ಬಂಡವಾಳ ಮಾರುಕಟ್ಟೆ ಎನ್ನುವ ಮಾಯಾಜಿಂಕೆ

Most read

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ತಂತ್ರಜ್ಞಾನದ ಬಳಕೆ, ಜಾಗತೀಕರಣದ ಪ್ರಭಾವ, ಇವೇ ಮುಂತಾದ ವಿಷಯಗಳಿಂದ ಬಂಡವಾಳ ಮಾರುಕಟ್ಟೆ ಬಹಳ ಪ್ರಾಮುಖ್ಯತೆ ಪಡೆದಿದೆ. ಇದೆಲ್ಲವನ್ನೂ ತಿಳಿಯಬೇಕಾದರೆ ನಮಗೆ ಬಂಡವಾಳ ಮಾರುಕಟ್ಟೆಯ ಕುರಿತು ಪ್ರಾಥಮಿಕ ತಿಳುವಳಿಕೆ ಅಗತ್ಯ – ಡಾ.ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ಯಾವುದೇ ಒಂದು ದೇಶದ ಆರ್ಥಿಕ ಅಭಿವೃದ್ಧಿಗೆ ಬಂಡವಾಳ ಬಹಳ ಅಗತ್ಯ. ಈ ಕಾರಣದಿಂದ ಬಂಡವಾಳವನ್ನು ಉಳಿದೆಲ್ಲ ಸಂಪನ್ಮೂಲಗಳ ಜೀವಜಲವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಬಂಡವಾಳವನ್ನು ನಾವು ಹೊರಗಿನವರಿಂದ ಸಾಲವಾಗಿ ಪಡೆಯಬಹುದು ಅಥವಾ ನಮ್ಮಲ್ಲಿಯೇ ಇರುವ ಉಳಿತಾಯದ ಹಣ ಕ್ರೋಢೀಕರಿಸುವ ಮೂಲಕ ಪಡೆಯಬಹುದು. ಹೊರಗಿನವರಿಂದ ಸಾಲವಾಗಿ ಪಡೆದಾಗ ಅದಕ್ಕೆ ಹೆಚ್ಚು ಬಡ್ಡಿ ನೀಡಬೇಕು ಮತ್ತು ಸಾಲ ಕೊಡುವವರು ವಿಧಿಸುವ ಷರತ್ತುಗಳು ನಮ್ಮನ್ನು ಕಟ್ಟಿಹಾಕಬಹುದು. ಆದ್ದರಿಂದ ಬಂಡವಾಳ ಸಂಚಯನದ ವಿಷಯದಲ್ಲಿ ಯಾವಾಗಲೂ ನಮ್ಮಲ್ಲಿರುವ ಉಳಿತಾಯದ ಹಣವನ್ನು ಕ್ರೋಢೀಕರಿಸುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು.

ನಮ್ಮ ದೇಶವನ್ನೇ ಗಮನಿಸಿ ಹೇಳುವುದಾದರೆ ದೇಶದ ಜನರಲ್ಲಿರುವ ಉಳಿತಾಯದ ಹಣವನ್ನು ಹಣಕಾಸು ಸಂಸ್ಥೆಗಳಲ್ಲಿ ಖಾತೆ ತೆರೆಸಿ, ಠೇವಣಿ ಇರಿಸುವುದು ಒಂದು ಒಳ್ಳೆಯ ಕಾರ್ಯ. ಖಾತೆಯಲ್ಲಿರುವ ಹಣ ಜನರಿಗೆ ಅಗತ್ಯ ಬಿದ್ದಾಗ ಉಪಯೋಗಿಸಲು ಬರುತ್ತದೆ ಮತ್ತು ಅರ್ಥವ್ಯವಸ್ಥೆ ಖಾತೆಗಳಲ್ಲಿರುವ ಮಿಗತೆ ಹಣವನ್ನು ದೇಶದಲ್ಲಿ ಉದ್ಯೋಗ, ಉತ್ಪಾದನೆ ಮತ್ತಿತರ ರಚನಾತ್ಮಕ ಕೆಲಸಗಳಿಗೆ ಉಪಯೋಗಿಸಬಹುದು. ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಕೂಡಾ ತಮ್ಮಲ್ಲಿರುವ ಉಳಿತಾಯದ ಹಣವನ್ನು ಮನೆಯಲ್ಲಿ ಅಥವಾ ಬ್ಯಾಂಕ್ ಖಾತೆಯಲ್ಲಿಡುವ ಬದಲಿಗೆ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ತೊಡಗಿರುವುದು ಕಂಡು ಬಂದಿದೆ. ಜನರ ಉಳಿತಾಯದ ಹಣ ಬಂಡವಾಳ ಮಾರುಕಟ್ಟೆಯನ್ನು ಪ್ರವೇಶ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ. 1990 ರವರೆಗೆ ಬಹಳ ನಿಧಾನಗತಿಯಲ್ಲಿ ಸೀಮಿತ ಜನರ ಭಾಗವಹಿಸುವಿಕೆ ಮಾತ್ರ ಇದ್ದ ಬಂಡವಾಳ ಮಾರುಕಟ್ಟೆ ಆ ನಂತರದ ದಿನಗಳಲ್ಲಿ ಬಹಳ ವೇಗವಾಗಿ ಬೆಳೆದದ್ದು ಮಾತ್ರವಲ್ಲ ಹಲವಾರು ರೀತಿಯ ಹಗರಣಗಳಿಗೂ ಬಲಿಯಾಗುತ್ತಿದೆ.  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ತಂತ್ರಜ್ಞಾನದ ಬಳಕೆ, ಜಾಗತೀಕರಣದ ಪ್ರಭಾವ, ಇವೇ ಮುಂತಾದ ವಿಷಯಗಳಿಂದ ಬಂಡವಾಳ ಮಾರುಕಟ್ಟೆ ಬಹಳ ಪ್ರಾಮುಖ್ಯತೆ ಪಡೆದಿದೆ. ಇದೆಲ್ಲವನ್ನೂ ತಿಳಿಯಬೇಕಾದರೆ ನಮಗೆ ಬಂಡವಾಳ ಮಾರುಕಟ್ಟೆಯ ಕುರಿತು ಪ್ರಾಥಮಿಕ ತಿಳುವಳಿಕೆ ಅಗತ್ಯ. ಈ ಬಂಡವಾಳ ಮಾರುಕಟ್ಟೆ ಎಂದರೆ ಏನೆಂದು ತಿಳಿಯೋಣ. 

ಬಂಡವಾಳ

ದೊಡ್ಡ ವ್ಯವಹಾರ ನಡೆಸುವ ಕಂಪೆನಿಗಳಿಗೆ ಬೇಕಾಗುವ ದೊಡ್ಡ ಮೊತ್ತ ಅಂದರೆ ಸಾವಿರಾರು ಕೋಟಿಯನ್ನು ಒಂದಿಬ್ಬರು ವ್ಯಕ್ತಿಗಳು ಬಿಡಿ, ಒಂದೆರಡು ಬ್ಯಾಂಕುಗಳು ಸಹ ಕೆಲವು ಸಂದರ್ಭಗಳಲ್ಲಿ ನೀಡುವ ಸ್ಥಿತಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಅಗತ್ಯ ಹಣವನ್ನು ಸಣ್ಣ ಸಣ್ಣ ಪಾಲುಗಳಾಗಿ ಮಾಡಿ ಹೂಡಿಕೆ ಮಾಡಲಿಚ್ಛಿಸುವವರಿಂದ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆ 10 ಕೋಟಿ ಬಂಡವಾಳದ ಅಗತ್ಯವಿರುವ ಒಂದು ಕಂಪೆನಿ ಈ 10 ಕೋಟಿಯನ್ನು 10 ರೂಪಾಯಿ ಮುಖ ಬೆಲೆ ಇರುವ 1 ಕೋಟಿ ಪಾಲು ಮಾಡಿದರೆ, ಆ ಪ್ರತಿಯೊಂದು ಸಣ್ಣ ಪಾಲನ್ನು ಪಾಲು ಬಂಡವಾಳ ಎನ್ನುತ್ತೇವೆ. ನೋಟುಗಳನ್ನು ರಿಸರ್ವ್ ಬ್ಯಾಂಕ್ ಹೇಗೆ ಚಲಾವಣೆಗೆ ತರುತ್ತದೋ ಅದೇ ರೀತಿ ಕಂಪನಿಗಳು ಪಾಲು ಬಂಡವಾಳವನ್ನು (ಕಾನೂನಿನ ಚೌಕಟ್ಟಿನಲ್ಲಿ) ಚಲಾವಣೆಗೆ ತರುತ್ತವೆ. ಈ ಉದಾಹರಣೆಯಲ್ಲಿ, 10 ರೂಪಾಯಿ ಮುಖಬೆಲೆ ಇರುವ 1 ಕೋಟಿ ಪಾಲು ಮಾಡಲಾದ ಬಂಡವಾಳ ಪತ್ರಗಳನ್ನು ವಿತರಿಸಿ, 10 ಕೋಟಿ ಸಂಗ್ರಹಿಸಲಾಗುತ್ತದೆ. ಉಳಿತಾಯ ಮಾಡಲಿಚ್ಛಿಸುವ ಜನ ಅಥವಾ ಹಣವನ್ನು ಕಂಪೆನಿಗಳಲ್ಲಿ ಹೂಡಿಕೆ ಮಾಡಲು ಇಚ್ಛೆ ಇರುವವರು ಈ ಪಾಲು ಬಂಡವಾಳವನ್ನು ಖರೀದಿ ಮಾಡಬಹುದು ಅಥವಾ ಹೂಡಿಕೆ ಮಾಡಬಹುದು.  ಕಂಪೆನಿ ಗಳಿಸುವ ನಿವ್ವಳ ಲಾಭವನ್ನು ಈ ಬಂಡವಾಳ ಹೂಡಿಕೆದಾರರಿಗೆ ಹಂಚಿಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಕಂಪೆನಿಯ ವ್ಯವಹಾರಗಳು ಲಾಭದಾಯಕವಾದರೆ ಪಾಲು ಬಂಡವಾಳದ ಮೇಲೆ ಸಿಗುವ ಲಾಭಾಂಶ ಬ್ಯಾಂಕುಗಳು ನೀಡುವ ಬಡ್ಡಿಗಿಂತ ಬಹುಪಾಲು ಅಧಿಕವಾಗಿರುತ್ತದೆ. ಈ ಕಾರಣಗಳಿಂದ ಕಂಪೆನಿಯ ಷೇರುಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ಪ್ರತಿಫಲ ಅಥವಾ ಲಾಭದ ದೃಷ್ಟಿಯಿಂದ ಒಳ್ಳೆಯದು. ಈ ಪಾಲು ಬಂಡವಾಳಗಳನ್ನು ನಮಗೆ ಬೇಡವೆಂದಾದರೆ ಅಥವಾ ಹೂಡಿಕೆಯ ಹಣ ಹಿಂಪಡೆಯಬೇಕೆನಿಸಿದರೆ ಮಾರಾಟವೂ ಮಾಡಬಹುದು. ಹೀಗೆ ಬಂಡವಾಳ ಮಾರುಕಟ್ಟೆಯಲ್ಲಿ ಬೇರೆಯವರಿಂದ ಬಂಡವಾಳ ಪತ್ರ ಖರೀದಿಸಿದವರು ಮುಂದೆ ಅದರ ಸಂಪೂರ್ಣ ಮಾಲಕರಾಗುತ್ತಾರೆ ಮತ್ತು ಕಂಪೆನಿಯ ದಾಖಲೆಗಳಲ್ಲಿ ಅವರ ಹೆಸರು ನಮೂದಿಸಲ್ಪಡುತ್ತದೆ. ಸಾಮಾನ್ಯವಾಗಿ ನಾವು ಆಸ್ತಿ ಖರೀದಿಸಿದಾಗ ಆಗುವ ಪರಿಣಾಮವೇ ಇಲ್ಲಿಯೂ ಆಗುತ್ತದೆ.

ಬಂಡವಾಳ ಮಾರುಕಟ್ಟೆ (Capital market)

ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಲ್ಲಿ ಎರಡು ರೀತಿಯಿದೆ. ಒಂದು ಕಂಪೆನಿ ಆರಂಭಿಕ ಹಂತದಲ್ಲಿ ಬಂಡವಾಳ ಶೇಖರಣೆ ಮಾಡುವಾಗಲೇ ಷೇರುಗಳನ್ನು ಖರೀದಿಸುವುದು. ಉದಾಹರಣೆಗೆ ಇನ್‍ಫೋಸಿಸ್ ಕಂಪೆನಿ ಆರಂಭವಾಗುವಾಗ ಬಂಡವಾಳ ಮಾರುಕಟ್ಟೆಯಲ್ಲಿ ಬಂಡವಾಳ ಸಂಗ್ರಹಿಸಿತು, ಆಗ ಷೇರುಗಳನ್ನು ಖರೀದಿಸಿದವರು ಆರಂಭಿಕ ಹಂತದ ಯಾ ಮೊದಲ ಹಂತದಲ್ಲಿಯೇ ಷೇರು ಖರೀದಿಸಿದವರು. ಯಾರಿಗಾದರೂ ಈಗ ಇನ್‍ಫೋಸಿಸ್ ಕಂಪೆನಿಯ ಷೇರು ಬೇಕಾಗಿದ್ದಲ್ಲಿ ಅದನ್ನು ಕಂಪೆನಿಯಿಂದ ಖರೀದಿಸಲು ಬರುವುದಿಲ್ಲ. ಈಗಾಗಲೇ ಷೇರುಗಳನ್ನು ಖರೀದಿಸಿರುವ ಷೇರುದಾರರು ಹಣದ ಅಗತ್ಯ ಅಥವಾ ಇನ್ನಿತರ ಕಾರಣಗಳಿಗಾಗಿ ತಮ್ಮಲ್ಲಿರುವ ಷೇರುಗಳನ್ನು ಬಂಡವಾಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗ ಅವುಗಳನ್ನು ಖರೀದಿಸಬಹುದು.

ದೇಶದ ಷೇರು ಮಾರುಕಟ್ಟೆಯಲ್ಲಿ ನಡೆಯುವ ವ್ಯವಹಾರದ ಪ್ರಮಾಣ ಆ ದೇಶದ ಆರ್ಥಿಕ ವಲಯದ ಕುರಿತ ಪ್ರತಿಫಲನವೆಂದು ತಿಳಿಯಲಾಗುತ್ತದೆ. ಹಾಗೆಯೇ ಯಾವ ಕಂಪೆನಿಯ ಷೇರುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುತ್ತವೋ (ಖರೀದಿ ಮತ್ತು ಮಾರಾಟ) ಅಂತಹ ಕಂಪೆನಿಗಳು ವ್ಯಾಪಾರ ವಹಿವಾಟಿನಲ್ಲಿ ಗಟ್ಟಿಯಾಗಿವೆ ಎಂದು ತಿಳಿಯಲಾಗುತ್ತದೆ. ಸಾಮಾನ್ಯವಾಗಿ ಕಂಪೆನಿಗಳ ಆರ್ಥಿಕ ಸ್ಥಿತಿಗತಿಗಳನ್ನು ಆದರಿಸಿ ಷೇರುಗಳ ಮೌಲ್ಯ ನಿರ್ಧಾರವಾಗುತ್ತದೆ. ಆರ್ಥಿಕ ಸ್ಥಿತಿಗತಿಯ ವಿವರಗಳು ಸಾಮಾನ್ಯವಾಗಿ ಕಂಪೆನಿಯು ಕಾಲ ಕಾಲಕ್ಕೆ ವಹಿವಾಟಿಗೆ ಸಂಬಂಧಿಸಿ ಪ್ರಕಟಿಸುವ ಲೆಕ್ಕಪತ್ರಗಳಿಂದ ತಿಳಿದು ಬರುತ್ತದೆ. ಇದರ ಹೊರತಾಗಿ ಕಂಪೆನಿಯ ಆಡಳಿತ, ಸರಕಾರದ ನೀತಿ, ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಬೇಡಿಕೆಯ ಪ್ರಮಾಣ, ಮುಂತಾದ ಹಲವಾರು ವಿಷಯಗಳ ಆಧಾರದಲ್ಲಿ ಮಾರುಕಟ್ಟೆಯಲ್ಲಿ ಒಂದು ಕಂಪೆನಿಯ ಬೆಲೆ ನಿರ್ಣಯವಾಗುತ್ತದೆ. ನಾವು ಈಗಾಗಲೇ ತಿಳಿಸಿದಂತೆ ಕಂಪೆನಿಗಳು ದೊಡ್ಡ ಸಂಸ್ಥೆಗಳಾದುದರಿಂದ ಇದನ್ನು ಆರಂಭ ಮಾಡಿರುವ ಪ್ರವರ್ತಕರು ಕಂಪೆನಿಯ ಹುಟ್ಟು, ಉದ್ದೇಶ, ಬಂಡವಾಳ, ವ್ಯವಹಾರ ಮತ್ತು ಆಡಳಿತ, ಅದರ ಲಾಭ ಗಳಿಕೆಯ ಸಾಮರ್ಥ್ಯ ಇತ್ಯಾದಿ ವಿವರಗಳನ್ನು ಸಾರ್ವಜನಿಕರ ಮುಂದಿರಿಸಿ, ಅವರಿಂದ ಪಾಲು ಬಂಡವಾಳ ಸಂಗ್ರಹ ಮಾಡಿ ಕೆಲಸ ಮಾಡುತ್ತಾರೆ. ಆದರೆ ದಿನನಿತ್ಯದ ವ್ಯವಹಾರವನ್ನು ನಡೆಸಲು ವೃತ್ತಿಪರ ತಂಡವನ್ನು ನೇಮಿಸಿ ಕೊಳ್ಳಲಾಗುತ್ತದೆ. ಅಂದರೆ ಕಂಪೆನಿಗಳು ಈ ಕೆಳಗೆ ತಿಳಿಸಿರುವವರಿಗೆ ಉತ್ತರದಾಯಿಗಳಾಗಿರುತ್ತದೆ

1 .ಕಂಪೆನಿಯ ಆರಂಭಕ್ಕೆ ಕಾರಣಕರ್ತರಾದ ಪ್ರವರ್ತಕರು

2. ಪ್ರವರ್ತಕರಿಂದ ಆರಿಸಲ್ಪಟ್ಟ ಕಂಪೆನಿಯ ದಿನನಿತ್ಯದ ವ್ಯವಹಾರಗಳನ್ನು ಪೂರ್ವ ನಿರ್ಧರಿತ ಉದ್ದೇಶದಂತೆ ನಡೆಸಿಕೊಂಡು ಹೋಗುವ ಉದ್ಯೋಗಿಗಳು.

3. ಕಂಪೆನಿಯ ಉದ್ದೇಶದ ಮತ್ತು ಅದರ ಲಾಭ ಗಳಿಕೆಯ ಸಂಭಾವ್ಯತೆಯನ್ನು ಮನಗಂಡು ಅದರಲ್ಲಿ ತಮ್ಮ ಉಳಿತಾಯವನ್ನು ಬಂಡವಾಳದ ರೂಪದಲ್ಲಿ ಹೂಡಿಕೆ ಮಾಡಿರುವ ಸಾರ್ವಜನಿಕರು. (ಹೀಗೆ ಹೂಡಿಕೆ ಮಾಡಿದ ತಕ್ಷಣ ಸಾರ್ವಜನಿಕರು ತಾವು ಹೂಡಿದ ಹಣದ ಮೊತ್ತದ ಪಾಲಿಗೆ ಸರಿಯಾಗಿ ಕಂಪೆನಿಯ ನಿಜವಾದ ಯಜಮಾನರಾಗಿರುತ್ತಾರೆ).

4. ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ದೇಶದ ಜನ ಮತ್ತು ಸರಕಾರಗಳು.

ಸಾಮಾನ್ಯವಾಗಿ ಒಬ್ಬ ಎಂಪಿಯೋ, ಎಂ ಎಲ್‌ ಎ ಯೋ ಆಗುವಾಗ ಲಕ್ಷಾಂತರ ಜನ ಮತ ನೀಡಿ ಅವರನ್ನು ಗೆಲ್ಲಿಸಿರುತ್ತಾರೆ. ನಿಜವಾದ ಅರ್ಥದಲ್ಲಿ ಪ್ರಜೆಗಳೇ ಪ್ರಭುಗಳು, ಯಾಕೆಂದರೆ ಪ್ರಜೆಗಳ ಬಹುಮತ ಪಡೆಯದೇ ಹೋದರೆ ಯಾರಿಗೂ ಜನಪ್ರತಿನಿಧಿಯಾಗಲು ಸಾಧ್ಯವಿಲ್ಲ. ಹಾಗಂತ ಜನರಿಂದ ಪ್ರತಿನಿಧಿಯಾಗಿ ಆಯ್ಕೆಯಾದವನು ತಾನು ನೀಡಿದ ಆಶ್ವಾಸನೆ, ಭರವಸೆಗಳಿಗೆ ಸಂಪೂರ್ಣ ಬದ್ಧನಾಗಿಯೇ ಉಳಿಯುತ್ತಾನೆಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಕಂಪೆನಿಗಳಲ್ಲಿಯ ವ್ಯವಹಾರವೂ ನಡೆಯುತ್ತಿರುತ್ತದೆ. ಎಲ್ಲವೂ ಕಾನೂನಿನಂತೆ ಅಥವಾ ಧರ್ಮಗ್ರಂಥಗಳಲ್ಲಿ ಸೂಚಿಸಿದಂತೆ ನಡೆದು ಕೊಂಡಿದ್ದರೆ ಜೈಲು, ಪೋಲಿಸು, ಧಾರ್ಮಿಕ ಮುಖಂಡರು, ನ್ಯಾಯಾಲಯಗಳ ಅಗತ್ಯವೇ ಇರುತ್ತಿರಲಿಲ್ಲ. ನಾಗರಿಕತೆ ಬೆಳೆದಂತೆಲ್ಲಾ ಮನುಷ್ಯನ ವಿಕೃತಿಗಳಿಗೆ ಪ್ರಜ್ಞಾಪೂರ್ವಕ ಶಿಸ್ತಿನ ಕಡಿವಾಣ ಬಿದ್ದರೂ, ಬಹಳಷ್ಟು ಸಲ ವ್ಯಕ್ತಿಯೊಳಗಿರುವ ಕಪಟ, ವಂಚನೆ, ಕ್ರೌರ್ಯ, ಮತ್ಸರ ಯಾವು ಯಾವುದೋ ರೂಪದಲ್ಲಿ ವ್ಯಕ್ತವಾಗಿ ಆಗಬಾರದ್ದು ಆಗಿ ಹೋಗುತ್ತಿದೆ. ವ್ಯವಸ್ಥೆ ವ್ಯಕ್ತಿಯೊಬ್ಬನಿಗೆ ನೀಡುವ ಜವಾಬ್ದಾರಿಯನ್ನು ದುರುಪಯೋಗ ಮಾಡಿಕೊಂಡಾಗ ಅನ್ಯಾಯ ಮೋಸ ವಂಚನೆ ತಪ್ಪಿದ್ದಲ್ಲ. ಬೆಳಕಿಗೆ ಬಂದಾಗ ಮಾತ್ರ ವಂಚನೆ ಮೋಸ ಎನ್ನುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಬಯಸುತ್ತೇವೆ. ಆದರೆ ಬೆಳಕಿಗೆ ಬಾರದ ಇಂತಹ ಅನೇಕ ಮೋಸ ವಂಚನೆಗಳು ನಿರಂತರ ನಡೆಯುತ್ತಿರುವ ಕಾರಣ ಸಮಾಜದಲ್ಲಿ ಕೆಲವು ಜನ ದುಡಿಯದೆಯೂ ಸುಖವಾಗಿ ಇನ್ನು ಕೆಲವು ಜನ ನಿರಂತರ ಬೆವರು ಸುರಿಸಿ ದುಡಿದರೂ ಸರಿಯಾದ ಪ್ರತಿಫಲ ಪಡೆಯದೇ ಇರುವ ಪರಿಸ್ಥಿತಿ ಇದೆ. ಇದಕ್ಕೆ ಬಂಡವಾಳ ಮಾರುಕಟ್ಟೆ ಕೂಡಾ ಹೊರತಾಗಿಲ್ಲ. ಇಲ್ಲಿ ನಡೆದಿರುವ ಹಗರಣಗಳ ಮತ್ತು ಅದರಿಂದಾಗಿ ಕೋಟ್ಯಂತರ ರೂಪಾಯಿಗಳ ತಮ್ಮ ಹೂಡಿಕೆಯ ಹಣವನ್ನು ಕಳೆದುಕೊಂಡವರ ಗೋಳಿನ ಕತೆಗಳು ನೂರಾರಿವೆ.

ಡಾ.ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ-ಹಿಂಡನ್ ಬರ್ಗ್ ವರದಿಯ ಹಿಂದೇನಿದೆ?



More articles

Latest article