ಅಪ್ಪನ ಜಾಲ | ಭಾಗ 1

Most read

ಅಪ್ಪ ಈಗಿಲ್ಲ….ಇದ್ದಾನೆ ಊರು, ಕೇರಿ, ಕಾಡು, ಕೆರೆ, ಶಿಕಾರಿ, ಗದ್ದೆ, ತೋಟ, ಗೌಲು, ಕೋವಿ, ಹರಿದ ಅಂಗಿ, ಚಪ್ಪಲಿ, ಬಾರಾಪೂರ ಪಂಚೆ, ಕೆಂಪನೆ ಲಂಗೋಟಿ, ಪಟಪಟಿ ಚಡ್ಡಿ, ಅವನು ತುಂಬಾ ಪ್ರೀತಿಸುತ್ತಿದ್ದ ಹೆಚ್ ಎಂ.ಟಿ ವಾಚ್……..ಅಪ್ಪನನ್ನು ಇನ್ನೂ ಹುಡುಕುತ್ತಲೇ ಇದ್ದೇನೆ-  ಡಾ. ಅಣ್ಣಪ್ಪ ಎನ್. ಮಳೀಮಠ್, ಸಹಾಯಕ ಪ್ರಾಧ್ಯಾಪಕರು.

ಅಪ್ಪನಿಗೆ ತನ್ನ ಮೂಲ ಊರು ‘ಜಾಲ’ದ ಮೇಲೆ ಎಲ್ಲಿಲ್ಲದ ನಂಟು. ವರ್ಷಕ್ಕೊಂದು ಹಾದಿ ಅಲ್ಲಿಗೆ ಹೋಗಿಲ್ಲಂದ್ರೆ ಸಂಕಟ, ತಳಮಳ. ಜಾಲದೂರಿನ ಯಾರಾದ್ರೂ ಹುಡ್ರು ಮದುವೆ ಮನೆ, ಹಬ್ಬಗಿಬ್ಬಕ್ಕೆ ಕರಿತಾವ ಅಂತ ಕಾಯ್ತಿರ್ತಿದ್ದ. ನೇದ್ಲೆ ರಾಮಚಂದ್ರಣ್ಣ, ಮಂಜಣ್ಣ,  ಕೆಮ್ಮಣ್ಣಗುಡ್ಡೆ ಕೃಷ್ಣಮೂರ್ತಿ ಹೆಸರು  ಆಗಾಗ್ಗೆ ಹೇಳ್ತಿದ್ದ. ಹೊಸನಗರದ ಮೂಲಕ ನಗರ, ನಿಟ್ಟೂರಿನ ಕಾನನದ ಕಣಿವೆ ಹಾದಿಯಲ್ಲಿ ಸಾಗಿದರೆ ಕುದುರೆ ಬೀರಪ್ಪನ ಸರ್ಕಲ್ ಸಿಗುತ್ತದೆ.  ಇಲ್ಲಿಂದ ಬಲಕ್ಕೆ ೧೫ ಕಿ.ಮೀ ದೂರಕ್ಕೆ ಈ ಜಾಲ ಇರೋದು. ಕಲ್ಲುಹಾದಿ, ಇಕ್ಕೆಲಗಳಲ್ಲಿ ದಟ್ಟ ಕಾನನ, ಶರಾವತಿಯೇ ಇಲ್ಲಿ ಗುಡ್ಡ ಬೆಟ್ಟಗಳಿಗೆ ಒದ್ದು  ಮೈದುಂಬಿ ನಿಂತ ನೋಟ, ಅಪರೂಪಕ್ಕೆ ಬಿಸಿಲಿನ ಮುಖ ತೋರಿಸುವ ಸೂರ್ಯ. ಮನೆಗಳೇ ಇಲ್ಲದ, ಕಾಡೇ ಆವರಿಸಿದಂತೆ ಇರೋ ಆ ದಾರಿಯಲ್ಲಿ ಸಾಗಿದರೆ, ಶರಾವತಿ ಒಡಲ ದಂಡೆಯಲ್ಲಿ ಈ ಊರು. 

ನಮ್ಮ ಮನೆ ಹೆಸರು ಮೂಲತ: ‘ಹ್ಯಾಬಿಗೆ’ ಅನ್ನೋದು ಇವತ್ತಿಗೂ ಹಿರಿಯರು ಹೇಳುವ ಮಾತಿದೆ. ಈ ‘ಮಳೇಮಠ’ ಹೆಸರು ಬಂದಿದ್ದೆ ಒಂದು ವಿಚಿತ್ರವೂ  ವಿಶೇಷವೂ ಆಗಿ ನನ್ನಲ್ಲಿ ಕಾಣಿಸಿದೆ. ನಮ್ಮ ಆದಿ ಊರಿನ ಮನೆ ಸಮೀಪ ಒಂದು  ಮಠ ಇತ್ತಂತೆ. ಅಲ್ಲಿ ಅನೇಕ ವೀರಶೈವ ಜೈನ, ವೈದಿಕ ಮಠಗಳು ಇರೋದಕ್ಕೆ ಅಲ್ಲಲ್ಲಿ ಕೆಲವು ಪುರಾವೆಗಳು ಸಿಗುತ್ತವೆ. ಆದರೆ ಬಿದನೂರು ಅರಸರ ಕಾಲದಲ್ಲಿ ಮೈಸೂರು ಸಂಸ್ಥಾನಕ್ಕೆ ಕಪ್ಪವನ್ನು ಹೆಚ್ಚು ನೀಡುತ್ತಿದ್ದವು ಈ ವೀರಶೈವ ಮಠಗಳು ಅನ್ನುವುದು ಚರಿತ್ರೆಯಲ್ಲಿ ಲಭ್ಯ. ಅವೆಲ್ಲ ಕೆಳದಿ ಶಿವಪ್ಪನಾಯಕನ ಆಳ್ವಿಕೆಗೆ ಒಳಪಟ್ಟವು. ಹಾಗಾಗಿ ಈ ಮಠ ವೀರಶೈವ ಮಠವೇ ಆಗಿರಲಿಕ್ಕೆ ಸಾಧ್ಯತೆ ಜಾಸ್ತಿ.  ಕಲ್ಯಾಣ ಕ್ರಾಂತಿ ಉಂಟಾದ ಮೇಲೆ, ಕಲ್ಯಾಣದಲ್ಲಿದ್ದ ಶರಣರು ಕಲ್ಯಾಣ ಬಿಟ್ಟು ನಾಡಿನ ದಿಕ್ಕು ದಿಕ್ಕಿಗೂ ಚಲಿಸಿದರು. ಅಂತಹ ಶರಣ ಪರಂಪರೆ ಮಠವೂ ಆಗಿರಬಹುದು. ಚರಿತ್ರೆಯ ಪುಟದಲ್ಲಿ ಕಳೆದು ಹೋದ ಆ ಮಠದ ಸಮೀಪ ನಮ್ಮ ಮನೆ ಇರೋ ಕಾರಣಕ್ಕೆ, ಈ ಮಠದ ಮೂಲಕ ಮನೆ ಗುರುತು ಮಾಡ್ತಾ ಇದ್ರಂತೆ. ಲಿಂಗಾಯತರಲ್ಲಿ ಮಳೀಮಠ ಅನ್ನೋದು ಜನರ ಬಾಯಲ್ಲಿ ಮಳೇಮಠ ಆಗಿ ಪರಿವರ್ತನೆ ಆಗಿ ನಡಕೋ ಬಂದಿದೆ. ಮುಳುಗಡೆಯಲ್ಲಿ ನಮ್ಮ ಮನೆಯೂ, ಸುತ್ತಮುತ್ತಲ ಊರು ಸೇರಿದಂತೆ ಮಠವೂ ಮುಳುಗಿ ಹೋಗಿದೆ. ಈ ಮಠದ ಮೂಲ ಉತ್ತರ ಕರ್ನಾಟಕ ಆಗಿರಬಹುದು. ಉತ್ತರ ಕರ್ನಾಟಕದಲ್ಲಿ ಈ ಸ್ವರೂಪದ ಮಠಗಳೂ ಈಗಲೂ ಇದೆ. ಈಗಲೂ ಊರಲ್ಲಿ ಮಳೀಮಠ್ ಹೆಸರು ಮಳೇಮಠ ಅಂತ ಆಡು ಮಾತಿನಲ್ಲಿ ಉಚ್ಚಾರ ಪಡೆದುಕೊಂಡಿದೆ. ಇದು ಜನಪದರ ಭಾಷೆಯಲ್ಲಿ ಉಂಟಾದ ಸಹಜ  ಭಾಷಿಕ ವ್ಯತ್ಯಾಸ ಆಗಿರಬಹುದು.

ನಾವು ಜಾಲದ ಊರಿನಿಂದ ಬಂದವರಾದ್ದರಿಂದ ಜಾಲ ಸೀಮೆಯವರು. ಸಾಗರದ ಸಮೀಪದ ಆವಿನಹಳ್ಳಿ ಸೀಮೆಯವರಿಗೂ ಮತ್ತು ಅತ್ತ ಜಾಲ ಸೀಮೆಯವರಿಗೂ ನಡುವೆ ಅಡ್ಡವಾಗಿ ಶರಾವತಿ ನದಿ. ಕಾಡಿನ ಕಣಿವೆ ಹಾದು  ಶರಾವತಿ ನದಿ ದಾಟಿ ಪುನಃ ಕಾಡಿನ ಕಣಿವೆ ಮಹಾಯಾನ ಮುಗಿಸಿದರೆ ಸಿಗುವುದು ಜಾಲ.  ಮದುವೆ ಸಂಬಂಧಗಳೆಲ್ಲ ಈ ನದಿ ದಾಟಿ ಆಗಬೇಕು.  ಎಲ್ಲದಕ್ಕೂ ಇದು ಹೆಬ್ಬಾಗಿಲು. 

 ಅಪ್ಪ ತನ್ನಪ್ಪನ ಮುಖವನ್ನು ಸರಿಯಾಗಿ ನೋಡಿಲ್ಲ. ತನ್ನ ಮೂರನೇ ವಯಸ್ಸಿನಲ್ಲಿ ಅಪ್ಪನ ಕಳೆದುಕೊಂಡು, ಅಪ್ಪನಿಂದ ಬಳುವಳಿಯಾಗಿ ಬರುವ ಪ್ರೀತಿ, ಜವಾಬ್ದಾರಿ, ಕನಸುಗಳೆಲ್ಲ ಅವನಲ್ಲಿ ಕಮರಿ ಹೋಗಿದ್ದವು. ಚಿಕ್ಕಪ್ಪ ಯಾವಾಗಲೂ ಅಪ್ಪನಾಗಲ್ಲ ಅನ್ನುವ ಮಾತಿನಂತೆ ಅವಿಭಕ್ತ ಕುಟುಂಬದಲ್ಲಿ ಒಂದು ರೀತಿ ವಿಭಕ್ತನಾಗಿ ಬಂದವನು. ಹಾಗಿದ್ದೂ ಅವ್ವನ ಮಡಿಲಲ್ಲಿ ಬೆಳೆದ ಅಪ್ಪನು ತನ್ನ ಚಿಕ್ಕಪ್ಪರನ್ನು ಅಪ್ಪನೆಂದೇ ಭಾವಿಸಿದ್ದನು. ಒಂಟಿತನ, ಹಠಮಾರಿ, ಧೈರ್ಯಗಾರ, ಗುರಿಕಾರ, ಕೌಶಲ್ಯತೆ ಅವನಲ್ಲಿ ಸಹಜವಾಗಿತ್ತು. ತಕ್ಷಣಕ್ಕೆ ಸಿಟ್ಟು ಸೆಡವುಗಳನ್ನು ಅಭಿವ್ಯಕ್ತಿಸುವ ಮತ್ತು ಹಾಗೇ ಮರೆಯುವ ಗುಣ ಬೇರುಬಿಳಲಿನ ಹಾಗಿತ್ತು.. 

 ಅಪ್ಪನ ಅಪ್ಪ ಅಂದ್ರೆ ನನ್ನ ಅಜ್ಜನ ಹೆಸರು ತಿಪ್ಪನಾಯ್ಕ. ಬಹಳ ಕಲೆಗಾರ. ಎಲ್ಲರನ್ನು ಸಂಬಾಳಿಸಿಕೊಂಡು ಹೋಗೋ ನಿಪುಣಗಾರ. ಇವತ್ತೂ ನಮ್ಮ ಮನೆಯಲ್ಲಿ ಇರೋ ಉದ್ದನೆಯ ಮರಿಗಿ ಅಜ್ಜ ಮಾಡಿದ್ದು ಅಂತ ಮುದುಕವ್ವ ನಮಗೆ ಆಗೀಗ ನೆನಪಿಸುತಿದ್ಲು. ನಮ್ಮನೆಯಲ್ಲಿ ಹಿಸ್ಸೆ ಆದಾಗ ಆ ಕಾರಣಕ್ಕೆ ಅದು ನಮ್ಮ ಪಾಲಿಗೂ ಬಂದಿದೆ. ಮುದುಕವ್ವ, ತನ್ನ ಗಂಡ ಮಾಡಿದ್ದ ಏಕೈಕ ಕುರುಹುವಾದ ಈ ಮರಿಗಿ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಳು. ಇದರ ಜೊತೆಗೆ ತಾನು ಉಪಯೋಗಿಸುತ್ತಿದ್ದ ಎರಡು ಬೆತ್ತದ ಪೆಟ್ಟಿಗೆ ತೋರಿಸಿ ನಿನ್ನ ಅಜ್ಜನೇ ಮಾಡಿದ್ದು ಅಂತ ನಮಗೆಲ್ಲ ಹೇಳುತ್ತಿದ್ದಳು. ಬೆತ್ತದಿಂದ ಹೆಣೆದ ಕೌಶಲ್ಯ ನೋಡಿ ಅಜ್ಜನೆಷ್ಟು ನಿಪುಣಗಾರನೆಂದು ಭಾವಿಸಿ ಚಕಿತನಾಗಿದ್ದೆ. ಅಪ್ಪನಿಗೆ ಕೊಲ್ಲಮ್ಮಳೆಂಬುವ ಅಕ್ಕ ಇದ್ದಳು. ಮದುವೆ ಮಾಡಿ ಪಕ್ಕದ ಉಂಡುಗೋಡಿಗೆ ಕಳಿಸಿದ್ದರು. ಆಕೆಯ ಗಂಡನಿಗೆ ಹೆಡ್ ಮೇಷ್ಟ್ರು ಅಂತ ಕರಿತಿದ್ರು. ಹಂಗಂತ ಅವನು ಮೇಷ್ಟ್ರು ಆಗಿರಲಿಲ್ಲ. ಮನೆಯಲ್ಲಿ ಹಿರಿಯ, ಕೆಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದವ, ಮನೆ ಯಜಮಾನನಿಗೂ ಸಲಹೆ ನೀಡುತ್ತಿದ್ದ ಕಾರಣ, ಅವನಿಗೆ ಹೆಡ್ ಮೇಷ್ಟ್ರು ಅನ್ನೋ ಅನ್ವರ್ಥಕ ಹೆಸರು ಬಂದಿತ್ತು. ನಮಗೆಲ್ಲ ಅವನು ಹೆಡ್ ಮಾವನಾಗಿದ್ದ. ಕೆಲವರ ಪಾಲಿಗೆ ಹೆಡ್ಡನಾಗಿದ್ದ. ಹೀಗೆ ನಮ್ಮ ಮುದಕವ್ವನ ಏಕೈಕ ಪುತ್ರಿ ಕೊಲ್ಲಮ್ಮ ದೊಡ್ಡ ಕುಟುಂಬದ ಹಿರಿ ಸೊಸೆಯಾಗಿ, ಉಂಡುಗೋಡು ಮನೆ ಸೇರಿದ್ದಳು. 

ನಿನ್ನ ಅಪ್ಪ, ಸಾಲಿಗೆ ಹೋಗು ಅಂದ್ರೆ ಕಾಡೊಳಗೆ ಕಾಲ ಕಳೆದು ಬರೋನು ಎಂದು ಮುದುಕವ್ವ ಹೇಳುತ್ತಿದ್ದಳು. ತನ್ನ ಓರಗೆಯವರೊಂದಿಗೆ ಮರಕೋತಿ ಆಟವಾಡಿ, ಮನೆಗೆ ಬರುತ್ತಿದ್ದ. ಒಂದು ದಿನ ಸಾಲಿ ಮಾಸ್ತರರು ಈ ವಿಷಯ ಹೇಳಿದ ಮೇಲೆ ನಾನೇ ಬಿಟ್ಟು ಬರ‍್ತಿದ್ದೆ. ಸಾಲಿ ಅಂದ್ರೆ ಅಯ್ಯನೋರ ಮಠ. ಹಕ್ಕೆ ಮನೆಯಲ್ಲಿ ಹುಡ್ರೂನ ಕೂರಿಸಿ ಹೇಳೋರು. ನಾಕನೇ ಇಯತ್ತು ಮುಗಿಸಿದ. ಮಳಲು ಮೇಲೆ ಅಕ್ಷರ ಕಲಿಸೋರಂತೆ ಅಂತ ಅಜ್ಜಿ ಹೇಳಿದ ಹಾಗೆ ಅಪ್ಪನೂ ಅನೇಕ ಬಾರಿ ಇದನ್ನು ಹೇಳಿದ್ದ. ಪಂಚಾಂಗ ಇಟ್ಕೊಂಡು ಅಪ್ಪ, ರಾಶಿ, ಕಾಲ, ಗಣ, ಗುಣ ಅಂತ ಕನ್ನಡಕ ಹಾಕ್ಕೊಂಡು, ಲೆಕ್ಕ ಹಾಕಿ ಹೇಳ್ತಿದ್ದ. ಗ್ರಹಣ ಪುಸ್ತಕ ನೋಡಿ, ಏನೇನೋ ಮಂತ್ರಿಸಿ ಹೇಳ್ತಿದ್ದ. ಜೊತೆಗೆ ಸಹಿ ಹಾಕೋದು ಕಲಿತಿದ್ದ, ಇದನ್ನು ನೋಡಿ ಅಪ್ಪ ಶಾಲೆಗೆ ಹೋಗಿದ್ದ ಕುರುಹುಗಳಾಗಿ ನನ್ನ ಕಣ್ಣಿಗೆ ಕಾಣಿಸಿದ್ದವು.

 ಶರಾವತಿಗೆ ಮಡೆನೂರು ಆಣೆಕಟ್ಟು ಆದಮೇಲೆ ಜಾಲದ ಊರಿನ ಒಂದಷ್ಟು ಪ್ರದೇಶಗಳನ್ನು ಶರಾವತಿ ಹಿನ್ನೀರು ನುಂಗಿದರೆ, ಲಿಂಗನಮಕ್ಕಿ ಆಣೆಕಟ್ಟು ಆದ ಮೇಲೆ ಅಪ್ಪನ ಜಾಲದ ಊರಿನ ಮುಕ್ಕಾಲು ಪ್ರದೇಶಗಳನ್ನು ಅದೇ ನೀರು ನುಂಗಿತು. ಮನೆ, ಗದ್ದೆ, ತೋಟ, ದನ, ಕರು, ಕೋಳಿ, ಕೋಣ, ನಾಯಿಗಳನ್ನು ಕಳೆದುಕೊಂಡ ಜನರ ಬದುಕು ದುಸ್ತರವಾಯಿತು. ಇದರ ಕತೆಯನ್ನು ಅಪ್ಪ ಹೀಗೆ ಹೇಳ್ತಿದ್ದ “ಅಂದು ನಾವೆಲ್ಲ ಮನುಷ್ಯರಾಗಿ ಇದ್ದುದ್ದೇ ದೊಡ್ಡದು. ನಮ್ಮ ಕಷ್ಟ ಯಾರಿಗೆ ಹೇಳೋದು. ಎಲ್ಲರದ್ದು ಇದೇ ಕತೆ. ನಮ್ಮ ಜಾಲದ ಸೀಮೆಯಲ್ಲಿ ಮಳೇಮಠದವರು, ಗೇರುಸರಿ, ಉಂಡುಗೋಡು, ಹುಬಸೆ, ಮಕ್ಕಿಮನೆ, ಆಡಗಳಲೆ ಮನೆತನದವರೆಲ್ಲರೂ ಸೇರಿಕೊಂಡು ಊರು ಬಿಡೋ ತೀರ್ಮಾನ ಮಾಡಿದೆವು. ಕಷ್ಟ ಪಟ್ಟು ಕಟ್ಟಿದ ಮನೆ, ಕೊಟ್ಟಿಗೆ, ಅತ್ತಿಂದಿತ್ತ ಓಡಾಡುತಿದ್ದ ದನಕರುಗಳನ್ನು ನೋಡಿ ಮನೆಯಲ್ಲಿದ್ದ ಜನರೆಲ್ಲ ಒಟ್ಟಿಗೆ ಸೇರಿ ಅಳ್ತಾ ಇದ್ದೆವು. ಆ ಹೊಸ ಊರು ಹೆಂಗೋ, ಮನೆ ಮಕ್ಕಳಿಗೆ ಹೊಟ್ಟೆಬಟ್ಟೆ ಹೊರೆಯೋದು ಹೆಂಗೋ ಅಂತಲ್ಲ ಯೋಚನೆ ಮಾಡಿದ್ದೆವು. ನಮಗಿಂತ ಮುಂಚೆ ಹೊಸ ಊರಿಗೆ ಹೋದ ಕಂಬತ್ತಮನೆಯವರೆಲ್ಲ ಬರ‍್ರೋ ಹೆದರ್ ಬ್ಯಾಡಿ, ನಾವಿದ್ದೇವೆ ಅನ್ನೋ ಧೈರ್ಯದ ಮಾತಿನಿಂದ ಬಂದೆವು. ಮೊದ್ಲು ಈ ಊರಿಗೆ ನಮ್ಮ ಮನೆಯಿಂದ ಜಟ್ಟಪ್ಪ. ಆಮೇಲೆ ನಾನು ನಿನ್ನವ್ವ ಬಂದೆವು” ಅಂತ ಆ ಕಾಲದ ತನ್ನ ಸನ್ನಿವೇಶ ಕುರಿತು ಹೇಳಿದ್ದ.

 ಹೀಗೆ ಅಪ್ಪ ತನ್ನ ಮಾತು ಮುಂದುವರಿಸಿ ನಾವು ಈ ಹೊಸ ಊರಿಗೆ ಬರುವ ಮೊದ್ಲು ಒಂದು ದಿನ ಹುಬಸೆ ಕರಿಯಣ್ಣ ಮನೆಗೆ ಬಂದ. ಇಂವ ನಮ್ಮ ಯಜಮಾನ ಅಪ್ಪನಿಗೆ ಬಹಳ ಸಲುಗೆ ಇದ್ದವನು. ಬರ‍್ತಾ ಬಾಳೆಕೊಪ್ಪದಿಂದ ನಮ್ಮ ಯಜಮಾನಪ್ಪನ ಭಾವನನ್ನು ಕರೆದುಕೊಂಡು ಬಂದು, ಅದು ಇದು ಅಂತ ಮಾತಿಗೆ ಸುರು ಮಾಡ್ದ. ಅಲ್ಲಾ ಮರಾಯ ಹೋಗೋದಂತು ಗ್ಯಾರಂಟಿ. ಕೋಳಿನೆಲ್ಲ ಆ ಊರಿಗೆ ಹೆಂಗ್ಯ ತಗೋಂಡು ಹೋತಿಯಾ ಮರಾಯ ಅಂತ ನಮ್ಮ ಯಜಮಾನಪ್ಪನ ಹತ್ರ ಹೇಳ್ದ. ಭಾವನೆಂಟ ಬಂದಾನೆ ಏನಾರೆ ಒಂದು ಕೋಳೀನಾರು ಕೊಯ್ಯಬಹುದಿತ್ತೇನೋ ಅಂತ ನಿಧಾನ ಉಳಿಕೊಡ್ತಿಗೆ ಹೆಜ್ಜೆ ಹಾಕ್ದ. ಅಷ್ಟೊತ್ತಿಗೆ “ಯಜಮಾನಪ್ಪ ಈ ಕೋಳಿನೆಲ್ಲಾ ಹೆಂಗ್ಯೆ ಸಾಗಾಸಾಕೆ ಆಗುತ್ತೆ. ಒಂದು ಹುಂಜ ಮತ್ತು ಒಂದು ಹೆಂಟೆ ಬಿಟ್ಟು ಉಳಿದವೆಲ್ಲ ಬಂದ್ ನೆಂಟ್ರೆಗೆಲ್ಲ ಕೊಯ್ಯಕೆ ಕೊಡ್ರೆ” ಅಂತ ಮನೆಯಲ್ಲಿದ್ದ ಹೆಂಗಸ್ರಿಗೆ ಹೇಳಿ, ತನ್ನ ಮುದ್ರೆ ಒತ್ತುದ. ಕೋಳಿ ಕೊಡೋಕೆ ಮನಸ್ಸಿಲ್ಲದ ಮನಸ್ಸಿನಿಂದ ಹೆಂಗಸ್ರು ಒಡ್ಡಿ ಬಾಯಿ ತೆಗೆದು “ಮಕ್ಳು ಮರಿಗೆ, ಓದೋ ಸಾಲಿಗೆ ಅಂತ ನಾಕ್ ಕೋಳಿ ಸಾಕಿದ್ದೆ. ಇನ್ ನಾವೇ ಇಲ್ಲಿ ಇರೋದು ಗ್ಯಾರಂಟಿ ಇಲ್ಲ ಅಂದ ಮೇಲೆ ಕೋಳಿ ಇಟ್ಕಂಡು ಏನ್ ಮಾಡೋದಿದೆ” ಅಂತ ಗೊಣ ಗೊಣ ಅಂದು  ಎರಡು ಕೋಳಿ ಹಿರೇತಂದಜ್ಜಿ ಕೊಟ್ಟಳು. ಬೀರ, ತಿಪ್ಪ ಸೇರಿ ಎರಡು ಕೋಳಿ ಹಸಿಗೆ ಮಾಡಿ, ಹಿತ್ಲಕಡೆ ಬಾಗ್ಲಾಗೆ ಹೆಂಗಸ್ರಿಗೆ ತಂದು ಕೊಟ್ರು. ಕೋಳಿ ಸಾರು, ರೊಟ್ಟಿ ಜೊತೆಗೆ ಆಲೆಮನೆ ಹೆಂಡ ಸ್ವಲ್ಪ ಸ್ವಲ್ಪ ತಗೋಂಡದ್ದು ಆತು. ಅವತ್ತೆ ನೋಡು ಊರು ಬಿಡೋ ಸುದ್ದಿ ಬಂದ ಮೇಲೆ ಖುಷಿ ದಿನ ಅಂತ ನೋಡಿದ್ದು. ಬಾಳೆಕೊಪ್ಪದಾಂವ ಈ ವಿಚಾರ ಎತ್ತಿದ. ಇಷ್ಟು ದೊಡ್ ಮನೆ ಬಿಟ್ಟು, ತಕ್ಷಣ ಹೋಗೋದು ಕಷ್ಟ. ಸರ್ಕಾರ ತೋರಿಸಿರೋ ಜಾಗಕ್ಕೆ ಯಾರು ಮೊದ್ಲು ಹೋಗೋದು. ಬೀರ, ತಿಪ್ಪ ನಿಮ್ಮ ಕುಟುಂಬದವರು ಹೋತೀರಾನ? ಅಂದಾಗ “ಕೊಲ್ಲಜ್ಜಿ ಈ ಹುಡ್ರು ಕಟ್ಟಿಗಂಡು ನಾ ಹೆಂಗ್ಯೆ ಹೋಗ್ಲಿ. ಮಕ್ಳು ಸಣ್ಣಾವು” ಅಂತ ಸಣ್ಣ ದನಿಯೆಲ್ಲಿ ತನ್ನ ನಿರಾಕರಣೆ ಹೇಳಿದ್ಲು. ಆಮೇಲೆ ಹುಬಸೆ ಕರಿಯಣ್ಣ, ಬಾಳೆಕೊಪ್ಪದ ಭಾವನೆಂಟ ಸೇರಿ ನಂಗೆ, ನಮ್ಮ ಜೆಟ್ಟಪ್ಪಗೆ ಒಪ್ಪಿಸಿದರು. ಆಮೇಲೆ ನಾವು ಈ ಊರಿಗೆ ಬಂದೆವು.

ಇತ್ತ ಊರಿಗೆ ಬಂದ ಮೇಲೆ ಹಗಲು ರಾತ್ರಿ ಬಿದರು ಮಟ್ಟಿ ಕಡ್ದು, ಆಚೆದಿಂಬದಾಗೆ ಸಣ್ಣ ತಟ್ಟಿಮನೆ ಕಟ್ಟಿಗಂಡು ಒಲೆಹೂಡಿದ್ದಾತು. ಕಂಬತ್ತಮನೆ ಭದ್ರ ಮಾವನ ತಂಗಿ ಮಲ್ಲಮ್ಮನೇ ನಮ್ಮ ಜಟ್ಟಜ್ಜನ ಹೇಂಡ್ತಿ. ಭದ್ರ ಮಾವನ ಹೇಂಡ್ತಿ ಗೌರಮ್ಮಳು ನಮ್ಮ ಮುದಕವ್ವನ ಸಾಕುಮಗಳು. ಹಂಗಾಗಿ ಭದ್ರ ಮಾವ, ತನ್ನ ತಂಗಿ ಭಾವನನ್ನು ನೋಡ್ಕಂಡಷ್ಟೆ, ನಮ್ಮ ಕುಟುಂಬನನ್ನು ಕಾಪಾಡಿಕೊಂಡು ಬಂದನಂತೆ. ನಮಗೆಲ್ಲ ಧೈರ್ಯ ಕೊಟ್ಟವರೇ ಕಂಬತ್ತಮನೆಯವರು ಅಂತ ಅಪ್ಪ ಯಾವಾಗ್ಲು ಹೇಳ್ತಿದ್ದ. ಈ ಜಾಗ ತೋರಿಸಿ, ಇಲ್ಲಿ ಮನೆಮಾಡಿ ಅಂತ ದಾರಿ ತೋರಿಸಿದವನು ಕಂಬತ್ತಮನೆ ಸುಬ್ಬ ಮಾವ. ಅಂವ ಇರೋದಕೆ ನಮ್ಗೊಂದು ನೆಲೆ ಸಿಕ್ತು. ಇಲ್ಲಾಂದ್ರೆ ಕಷ್ಟಿತ್ತು ಅಂತ ಇವತ್ತಿಗೂ ಎಲ್ರೂ ನೆನಪು ಮಾಡಿಕೊಳ್ತಾರೆ. (ಮುಂದುವರಿಯುವುದು…)

ಡಾ. ಅಣ್ಣಪ್ಪ ಎನ್. ಮಳೀಮಠ್
ಸಹ ಪ್ರಾಧ್ಯಾಪಕರು

ಮೂರು ಭಾಗಗಳಲ್ಲಿ ಪ್ರಕಟವಾಗುವ ಈ ಲೇಖನದ ಎರಡನೆಯ ಭಾಗ ನಾಳೆ ಪ್ರಕಟವಾಗಲಿದೆ.

ಇದನ್ನೂ ಓದಿ- ಹಿಮಾಲಯದ ಭೂಕುಸಿತಗಳು ಹಾಗೂ ಪಶ್ಚಿಮ ಘಟ್ಟದ ಗುಡ್ಡಜರಿತಗಳು

More articles

Latest article