ಗಣಿ ಗುತ್ತಿಗೆ ಹಗರಣ ರಾಜ್ಯಪಾಲರ ಅಂಗಳಕ್ಕೆ : ಕುತೂಹಲ ಕೆರಳಿಸಿದ ಕುಮಾರಸ್ವಾಮಿ ಸುದ್ದಿಗೋಷ್ಠಿ

Most read

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಗಣಿ ಗುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಜ್‌ ಶೀಟ್ ಸಲ್ಲಿಸಲು ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ಗೆ ಲೋಕಾಯುಕ್ತ ಮನವಿ ಮಾಡಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿ ಮಾಡಿದೆ ಈ ನಡುವೆ ಎಚ್‌ಡಿಕೆ ಮಹತ್ವದ ಸುದ್ದಿಗೋಷ್ಠಿಯನ್ನು ಕರೆದಿದ್ದು, ಅವರ ಮುಂದಿನ ಹೆಜ್ಜೆಯ ಬಗ್ಗೆ ಕುತೂಹಲ ಕೆರಳಿಸಿದೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀ ಸಾಯಿವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಗಣಿ ಗುತ್ತಿಗೆ ಕೊಟ್ಟಿರುವ ಆರೋಪ ಇದೆ. ನಿಯಮ ಉಲ್ಲಂಘಿಸಿ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಎಸ್‌ಐಟಿ ಪ್ರಾಸಿಕ್ಯೂಷನ್ ಕೋರಿ ರಾಜ್ಯಪಾಲರಿಗೆ ಮರು ಪ್ರಸ್ತಾವ ಸಲ್ಲಿಸಿದೆ.

ಮುಡಾ ಬದಲಿ ನಿವೇಶನ ಪ್ರಕರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತಡಮಾಡದೇ ನೋಟಿಸ್ ನೀಡಿ, ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ ರಾಜ್ಯಪಾಲರು ಕುಮಾರಸ್ವಾಮಿ ವಿರುದ್ಧದ ಗಣಿ ಗುತ್ತಿಗೆ ಹಗರಣ ವಿಷಯವಾಗಿ ಕಳೆದ ಹತ್ತು ತಿಂಗಳಿನಿಂದ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೊಡದೆ ಇರುವುದು ಕೂಡ ರಾಜ್ಯಪಾಲರು ಇಕ್ಕಟ್ಟಿಗೆ ಸಿಲುಕಿದಂತಾಗುತ್ತದೆ‌.

ಮುಡಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ತನ್ನ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ ಎಂದು ಈಗಾಗಲೇ ಕುಮಾರಸ್ವಾಮಿ ಆರೋಪಿಸಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಜೆಪಿ ಭವನದಲ್ಲಿ ನಡೆಯುವ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಈ ಕುರಿತು ಸಾಲು ಸಾಲು ಆರೋಪ ಮಾಡುವ ಸಾಧ್ಯತೆ ಇದೆ.

More articles

Latest article