ಆರು ಜನ ರಚಿಸಿದ ಚಕ್ರವ್ಯೂಹದಲ್ಲಿ ಭಾರತ ನಿರ್ನಾಮ ಆಗುತ್ತಿದೆ: ರಾಹುಲ್‌ ಗಾಂಧಿ

Most read

ಲೋಕಸಭೆ ಅಧಿವೇಶನದಲ್ಲಿ ನಡೆಯುತ್ತಿರುವ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ ಆಧುನಿಕ ಕಾಲದ ‘ಚಕ್ರವ್ಯೂಹ’ದಲ್ಲಿ ಭಾರತೀಯರನ್ನು ಸಿಕ್ಕಿಹಾಕಿಸಿದೆ ಎಂದು ತೀರ್ವ ವಾಗ್ದಾಳಿ ನಡೆಸಿದ್ದಾರೆ.

ಮಹಾಭಾರತವನ್ನು ಉಲ್ಲೇಖಿಸಿ ಮಾತನಾಡಿರುವ ರಾಹುಲ್ ಗಾಂಧಿ, ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ 6 ಜನರು ಅಭಿಮನ್ಯುವನ್ನು ‘ಚಕ್ರವ್ಯೂಹ’ದಲ್ಲಿ ಸಿಲುಕಿಸಿ ಕೊಂದರು. ಬಿಜೆಪಿ ರಚಿಸಿರುವ ಚಕ್ರವ್ಯೂಹ ಇಂದಿಗೂ ಆರು ಜನರ ನಿಯಂತ್ರಣದಲ್ಲಿದೆ. ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿಯವರ ನಿಯಂತ್ರಣದಲ್ಲಿದೆ. ದೇಶ ಈಗ ಕಮಲದ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಟೀಕಿಸಿದ್ದಾರೆ.

ಇದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರ ಮಧ್ಯಪ್ರವೇಶದ ನಂತರ, “ನೀವು ಬಯಸಿದರೆ, ನಾನು ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಅವರ ಹೆಸರನ್ನು ಬಿಟ್ಟುಬಿಡುತ್ತೇನೆ ಮತ್ತು ಕೇವಲ 3 ಹೆಸರುಗಳನ್ನು ತೆಗೆದುಕೊಳ್ಳುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದರು.

ಭಾರತವನ್ನು ಬಂಧಿಸಿರುವ ಚಕ್ರವ್ಯೂಹದ ಹಿಂದೆ ಮೂರು ಶಕ್ತಿಗಳಿವೆ. ಒಂದು ಅಂಶವು ಆರ್ಥಿಕ ಶಕ್ತಿ. ಇನ್ನೊಂದು ಕೇಂದ್ರ ಸಂಸ್ಥೆಗಳು. ಮೂರನೇಯದು ರಾಜಕೀಯ ಸಂಸ್ಥೆಗಳು. ಈ ಮೂರೂ ಜತೆಗೂಡಿ ಚಕ್ರವ್ಯೂಹದ ಹೃದಯಭಾಗದಲ್ಲಿ ಇದ್ದು, ದೇಶವನ್ನು ನಾಶಗೊಳಿಸಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಭಯದ ವಾತಾವರಣ ಇದೆ. ಈ ಭಯವು ದೇಶದ ಪ್ರತಿ ಭಾಗಕ್ಕೂ ವ್ಯಾಪಿಸಿದೆ. ಸಮಸ್ಯೆ ಇರುವುದು ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಪ್ರಧಾನಿಯಾಗುವ ಕನಸು ಕಾಣಲು ಅವಕಾಶವಿರುವುದರಲ್ಲಿ. ರಕ್ಷಣಾ ಸಚಿವರು ಪ್ರಧಾನಿಯಾಗಲು ಬಯಸಿದರೆ, ದೊಡ್ಡ ಸಮಸ್ಯೆ ಎದುರಾಗುತ್ತದೆ; ಅದು ಭಯ. ಈ ಭಯವು ದೇಶಾದ್ಯಂತ ಹರಡಿದೆ. ನನ್ನನ್ನು ನಾನು ಕೇಳಿಕೊಳ್ಳುವ ಪ್ರಶ್ನೆ ಎಂದರೆ, ಈ ಭಯವು ಏಕಿಷ್ಟು ಆಳವಾಗಿ ಹರಡುತ್ತಿದೆ? ಬಿಜೆಪಿಯಲ್ಲಿರುವ ನನ್ನ ಸ್ನೇಹಿತರು, ಸಚಿವರು, ರೈತರು, ಕಾರ್ಯಕರ್ತರೇಕೆ ಭೀತಿಗೊಂಡಿದ್ದಾರೆ? ಎಂದು ಹೇಳಿದರು.

More articles

Latest article