ಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ವಿರುದ್ಧ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ನೀಡಿದ್ದು, ಮೈಸೂರಿನ ಚಾಮುಂಡಿ ಬೆಟ್ಟ ರಾಜವಂಶಸ್ಥರ ಖಾಸಗಿ ಆಸ್ತಿ. ಇಲ್ಲಿ ಯಾವುದೇ ಪ್ರಾಧಿಕಾರದ ಅವಶ್ಯಕತೆ ಇಲ್ಲ, ಅಭಿವೃದ್ಧಿ ಕಾರ್ಯಗಳನ್ನು ಮಾಡಬಾರದು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ ವ್ಯಕ್ತಪಡಿದ್ದಾರೆ.
ಈ ಕುರಿತು ಮೈಸೂರು ಅರಮನೆ ಆವರಣದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ 2024 ರ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಈ ಸಂಬಂಧ ನಾವು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದು ಜುಲೈ 26 ರಂದು ಇದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಆದೇಶ ಪ್ರತಿ ಬಿಡುಗಡೆ ಮಾಡಿದರು.
ಚಾಮುಂಡಿ ಬೆಟ್ಟ ನಮಗೆ ಸೇರಿದ್ದು, ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಸರಿಯಲ್ಲ. ಚಾಮುಂಡಿ ಬೆಟ್ಟ ಬೆಟ್ಟವಾಗೆ ಉಳಿಯಬೇಕು. ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಹೇಳಿದ್ದಾರೆ.
ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದ ಮೇಲೆ ರಾಜರ ಆಸ್ತಿಯನ್ನು ಭಾರತ ಸರ್ಕಾರ ವಶಕ್ಕೆ ಪಡೆಯುವ ವೇಳೆ ಕೆಲವು ಜಾಗಗಳನ್ನು ರಾಜವಂಶಸ್ಥರಿಗೆ ಬಿಟ್ಟುಕೊಟ್ಟಿದೆ. ಹಾಗಾಗಿ ಚಾಮುಂಡಿ ಬೆಟ್ಟ, ರಾಜೇಂದ್ರ ವಿಲಾಸ ಅರಮನೆ, ದೇವಿ ಕೆರೆ, ನಾರಾಯಣಸ್ವಾಮಿ ದೇವಸ್ಥಾನ, ಮಹಾಬಲೇಶ್ವರ ದೇವಸ್ಥಾನ ಸೇರಿದಂತೆ ಹಲವು ಜಾಗಗಳು ರಾಜವಂಶಸ್ತರಿಗೆ ಸೇರಿದ್ದು, ಅಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಭಿವೃದ್ಧಿ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ಭಾರತ ಸರ್ಕಾರದ ಗೃಹ ಸಚಿವಾಲಯ 1974 ರಲ್ಲಿ ರಾಜವಂಶಸ್ಥರಿಗೆ ಸೇರಿದ ಆಸ್ತಿಗಳನ್ನು ಅವರ ಸುಪರ್ದಿಗೆ ಬಿಟ್ಟುಕೊಡಬೇಕು ಎಂಬ ಆದೇಶವನ್ನು ಆಯಾಯ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ರವಾನಿಸಿದೆ. ಆದರೂ ರಾಜ್ಯ ಸರ್ಕಾರ ನಮಗೆ ಸೇರಿದ ಆಸ್ತಿಗಳನ್ನು ಬಿಟ್ಟುಕೊಡದೆ ತಾನೇ ನಿರ್ವಹಣೆ ಮಾಡುತ್ತಿದೆ ಎಂದು ಆಸಮಧಾನ ಹೊರಹಾಕಿದರು.
ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೊದಲ ಮುಖ್ಯಮಂತ್ರಿಗಳಿಂದಲೂ ಅರಮನೆಯವರಿಗೆ ತೊಂದರೆ ಉಂಟಾಗುತ್ತಿದೆ. ಅದು ಹೊಸದೇನಲ್ಲ. ಆವಾಗಿನಿಂದಲೂ ನಾವು ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿ ಕಾನೂನು ಮೂಲಕವೇ ಹೋರಾಟ ಮಾಡಿಕೊಂಡು ಬರುತ್ತಿದ್ದೆವೆ. ಇದೇನು ನಮಗೆ ಹೊಸದಲ್ಲ, ನಾನು ಯಾವ ಒಬ್ಬ ವ್ಯಕ್ತಿಯ ವಿರುದ್ಧವೂ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ನಗರ ಸೇರಿದಂತೆ ರಾಜ್ಯದ ಇತರೆಡಗಳಲ್ಲೂ ನಮ್ಮ ಖಾಸಗಿ ಆ ಗಳಿವೆ. ಮೈಸೂರು ನಗರದಲ್ಲೇ ನಮ್ಮ ಹಲವಾರು ಜಮೀನನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಒಬ್ಬರ ಜಮೀನು ವಶಕ್ಕೆ ಪಡೆದು ಬದಲಿ ನಿವೇಶನ ಕೊಡುವುದಾದರೆ ನಮ್ಮ ಜಮೀನನ್ನು ವಶಕ್ಕೆ ಪಡೆದ ಮೇಲೆ ಬದಲಿ ಜಮೀನನ್ಮು ನಮಗೂ ಕೊಡಬೇಕಲ್ಲವೆ? ಹಾಗಾದರೆ ಒಬ್ಬರಿಗೊಂದು ನ್ಯಾಯವೆ ಎಂದು ಹೇಳಿದ್ದಾರೆ.
ನನ್ನ ಮಗ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದನಾಗಿರಬಹುದು. ಅದಕ್ಕೂ ನಮ್ಮ ಖಾಸಗೀ ಆಸ್ತಿಗೂ ಸಂಬಂಧವಿಲ್ಲ. ನನ್ನ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆತರ್ ಅವರು ನಾಲ್ಕು ಬಾರಿ ಸಂಸದರಾಗಿದ್ದರು. ಆವಾಗಲೇ ರಾಜಕೀಯ ಪ್ರಭಾವ ಬಳಸಿ ನಮ್ಮ ಖಾಸಗಿ ಆಸ್ತಿಗಳನ್ನು ವಶಕ್ಕೆ ಪಡೆಯಲಿಲ್ಲ ಈಗ ರಾಜಕೀಯ ಪ್ರಭಾವ ಬಳಸುತ್ತೇನೆಯೇ ಎಂದು ಉತ್ತರಿಸುತ್ತಾ, ಕಾನೂನು ಹೋರಾಟದ ಮೂಲಕವೇ ಆಸ್ತಿಯನ್ನು ಮರುಪಡೆಯುತ್ತೇನೆ ಎಂದು ಹೇಳಿದ್ದಾರೆ.