ಬಿಜೆಪಿಯವರಿಗೆ ಜನಾಭಿಪ್ರಾಯ ಮೂಲಕ ಸರ್ಕಾರವನ್ನು ಅಸ್ಥಿರ ಮಾಡಲು ಆಗುತ್ತಿಲ್ಲ. ಹೀಗಾಗಿ ರಾಜ್ಯಪಾಲರನ್ನು ಬಳಸಿಕೊಂಡು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈಗ ರಾಜಭವನವನ್ನು ಕೇಸರಿ ಭವನವನ್ನಾಗಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ರಾಜ್ಯ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕರ್ನಾಟಕದ ಆರೂವರೆ ಕೋಟಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡುವ ಮೂಲಕ ಒಂದು ಸ್ಥಿರ ಸರ್ಕಾರಕ್ಕೆ ಬೆಂಬಲವನ್ನು ನೀಡಿದ್ದಾರೆ. ಅಂದರೆ ಶೇಕಡಾ 43ರಷ್ಟು ಮಂದಿ ಪಕ್ಷದ ಪರವಾಗಿ ಮತ ಚಲಾಯಿಸುವ ಮೂಲಕ ನಮ್ಮ ಪಕ್ಷವನ್ನು ಬೆಂಬಲಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಣೆ ಮಾಡುತ್ತಿದ್ದರೂ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನವನ್ನು ಬಿಜೆಪಿ – ಜೆಡಿಎಸ್ ಮೈತ್ರಿ ಪಕ್ಷದ ನಾಯಕರು ಮಾಡುತ್ತಿದ್ದು, ಇದರಲ್ಲಿ ಯಶ ಕಾಣುವುದಿಲ್ಲ ಹೇಳಿದ್ದಾರೆ.
ಈಗಾಗಲೇ ಬಿಜೆಪಿಯವರು ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರವನ್ನು ಕೆಡವಿದಂತೆ ಕರ್ನಾಟಕದಲ್ಲಿಯೂ ಹಿಂಬಾಗಿಲ ಮೂಲಕ ಕೆಡವಲು ಪ್ರಯತ್ನ ಮಾಡುತ್ತಿದೆ. ಇದಕ್ಕೆ ರಾಜ್ಯಪಾಲರನ್ನು ದಾಳವಾಗಿ ಬಳಸಿಕೊಳ್ಳಲು ಮುಂದಾಗಿದೆ. ಇನ್ನು ಕಾನೂನು ರೀತಿಯಲ್ಲಿ ಕಾಂಗ್ರೆಸ್ ಯಾವುದೇ ರೀತಿಯ ಅಪರಾಧ, ಹಗರಣವನ್ನು ಮಾಡಿಲ್ಲ ಎಂಬುದು ಬಿಜೆಪಿಯವರಿಗೂ ಗೊತ್ತು. ಇಲ್ಲದಿದ್ದರೆ ಕಾನೂನು ಹೋರಾಟವನ್ನೇ ಅವರು ನಡೆಸುತ್ತಿದ್ದರು. ಅದು ಬಿಟ್ಟು ವಾಮ ಮಾರ್ಗವನ್ನು ಅನುಸರಿಸುತ್ತಿರಲಿಲ್ಲ. ಹೀಗಾಗಿ ಪಾದಯಾತ್ರೆ ಎಂಬ ಬೀದಿ ನಾಟಕವನ್ನು ಮಾಡುತ್ತಿದ್ದಾರೆ. ಆದರೆ, ನಾವು ಎಚ್ಚರವಾಗಿಯೇ ಇದ್ದೇವೆ. ನಮ್ಮ ಸರ್ಕಾರವನ್ನು ಕಿಂಚಿತ್ ಸಹ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸುರ್ಜೇವಾಲ ತಿರುಗೇಟು ನೀಡಿದ್ದಾರೆ.
ಕಳೆದ ವರ್ಷ ರಾಜ್ಯದ 223 ತಾಲೂಕುಗಳಲ್ಲಿ ತೀವ್ರ ಬರಗಾಲ ಇತ್ತು. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಜನರ ಬಾಳಿಗೆ ಬೆಳಕಾಗಿ, ಆಸರೆಯಾಗಿ ಬದುಕಿನ ನಿರ್ವಹಣೆ ಮಾಡಲು ಅನುಕೂಲವಾಯಿತು. ಅನ್ನಭಾಗ್ಯ ಯೋಜನೆಯಡಿ 1.27 ಕೋಟಿ ಬಡ ಜನರಿಗೆ ತಲಾ 5 ಕೆಜಿಯಂತೆ ಮಾಸಿಕವಾಗಿ ಸುಮಾರು 650 ಕೋಟಿ ರೂಪಾಯಿಯನ್ನು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 5 ಸಾವಿರ ಕೋಟಿ ರೂ. ಹಣವನ್ನು ಜಮೆ ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ 1 ಕೋಟಿ 57 ಲಕ್ಷ ಕುಟುಂಬಗಳು ಉಚಿತ ವಿದ್ಯುತ್ ನೀಡುತ್ತಿದ್ದು ಇದರ ಮೊತ್ತ 8260 ಕೋಟಿ ರೂ ಉಚಿತ ವಿದ್ಯುತ್ ಅನ್ನು ನೀಡುತ್ತಿದ್ದೇವೆ. ಶಕ್ತಿ ಯೋಜನೆಯಡಿ ಇದುವರೆಗೆ 250 ಕೋಟಿ ಉಚಿತ ಟಿಕೆಟ್ ಅನ್ನು ಪಡೆದು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇದರ ಮೌಲ್ಯ 6 ಸಾವಿರ ಕೋಟಿ ರೂಪಾಯಿ ಆಗಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ 1 ಕೋಟಿ 20 ಲಕ್ಷ ಮನೆಯ ಯಜಮಾನಿಯರಿಗೆ ಮಾಸಿಕವಾಗಿ ತಲಾ 2 ಸಾವಿರ ರೂಪಾಯಿಯಂತೆ ಪ್ರತಿ ತಿಂಗಳು 2280 ಕೋಟಿ ರೂ. ಹಣವನ್ನು ನೇರವಾಗಿ ಅವರ ಖಾತೆಗೆ ಹಾಕಲಾಗುತ್ತಿದೆ. ಇನ್ನು ಯುವ ನಿಧಿ ಯೋಜನೆಯಡಿ 1 ಲಕ್ಷ 20 ಸಾವಿರ ಪದವೀಧರ ಹಾಗೂ ಡಿಪ್ಲೋಮಾ ಪದವೀದರರಿಗೆ ಕ್ರಮವಾಗಿ 3 ಸಾವಿರ ರೂ. ಹಾಗೂ 1,500 ರೂ.ವನ್ನು ನೇರವಾಗಿ ಹಾಕುತ್ತಿದ್ದೇವೆ. ಈ ಮೂಲಕ ಜನರು ನೆಮ್ಮದಿಯ ಜೀವನ ನಡೆಸಲು ಅನುಕೂಲವನ್ನು ಮಾಡಿಕೊಡಲಾಗುತ್ತಿದೆ. ಈ ಮೂಲಕ ಮಧ್ಯಮ ವರ್ಗದ ಜನರ ಆಶಯವನ್ನು ನಮ್ಮ ಕಾಂಗ್ರೆಸ್ ಸರ್ಕಾರ ಪೂರೈಸುತ್ತಾ ಬಂದಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್’ನಿಂದ ಸುಳ್ಳು ಕಥೆ ಸೃಷ್ಟಿ
ನಮ್ಮ ಸರ್ಕಾರದ ಅಭಿವೃದ್ಧಿ ಕೊಡುಗೆ, ಜನಪರ ಯೋಜನೆಗಳನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಸಹಿಸುತ್ತಿಲ್ಲ. ಹೀಗಾಗಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸುತ್ತಿದ್ದರೂ ಹಗರಣಗಳ ಬಗ್ಗೆ ಸುಳ್ಳು ಕಥೆಯನ್ನು ಸೃಷ್ಟಿ ಮಾಡಿ ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಮೂಲಕ ಸರ್ಕಾರವನ್ನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧೀರರನ್ನಾಗಿ ಮಾಡುವುದಾಗಿ ಹೊರಟಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ಇದರಲ್ಲಿ ಯಾವುದೇ ಯಶ ಕಾಣುವುದಿಲ್ಲ. ತಪ್ಪನ್ನೇ ಮಾಡದ ನಮ್ಮ ಸರ್ಕಾರಕ್ಕೆ ಇವುಗಳನ್ನು ಹೇಗೆ ಎದುರಿಸಬೇಕು ಎಂಬುದು ಗೊತ್ತಿದೆ. ಆರೂವರೆ ಕೋಟಿ ಕನ್ನಡಿಗರು ಈ ಎಲ್ಲ ಬೆಳವಣಿಗೆಯನ್ನು ಗಮನಿಸುತ್ತಾ ಬರುತ್ತಿದ್ದಾರೆ ಎಂದು ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ಅಭಿವೃದ್ಧಿಗಾಗಿ 1.20 ಲಕ್ಷ ಕೋಟಿ ರೂ. ಮೀಸಲು
ಈ ಗ್ಯಾರಂಟಿ ಯೋಜನೆಗಳ ಜತೆಗೆ ನಮ್ಮ ಕಾಂಗ್ರೆಸ್ ಸರ್ಕಾರವು 3.71 ಲಕ್ಷ ಸಾವಿರ ಕೋಟಿ ಕೋಟಿ ರೂ. ಗಾತ್ರದ ಆಯವ್ಯಯದಲ್ಲಿ 1.20 ಲಕ್ಷ ಕೋಟಿ ರೂಪಾಯಿಯನ್ನು ಅಭಿವೃದ್ಧಿ ಕೆಲಸಗಳಿಗಾಗಿ ಮೀಸಲಿಡಲಾಗಿದೆ. 58 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗಳಿಗಾಗಿ ಮೀಸಲಿಡಲಾಗಿದೆ. ಇದಲ್ಲದೆ, ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಈ ಎಲ್ಲದಕ್ಕೂ ಅಡ್ಡಗಾಲು ಹಾಕಲು ಹೊರಟಿದೆ ಎಂದು ಸುರ್ಜೇವಾಲ ಕಿಡಿಕಾರಿದ್ದಾರೆ.
ಕೇಂದ್ರದಿಂದಲೂ ತಾರತಮ್ಯ
ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಎಲ್ಲರೂ ಸೇರಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆದರೆ, ಕೇಂದ್ರ ಬಿಜೆಪಿ ಸರ್ಕಾರವು ಇದನ್ನು ಮರೆತಂದಿದೆ. ಕರ್ನಾಟಕಕ್ಕೆ ಪದೇ ಪದೆ ಅನ್ಯಾಯ ಮಾಡುತ್ತಲೇ ಬರುತ್ತಿದೆ, ಜಿ ಎಸ್ ಟಿ ಬಾಕಿ ಹಣದಲ್ಲೂ ಅನ್ಯಾಯ ಮಾಡಲಾಗಿದೆ. ಅನುದಾನ ನೀಡುವಲ್ಲಿಯೂ ತಾರತಮ್ಯವನ್ನು ಅನುಸರಿಸುತ್ತಾ ಬಂದಿದೆ. ರಾಜ್ಯದ ತೆರಿಗೆ ಹಣವನ್ನು ಪಡೆಯಲು ಕಾನೂನು ಹೋರಾಟ ಮಾಡುವ ಸ್ಥಿತಿಯನ್ನು ತಂದೊಡ್ಡಿದೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ರಣದೀಪ್ ಸುರ್ಜೇವಾಲ ಆತಂಕವನ್ನು ವ್ಯಕ್ತಪಡಿಸಿದ್ದಾರೆ.