ಸಕಲೇಶಪುರ: ಕಂದಾಯ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿ ತೆರಳಿದ ಬೆನ್ನಲ್ಲೇ ಪದೇ ಪದೇ ಗುಡ್ಡಕುಸಿತ ಸಂಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ನ ದೊಡ್ಡತಪ್ಲು ಬಳಿ ಎರಡು ಕಂಟೇನರ್ ಗಳು ಮಣ್ಣಲ್ಲಿ ಮುಳುಗಿದ್ದು, ಟ್ಯಾಂಕರ್ನಲ್ಲಿ ಸಿಲುಕಿದ್ದ ಚಾಲಕರನ್ನು ರಕ್ಷಿಸಲಾಗಿದೆ.
ಮೂವರು ಚಾಲಕರನ್ನು ಪೊಲೀಸರು ಹಾಗೂ ಗುತ್ತಿಗೆ ಪಡೆದ ಕಂಪನಿ ಸಿಬ್ಬಂದಿ ರಕ್ಷಿಸಿದ್ದು, ಮತ್ತಷ್ಟು ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಗುಡ್ಡ ಕುಸಿತದಿಂದ ಮಣ್ಣಿನಡಿ ಸಿಲುಕಿದ ಕಂಟೇನರ್ ರೈಲ್ವೆ ಹಳಿ ಮೇಲೆ ಬೀಳುವ ಆತಂಕ ಎದುರಾಗಿದೆ. ರೈಲ್ವೆ ಹಳಿ ಮೇಲೆ ಹಾದು ಹೋಗಿರುವ ರಸ್ತೆಯ ತುದಿಯಲ್ಲಿ ಕಂಟೇನರ್ ಉರುಳಿಬಿದ್ದಿದೆ.
ಈಗಾಗಲೇ ಗುಡ್ಡ ಕುಸಿತದಿಂದ ಬಂದ್ ಆಗಿರುವ ಸಕಲೇಶಪುರ ಮಂಗಳೂರು ರೈಲ್ವೆ ಮಾರ್ಗ ತ್ವರಿತಗತಿಯಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯ ನಡೆಯುತ್ತಿದ್ದರೂ ಪದೇ ಪದೇ ಮಣ್ಣು ಬೀಳುತ್ತಿದೆ.
ಕಡಗರವಳ್ಳಿ-ಯಡಕುಮರಿ ಬಳಿ ನಡೆಯುತ್ತಿರುವ ರೈಲ್ವೆ ಹಳಿ ದುರಸ್ತಿ ಕಾರ್ಯಕ್ಕೆ ಭಾರೀ ಮಳೆ ಒಂದೆಡೆ ಅಡ್ಡಿ ಮಾಡುತ್ತಿದ್ದರೆ, ಇನ್ನೊಂದೆಡೆ ಭೂಕುಸಿತದಿಂದ ಮತ್ತೆ ಮತ್ತೆ ಹಳಿಗಳ ಮೇಲೆ ಗುಡ್ಡ ಕುಸಿಯುತ್ತಿದೆ.
ಪ್ರತಿನಿತ್ಯ ರೈಲ್ವೆ ಮಾರ್ಗ ದುರಸ್ತಿ ಮಾಡುತ್ತಿರುವ ಕಾರ್ಮಿಕರಿಗೆ ತಿಂಡಿ, ಊಟ ಹಾಗೂ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲುಗಳು ಕೂಡ ಈಗ ಬಂದ್ ಆಗುವಂತಾಗಿದೆ.