ಕಾಫಿ ಸೀಮೆಯ ಬಲಾಢ್ಯರ ಒತ್ತುವರಿ ಮತ್ತು ಬಡವರ ಬದುಕು

Most read

ಕಾಫಿ ಸೀಮೆಯಾದ್ಯಂತ ನೂರಾರು ಎಕರೆಗಳ ಬೃಹತ್ ಒತ್ತುವರಿದಾರರೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು. ಇವರೇ MLA, MP, ಜಿಲ್ಲಾ ಪಂಚಾಯತ್ ಮೆಂಬರ್ ಗಳಾಗುವುದು. ಈ ಶ್ರೀಮಂತರೇ ಕಾಫಿ ಸೀಮೆಯಾದ್ಯಂತ ಎಲ್ಲಾ ಅಧಿಕಾರದ ಹುದ್ದೆಯಲ್ಲಿರುವುದುನಾಗರಾಜ ಕೂವೆ, ಪರಿಸರ ಬರಹಗಾರರು

ಬ್ರಿಟಿಷರ ಕಾಲದಲ್ಲಿ ಮಲೆನಾಡಿನಲ್ಲಿ ಪ್ರಾರಂಭವಾದ ಕಾಫಿ ಪ್ಲಾಂಟೇಶನ್, ಕಾಫಿಗೆ ಮುಕ್ತ ಮಾರುಕಟ್ಟೆ ಬಂದ ಮೇಲೆ ಎಲ್ಲೆ ಮೀರಿ ವಿಸ್ತರಿಸಿತು. ಕಾಫಿ ಎಸ್ಟೇಟ್ ಗಳು ಗುಡ್ಡಗಳನ್ನೆಲ್ಲಾ ಆಹುತಿ ತೆಗೆದುಕೊಂಡವು. ರಾಸಾಯನಿಕ ಗೊಬ್ಬರಗಳಿಲ್ಲದೇ ಚೆನ್ನಾಗಿ ಫಸಲು ಕೊಡದ, ಅತೀ ಹೆಚ್ಚು ನೀರು ಬೇಡುವ ಬೆಳೆಯಿದು. ಅರೇಬಿಕಾ ತಳಿಯ ಗಿಡಗಳಿರುವ ಹಳೆಯ ತೋಟಗಳಲ್ಲಿ ನೆರಳಿಗೆ ಮರಗಳಿರುತ್ತಿದ್ದರೂ ಈಗ ಅದೆಲ್ಲಾ ನಾಶವಾಗಿದೆ. ಅರೇಬಿಕಾ ತೋಟಗಳು ರೋಬಸ್ಟ್ ಆಗಿ ಬದಲಾಗುತ್ತಾ ಅಲ್ಲಿನ ಮರಗಳೆಲ್ಲಾ ಟಿಂಬರ್ ಗೆ ಹೋಗಿದೆ/ಹೋಗುತ್ತಿದೆ. ಬೇಸಿಗೆಯಲ್ಲಿ ತೋಟಗಳಿಗೆ ನೀರು ಹಾಯಿಸಬೇಕಾದ್ದರಿಂದ ಹಳ್ಳ- ನದಿಗಳೆಲ್ಲಾ ಬರಿದಾಗುತ್ತಿವೆ. 

ವೈವಿಧ್ಯತೆ ಇಲ್ಲದ ಏಕಜಾತಿಯ ಕೃಷಿಯಿದು. ಮಲೆನಾಡಿನ ದೈನಂದಿನ ಬದುಕು ಮತ್ತು ಜೀವನೋಪಾಯ ಕಾಫಿಯ ಮೇಲೆಯೇ ಅವಲಂಬಿತವಾಗಿದೆ. ಪಶ್ಚಿಮ ಘಟ್ಟದ ಮಳೆಕಾಡುಗಳ ಈ ಪ್ರದೇಶದಲ್ಲಿ, ಕಾಫಿಯಷ್ಟು ಚೆನ್ನಾಗಿ ಬೇರೆ ಯಾವುದೇ ಬೆಳೆ ಬರದಿರುವುದರಿಂದ ಇಲ್ಲಿ ಕಾಫಿ ಅನಿವಾರ್ಯ.

ಹಿಂದೆಲ್ಲಾ ಕಾಫಿ ಸೀಮೆಯಾದ್ಯಂತ ಕರಾವಳಿ ಭಾಗಗಳಿಂದ ವಲಸೆ ಬಂದಿರುವ ತಳ ಸಮುದಾಯಗಳ ಜನರೇ ಅತೀ ಹೆಚ್ಚು ಕಾರ್ಮಿಕರು. ಈಗ ಆ ಜಾಗದಲ್ಲಿ ಅಸ್ಸಾಂ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಇತ್ಯಾದಿ ಹೊರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರಿದ್ದಾರೆ. ಬಹಳ ಹಿಂದೆ ಕರಾವಳಿಯಿಂದ ಬಂದು ಪ್ಲಾಂಟೇಶನ್ ಗಳ ಲೈನ್ ಮನೆಗಳಲ್ಲಿ ಇದ್ದವರು ನಿಧಾನಕ್ಕೆ ಸಮೀಪದ ಖಾಲಿ ಜಾಗಗಳಲ್ಲಿ ಸಣ್ಣ ಮನೆ ಕಟ್ಟಿಕೊಂಡಿದ್ದಾರೆ. ಇವತ್ತು ಮಕ್ಕಳಿಗೆ ಅಲ್ಪ ಸ್ವಲ್ಪ ಶಿಕ್ಷಣ ಕೊಡಿಸಿದ್ದಾರೆ. ಅದರಲ್ಲಿ ಹೆಚ್ಚಿನ ಯುವಜನರು ಸಣ್ಣ ಪುಟ್ಟ ಉದ್ಯೋಗಗಳನ್ನರಸಿ ಬೆಂಗಳೂರು, ಮಂಗಳೂರು ಸೇರಿದಂತೆ ನಗರಗಳನ್ನು ಸೇರಿ ಹೇಗೋ ಬದುಕು ತೆಗೆಯುತ್ತಿದ್ದಾರೆ. ಕೆಲವರು ಆಟೋ, ಗ್ಯಾರೇಜ್, ಅಂಗಡಿ, ಹೋಟೆಲ್ ಇತ್ಯಾದಿ ಸ್ವಯಂ ಉದ್ಯೋಗಗಳನ್ನು ಮಾಡುತ್ತಾ ಕಷ್ಟಗಳ ನಡುವೆಯೇ ಬದುಕು ಕಟ್ಟಿಕೊಂಡಿದ್ದಾರೆ. ಕೆಲವೇ ಕೆಲವರು ಇವತ್ತಿಗೂ ತಂದೆ-ತಾಯಿಗಳೊಂದಿಗೆ ಕಾಫಿ ಪ್ಲಾಂಟೇಶನ್ ಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ನಲವತ್ತು ಐವತ್ತು ವರ್ಷಗಳ ಈ ಬೆಳವಣಿಗೆಯ ನಡುವೆ ಇಲ್ಲಿರುವ ಕಾಫಿ ಎಸ್ಟೇಟ್‌ಗಳು ವೇಗವಾಗಿ ವಿಸ್ತರಣೆಗೊಳ್ಳುತ್ತಾ ಈಗ ಜಾಗವೇ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದು ತಲುಪಿದೆ. ಕೇವಲ 1% ಬಲಾಢ್ಯರೊಡನೆ 99% ಭೂಮಿಯಿದೆ.

ಇಲ್ಲಿನ ಸ್ಥಳೀಯ ಬಡವರಿಗೆ ಹಾಗೂ ನಲವತ್ತು ಐವತ್ತು ವರ್ಷಗಳಿಂದ ಇಲ್ಲಿ ಬಂದು ನೆಲೆಸಿರುವ ಕಾರ್ಮಿಕ ಕುಟುಂಬಗಳಿಗೆ, ಇವತ್ತು ಕೃಷಿ ಮಾಡಲು, ಬದುಕು ಕಟ್ಟಿಕೊಳ್ಳಲು ಸ್ವಲ್ಪವೂ ಭೂಮಿಯಿಲ್ಲ. ದುರಂತವೆಂದರೆ ಹೆಚ್ಚಿನವರಿಗೆ ಮನೆ ಕಟ್ಟಲು ಕೂಡಾ ಜಾಗವಿಲ್ಲ. ಎಲ್ಲೋ ಇರುವ ಚೂರು ಖಾಲಿ ಜಾಗದಲ್ಲಿ ಇವರು ಮನೆ ಕಟ್ಟಿದರೂ, ಅರಣ್ಯ ಇಲಾಖೆ ಅದನ್ನು ‘ಅಕ್ರಮ ನಿವೇಶನ’ ಎಂದು ಕೆಡವುತ್ತದೆ. ಅಲ್ಪಸ್ವಲ್ಪ ಗಿಡ ಹಾಕಿ ಜೀವನೋಪಾಯಕ್ಕೆ ತೋಟ ಮಾಡಿದರೂ, ಅರಣ್ಯಾಧಿಕಾರಿಗಳು ಅದನ್ನು ಕಡಿದು ಹಾಕುತ್ತಾರೆ. ಈ ಮಧ್ಯೆ ದೊಡ್ಡವರ ಒತ್ತುವರಿ, ಅಕ್ರಮ ಟಿಂಬರ್ ಸಾಗಾಣಿಕೆ, ರೆಸಾರ್ಟ್, ಕಳ್ಳಬೇಟೆ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಅದನ್ನು ಮಾತ್ರ ಅರಣ್ಯ ಇಲಾಖೆ ಪ್ರಶ್ನಿಸುವುದೇ ಇಲ್ಲ. ಬಡವರ ಮೇಲೆ ತನ್ನೆಲ್ಲಾ ಕಾನೂನುಗಳ ಪ್ರಯೋಗ ಮಾಡುತ್ತಾ ಅವರನ್ನು ಹಿಂಸಿಸುತ್ತಿದೆ.

ಕಾಫಿ ಸೀಮೆಯಾದ್ಯಂತ ನೂರಾರು ಎಕರೆಗಳ ಬೃಹತ್ ಒತ್ತುವರಿದಾರರೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು. ಇವರೇ MLA, MP, ಜಿಲ್ಲಾ ಪಂಚಾಯತ್ ಮೆಂಬರ್ ಗಳಾಗುವುದು. ಈ ಶ್ರೀಮಂತರೇ ಕಾಫಿ ಸೀಮೆಯಾದ್ಯಂತ ಎಲ್ಲಾ ಅಧಿಕಾರದ ಹುದ್ದೆಯಲ್ಲಿರುವುದು. ಇವರೆಲ್ಲಾ ಪಕ್ಷಾತೀತವಾಗಿ ಇವತ್ತು ‘ಒತ್ತುವರಿ  ತೆರವು ಮಾಡಬೇಡಿ’ ಎಂದು ಹೇಳುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಬಡವರ ಮೇಲಿನ ಕಾಳಜಿಯೆಂದು ನಟಿಸುತ್ತಿದ್ದಾರೆ. ಈ ಮಧ್ಯೆ ಕೆಲವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ‘ಬಡವರ ಪರ’ ಎಂಬ ನಕಲಿ ಮುಖವಾಡ ತೊಟ್ಟಿದ್ದಾರೆ.

ನಮಗೆ ಮನೆ ಕಟ್ಟಲು ಜಾಗ ಕೊಡಿ, ಕೃಷಿ ಮಾಡಲು ಭೂಮಿ ಕೊಡಿ ಎಂದು ಸಾವಿರಾರು ವಸತಿ ರಹಿತರು ಹಲವು ವರ್ಷಗಳಿಂದ ಕೇಳುತ್ತಿದ್ದಾರೆ. ಈ ಬೇಡಿಕೆ ತುಂಬಾ ನ್ಯಾಯಯುತವಾಗಿದೆ. ಅವರಿಗೆ ಮನೆಕಟ್ಟಲು ಜಾಗ ಕೊಡಲು ಸರ್ಕಾರದ ಬಳಿ ಕಂದಾಯ ಭೂಮಿಯೇ ಇಲ್ಲ. ಅಷ್ಟರಮಟ್ಟಿಗೆ ಬಲಾಢ್ಯರ ಒತ್ತುವರಿಯಿದೆ. ಈ ಸಮಸ್ಯೆಯ ಪರಿಹಾರಕ್ಕೆ ದೊಡ್ಡ ಒತ್ತುವರಿ ತೆರವು ಮಾತ್ರ ಪರಿಹಾರ.

ಮಲೆನಾಡೆಂದರೆ ಕೆಲವೇ ಪ್ಲಾಂಟರ್‌ ಗಳಲ್ಲ, ಸಹಸ್ರಾರು ವಸತಿ ರಹಿತರೂ ಇಲ್ಲಿದ್ದಾರೆ. 

ಕೃಷಿ ಕೂಲಿ ಕಾರ್ಮಿಕರ ಜೊತೆಗೆ ಕಾಫಿ ಸೀಮೆ ಹಾಗೂ ಮಲೆನಾಡಿನಾದ್ಯಂತ ಮೂವತ್ತು ನಲವತ್ತು ವರ್ಷಗಳಿಂದ ಎರಡ್ಮೂರು ಎಕರೆ ಕೃಷಿ ಮಾಡಿಕೊಂಡು ಬದುಕುತ್ತಿರುವವರಿದ್ದಾರೆ. ಇವರಲ್ಲಿ ಹೆಚ್ಚಿನವರ ಸಾಗುವಳಿಗೆ ದಾಖಲೆಗಳಿಲ್ಲ. ಇಂತವರಿಗೆ ಆ ಭೂಮಿಯನ್ನು ಮಂಜೂರು ಮಾಡಬೇಕಿದೆ. ಅದಕ್ಕೆ ಅರಣ್ಯ-ಕಂದಾಯ ಭೂಮಿಯ ಜಂಟಿ ಸರ್ವೆಯಾಗಬೇಕಿದೆ. ಈಗಿನ ಕಾನೂನುಗಳ ಪ್ರಕಾರ ನೂರು ಎಕರೆ ಜಮೀನಿದ್ದವರು ಮಾಡಿದರೂ ಒತ್ತುವರಿ, ಏನೂ ಜಾಗವೇ ಇಲ್ಲದವರು ಸಾಗುವಳಿ ಮಾಡಿದರೂ ಒತ್ತುವರಿ. ಇದು ಮಲೆನಾಡಿನಲ್ಲಿ ಬಹಳ ಸಮಸ್ಯೆ ಸೃಷ್ಟಿಸಿದೆ. ಒತ್ತುವರಿ ತೆರವು ಎಂದೊಡನೆ ಇವರೆಲ್ಲಾ ಸಹಜವಾಗಿ ಆತಂಕಿತರಾಗುತ್ತಾರೆ. ಮಲೆನಾಡಿನಲ್ಲಿ ವಸತಿ ರಹಿತರು, ಭೂ ರಹಿತರು ಮತ್ತು ಜೀವನೋಪಾಯಕ್ಕೆ ಮಾಡಿದ ಒತ್ತುವರಿ ಸಮಸ್ಯೆಗಳನ್ನು ಮೊದಲು ಬಗೆಹರಿಸಬೇಕಿದೆ.

ಮಲೆನಾಡಿನಾದ್ಯಂತ ಎಲ್ಲೆಡೆ ಬಲಾಢ್ಯರ ಒತ್ತುವರಿ, ಅದನ್ನು ಬಿಟ್ಟರೆ ಅರಣ್ಯ ಪ್ರದೇಶ. ಎಲ್ಲೂ ಕಂದಾಯ ಭೂಮಿಯಿಲ್ಲ. ಕಾಫಿ ಪ್ಲಾಂಟೇಶನ್ ಗಳ ಒತ್ತುವರಿ ತೆರವುಗೊಳಿಸಿದರೆ ಕಂದಾಯ ಭೂಮಿ ಪುನಃ ಸರ್ಕಾರಕ್ಕೆ ಸಿಗುತ್ತದೆ. ಅದನ್ನು ವಸತಿ ಮತ್ತು ಭೂರಹಿತರ ಸಮಗ್ರ ಪಟ್ಟಿ ತಯಾರಿಸಿ ಅವರಿಗೆ ಹಂಚಬೇಕು. ಹಾಗೆಯೇ ಸಣ್ಣ ಹಿಡುವಳಿದಾರರ ಸಾಗುವಳಿಯನ್ನು ಮಂಜೂರು ಮಾಡಬೇಕು. ಈ ಮಂಜೂರಾತಿಯಲ್ಲಿ  5 ಎಕರೆಯೊಳಗಿನದು ಮಾತ್ರ ಆಗಿರುವಂತೆ ಹಾಗೂ ಅಕ್ರಮ,  ಲೋಪಗಳು ಸಂಭವಿಸದಂತೆ ನೋಡಿಕೊಳ್ಳ ಬೇಕಾದುದು ಅತೀ ಅಗತ್ಯ.

ಇವತ್ತು ಮಲೆನಾಡಿನಾದ್ಯಂತ ಕಾಡು ಉಳಿಸಬೇಕೆಂಬ ಮಾತೇ ಜನರಿಗೆ ಸಿಟ್ಟು ತರಿಸುತ್ತದೆ. ಸ್ಥಳೀಯರಿಗೆ ಪರಿಸರ ಸಂರಕ್ಷಣೆಯ ಬಗೆಗೆ ತೀವ್ರ ಅಸಹನೆಯಿದೆ. ಇದಕ್ಕೆ ಇಲ್ಲಿಯವರೆಗಿನ ಸಂರಕ್ಷಣೆಯ ಮಾದರಿಗಳು, ಅರಣ್ಯ ಇಲಾಖೆಯ ನಡವಳಿಕೆಗಳೇ ಕಾರಣ. ರಾಷ್ಟ್ರೀಯ ಉದ್ಯಾನವನ, ವನ್ಯಜೀವಿಧಾಮ, ಸಂರಕ್ಷಿತ ಪ್ರದೇಶ ಮೊದಲಾದವುಗಳ ಹೆಸರಿನಲ್ಲಿ ಜನರನ್ನು ಕಾಡುಗಳಿಂದ ಹೊರಹಾಕಿರುವುದು, ಮಾನವ ಮತ್ತು ವನ್ಯಜೀವಿಗಳ ನಡುವೆ ಇದ್ದ ಅಂತರ್ ಸಂಬಂಧಗಳನ್ನು ಕಡಿದು ಹಾಕಿದೆ. ಅಲ್ಲದೇ ಜನರನ್ನು ಕಾಡುಗಳಿಂದ ಹೊರಗಟ್ಟಿದ ಸಂರಕ್ಷಣೆ ಅವರ ಬದುಕುವ ಹಕ್ಕನ್ನು ಕಸಿದಿದೆ. ತಲೆತಲಾಂತರದಿಂದ ನಿಸರ್ಗದ ಮಧ್ಯೆ ಬದುಕುತ್ತಿರುವ ಮಲೆನಾಡಿನ ಜನರನ್ನು ಪರಿಸರ ಸಂರಕ್ಷಣೆಯಲ್ಲಿ ಒಳಗೊಂಡರೆ ಸಂರಕ್ಷಣೆಯ ಮಹತ್ವ ಅವರಿಗೂ ಅರ್ಥವಾಗುತ್ತದೆ. ಆಗ ಕಾಡು ಉಳಿಸುವ ಕೆಲಸಕ್ಕೆ ಅವರ ಸಹಮತವೂ ಸಿಗಲಿದೆ. ಇದಕ್ಕೆ ಮಾಧವ ಗಾಡ್ಗೀಳ್ ವರದಿಯ ಬಗೆಗೆ ವ್ಯಾಪಕವಾಗಿ ಚರ್ಚೆಗಳು ಹುಟ್ಟಿಕೊಂಡು, ಅದರ ಅನುಷ್ಠಾನ ಸಾಧ್ಯವಾಗಬೇಕು. ಪರಿಸರ ಸಂರಕ್ಷಣೆ ಮತ್ತು ಬಡವರ ಬದುಕುವ ಹಕ್ಕು ಶ್ರೀಮಂತರ ಸ್ವಾರ್ಥಗಳ ನಡುವೆ ಕಳೆದು ಹೋಗದಿರಲಿ.

ನಾಗರಾಜ ಕೂವೆ

ಶೃಂಗೇರಿಯ BEAS Centre ನ ಸಂಸ್ಥಾಪಕರಾದ ಇವರು ಈ ಸಂಸ್ಥೆಯ ಮೂಲಕ ಪರಿಸರ ಸಂರಕ್ಷಣೆಯ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ


ಇದನ್ನೂ ಓದಿ http://‘ಹಹವಾಗುಣ ಬದಲಾವಣೆ’ ಇವತ್ತು ಮನೆಮಾತಾಗಿದೆ! https://kannadaplanet.com/climate-change-is-a-household-word-today/

More articles

Latest article