ಬೆಂಗಳೂರು: ರಾಜ್ಯ ಸರ್ಕಾರವು NPS ರದ್ದುಗೊಳಿಸಿ OPS ಜಾರಿ ಮಾಡುವ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಿ ಆದೇಶ ಹೊರಡಿಸಿರುವ ಕ್ರಮಕ್ಕೆ ಕರ್ನಾಟಕ ರಾಜ್ಯ NPS ನೌಕರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆ (NPS) ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ (OPS) ಜಾರಿಗೊಳಿಸಬೇಕೆಂದು ಎಡೆಬಿಡದೇ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿತ್ತು. ಆದರೆ ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ NPS ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ಅವರು ʼರಾಜ್ಯ ಸರ್ಕಾರಿ ನೌಕರರು NPS ಯೋಜನೆಯನ್ನು ರದ್ದುಗೊಳಿಸುವ ವಿಷಯವನ್ನು ಸಚಿವ ಸಂಪುಟದ ಮುಂದೆ ತಂದು ಆ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿ ನಿರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಮೂರನೇ ಬಾರಿಗೆ ಸಮಿತಿ ರಚಿಸಿ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮದಿಂದ ಸಮಸ್ತ ನೌಕರರಿಗೆ ನಿರಾಸೆ ಉಂಟಾಗಿದೆ ಎಂದು ಹೇಳಿದ್ದಾರೆ.
ʼಈ ಯೋಜನೆಯನ್ನು ಈಗಾಗಲೇ ರದ್ದುಗೊಳಿಸಿರುವ ಛತ್ತೀಸ್ ಗಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶಗಳು ಯಾವುದೇ ಸಮಿತಿಯನ್ನು ರಚಿಸದೆಯೇ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿರುವಾಗ ರಾಜ್ಯ ಸರ್ಕಾರ ಸಮಿತಿ ರಚಿಸುವ ಔಚಿತ್ಯವೇನು ಎಂದ್ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ NPS ನೌಕರರ ಸಂಘವು ನಿರ್ಣಾಯಕ ಹೋರಾಟಕ್ಕೆ ಕರೆ ನೀಡುವ ಕುರಿತು ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುಣಾವಣೆಗೆ ಮುಂಚೆ NPS ನೌಕರರ ಸಂಘವು ಒಂದು ತಿಂಗಳ ಕಾಲ ಪ್ರತಿಭಟನೆ ನಡೆಸಿತ್ತಲ್ಲದೇ ಚುನಾವಣೆಯ ಸಂದರ್ಭದಲ್ಲಿ ವೋಟ್ ಫಾರ್ ಓಪಿಎಸ್ ಅಭಿಯಾನವನ್ನೂ ನಡೆಸಿತ್ತು. ಪರಿಣಾಮವಾಗಿ ಕಾಂಗ್ರೆಸ್ ಪಕ್ಷವು ಓಪಿಎಸ್ ಜಾರಿಗೊಳಿಸುವ ವಿಷಯವನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದನ್ನು ನೆನಪಿಸಬಹುದು.