ಚಾಮುಂಡೇಶ್ವರಿ ಪ್ರಾಧಿಕಾರ ಸಭೆ ಕಾನೂನಾತ್ಮಕವಾಗಿ ನಡೆಯುತ್ತಿದೆ: ಸಿಎಂ ಸಿದ್ದರಾಮಯ್ಯ

Most read

ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಲು ಮೈಸೂರಿಗೆ ಇಂದು ಮಂಗಳವಾರ ಆಗಮಿಸಿದ್ದಾರೆ. ಅದಕ್ಕೂ ಮುನ್ನ ಅವರು ಮೈಸೂರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಮಾಡಿದ್ದಾರೆ.

ಈ ಸಭೆಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಯದುವಂಶದ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಪ್ರಾಧಿಕಾರದ ಸಭೆಯನ್ನು ಕಾನೂನಾತ್ಮಕವಾಗಿ ಮಾಡುತ್ತಿದ್ದೇನೆ. ಯಾರದ್ದೋ ಹೇಳಿಕೆ ಆಧರಿಸಿ ಸಭೆ ಮಾಡಲು ಆಗುವುದಿಲ್ಲ. ಸಭೆ ಮುಂದೂಡಲು ಸಾಧ್ಯವಿಲ್ಲ ಎಂದರು. ಯದುವೀರ್ ಹೇಳಿಕೆ ಮುಖ್ಯವೋ ಕಾನೂನು ಮುಖ್ಯವೋ? ನಾನು ಕಾನೂನು ಪ್ರಕಾರವೇ ಇವತ್ತಿನ ಸಭೆ ಮಾಡುತ್ತಿದ್ದೇನೆ. ಕೋರ್ಟ್​​​ನಲ್ಲಿ ತಡೆಯಾಜ್ಞೆ ತೆರವು ಆಗಿದ್ದಕ್ಕೆ ಸಭೆ ಮಾಡುತ್ತಿದ್ದೇನೆ ಎಂದರು.

ಮುಡಾ ಮಾಜಿ ಆಯುಕ್ತ ದಿನೇಶ್ ಅಮಾನತು ವಿಚಾರ ಗೊತ್ತಿಲ್ಲ. 2009ರ ಹಿಂದಿನ ಬಡಾವಣೆಗೆ 50:50 ಬದಲಿ ನಿವೇಶನ ಅನ್ವಯ ಆಗುವುದಿಲ್ಲ. ಈ ಅಂಶ ಉಲ್ಲೇಖದ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಡಾ ಆದೇಶದ ಅಂಶಗಳು ಏನು ಎಂಬುದು ಸಹ ಗೊತ್ತಿಲ್ಲ. ಗೊತ್ತಿಲ್ಲದನ್ನು ನಾನು ಹೇಗೆ ವಿವರವಾಗಿ ಹೇಳಲಿ. ಆದೇಶದಲ್ಲಿ ಏನಿದೆ ಎಂದು ನೋಡಿಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.

ತಪ್ಪು ಮಾಡಿದವರ ಮೇಲೆ ಕ್ರಮ

ಮುಡಾ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನು ಸರ್ಕಾರ ಅಮಾನತು ಮಾಡಿರುವ ಬಗ್ಗೆ ಮಾತನಾಡಿ ನಗರಾಭಿವೃದ್ಧಿ ಇಲಾಖೆ ಅಮಾನತು ಮಾಡಿದೆ ಎಂದರು.

ಇಬ್ಬರೂ ಆಯುಕ್ತರ ಮೇಲೆ ಆರೋಪ ಕೇಳಿಬಂದಿತ್ತು. ಒಬ್ಬರನ್ನು ಮಾತ್ರ ಅಮಾನತು ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ ಆಯೋಗ ರಚಿಸಲಾಗಿದ್ದು, ಅವರ ವರದಿ ಪ್ರಕಾರ ಯಾರು ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ವಹಿಸಲಾಗುವುದು ಎಂದರು.

2009ರ ಹಿಂದಿನ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗುವುದಿಲ್ಲವಾದರೂ ಅನ್ವಯ ಮಾಡಿದ್ದಾರೆ ಎಂದು ಅಮಾನತು ಆದೇಶದಲ್ಲಿ ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ನಾನು ಸುಳ್ಳು ಹೇಳಿಲ್ಲ ಹಾಗೂ ತಪ್ಪು ಮಾಡಿಲ್ಲ

ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿಯ ದರ್ಶನ ಮಾಡುತ್ತಿದ್ದೇನೆ. ವಿರೋಧ ಪಕ್ಷದವರಿಗೆ ಸುಳ್ಳು ಹೇಳಿರುವುದು ರುಜುವಾತಾಗದೆ ಹೋದರೆ ಕಷ್ಟವಾಗುತ್ತದೆ ಎಂದು ಯೋಚಿಸುತ್ತಿದ್ದಾರೆ. ನಾನು ಸುಳ್ಳು ಹೇಳಿಲ್ಲ ಹಾಗೂ ತಪ್ಪು ಮಾಡಿಲ್ಲ ಎಂದರು.

ಮುಖ್ಯಮಂತ್ರಿಯನ್ನು ಶಾಸಕರು, ವರಿಷ್ಠರು ಆಯ್ಕೆ ಮಾಡುತ್ತಾರೆ

ಶಾಸಕ ಆರ್.ವಿ.ದೇಶಪಾಂಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಗಳಾಗಿರುತ್ತಾರೆ. ಸಿಎಂ ಒಪ್ಪಿಗೆ ಕೊಟ್ಟರೆ ಮುಖ್ಯಮಂತ್ರಿಯಾಗುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಮುಖ್ಯಮಂತ್ರಿಯನ್ನು ಶಾಸಕರು, ವರಿಷ್ಠರು ಆಯ್ಕೆ ಮಾಡುತ್ತಾರೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ವಿಳಂಬ: ಪರಿಶೀಲನೆ
ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ತಿಂಗಳಿನಿಂದ ಸಂಬಳ ದೊರೆತಿಲ್ಲದಿರುವ ಬಗ್ಗೆ ಮಾತನಾಡಿ ಸಂಬಳ ನೀಡಲಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

More articles

Latest article