ಬೆಂಗಳೂರು: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಮಂತ್ರಿಮಂಡಲದ ಪುನರ್ ರಚನೆ ಸದ್ಯದಲ್ಲೇ ನಡೆಯಲಿದ್ದು ನಿಷ್ಕ್ರಿಯ ಮತ್ತು ಅಸಮರ್ಥ ಸಚಿವರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆ ಇದೆ.
ಆಡಳಿತ ಯಂತ್ರಕ್ಕೆ ಮತ್ತಷ್ಟು ಚುರುಕು ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಂಪುಟ ಪುನರ್ ರಚನೆಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದ್ದು, ಹೊಸದಾಗಿ ಸಂಪುಟ ಸೇರಲು ಶಾಸಕರ ನಡುವೆ ಪೈಪೋಟಿ ಆರಂಭವಾಗಿದೆ.
ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಈ ಬಾರಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದ್ದು, ಇನ್ನು ಯಾರಿಗೆ ಸಚಿವಗಿರಿ ದೊರೆಯಲಿದೆ ಎಂಬ ಕುತೂಹಲ ಮೂಡಿದೆ.
ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸುವ ಬಿಜೆಪಿ ತಂತ್ರ ಬಹುತೇಕ ವಿಫಲವಾದಂತಿದೆ. ಒಂದು ವೇಳೆ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೂ ಸಿದ್ಧರಾಮಯ್ಯ ಅವರನ್ನು ಪದಚ್ಯುತಿಗೊಳಿಸದೇ ನ್ಯಾಯಾಲಯದ ಮೂಲಕ ಹೋರಾಟ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಹೀಗಾಗಿ ಸರ್ಕಾರದ ಕುರಿತು ಜನರಲ್ಲಿ ಮತ್ತಷ್ಟು ವಿಶ್ವಾಸ ಮೂಡಿಸುವ ಸಲುವಾಗಿ ಸಂಪುಟ ಪುನರ್ ರಚನೆಗೆ ಸಿದ್ಧರಾಮಯ್ಯ ಕೈಹಾಕಲಿದ್ದಾರೆ ಎಂದು ತಿಳಿದುಬಂದಿದೆ.