ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಮತ್ತೆ ಮುಂದೂಡಿದೆ.
ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸುತ್ತಿದ್ದು, ಇಂದು ಸಹ ಸುಧೀರ್ಘ ವಿಚಾರಣೆ ನಡೆಯಿತು. ನಂತರ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 9ರಂದು ನಿಗದಿ ಮಾಡಲಾಗಿದ್ದು, ಅಲ್ಲಿಯವರೆಗೂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್ ಸಿಕ್ಕಂತಾಗಿದೆ.
ಸಿಎಂ ಪರ ವಕೀಲರು ಮತ್ತು ಸಾಲಿಸಿಟರ್ ಜನರಲ್ ಸುದೀರ್ಘ ವಾದ ಮಂಡಿಸಿದ ಬಳಿಕ ಇಂದು ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಕೆ.ಜಿ.ರಾಘವನ್ ಅವರು ವಾದಮಂಡಿಸಿದರು.
ಮುಡಾ ಪ್ರಕರಣದ ಬಗ್ಗೆ ಸರ್ಕಾರವೇ ತನಿಖೆ ಅಗತ್ಯವಿದೆ ಎಂದು ಭಾವಿಸಿ ಆಯೋಗ ರಚಿಸಿದೆ. ಹೀಗಾಗಿ ರಾಜ್ಯಪಾಲರು 17ಎ ಅಡಿ ಅನುಮತಿ ನೀಡಿರುವುದು ಸರಿಯಿದೆ. ಈ ಹಂತದಲ್ಲಿ ತನಿಖೆಯನ್ನು ತಡೆಹಿಡಿಯಬಾರದು. ಸತ್ಯ ಅನಾವರಣಗೊಳ್ಳಲು ಅವಕಾಶ ನೀಡಬೇಕು ಎಂದು ರಾಘವನ್ ಮನವಿ ಮಾಡಿದರು.
ರಾಘವನ್ ಅವರು ಸುದೀರ್ಘ ವಾದ ಮಂಡಿಸಿದ ಬಳಿಕ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ. ಆದರೆ ಈ ವಾರಾಂತ್ಯ ಹಬ್ಬದ ರಜೆಗಳಿವೆ. ಹೀಗಾಗಿ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಿದರು.
ಎಜಿ ಶಶಿಕಿರಣ್ ಶೆಟ್ಟಿ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಹಬ್ಬಕ್ಕೂ ಮೊದಲೇ ವಾದಮಂಡನೆ ಮುಗಿಸಿಬಿಡಿ ಎಂದರು. ಆದರೆ ಅಡ್ವೊಕೆಟ್ ಜನರಲ್ ವಾದಿಸಿದ ಮೇಲೆ ನಾನು ವಾದಿಸುತ್ತೇನೆ. ಸೆಪ್ಟೆಂಬರ್ 9 ಅಥವಾ 21 ರಂದು ನಾನು ವಾದಿಸುತ್ತೇನೆ ಎಂದು ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು.
ಅಷ್ಟು ದೂರದ ದಿನಾಂಕವನ್ನು ನೀಡಲು ಸಾಧ್ಯವಿಲ್ಲ ಎಂದ ನ್ಯಾಯಮೂರ್ತಿಗಳು, ನೀವು ಬೇಗ ವಾದಮಂಡನೆ ಮುಗಿಸಬೇಕು. ವಿಚಾರಣಾ ನ್ಯಾಯಾಲಯದ ಕಲಾಪ ಬಹಳ ಕಾಲ ಮುಂದೂಡುವುದು ಸೂಕ್ತವಲ್ಲ ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದರು ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೂ ಸೆಪ್ಟೆಂಬರ್ 9ರ ವರೆಗೆ ತಡೆ ನೀಡಿದರು.