ವಯನಾಡ್ (ಕೇರಳ): ವಯನಾಡ್ ನಲ್ಲಿ ಸಂಭವಿಸಿದ ಗುಡ್ಡಕುಸಿತದಿಂದ ಸತ್ತವರ ಸಂಖ್ಯೆ 150ಕ್ಕೆ ಏರಿದ್ದು, ನಾಪತ್ತೆಯಾದವರ ಶೋಧಕ್ಕೆ ಕಾರ್ಯಾಚರಣೆ ಮುಂದುವರೆದಿದೆ.
ಜಿಲ್ಲಾಡಳಿತ ಘೋರ ದುರಂತದಲ್ಕಿ ಕಣ್ಮರೆಯಾಗಿರುವ ಜನರ ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಈ ಪೈಕಿ ಮಣ್ಣಿನಡಿ ಹೂತುಹೋಗಿರುವವರ ಪತ್ತೆಗೆ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸುತ್ತಿದೆ.
ನಾಪತ್ತೆಯಾದವರ ಕುಟುಂಬ ಸದಸ್ಯರು, ತಮ್ಮ ಸಂಬಂಧಿಕರು ಕಾಣೆಯಾಗಿರುವ ಬಗ್ಗೆ ನೀಡುತ್ತಿರುವ ಮಾಹಿತಿ ಆಧರಿಸಿ ಜಿಲ್ಲಾಡಳಿತ ಕಾರ್ಯಾಚರಣೆ ನೀಡುತ್ತಿದೆ. ನೂರಾರು ಗಾಯಾಳುಗಳನ್ನು ರಕ್ಷಿಸಿ ವಯನಾಡ್ ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ 45 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 3069 ಮಂದಿಗೆ ಆಶ್ರಯ, ಉಪಚಾರ ಕಲ್ಪಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ತಲಾ 2 ಲಕ್ಷ ರೂ ಮತ್ತು ಗಾಯಾಳುಗಳಿಗೆ ತಲಾ 50,000 ರೂ ಪರಿಹಾರ ಘೋಷಿಸಿದ್ದಾರೆ.
ಕೇರಳ ಸರ್ಕಾರ ಭೂಕುಸಿತದಿಂದ ಬಾಧಿತರಾದವರಿಗಾಗಿ ಎರಡು ಕಂಟ್ರೋಲ್ ರೂಮ್ ಗಳನ್ನು ಸ್ಥಾಪಿಸಿದೆ. 9656938689 ಮತ್ತು 8086010833 ಸಂಖ್ಯೆಗಳಿಗೆ ಕರೆ ಮಾಡಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ.