ಭಾರತೀಯ ಬಂಡವಾಳ ಮಾರುಕಟ್ಟೆ ನಡೆದು ಬಂದ ದಾರಿ

Most read

ಆರಂಭದ ಹಂತದಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳು ಮುಂಬೈ, ಕಲ್ಕತ್ತಾ ಮತ್ತು ಮದರಾಸು ನಗರಗಳನ್ನು ಕೇಂದ್ರವಾಗಿಸಿಕೊಂಡು ತಮ್ಮ ವ್ಯಾಪಾರ ವಹಿವಾಟುಗಳನ್ನು ಆರಂಭಿಸಿದವು. ಒಂದು ಹಂತದಲ್ಲಿ ವ್ಯಾಪಾರ ವಹಿವಾಟುಗಳು ಕಲ್ಕತ್ತಾದಿಂದ ಮುಂಬೈಗೆ ವರ್ಗಾವಣೆಯಾಗಿರುವುದು ಕಂಡು ಬರುತ್ತದೆ. ಬಹುಪಾಲು ಗುಜರಾತಿಗಳು ಮತ್ತು ಮಾರ್ವಾಡಿ ಜನರು ವ್ಯಾಪಾರ, ವಾಣಿಜ್ಯ ಮತ್ತು ಉದ್ದಿಮೆ ವಲಯಗಳಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಇದಕ್ಕೆ ಕಾರಣವಿರಬಹುದು ಎನ್ನುವುದು ನನ್ನ ಅಭಿಪ್ರಾಯವಾಗಿದೆ-ಡಾ. ಉದಯ ಕುಮಾರ ಇರ್ವತ್ತೂರು

ಆರಂಭಿಕ ಹಂತದಲ್ಲಿ ಇಂಗ್ಲೆಂಡಿನ ಉದ್ದಿಮೆಗಳಿಗೆ ಕಚ್ಚಾ ಸಾಮಾಗ್ರಿಗಳನ್ನು ಪೂರೈಸುವ ಮಾರುಕಟ್ಟೆಯಾಗಿದ್ದ ಭಾರತೀಯ ಉಪಖಂಡದಲ್ಲಿ, ಮಾರುಕಟ್ಟೆಯನ್ನು ನಿರ್ವಹಿಸಲು ಸ್ಥಳೀಯ ವರ್ತಕರ ಅಗತ್ಯವಿತ್ತು. ಮಾರುಕಟ್ಟೆಯ ಅತ್ಯಂತ ಕೆಳಹಂತದಲ್ಲಿ ಸಂಗ್ರಾಹಕರಾಗಿ, ಮದ್ಯವರ್ತಿಗಳಾಗಿ, ದಲ್ಲಾಳಿಗಳಾಗಿ ಸ್ಥಳೀಯ ವರ್ತಕರು ಮತ್ತು ಇದ್ದುದರಲ್ಲಿ ವ್ಯಾಪಾರದ ನೀತಿ ನಿಯಮಗಳನ್ನು ಬಲ್ಲ ಗುಜರಾತ್, ರಾಜಸ್ಥಾನ ಮತ್ತು ದಕ್ಷಿಣದ ಆಂಧ್ರಪ್ರದೇಶದ ತಮಿಳುನಾಡು ಮೂಲದ ವ್ಯಾಪಾರಿ ಕೌಟುಂಬಿಕ ಹಿನ್ನಲೆಯ ಒಂದು ವರ್ಗ ಸಕ್ರಿಯವಾಯಿತು. ಮುಂದೆ ವ್ಯಾಪಾರ ವಹಿವಾಟು ವಿಸ್ತರಿಸಿದಂತೆ, ಈ ಕೆಳಹಂತದಲ್ಲಿದ್ದ ವರ್ಗವೂ ತಮ್ಮ ಸ್ಥಿತಿಗತಿಗಳನ್ನು ಸುಧಾರಿಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಾ ಬಂದದ್ದನ್ನು ನಾವು ಗಮನಿಸಬಹುದು. ಹಲವಾರು ಚಾರಿತ್ರಿಕ, ರಾಜಕೀಯ, ಆರ್ಥಿಕ ಕಾರಣಗಳ ಪರಿಣಾಮವಾಗಿ ಭಾರತದಲ್ಲಿಯೂ ವ್ಯಾಪಾರ ನಿಧಾನವಾಗಿ ಉತ್ಪಾದನೆ, ಕೈಗಾರಿಕೆ ಬೇರು ಬಿಡಲಾರಂಭಿಸಿತು. ಹೀಗೆ ಹೊಸ ಉತ್ಪಾದನಾ ವ್ಯವಸ್ಥೆ, ಕೈಗಾರಿಕೆಗಳು ಬೆಳೆದಂತೆ ಅವುಗಳಿಗೆ ಪೂರಕವಾಗಿ ಹಣಕಾಸು, ಸಾರಿಗೆ ಸಂಪರ್ಕ, ವಿಮೆ, ವ್ಯಾಪಾರ ನಿಯಂತ್ರಣ ಕಾನೂನು ಸೇವೆಗಳೂ ಹೀಗೆ ಅಗತ್ಯಕ್ಕೆ ತಕ್ಕಂತೆ ಬೆಳೆಯುತ್ತಾ ಬಂದುದನ್ನು ನಾವು ಮನಗಾಣಬಹುದು. ಅದರಲ್ಲಿಯೂ ವಿಶ್ವದ ಮೊದಲ ಮತ್ತು ಎರಡನೆ ಮಹಾಯುದ್ಧಗಳು ವಸಾಹತುಗಳು ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳ ನಡುವಿನ ಅಧಿಕಾರದ ಸಮೀಕರಣವನ್ನು ಮರು ನಿರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುವುದು ಎಂದು ಹೇಳಬಹುದು.

ಆರಂಭದ ಹಂತದಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳು ಮುಂಬೈ, ಕಲ್ಕತ್ತಾ ಮತ್ತು ಮದರಾಸು ನಗರಗಳನ್ನು ಕೇಂದ್ರವಾಗಿಸಿಕೊಂಡು ತಮ್ಮ ವ್ಯಾಪಾರ ವಹಿವಾಟುಗಳನ್ನು ಆರಂಭಿಸಿದವು. ಒಂದು ಹಂತದಲ್ಲಿ ವ್ಯಾಪಾರ ವಹಿವಾಟುಗಳು ಕಲ್ಕತ್ತಾದಿಂದ ಮುಂಬೈಗೆ ವರ್ಗಾವಣೆಯಾಗಿರುವುದು ಕಂಡು ಬರುತ್ತದೆ. ಬಹುಪಾಲು ಗುಜರಾತಿಗಳು ಮತ್ತು ಮಾರ್ವಾಡಿ ಜನರು ವ್ಯಾಪಾರ, ವಾಣಿಜ್ಯ ಮತ್ತು ಉದ್ದಿಮೆ ವಲಯಗಳಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಇದಕ್ಕೆ ಕಾರಣವಿರಬಹುದು ಎನ್ನುವುದು ನನ್ನ ಅಭಿಪ್ರಾಯವಾಗಿದೆ.

ವ್ಯಾಪಾರ ವಹಿವಾಟಿನ ವಿಕಸನದ ಒಟ್ಟಿಗೆಯೇ ಬಂಡವಾಳ ವಹಿವಾಟಿನ ಅಗತ್ಯವೂ ಅನಿವಾರ್ಯವಾಗಿ ಬೆಳೆಯುತ್ತಾ ಬಂದಿರುವುದು ಸಹಜವೂ ಆಗಿದೆ. ನಮ್ಮ ದೇಶದಲ್ಲಿ ವ್ಯಾಪಾರ ವಹಿವಾಟು ಮತ್ತು ಬಂಡವಾಳದ ಸಂಚಯನ ಮತ್ತು ವಿನಿಮಯದ ವಿಕಾಸನದ ಹಂತವನ್ನು ಸಾಮಾನ್ಯವಾಗಿ ಈ ಕೆಳಗಿನಂತೆ ಗುರುತಿಸಬಹುದು.

ಮುಂಬಯಿಯ ಷೇರು ವಿನಿಮಯ ಕೇಂದ್ರ

1830   – ಕಲ್ಕತ್ತಾದಲ್ಲಿ ಬಂಡವಾಳ ಪತ್ರ ವಿನಿಮಯ ಕೇಂದ್ರದ ಸ್ಥಾಪನೆ (ಸ್ಟಾಕ್ ಎಕ್ಸ್‌ಚೇಂಜ್‌)

1850   – ಈಸ್ಟ್ ಇಂಡಿಯಾ ಕಂಪೆನಿ ಮತ್ತು ಬ್ಯಾಂಕುಗಳ ಷೇರುಗಳ ವ್ಯಾಪಾರ ವಹಿವಾಟಿನ ಆರಂಭ.

1850   – ಕಂಪೆನಿ ಷೇರುದಾರರ ಷೇರು ಹೂಡಿಕೆಯ ಋಣಭಾರವನ್ನು ಹೂಡಿಕೆಯ ಮೊತ್ತಕ್ಕಷ್ಟೇ ಮಿತಿಗೊಳಿಸುವ ಕಂಪೆನಿ ಕಾಯಿದೆಯ ಅನುಷ್ಠಾನ.

1861    – ಅಮೇರಿಕಾದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ರೂಪದಲ್ಲಿ ಅಂತಃಕಲಹ ಉಂಟಾಗುವ ಮೂಲಕ ಯುರೋಪಿಗೆ ಅಲ್ಲಿಂದ ಪೂರೈಕೆಯಾಗುತ್ತಿದ್ದ ಹತ್ತಿಯ ಕಚ್ಚಾ ಸಾಮಾಗ್ರಿಯ ವ್ಯತ್ಯಯ ಉಂಟಾಯಿತು. ಪರಿಣಾಮ ಯುರೋಪಿನ ಜವಳಿ ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ಮಾಲನ್ನು ಭಾರತದಂತಹ ವಸಾಹತಿನ ಇತರ ಭಾಗಗಳಿಂದ ಪೂರೈಸಿಕೊಳ್ಳುವ ಅಗತ್ಯ ಉಂಟಾಯಿತು. ಅರ್ಥಾತ್ ಭಾರತದಲ್ಲಿ ವ್ಯಾಪಾರ ವಹಿವಾಟಿನಲ್ಲಿ ಏರಿಕೆಯಾಗಲು ಕಾರಣವಾಯಿತು.

1875   – ಮುಂಬಯಿಯ ದಲಾಲ್ ರಸ್ತೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದ ಸ್ಥಾಪನೆ.

1869   – ಸುಯೇಜ್ ಕಾಲುವೆ ಕಾರ್ಯಾರಂಭ ಮಾಡಿದ ಕಾರಣ ಭಾರತದಿಂದ ಅಮೇರಿಕಾಕ್ಕೆ ಮತ್ತು ಇಂಗ್ಲೆಂಡ್ ದೇಶಕ್ಕೆ ರಫ್ತಿನ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಏರಿಕೆ.

1925   – ಬೊಂಬೇ ಬಂಡವಾಳ ಪತ್ರ (ಒಡಂಬಡಿಕೆ) ನಿಯಂತ್ರಣ ಕಾಯಿದೆ ಜಾರಿ.

1939   – ಬಂಡವಾಳ ಸಂಗ್ರಹಕ್ಕೆ ಸಂಬಂಧಿಸಿದ ಬಂಡವಾಳ ನೀಡಿಕೆ ನಿಯಂತ್ರಣಾಧಿಕಾರಿಯ ಹುದ್ದೆಯನ್ನು ಭಾರತೀಯ ರಕ್ಷಣಾ ಕಾನೂನಿನ ಅನ್ವಯ ಸೃಷ್ಟಿಸಲಾಯಿತು. ಇದರ ಮುಖ್ಯ ಉದ್ದೇಶವಿದ್ದದ್ದು ದೇಶದಲ್ಲಿ ಲಭ್ಯವಿರುವ ಉಳಿತಾಯವನ್ನು ವಿಶ್ವಯುದ್ಧಕ್ಕೆ ಭೂಮಿಕೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಕ್ರೋಢೀಕರಿಸುವುದಾಗಿತ್ತು.

1947   – ಭಾರತೀಯ ರಕ್ಷಣಾ ಕಾಯ್ದೆಯ ಅಡಿಯಲ್ಲಿ ಜಾರಿ ಮಾಡಲಾದ ಬಂಡವಾಳ ನೀಡಿಕೆ ನಿಯಂತ್ರಣ ಪ್ರಕ್ರಿಯೆಯನ್ನು ಬಂಡವಾಳ ನೀಡಿಕೆಯಡಿಯಲ್ಲಿ ತರಲಾಯಿತು.

1951 – ಬಂಡವಾಳ ಪತ್ರ ಒಡಂಬಡಿಕೆ (ನಿಯಂತ್ರಣ) ಕಾಯ್ದೆಯ ಅನುಷ್ಠಾನ (1951 ರಲ್ಲಿ ಎ.ಡಿ ಗೋರಾವಾಲ ಸಮಿತಿಯು ಮಾಡಿದ ಶಿಫಾರಸಿನಂತೆ)

1988   – ಭಾರತೀಯ ಷೇರು (ವಿನಿಮಯ) ನಿಯಂತ್ರಣ ಆಡಳಿತ ಮಂಡಳಿಯ ಸ್ಥಾಪನೆ.

1992   – ಬಂಡವಾಳ ನೀಡಿಕೆ (ನಿಯಂತ್ರಣ) ಕಾಯಿದೆ 1947ನ್ನು ಹಿಂತೆಗೆದುಕೊಳ್ಳುವ ಮೂಲಕ ಉದ್ದಿಮೆ ವ್ಯವಹಾರಗಳಿಗೆ ಬಂಡವಾಳ ಸಂಗ್ರಹಿಸಲು ಅದುವರೆಗೆ ಇದ್ದ ಎಲ್ಲ ನಿಯಂತ್ರಣಗಳಿಂದ ಮುಕ್ತವಾಗಿಸುವ ಕ್ರಮ.

1992   – 1988 ರಲ್ಲಿ ಸ್ಥಾಪಿಸಲಾದ ಭಾರತೀಯ ಷೇರು ವಿನಿಮಯ ನಿಯಂತ್ರಣ (ಆಡಳಿತ) ಮಂಡಳಿಗೆ ಬಂಡವಾಳ ಮಾರುಕಟ್ಟೆ ನಿಯಂತ್ರಿಸುವ ಶಾಸನಾತ್ಮಕ ಅಧಿಕಾರವನ್ನು ನೀಡಲಾಯಿತು.

1992   – ರಾಷ್ಟ್ರೀಯ ಷೇರು ವಿನಿಮಯ (ನಿಯಂತ್ರಣ) ಮಂಡಳಿ ಅಸ್ತಿತ್ವಕ್ಕೆ.

ಮುಂಬಯಿ ಷೇರು ಮಾರುಕಟ್ಟೆ:

ಹೇಳಿಕೇಳಿ ಮುಂಬಯಿಯ ಮಹಾನಗರ ನಮ್ಮ ದೇಶದ ಆರ್ಥಿಕ ರಾಜಧಾನಿ ಎಂದೇ ಪರಿಗಣಿತವಾಗಿದೆ. ಈ ಮಹಾನಗರದ ದಲಾಲ್ ರಸ್ತೆಯಲ್ಲಿರುವ 28 ಮಹಡಿಗಳ ಜೀಜಾಬಾಯಿ ಗೋಪುರ ಎನ್ನುವ ಗಗನ ಚುಂಬಿ ಕಟ್ಟಡದಲ್ಲಿರುವ ಮುಂಬೈ ಷೇರು ಮಾರುಕಟ್ಟೆ ಭಾರತೀಯ ಬಂಡವಾಳ ಮಾರುಕಟ್ಟೆಯ ಜೀವಾಳ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ದೇಶದ ಇತರ 20 ಪ್ರಮುಖ ಷೇರು ಮಾರುಕಟ್ಟೆಯೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡು ಕೆಲಸ ಮಾಡುವ ಮುಂಬಯಿ ಷೇರು ಮಾರುಕಟ್ಟೆ ದೇಶದ ವಾಣಿಜ್ಯ ಚಟುವಟಿಕೆಗಳಿಗೆ ಮೂಲ ಬಂಡವಾಳ ಮತ್ತು ಸಾಲ ಬಂಡವಾಳವನ್ನು ಒದಗಿಸಿಕೊಡುವ ಮೂಲಕ ಮಹತ್ವದ ಆರ್ಥಿಕ ಚಟುವಟಿಕೆಗಳಿಗೆ ನಿರಂತರ ಉತ್ತೇಜನ ನೀಡುವ ಕೆಲಸವನ್ನು ನಡೆಸುತ್ತಾ ಬಂದಿದೆ.

ನಾನು ಈ ಮೊದಲೇ ಹೇಳಿದಂತೆ ಷೇರು ಮಾರುಕಟ್ಟೆಯಲ್ಲಿ ನಡೆಯುವ ಷೇರುಗಳನ್ನು ಮತ್ತು ಸಾಲ ಪತ್ರಗಳ ಮಾರಾಟ ಮತ್ತು ಖರೀದಿಯನ್ನು ಮಧ್ಯವರ್ತಿಗಳ (ದಲ್ಲಾಳಿಗಳು) ಮೂಲಕ ನಿರ್ವಹಿಸಲಾಗುತ್ತದೆ. 1980 ರ ದಶಕದಲ್ಲಿ ನಡೆದ ಆರ್ಥಿಕ ಉದಾರೀಕರಣದ ವರೆಗೆ ಬೇರೆ ಬೇರೆ ಕಾರಣಗಳಿಂದ ವ್ಯಾಪಾರ, ವಾಣಿಜ್ಯ, ಬ್ಯಾಂಕಿಂಗ್, ಹಣಕಾಸು ನಿರ್ವಹಣೆಯ ನಿಕಟ ಪರಿಚಯವಿದ್ದ ಒಂದು ಸೀಮಿತ ಜನವರ್ಗ ಮಾತ್ರ ಇಲ್ಲಿನ ವಹಿವಾಟಿನಲ್ಲಿ ಭಾಗವಹಿಸುತ್ತಿತ್ತು. ಮಿಕ್ಕವರಿಗೆ ಷೇರು ಮಾರುಕಟ್ಟೆಯ ಬಗ್ಗೆ ಇದ್ದ ಜ್ಞಾನ, ಮಾಹಿತಿ ಮತ್ತು ಆಕರ್ಷಣೆ ಅಷ್ಟಕಷ್ಟೇ. ಸಾರಿಗೆ ಸಂಪರ್ಕವೂ ಹೆಚ್ಚು ಅಭಿವೃದ್ಧಿ ಹೊಂದಿರದ ದಿನಗಳಲ್ಲಿ ಮಾರುಕಟ್ಟೆ ಕುರಿತ ಸಾಕಷ್ಟು ಮಾಹಿತಿ ಕೂಡಾ ದೇಶದ ಇತರೆಡೆಗಳಲ್ಲಿ ಅಲಭ್ಯವಾಗಿದ್ದದ್ದು ಇದಕ್ಕೆ ಇನ್ನೊಂದು ಕಾರಣ. ಷೇರು ಮಾರುಕಟ್ಟೆಯ ಮಾರಾಟ ಮತ್ತು ಖರೀದಿಯಲ್ಲಿ ಗುಜರಾತ್ ಮೂಲದ ವ್ಯಾಪಾರಿಗಳ ಮತ್ತು ಮಧ್ಯವರ್ತಿಗಳ ಪ್ರಭಾವವೇ ಗಾಢವಾಗಿತ್ತು. ಷೇರು ಮಾರುಕಟ್ಟೆಯ ಎಲ್ಲ ಸೂಚನಾ ಪತ್ರಗಳು, ಮಾಹಿತಿಗಳು ಗುಜರಾತಿ ಭಾಷೆಯಲ್ಲಿಯೇ ಇರುತ್ತಿದ್ದುದು ಈ ವಿಷಯವನ್ನು ಸ್ಪಷ್ಟವಾಗಿಯೇ ತಿಳಿಸುತ್ತದೆ.

ಷೇರು ಪೇಟೆಯ ವ್ಯವಹಾರ

ಸಾಮಾನ್ಯವಾಗಿ ಜೀಜಾಬಾಯಿ ಗೋಪುರ ಮತ್ತು ಅದರ ಸುತ್ತಮುತ್ತ ಇರುವ ಬ್ರೋಕರ್‌ಗಳು, ಮಧ್ಯವರ್ತಿಗಳು ಮಾರುಕಟ್ಟೆ ಅವಧಿಯಲ್ಲಿ (ಸಾಮಾನ್ಯವಾಗಿ ಬೆಳಗ್ಗಿನಿಂದ ಅಪರಾಹ್ನ 2 ಗಂಟೆಯ ವರೆಗೆ) ವಹಿವಾಟು ನಡೆಸುತ್ತಿದ್ದರು. ಖರೀದಿಯ ಮತ್ತು ಮಾರಾಟದ ದರವನ್ನು ಮಾರುಕಟ್ಟೆಯೊಳಗಿನ ಒಂದು ನಿರ್ಧಿಷ್ಟ ಜಾಗದಲ್ಲಿ ಕೂಗಿ ಹೇಳಲಾಗುತ್ತದೆ. ಅಂತಹ ನಿರ್ಧಿಷ್ಟ ಜಾಗವನ್ನು “ಟ್ರೇಡಿಂಗ್ ರಿಂಗ್” ಎಂದು ಕರೆಯಲಾಗುತ್ತದೆ. ಸ್ವಲ್ಪ ಚೌಕಾಸಿ ನಡೆಸಿ ಅಂತಿಮವಾಗಿ ಖರೀದಿ ಮತ್ತು ಮಾರಾಟದ ಪ್ರಕ್ರಿಯೆ ಪೂರ್ಣವಾಗುತ್ತದೆ. ಆ ನಂತರ ಒಂದು ನಿಶ್ಚಿತ ಅವಧಿಯೊಳಗೆ ಷೇರು ಪತ್ರಗಳ ದಾಖಲೆಗಳನ್ನು ವರ್ಗಾವಣೆಗೆ ಅನುಮತಿಸುವ ಪತ್ರದೊಂದಿಗೆ ಮಾರಾಟ ಮಾಡಿದ ವ್ಯಕ್ತಿ, ಆತನಿಂದ ಷೇರು ಖರೀದಿಸಿದವನಿಗೆ ನೀಡಬೇಕಾಗುತ್ತದೆ. ಖರೀದಿ ಮಾಡಬಯಸುವವನು ಕೆಲವೊಮ್ಮೆ ಆಂಶಿಕವಾಗಿ ಅಥವಾ ಪೂರ್ಣವಾಗಿ ಷೇರು ಖರೀದಿಯ ಮೊತ್ತವನ್ನು ದಲ್ಲಾಳಿಗಳಿಗೆ ನೀಡುತ್ತಿದ್ದರು. ಆದರೆ ಷೇರು ಪತ್ರ ಮತ್ತು ಅದರ ವರ್ಗಾವಣೆ ಮಾಡಿಕೊಳ್ಳುವ ಮೊದಲು ಪೂರ್ಣ ಮೊತ್ತ ಸಂದಾಯ ಮಾಡಲೇ ಬೇಕಾಗುತ್ತದೆ. ಉದಾಹರಣೆಗೆ ಟಾಟಾ ಮೋಟರ್ಸ್ ಕಂಪೆನಿಯ ರೂ 500 ಬೆಲೆಯ ಷೇರು ಖರೀದಿ ಮಾಡಬಯಸುವ ವ್ಯಕ್ತಿ, ಒಬ್ಬ ಸೂಕ್ತ ದಲ್ಲಾಳಿಯಲ್ಲಿ ಅಗತ್ಯ ಪ್ರಮಾಣದ ಮೊತ್ತವನ್ನು ನೀಡಿ ಷೇರು ಖರೀದಿಸುವಂತೆ ಬೇಡಿಕೆ ಇಡುತ್ತಾನೆ/ಳೆ. ಹಾಗೆ ಬೇಡಿಕೆ ಇಡುವ ವೇಳೆ ಖರೀದಿದಾರ ತಾನು ಗರಿಷ್ಠ ಎಷ್ಟು ಬೆಲೆಗೆ ಖರೀದಿ ಮಾಡಲು ತಯಾರಿದ್ದೇನೆ ಎನ್ನುವುದನ್ನೂ ಹೇಳಬೇಕಾಗುತ್ತದೆ. ಒಂದು ವೇಳೆ ಮೊದಲು ಸೂಚಿಸಿದಂತೆ ರೂ 500ಕ್ಕೆ ಷೇರು ಮಾರಾಟ ಮಾಡುವವನು ದೊರೆತರೆ ಅಷ್ಟಕ್ಕೆ ವ್ಯಾಪಾರ ಅಂತಿಮವಾಗುತ್ತದೆ. ಕೆಲವೊಂದು ವೇಳೆ ಕೊಂಚ ಹೆಚ್ಚು ಅಥವಾ ಕಡಿಮೆಗೆ ದೊರಕಬಹುದು. ಮಾರುಕಟ್ಟೆಯಲ್ಲಿ ಷೇರಿನ ದರ ಆ ದಿನದ ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಬಿಸಿರುತ್ತದೆ. ಅಂದರೆ ನಮ್ಮ ಊರಲ್ಲಿ ಮಲ್ಲಿಗೆ ಹೂವಿನ ದರ ನಿಗದಿ ಆದ ಹಾಗೆ ಕೆಲವೊಂದು ಶುಭ ದಿನಗಳಂದು ಹೂವಿಗೆ ಬೇಡಿಕೆ ವಿಪರೀತವಿದ್ದರೆ ಮಲ್ಲಿಗೆ ತುಟ್ಟಿಯಾಗಿರುತ್ತದೆ. ಅದೇ ಶುಭವಲ್ಲದ ದಿನಗಳಲ್ಲಿ ಬೇಡಿಕೆ ಕಡಿಮೆ ಇದ್ದು ತೀರಾ ಕಡಿಮೆ ಬೆಲೆಗೆ ಲಭ್ಯವಿರುತ್ತದೆ. ಆದರೆ ಷೇರು ಬೆಲೆಯಲ್ಲಿ ವ್ಯತ್ಯಾಸವಾಗುವುದಕ್ಕೆ ಶುಭ, ಅಶುಭ ಗಳಿಗೆ ಕಾರಣವಲ್ಲ ಬದಲಿಗೆ ಆ ದಿನ ಮಾರುಕಟ್ಟೆಯ ಹಣಕಾಸಿನ ಪರಿಸ್ಥಿತಿ, ಹೂಡಿಕೆಯ ಅವಕಾಶಗಳು, ಸರಕಾರದ ನೀತಿ, ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಹಣದ ಹರಿವು ಮುಂತಾದ ಕಾರಣಗಳಿರುತ್ತದೆ.

ಷೇರುದಾರರ ದಾಖಲೆ ಸದಸ್ಯತ್ವದ ನೋಂದಣಿ ದಾಖಲೆ

ಸಾವಿರಾರು ಸಂಖ್ಯೆಯಲ್ಲಿರುವ ಷೇರುದಾರರು ಕಂಪನಿಗಳ ನಿಜವಾದ ಮಾಲಕರು. ಷೇರುದಾರರ ಅಥವಾ ಸದಸ್ಯರ ಕುರಿತು, ಅವರ ವಿಳಾಸ, ಬ್ಯಾಂಕ್ ವಿವರಗಳು, ಹೊಂದಿರುವ ಷೇರುಗಳು ಇತ್ಯಾದಿ ವಿವರಗಳಿರುವ ದಾಖಲೆಯನ್ನು ಕಂಪನಿ ಹೊಂದಿರುತ್ತದೆ. ಷೇರುಗಳನ್ನು ಮಾರಾಟ ಮಾಡಿದಾಗ ತನ್ನಲ್ಲಿರುವ ಷೇರಿನ ಒಡೆತನ ಖರೀದಿದಾರನಿಗೆ ವರ್ಗಾವಣೆಯಾಗುತ್ತದೆ. ಹೀಗೆ ವರ್ಗಾವಣೆ ಆದ ತಕ್ಷಣ ಕಂಪನಿಯ ದಾಖಲೆಗಳಲ್ಲಿ ಇದುವರೆಗೆ ಇದ್ದವರ ಬದಲಿಗೆ ಹೊಸದಾಗಿ ಷೇರು ಖರೀದಿಸಿದ ವ್ಯಕ್ತಿಯ ಹೆಸರು ನಮೂದಿಸಲ್ಪಡುತ್ತದೆ. ಮುಂದಿನ ಎಲ್ಲಾ ಲಾಭಾಂಶ ಮತ್ತು ಷೇರು ಸಂಬಂಧೀ ವ್ಯವಹಾರಗಳು ಅವರೊಂದಿಗೆ ನಡೆಯುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಷೇರು ಮಾರಾಟ ಮಾಡಿದ ಮೇಲೆಯೂ ಹಳೆಯ ಮಾಲಕನ ಹೆಸರೇ ಮುಂದುವರಿಯುದುಂಟು. ಉದಾಹರಣೆಗೆ ನಾನು (ಅಲ್ಪಾವಧಿಯಲ್ಲಿ ಲಾಭ ಗಳಿಸುವ ಉದ್ದೇಶದಿಂದ) ಒಂದು ವಾರದ ಹಿಂದೆ ಷೇರು ಖರೀದಿಸಿದೆ ಎಂದಿಟ್ಟುಕೊಳ್ಳೋಣ, ಮುಂದಿನ ಕೆಲದಿನಗಳಲ್ಲಿ ಅದನ್ನು ಮಾರಾಟ ಮಾಡಿ ಬಂದಷ್ಟು ಲಾಭ ಮಾಡಿಕೊಳ್ಳುವ ಉದ್ದೇಶವಿದ್ದಾಗ, ನನಗೆ ಲಾಭ ಮುಖ್ಯವಾಗುತ್ತದೆ ಹೊರತು ಷೇರಿನ ಮಾಲಕತ್ವ ಮುಖ್ಯವಾಗುವುದಿಲ್ಲ. ಈ ದಿನ ಷೇರಿನ ಬೆಲೆಯಲ್ಲಿ ಕೊಂಚ ಏರಿಕೆಯಾದ ತಕ್ಷಣ ನಾನು ಅದನ್ನು ಮಾರಿ ಬಿಡುತ್ತೇನೆ. ನನ್ನಿಂದ ಷೇರು ಖರೀದಿಸಿದ ವ್ಯಕ್ತಿ ಕೂಡಾ ನನ್ನಂತೆ ಮಾಡಿದರೆ ಕಂಪನಿಯ ದಾಖಲೆಗಳಲ್ಲಿ ಈ ಹಿಂದೆ ಷೇರು ಹೊಂದಿದ್ದ ವ್ಯಕ್ತಿಯ ಹೆಸರೇ ಇರುವ ಕಾರಣ ಕಂಪನಿಯಿಂದ ಹೋಗುವ ಎಲ್ಲ ಮಾಹಿತಿ, ಲಾಭಾಂಶ ಅವನಿಗೆ ಹೋಗುತ್ತದೆ. 

ಹಣ್ಣು ಕೊಯ್ಯುವವರು ಮತ್ತು ತೋಟ ಬೆಳೆಸುವವರು

ಷೇರುಗಳಲ್ಲಿ ಹೂಡಿಕೆ ಮಾಡುವವರಲ್ಲಿ ಎರಡು ರೀತಿ ಇದೆ.

1.ಅಲ್ಪಾವಧಿಯಲ್ಲಿ ಲಾಭ ಮಾಡಿಕೊಳ್ಳಬಯಸುವವರು.

2.ದೀರ್ಘಾವಧಿಯಲ್ಲಿ ಸಂಪತ್ತಿನ ಮೌಲ್ಯವರ್ಧಿಸಿಕೊಳ್ಳ ಬಯಸುವವರು.

ಉದಾಹರಣೆಗೆ ಈ ಹಿಂದೆ ರೂ.500ಕ್ಕೆ ಖರೀದಿಸಲಾದ ಟಾಟಾ ಮೋಟರ್ಸ್ ಕಂಪೆನಿಯ ಷೇರಿನ ಬೆಲೆ 550 ಅಥವಾ 600 ರೂಪಾಯಿಗೆ ಏರಿಕೆ ಆದ ತಕ್ಷಣ ಮಾರಾಟ ಮಾಡಿದರೆ ತಕ್ಷಣಕ್ಕೆ 50 ಅಥವಾ 100 ರೂಪಾಯಿ ಲಾಭವಾಗುತ್ತದೆ. ಹೀಗೆ ಷೇರುಗಳ ಬೆಲೆಯಲ್ಲಿ ಆಗುವ ಅಲ್ಪಾವಧಿಯ ಏರಿಳಿತವನ್ನು ಗಮನಿಸಿ ಲಾಭ ಮಾಡಿಕೊಳ್ಳುವವರದು ಒಂದು ವರ್ಗ.

ಇದನ್ನೂ ಓದಿ- ಬಂಡವಾಳ ಮಾರುಕಟ್ಟೆ ಎನ್ನುವ ಮಾಯಾಜಿಂಕೆ

ಇನ್ನೊಂದು ವರ್ಗದವರು ಕಂಪೆನಿಯ ಮೂಲಭೂತ ಆರ್ಥಿಕ ಅಂಶಗಳನ್ನು ಗಮನಿಸಿ, ಷೇರುಗಳಲ್ಲಿ ಹೂಡಿಕೆ ಮಾಡಿ ಅದನ್ನು ದೀರ್ಘಕಾಲ ಉಳಿಸಿಕೊಳ್ಳಬಯಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಮತ್ತು ಪ್ರೇರಣೆ ಹೂಡಿಕೆಯ ಹಣದ ಮೌಲ್ಯ ವೃದ್ಧಿ. ಉದಾಹರಣೆಗೆ 2010ನೇ ಇಸವಿಯಲ್ಲಿ 50 ಲಕ್ಷಕ್ಕೆ ಒಂದು ಮನೆ ಖರೀದಿ ಮಾಡಿದ್ದೇವೆ. 2024ನೇ ಇಸವಿಯಲ್ಲಿ ಆ ಮನೆಯ ಮಾರುಕಟ್ಟೆಯ ಮೌಲ್ಯ 2 ಕೋಟಿಯಾಗಿದೆ. ಅಂದರೆ ದೀರ್ಘಾವಧಿಯಲ್ಲಿ ಭೂಮಿ, ಚಿನ್ನ, ವ್ಯಾಪಾರದ ಸುನಾಮ (ಗುಡ್‍ವಿಲ್ ಅಥವಾ ಬ್ರಾಂಡ್ ಮೌಲ್ಯ) ನಿರಂತರವಾಗಿ ವೃದ್ಧಿಸುವ ಸಂಭವವನ್ನು ಅಂದಾಜು ಮಾಡಿ ಹೂಡಿಕೆ ಮಾಡುವುದು. ಹೀಗೆ ಯಾವುದೇ ಕಂಪೆನಿಯ ಮೂಲಭೂತ ಆರ್ಥಿಕ ಮಾಪಕಗಳು ಸದೃಢವಾಗಿದ್ದಾಗ ಅಂತಹ ಕಂಪೆನಿಯ ಷೇರುಗಳ ಮೌಲ್ಯ ವೃದ್ಧಿಸುವ ಸಂಭವ ಹೆಚ್ಚಿರುತ್ತದೆ. ಹೀಗೆ ಮಾರುಕಟ್ಟೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅಧ್ಯಯನ ಮಾಡಿ ದೀರ್ಘಾವಧಿಗೆ ಮಾಡುವ ಹೂಡಿಕೆಯು ಲಾಭದಾಯಕವಾಗಿರುವುದುಂಟು. ಅದರೊಂದಿಗೇ ಪ್ರತಿವರ್ಷ ಕಂಪೆನಿ ಗಳಿಸುವ ಲಾಭದ ಪಾಲು ಕೂಡಾ ಸಿಗುತ್ತದೆ. ಬಹಳಷ್ಟು ಜನ ಈ ರೀತಿ ದೀರ್ಘಾವಧಿಗೆ ಮಾಡಿದ ಹೂಡಿಕೆಯಿಂದ ತಮ್ಮ ನಿವೃತ್ತ ಜೀವನದ ಅವಧಿಯಲ್ಲಿ ಆದಾಯದ ಮೂಲ ಕಂಡು ಕೊಂಡವರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಹೂಡಿಕೆಯ ವಿನ್ಯಾಸವನ್ನು ಹೂಡಿಕೆದಾರರ ಅಗತ್ಯಕ್ಕೆ ಅನುಗುಣವಾಗಿ ಮಾಡುವ ಹಲವಾರು ಹೊಸ ಮಾರ್ಗೋಪಾಯಗಳಿವೆ.

ಡಾ. ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು



More articles

Latest article