ಕೋಲಾರ: ದಾಖಲೆಯಿಲ್ಲದೇ ಬಡ್ಡಿ ರಹಿತ ಸಾಲ ಕೊಡಿಸುತ್ತೇನೆಂದು ಹೇಳಿ ಸಾರ್ವಜನಿಕರಿಂದ ಹಣಕಟ್ಟಿಸಿಕೊಂಡ ಖಾಸಗಿ ಹಣಕಾಸು ಸಂಸ್ಥೆಯೊಂದರ ಮುಖ್ಯಸ್ಥೆ ನಾಗವೇಣಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ನಗರದ ಕಠಾರಿಪಾಳ್ಯದಲ್ಲಿ ನಡೆದಿದೆ.
ಕಠಾರಿ ಪಾಳ್ಯದ ಮುಖ್ಯ ರಸ್ತೆಯಲ್ಲಿ ಬಾಡಿಗೆ ಮನೆಯೊಂದನ್ನು ಪಡೆದಿದ್ದ ಮೌಲ್ಯ ಚಾರಿಟಿಬಲ್ ಟ್ರಸ್ಟ್ ಎಂಬ ಹಣಕಾಸು ಸಂಸ್ಥೆಯ ಮುಖ್ಯಸ್ಥೆ, ತುರ್ತಾಗಿ ಸಾಲ ನೀಡುವುದಾಗಿ ನಂಬಿಸಿ ಮುಗ್ಧ ಜನರಿಂದ ಹಣ ಕಟ್ಟಿಸಿಕೊಂಡು ಯಾರ ಕೈಗೂ ಸಿಗದೇ ಸಾಲ ನೀಡದೆ ಮೊಬೈಲ್ ಸ್ವಿಚ್ ಮಾಡಿಕೊಂಡು ಪರಾರಿಯಾಗಿದ್ದಾರೆ.
ಬಡವರು ಹಾಗೂ ಸ್ತ್ರೀ ಶಕ್ತಿ ಸಂಘದವರಿಂದ ಹಣ ಪಡೆದು ಸರಿಯಾದ ಸಮಯಕ್ಕೆ ಸಾಲವನ್ನು ನೀಡದೆ ಸತಾಯಿಸುತ್ತಿದ್ದುದರಿಂದ ಅನುಮಾನಗೊಂಡ ಸಾರ್ವಜನಿಕರು ಕಛೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಹಣಕಾಸು ಸಂಸ್ಥೆಯ ವಂಚನೆ ಬಗ್ಗೆ ಹಣ ಕಳೆದುಕೊಂಡಿರುವ ಮಹಿಳೆಯರು ಮಾತನಾಡಿ, ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಂದ, ಬಡವರಿಂದ ಹದಿನೈದು ಸಾವಿರ, ಇಪ್ಪತ್ತು ಸಾವಿರ ಹಣ ಪಡೆದು ಬಡ್ಡಿ ರಹಿತ 2 ಲಕ್ಷ ಸಾಲ ನೀಡುವುದಾಗಿ ನಂಬಿಸಿ ಹಣ ಕಟ್ಟಿಸಿಕೊಂಡಿದ್ದಾರೆ. ನಾವು ಯಾರದೋ ಮಾತು ಕೇಳಿ ಹಣವನ್ನು ಕಟ್ಟಿದ್ದೆವು. ಸರಿಯಾದ ಸಮಯಕ್ಕೆ ಸಾಲವನ್ನು ನೀಡದೆ ಮುಖ್ಯಸ್ಥರು ಮೊಬೈಲ್ ಆಫ್ ಮಾಡಿ ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸ್ಥೆ ಮುಖ್ಯಸ್ಥನ ವಂಚನೆ ಪ್ರಕರಣೆ ಠಾಣೆ ಮೆಟ್ಟಿಲೇರಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.