ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕರ್ನಾಟಕದ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಕೆ ಹರಿಪ್ರಸಾದ್, ಊಹಾಪೋಹಗಳಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ, ಇದಕ್ಕೆ ಕಾನೂನು ಮೂಲಕ ಉತ್ತರಿಸುತ್ತೇವೆ ಎಂದು ಸಿದ್ದರಾಮಯ್ಯ ಪರ ನಿಂತಿದ್ದಾರೆ.
ದೆಹಲಿಯಲ್ಲಿ ಮಾತಾಡಿದ ಬಿಕೆ ಹರಿಪ್ರಸಾದ್ ಅವರು, ಕೇವಲ ಊಹಾಪೋಹಗಳನ್ನು ಆಧರಿಸಿ ರಾಜ್ಯಪಾಲ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ, ಅವರ ಆದೇಶದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ನಿವೇಶನ ಹಂಚಿಕೆ ವಿಷಯದಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗಿಯಲ್ಲ, ಬಿಜೆಪಿಯ ಅಧಿಕಾರಾವಧಿಯಲ್ಲಿ ಮುಡಾ ಸಿದ್ದರಾಮ್ಯಯ್ಯನವರ ಕುಟುಂಬದ ಜಮೀನು ಸ್ವಾಧೀನ ಮಾಡಿಕೊಂಡಿದ್ದಕ್ಕೆ ಪರ್ಯಾಯವಾಗಿ ಸೈಟುಗಳನ್ನು ನೀಡಿದೆ. ಪ್ರಕರಣ ತನಿಖೆಗೆ ಆಯೋಗವನ್ನು ರಚಿಸಲಾಗಿದೆ, ಅದು ವರದಿ ನೀಡಿದ ಬಳಿಕವೇ ಚರ್ಚೆ ಮಾಡುವುದು ಸಾಧ್ಯ, ಇಂಥ ವಿಷಯಗಳನ್ನು ಟಿವಿಯಲ್ಲಿ ಚರ್ಚೆ ಮಾಡಲಾಗದು ಎಂದು ಹರಿಪ್ರಸಾದ್ ಹೇಳಿದರು.
ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸಲ್ಲ, ಮಾತೆತ್ತಿದರೆ ರಾಜೀನಾಮೆ ಕೇಳುವುದು ಬಿಜೆಪಿ ನಾಯಕರಿಗೆ ಫ್ಯಾಶನ್ ಆಗಿಬಿಟ್ಟಿದೆ ಎಂದು ಹರಿಪ್ರಸಾದ್ ಹೇಳಿದರು.