ತನ್ನನ್ನು ತಾನು ದೇವರು ಎಂದು ಕರೆದುಕೊಳ್ಳುವ ಬದಲು ತನ್ನ ಕೆಲಸದಲ್ಲಿ ಉತ್ತಮ ಸಾಧನೆ ಮಾಡುವವರನ್ನು ದೇವರೆಂದು ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಟಾಂಗ್ ನೀಡಿದ್ದಾರೆ.
ಮಣಿಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೆಲವರು ಶಾಂತವಾಗಿರುವುದಕ್ಕಿಂತ ಮಿಂಚಿನಂತೆ ಹೊಳೆಯಬೇಕು ಎಂದು ಭಾವಿಸುತ್ತಾರೆ. ಆದರೆ ಸಿಡಿಲು ಬಡಿದ ನಂತರ ಅವರು ಮೊದಲಿಗಿಂತ ಹೆಚ್ಚು ಕತ್ತಲೆಗೆ ಸರಿಯುತ್ತಾರೆ. ಮಿಂಚಿನಂತೆ ಹೊಳೆಯಬಾರದು ಎಂದು ಯಾರು ಹೇಳುತ್ತಿಲ್ಲ. ಕೆಲಸದ ಮೂಲಕ, ಪ್ರತಿಯೊಬ್ಬರೂ ಪೂಜ್ಯ ವ್ಯಕ್ತಿಯಾಗಬಹುದು. ಆದರೆ ನಾವು ಆ ಮಟ್ಟವನ್ನು ತಲುಪಿದ್ದೇವೆಯೇ ಎಂಬುದನ್ನು ಇತರರು ನಿರ್ಧರಿಸುತ್ತಾರೆ, ನಾವೇ ಅಲ್ಲ. ನಾವು ದೇವರಾಗಿದ್ದೇವೆ ಎಂದು ಘೋಷಣೆ ಮಾಡಬಾರದು ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.
ಮಣಿಪುರದಲ್ಲಿ ಪರಿಸ್ಥಿತಿ ಕಷ್ಟಕರವಾಗಿದೆ. ಸುರಕ್ಷತೆಯ ಭರವಸೆ ಇಲ್ಲ, ಅವರ ಭದ್ರತೆಯ ಬಗ್ಗೆ ಸ್ಥಳೀಯರಿಗೆ ಅನುಮಾನವಿದೆ. ವ್ಯಾಪಾರ ಅಥವಾ ಸಾಮಾಜಿಕ ಕಾರ್ಯಕ್ಕಾಗಿ ಅಲ್ಲಿಗೆ ಹೋದವರಿಗೆ ಪರಿಸ್ಥಿತಿ ಇನ್ನಷ್ಟು ಸವಾಲಾಗಿದೆ. ಆದರೆ ಅಂತಹ ಪರಿಸ್ಥಿತಿಗಳಲ್ಲೂ ಸಹ, ಸಂಘದ ಸ್ವಯಂಸೇವಕರು ದೃಢವಾಗಿ ನೆಲೆಸಿದ್ದಾರೆ. ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾಗವತ್ ಹೇಳಿದರು.
ಎನ್ಜಿಒಗಳು ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ. ಆದರೆ ಸಂಘವು ಏನು ಮಾಡಬಹುದೋ ಅದನ್ನು ಮಾಡಲು ಯಾವುದೇ ಆಯ್ಕೆಯನ್ನು ಬಿಡುತ್ತಿಲ್ಲ. ಸಂಘದ ಸದಸ್ಯರು ಸಂಘರ್ಷದಲ್ಲಿ ತೊಡಗಿರುವ ಎಲ್ಲಾ ಪಕ್ಷಗಳೊಂದಿಗೆ ಸಂವಾದದಲ್ಲಿ ತೊಡಗಿದ್ದಾರೆ. ಪರಿಣಾಮವಾಗಿ, ನಾವು ಅವರ ವಿಶ್ವಾಸ ಗಳಿಸಿದ್ದೇವೆ ಎಂದು ಅವರು ಹೇಳಿದರು
ಟಿವಿ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ, ತನ್ನ ತಾಯಿ ಬದುಕಿರುವವರೆಗೂ ತಮ್ಮ ಹುಟ್ಟು ಜೈವಿಕ ಎಂದು ನಂಬಿದ್ದರು. ತಾಯಿ ಮರಣದ ನಂತರ ಅವರು ದೇವರ ಕೃಪೆಯಿಂದ ಭೂಮಿಗೆ ಬಂದಿದ್ದಾರೆ ಎಂಬುದನ್ನು ಹೇಳಿಕೊಂಡಿದ್ದರು. ಇದರ ಜೊತೆ ಜೈವಿಕವಾಗಿ ಹುಟ್ಟಿದ್ದರೆ ಮನುಷ್ಯನಲ್ಲಿ ಇಷ್ಟೊಂದು ಅಚಲ ಶಕ್ತಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದರು.