ಕಾಡಾನೆಗಳ ಉಪಟಳದಿಂದ ನಲುಗಿರುವ ಹಾಸನ ಜಿಲ್ಲೆಯಲ್ಲಿ ಅರ್ಜುನ ಆನೆ ಸಾವಿನ ನಂತರ ಸ್ಥಗಿತಗೊಂಡಿದ್ದ ಸೆರೆ ಕಾರ್ಯಾಚರಣೆ ಈಗ ಬಿರುಸಿನ ಚಟುವಟಿಕೆಯನ್ನು ಮುಂದುವರೆಸಿದೆ. ಅಭಿಮನ್ಯು ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಲೂರು ತಾಲ್ಲೂಕಿನ ಚಿಕ್ಕೋಟೆ ಗ್ರಾಮದಲ್ಲಿ ಮತ್ತೊಂದು ಒಂಟಿಸಲಗವನ್ನು ಸೆರೆ ಹಿಡಿದಿದ್ದಾರೆ.
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚಿಕ್ಕೋಟೆ ಗ್ರಾಮದ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಭಯದ ವಾತಾವರಣ ನಿರ್ಮಿಸಿ ಜನರಿಗೆ ಉಪಟಳ ನೀಡುತ್ತಿದ್ದ ತಣ್ಣೀರ್ ಗುರುತಿಸುವ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಂಗಳವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು,.
ಬೆಳಿಗ್ಗೆ ಐದು ಗಂಟೆಗೆ ಕಾಡಾನೆ ಇರುವ ಜಾಗ ಪತ್ತೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಆನೆ ಸೆರೆಗೆ ಸಕಲ ಸಿದ್ದತೆ ನಡೆಸಿತ್ತು. ಸತತ ಹತ್ತು ಗಂಟೆಗೆ ಕಾರ್ಯಾಚರಣೆಯ ನಂತರ ಕಾಡಾನೆ ಸೆರೆ ಹಿಡಿದಿದ್ದಾರೆ. ಅರವಳಿಕೆ ಚುಚ್ಚುಮದ್ದು ನೀಡಿದ ನಂತರ ಪ್ರಜ್ಞೆ ತಪ್ಪದ ಆನೆ ಒಂದು ಗಂಟೆ ಕಾಲ ಮನಸ್ಸೋ ಇಚ್ಛೆ ಓಡಾಡಿದೆ. ನಂತರ ಕಾಫಿ ತೋಟದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ನಂತರ ಅದನ್ನು ಎಂಟು ಸಾಕಾನೆಗಳೊಂದಿಗೆ ಹರಸಾಹಸಪಟ್ಟು ರಸ್ತೆಗೆ ಕರೆ ತಂದು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ.