ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮೋದನೆ ಕೋರಿ ರಾಜ್ಯಪಾಲರ ಮೊರೆಹೋಗಿರುವ ಟಿಜೆ ಅಬ್ರಹಾಮ್ ಯಾರು ಗೊತ್ತೆ? ಅವರು ಹಿಂದೆ ದಾಖಲಿಸಿರುವ ಪ್ರಕರಣಗಳ ಚರಿತ್ರೆ ನೋಡಿದರೆ ಅವರು ದಾಖಲಿಸಿದ ಒಂದೂ ಪ್ರಕರಣ ತಾರ್ಕಿಕ ಅಂತ್ಯ ಪಡೆಯದೇ ಇರುವುದು ಕಂಡುಬರುತ್ತದೆ. ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಮಂತ್ರಿಗಳು, ಮಾಜಿ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಅಬ್ರಹಾಮ್ ಕಳೆದ ಕೆಲ ವರುಷಗಳಲ್ಲಿ ದಾಖಲಿಸಿರುವ ಎಷ್ಟು ಕೇಸ್‍ಗಳು ತಾರ್ಕಿಕ ಅಂತ್ಯ ಕಂಡಿವೆ?
ಅವರು ಇದುವರೆಗೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾಗಿರುವ ಎಸ್ ಎಮ್ ಕೃಷ್ಣ, ಯಡ್ಯೂರಪ್ಪ, ಕುಮಾರಸ್ವಾಮಿ, ಧರಂ ಸಿಂಗ್ ಹಾಗೂ ಅನೇಕ ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಒಂದೂ ಪ್ರಕರಣ ಯಶಸ್ವಿಯಾಗಿ ಮುಗಿದು, ಮೇಲ್ಕಂಡ ಯಾವುದೇ ಜನಪ್ರತಿನಿಧಿಗೆ ಶಿಕ್ಷೆಯಾದಂತಿಲ್ಲ. ಡಿಕೆ ರವಿಯವರ ನಿಧನದ ನಂತರ ಅವರ ಪತ್ನಿ ಹಾಗೂ ಮಾವನ ವಿರುದ್ಧವೂ ಈ ಅಬ್ರಹಾಮ್ ಕೇಸ್ ದಾಖಲಿಸಿದ್ದರು.
ಇದರ ಜೊತೆ ಅಬ್ರಹಾಮ್ ವಿರುದ್ಧವೇ ಅನೇಕಬಾರಿ ಭೃಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಕಳೆದ ವರುಷ ಸುಮಾರು ಇದೇ ಹೊತ್ತಲ್ಲಿ ಸರ್ಕಾರಿ ಅಧಿಕಾರಿ ಸುಧಾ ಎನ್ನುವವರನ್ನು ಮುಖ್ಯಮಂತ್ರಿ ಆಫೀಸಿನಲ್ಲಿ ಪೋಸ್ಟಿಂಗ್ ಮಾಡಿಕೊಡಲು ಒಂದು ಕೋಟಿ ಲಂಚ ಕೇಳಿದ ಆರೋಪ ಕೇಳಿ ಬಂದಿತ್ತು. ಆ ನಂತರ ನಡೆದ ಸ್ಟಿಂಗ್ ಆಪರೇಷನ್ ಒಂದರಲ್ಲಿ ಅಬ್ರಹಾಮ್ 25 ಲಕ್ಷ ಲಂಚ ತೆಗೆದುಕೊಳ್ಳವಾಗಿ ರೆಡ್-ಹ್ಯಾಂಡಾಗಿ ಸಿಕ್ಕಿಬಿದ್ದ ದೃಶ್ಯಾವಳಿಗಳು ನಮ್ಮ ಬಹುತೇಕ ಚಾನಲ್‍ಗಳಲ್ಲಿ ಪ್ರಸಾರವಾಗಿದ್ದವು.
ಇದರ ಮೊದಲು ಸುಮಾರು ಏಳೆಂಟು ವರುಷಗಳ ಹಿಂದೆ ಸುಪ್ರೀಮ್ ಕೋರ್ಟ್ ಇದೇ ಅಬ್ರಹಾಮ್‍ಗೆ ಮಿನಿ ವಿಧಾಸಸೌಧದ ವಿಷಯದಲ್ಲಿ ಅನಗತ್ಯ PIL ಗಳನ್ನು ಹಾಕಿ PIL ಎನ್ನುವ ಕಾನೂನಾತ್ಮಕ ಅಸ್ತ್ರವನ್ನು ದುರ್ಬಳಕ್ಕೆ ಮಾಡಿಕೊಳ್ಳುತ್ತಿದ್ದ ಕಾರಣಕ್ಕೆ 25 ಲಕ್ಷ ದಂಡ ವಿಧಿಸಿತ್ತು. ಅದಕ್ಕಿಂತಾ ಮೊದಲು ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ 2001 ರಲ್ಲಿ ತನ್ನ ನೆರೆಮನೆಯ ವ್ಯಕ್ತಿಯೋರ್ವರ ಮೇಲೆ ಕ್ರಿಕೆಟ್ ಬ್ಯಾಟ್‍ನಿಂದ ತೀವ್ರ ಹಲ್ಲೆ ನಡೆಸಿದ ಪ್ರಕರಣದಲ್ಲಿ ಕೆಲ ವರುಷಗಳ ನಂತರ ಜೈಲಿಗೂ ಹೋಗಿ ಬಂದಿದ್ದರು. ಈ ಮಧ್ಯೆ ವಾರಂಟ್ ವಿಷಯವೊಂದರಲ್ಲಿ ಪೋಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣವೂ ಇದೇ ಬಾಣಸವಾಡಿ ಠಾಣೆಯಲ್ಲಿ ದಾಖಲಾಗಿತ್ತು.
ಕೆಲ ವರುಷಗಳ ಹಿಂದೆ ಪ್ರಮೋದ್ ಮಧ್ವರಾಜ್ ವಿರುದ್ಧವೂ ಒಂದು ಕೇಸ್ ದಾಖಲಿಸಿದ್ದರು. ಆ ಕೇಸಿನಲ್ಲಿ ಇಬ್ಬರ ನಡುವೆ ಸಾರ್ವಜನಿಕವಾಗಿ ಆರೋಪ-ಪ್ರತ್ಯಾರೋಪಗಳು ಕೇಳಿಬಂದು ಪ್ರಮೋದ್ ಮಧ್ವರಾಜ್ ಅಬ್ರಹಾಮ್ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಮಾತಾನಾಡಿದ್ದರು. ಆಮೇಲೆ ಆ ಕೇಸ್ ಏನಾಯಿತೆಂದು ಇದುವರೆಗೂ ಸುದ್ದಿಯಿಲ್ಲ.
ಹೀಗಾಗಿ ಸಾಲು-ಸಾಲಾಗಿ ಗಣ್ಯ, ದೊಡ್ಡ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸುತ್ತಲೇ ಬಂದಿರುವ ಟಿ ಜೆ ಅಬ್ರಹಾಮ್ ಇದೀಗ ಸಿದ್ದರಾಮಯ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ಅವರ ಹಿಂದಿನ ಎಲ್ಲಾ ಕೇಸುಗಳ ರೀತಿಯಲ್ಲೇ ಗೋತಾ ಹೊಡೆಯುತ್ತದೋ ಇಲ್ಲ ಈ ಬಾರಿಯಾದರೂ ಅಬ್ರಹಾಮ್ ಯಶಸ್ವಿಯಾಗುತ್ತಾರೋ ನೋಡಬೇಕು.
- ಅಲ್ಮೀಡಾ ಗ್ಲಾಡ್ ಸನ್