ಮುಖ್ಯಮಂತ್ರಿ ತಂಟೆಗೆ ಬಂದರೆ ಸುಮ್ಮನಿರೋದಿಲ್ಲ: ಶೋಷಿತ ಸಮುದಾಯಗಳ ಒಕ್ಕೂಟದ ಎಚ್ಚರಿಕೆ

Most read

ಬೆಂಗಳೂರು: ಮುಡಾ ಪ್ರಕರಣ ಕುರಿತಂತೆ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗೆಗಳು ಘಟಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ‌ ಅವರಿಗೆ ತೊಂದರೆ ಕೊಟ್ಟರೆ ಸುಮ್ಮನಿರೋದಿಲ್ಲ ಎಂದು ಶೋಷಿತ ಸಮುದಾಯಗಳ ಮುಖಂಡರು ಎಚ್ಚರಿಸಿದ್ದಾರೆ.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಒಕ್ಕೂಟದ ಪ್ರಧಾನ ಸಂಚಾಲಕ ಕೆ ಎಂ ರಾಮಚಂದ್ರಪ್ಪ, ಮೂಡಾ ವಿಚಾರವಾಗಿ ರಾಜ್ಯಪಾಲರು ಒಂದು ನಿರ್ಧಾರಕ್ಕೆ ಬರಬೇಕು. ಈ ಗೊಂದಲಕ್ಕೆ ತೆರೆ ಎಳೆಯದೇ ಇದ್ರೆ ರಾಜಭವನ ಚಲೋ ಹಮ್ಮಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ತೊಂದರೆ ಕೊಟ್ರೆ ನಾನು ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷ ಮೈಸೂರು ಭಾಗದಲ್ಲಿ ಸಿದ್ಧರಾಮಯ್ಯ ವಿರುದ್ಧ ನಡೆಯುತ್ತಿರುವ ಪಿತೂರಿ ಹಿನ್ನೆಲೆಯಲ್ಲಿ ಪ್ರತಿರೋಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಬೆಂಬಲ ಕೊಡಲು ಶೋಷಿತ ಸಮುದಾಯಕ್ಕೆ ಕರೆಕೊಟ್ಟಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.

ನಿರಪರಾಧಿಗಳನ್ನು ಆರೋಪಿ ಮಾಡಿ ಗೂಬೆ ಕೂರಿಸೋದು ಬಿಜೆಪಿಯ ಸಹಜ ಗುಣ. ಮುಡಾ ಪ್ರಕರಣದಲ್ಲಿ ಸಿದ್ಧರಾಮಯ್ಯ ಅವರ ಪಾತ್ರ ಏನೂ ಇಲ್ಲ. ಅವರ ವಿರುದ್ಧ ನಡೆಯುತ್ತಿರುವ ಪಿತೂರಿಗಳನ್ನು ಶೋಷಿತ ವರ್ಗ ವಿರೋಧಿಸುತ್ತದೆ ಎಂದು ಲೇಖಕಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದರು‌

ಯಾರೋ ಒಬ್ಬರು ಕೊಟ್ಟ ದೂರಿನನ್ವಯ ಸಿಎಂಗೆ ನೋಟಿಸ್ ಕೊಡುತ್ತಾರೆ ಎಂದರೆ ಹೇಗೆ? ಇದು ಸಂಪೂರ್ಣ ಅನ್ಯಾಯ. ಬಿಜೆಪಿಯವರು ನಡೆಸುತ್ತಿರುವುದು ಪಾದಯಾತ್ರೆ ಅಲ್ಲ ಪಾಪಯಾತ್ರೆ ಎಂದು ಲೇವಡಿ ಮಾಡಿದ ಅವರು, ಕೀಳು ರಾಜಕಾರಣ ದಯವಿಟ್ಟು ನಿಲ್ಲಿಸಿ, ರಾಜ್ಯದ ಹಲೆವೆಡೆ ನೆರೆ ಬಂದು ಜನರು ಸಂಕಷ್ಟದಲ್ಲಿದ್ದಾರೆ. ಅದರ ಬಗ್ಗೆ ನಿಗಾ ವಹಿಸಿ ಎಂದು ಅವರು ಹೇಳಿದರು‌.

ಸುದ್ದಿಗೋಷ್ಠಿಯಲ್ಲಿ ಮಾವಳ್ಳಿ ಶಂಕರ್, ಜಯದೇವ ನಾಯ್ಕ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

More articles

Latest article