ಸಕಲೇಶಪುರ: ಇಲ್ಲಿನ ಎಡೆಕುಮರಿ ಬಳಿ ರೈಲ್ವೆ ಹಳಿ ಮೇಲೆ ಭೂ ಕುಸಿತ ಪ್ರಕರಣ ಸಂಭವಿಸಿದ ನಂತರ ರೈಲ್ವೆ ಹಳಿ ದುರಸ್ತಿ ಕಾರ್ಯ ಸಂಪೂರ್ಣಗೊಂಡಿದ್ದು, ಇಂದಿನಿಂದ ಪ್ಯಾಸೆಂಜರ್ ರೈಲು ಸಂಚಾರ ಆರಂಭಗೊಂಡಿದೆ.
ಯಶವಂತಪುರ- ಮಂಗಳೂರು ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲು ಇಂದು ಚಲಿಸುವ ಮೂಲಕ ಪ್ರಯಾಣಿಕರಲ್ಲಿ ಹರ್ಷ ಮೂಡಿದೆ.
ಕಳೆದ 20 ದಿನಗಳಿಂದ ಪ್ಯಾಸೆಂಜರ್ ರೈಲು ಸಂಚಾರ ಗುಡ್ಡ ಕುಸಿತದಿಂದ ಬಂದ್ ಆಗಿತ್ತು.
ಎರಡು ದಿನಗಳ ಹಿಂದೆ ಗೂಡ್ಸ್ ರೈಲು ಓಡಿಸಿ ರೈಲ್ವೆ ಹಳಿ ಪರೀಕ್ಷೆ ಮಾಡಿದ್ದ ರೈಲ್ವೆ ಇಲಾಖೆ ನಂತರ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ನೀಡಿತ್ತು.
ಧಾರಾಕಾರ ಮಳೆಯಿಂದಾಗಿ ಎಡೆಕುಮರಿ 63ನೇ ಕಿ.ಮೀ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿತ್ತು.
ಮಳೆಯ ನಡುವೆ ಸತತ ಹದಿನೈದು ದಿನಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ 420 ಹೆಚ್ಚು ಕಾರ್ಮಿಕರು ಕೊನೆಗೂ ಹಳಿಗಳ ಮೇಲೆ ಬಿದ್ದಿದ್ದ ಮಣ್ಣು, ಕಲ್ಲುಗಳನ್ನು ತೆರವುಗೊಳಿಸಿದರು.
ಇದೀಗ ರೈಲ್ವೆ ಹಳಿ ದುರಸ್ತಿ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ಯಾಸೆಂಜರ್ ರೈಲು ಓಡಾಟ ಆರಂಭವಾಗಿದೆ.