ ಸಮಿತಿ ಹೋರಾಟಕ್ಕೆ ದಶಕಗಳು ಹಿಡಿದರೆ, ಇಂದು ಜಂಗಮ ಕಲೆಕ್ಟೀವ್ಸ್‌ ಗೆ ಒಂದು ದಿನ ಸಾಕು- ಈ ಜಿಗಿತ ಸಿಕ್ಕಿದೆ. ನಾವು ಕಾಣಬೇಕಾಗಿದೆ- ಜಂಗಮ ಕಲೆಕ್ಟೀವ್ಸ್ ನಾಟಕಗಳು ಮುಗಿದ ಮೇಲೆ ನಡೆಯುವ ಸಂವಾದಗಳು ಗಹನವಾಗಿವೆ. ಅಸಹಜ ಸಾಮಾಜಿಕ/ಸಾಂಸ್ಕೃತಿಕ ಮೌಲ್ಯಗಳ ಸಂಕೋಲೆಯಿಂದ ಬಿಡುಗಡೆ ಪಡೆಯಲು ಹಾತೊರೆಯುತ್ತಿರುವಂತೆ ಇಡೀ ಸಭೆ ಕಾಣಿಸುತ್ತದೆ. ಗಮನಿಸಿ- ಇಲ್ಲಿ ದಲಿತ ಮಾತ್ರವಲ್ಲ, ತಳ ಸಮುದಾಯ ಮಾತ್ರವಲ್ಲ, ತಾವು ಮೇಲು ಅಂದುಕೊಂಡವರೂ ಎಲ್ಲರೂ ಮಾನವೀಯವಾಗಲು, ಸಹಜವಾಗಲು ತಹತಹಿಸುತ್ತಿರುವಂತೆ ಕಾಣಿಸುತ್ತದೆ. ಹೀಗೆಯೇ, ಈ ತಂಡದ ಜೊತೆಗೆ ಕನ್ನಡ ಪ್ಲಾನೆಟ್ ಮತ್ತಿತರ ಚಾನೆಲ್‌ಗಳಲ್ಲಿ ಪ್ರಸಾರವಾಗಿರುವ ಸಂದರ್ಶನಗಳೂ ಚೇತೋಹಾರಿಯಾಗಿವೆ.‌

 ಈ ಸೋಜಿಗಕ್ಕೆ ಕೆ.ಪಿ.ಲಕ್ಷ್ಮಣ್ ಎಂಬ ಹುಡುಗ, ಈ ಹುಡುಗನೊಳಗೆ ಇರುವ ಲೋಕಜ್ಞಾನ, ಅರಿವಿನ ವಿಸ್ತಾರ, ಈ ಯಾವುದನ್ನೂ ಥಿಯರಿ ಮಾಡದೆ ಜೀವನ ಪ್ರವಾಹದಲ್ಲಿ ತಾನು ಕಂಡದ್ದನ್ನು ಗ್ರಹಿಸಿದ್ದನ್ನು ತಪದ ಕುಲುಮೆಯಲ್ಲಿ ಆಕಾರ ನೀಡುವ ದಾರ್ಶನಿಕತೆ ಕಾರಣವೆನ್ನಿಸುತ್ತದೆ. ಇವ ದಾರ್ಶನಿಕನೆ. ಈತನೊಡನೆ ಇರುವ ಅಸಾಧಾರಣ ಪ್ರತಿಭೆಯ ಕಲಾವಿದರೂ ಈ ದಿಕ್ಕಲ್ಲೆ ಇದ್ದಾರೆ. ಹಾಗಾಗೇ ಕರ್ನಾಟಕದ ಎಚ್ಚರದ ಪ್ರಜ್ಞೆ- ‘ಜಂಗಮ ಕಲೆಕ್ಟೀವ್ಸ್’ ಜೊತೆಗೆ ಒಂದಾಗುವ ಅಪೂರ್ವ ಕ್ರಿಯೆ ಜರುಗುತ್ತಿದೆ.

ಕಷ್ಟಪಟ್ಟು ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ- ‘ಜಂಗಮ ಕಲೆಕ್ಟೀವ್ಸ್’ ಆಂದೋಲನ ಇಡೀ ಸಮಾಜವನ್ನೇ ಕೂಡಿಸುತ್ತ ಹೆಜ್ಜೆ ಇಡುತ್ತಿರುವಾಗ, ತಳಸಮುದಾಯಗಳ ಹೋರಾಟ ಐಕ್ಯತೆ ಪಡೆಯುವಲ್ಲಿ ಏನು ಕೊರತೆ ಇದೆ? ಬಹುಶಃ ಎಲ್ಲಾ ಸಮಾಜಮುಖಿ ಹೋರಾಟಗಳು ‘ಜಂಗಮ ಕಲೆಕ್ಟೀವ್ಸ್’ನಂತೆ, ಸಾಂಸ್ಕೃತಿಕ ಕಣ್ಣುಗಳನ್ನೂ ಪಡೆಯಬೇಕಾಗಿದೆ. ಈ ಎಲ್ಲಾ ಮಾತುಗಳನ್ನು ನನ್ನ ಅರಿವಿನ ಮಿತಿಯಲ್ಲಿ ಹೇಳುತ್ತಿರುವೆ.

ಪ್ರಶ್ನೆ: ಒಳಮೀಸಲಾತಿಯು ದಲಿತ ಸಮುದಾಯವನ್ನು ಛಿದ್ರಗೊಳಿಸದಂತೆ ಮುನ್ನಡೆಯಬೇಕಾದ ದಾರಿ ಯಾವುದು?

ದೇಮ: ಮೇಲೆ ನೋಡಿ!

ಸಂದರ್ಶನ : ಡಾ. ರವಿಕುಮಾರ್ ಬಾಗಿ

More articles

Latest article