ಹಾವೇರಿ: ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಲ್ಲ, ಕಾಂಗ್ರೆಸ್ ನವರು ಮೊದಲು ಬಜೆಟ್ ಪೂರ್ಣ ಪಾಠ ಓದಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಜೆಟ್ ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟು ದುಡ್ಡು ಬಂದಿದೆ ಎಂದು ಕಾಂಗ್ರೆಸ್ ನವರು ಮೊದಲು ಪೂರ್ಣ ಬಜೆಟ್ ಓದಲಿ, ಅದೇ ಅಕೌಂಟ್ ಗೆ ಹಿಂದೆ ಯುಪಿಎ ಸರ್ಕಾರ ಇದ್ದಾಗ ಎಷ್ಟು ಹಣ ಬಂದಿತ್ತು ಎಂದು ನೋಡಲಿ, ರಾಜ್ಯಕ್ಕೆ ಕೇಂದ್ರದಿಂದ ಅನುದಾನವೇ ಬಂದಿಲ್ಲ ಎಂದು ಕಾಂಗ್ರೆಸ್ ನವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ.
ಕೇಂದ್ರದಿಂದ ವಿವಿಧ ಯೋಜನೆಗಳಿಗೆ ಡೆವಲ್ಯೂಷನ್ ಆಪ್ ಫಂಡ್ ನಲ್ಲಿ ಕರ್ನಾಟಕಕ್ಕೆ 44,870 ಕೋಟಿ ಹಣ ಕೊಟ್ಟಿದಾರೆ. ಉದಾಹರಣೆಗೆ ಕಳೆದ ಮೂರು ವರ್ಷಗಳಿಂದ ರಾಜ್ಯದ ರೈಲ್ವೆ ಯೋಜನೆಗೆ ಪ್ರತಿ ವರ್ಷ ಸುಮಾರು 7000 ಕೋಟಿ ರೂ. ಬರುತ್ತಿದೆ. ಯುಪಿಎ ಅವಧಿಯಲ್ಲಿ ಕೇವಲ ವಾರ್ಷಿಕ 700 ರೂ. ಬರುತ್ತಿತ್ತು. ಅಲ್ಲದೇ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಹಾಗೂ ಭೂಸ್ವಾಧೀನ ಮಾಡಿ ಕೊಡದಿರುವುದಕ್ಕೆ ಯೋಜನೆಗಳು ವಿಳಂಬವಾಗುತ್ತಿವೆ. ಈ ಬಗ್ಗೆ ಇತ್ತಿಚೆಗೆ ದೆಹಲಿಯಲ್ಲಿ ನಡೆದ ರಾಜ್ಯದ ಸಂಸದರ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅವರು ರಾಜ್ಯದ ಪಾಲಿನ ಹಣ ಹಾಗೂ ಭೂ ಸ್ವಾಧೀನ ಮಾಡಿಕೊಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಎಲ್ಲಾ ಮಾಹಿತಿ ಬಿಡುಗಡೆ ಮಾಡುವೆ ಎಂದು ತಿಳಿಸಿದರು.
ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕದ ಪ್ರಗತಿಗೆ ಎಲ್ಲಾ ಕೊಟ್ಟಿದಾರೆ, ಇನ್ನಷ್ಟು ಕೊಡಬೇಕಿದೆ ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೋಟಿ ಹಣ ಕೊಡಬೇಕಿದೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಅದನ್ನು ಕೇಳಿದ್ದೇವೆ. ಅವರು ಹಣಕಾಸು ಇಲಾಖೆ ಅನುಮತಿ ಪಡೆದು ನೀಡುವುದಾಗಿ ತಿಳಿಸಿದ್ದಾರೆ. ಪ್ರಯತ್ನ ಮಾಡಿದರೆ ಕೇಂದ್ರದಿಂದ ಹಣ ಬರುತ್ತದೆ. ಆದರೆ, ಕಾಂಗ್ರೆಸ್ ನವರು ಆಪಾದನೆ ಮಾಡಿಕೊಂಡು ಕೂತಿದ್ದಾರೆ. ಈಗ ಅನುದಾನ ಹರಿಯಲು ಪ್ರಾರಂಭ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಬರಲಿದೆ ಎಂದು ಹೇಳಿದರು.
ಮೂಡಾ ಹಗರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭಾನುವಾರ ಬಿಜೆಪಿ-ಜೆಡಿಎಸ್ ಸಭೆ ನಡೆಯಲಿದ್ದು ಸಭೆಯಲ್ಲಿ ಹೋರಾಟದ ರೂಪರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ. ಮೂಡಾ ಹಗರಣದಲ್ಲಿ ಯಾವುದೇ ತಪ್ಪಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ತಪ್ಪಾಗಿಲ್ಲ ಅಂದರೆ ತನಿಖೆಗೆ ಯಾಕೆ ಕೊಟ್ಟಿದಾರೆ. ತನಿಖೆಯಿಂದ ಎಲ್ಲಾ ಗೊತ್ತಾಗಲಿದೆ ಎಂದರು.
ಬಿಜೆಪಿಯವರು ಮನೆ ಮುರುಕರು ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಒಂದುವರೆ ವರ್ಷದಲ್ಲಿ ಮನೆ ಮುರುಕರು ಯಾರು ಎಂದು ಜನಕ್ಕೆ ಗೊತ್ತಾಗಿದೆ. ಮನೆಮುರುಕರು ಯಾರು ಅಂತ ಜನ ತೀರ್ಮಾನ ಮಾಡುತ್ತಾರೆ
ಜನ ಸರ್ಟಿಫಿಕೇಟ್ ಕೊಡುತ್ತಾರೆ ಎಂದು ಹೇಳಿದರು.