ಜನಪ್ರಿಯ ಓಟಿಟಿ ವೇದಿಕೆಯಾಗಿರುವ ನೆಟ್ ಫ್ಲಿಕ್ಸ್ (Netflix) ಇತ್ತೀಚೆಗೆ ತಾನು ಬಿಡುಗಡೆಗೊಳಿಸಿದ್ದ ಖ್ಯಾತ ತಾರೆ ನಯನತಾರಾ (Nayantara) ಅಭಿನಯದ “ಅನ್ನಪೂರ್ಣಿ” (Annapoorani) ಸಿನಿಮಾವನ್ನು ತೆಗೆದುಹಾಕಿದೆ. ಬಲಪಂಥೀಯ ಸಂಘಟನೆಗಳು ಈ ಸಿನಿಮಾದ ಕುರಿತು ವಿವಾದ ಹುಟ್ಟುಹಾಕಿದ್ದ ಬೆನ್ನಲ್ಲೇ “ಅನ್ನಪೂರ್ಣಿ” ಸಿನಿಮಾ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ಝೀ ಸ್ಟುಡಿಯೋ ಆರೆಸ್ಸೆಸ್ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್ ಸಂಘಟನೆಗೆ (Vishwa Hindu Parishad) ಕ್ಷಮಾಪಣಾ ಪತ್ರವನ್ನೂ ಬರೆದುಕೊಟ್ಟಿದೆ.
ಈ ಕ್ಷಮಾಪಣಾ ಪತ್ರದಲ್ಲಿ ಝೀ ಸ್ಟುಡಿಯೋ (Zee Studio) “ಹಿಂದೂ ಮತ್ತು ಬ್ರಾಹ್ಮಣ ಸಮುದಾಯದ ಸಹ ನಿರ್ಮಾಪಕರಾಗಿರುವ ನಮಗೆ ಯಾವುದೇ ಉದ್ದೇಶಗಳಿಲ್ಲಿ. ನಾವು ಈ ಸಮುದಾಯಗಳ ಭಾವನೆಗಳಿಗೆ ಘಾಸಿಯಾಗಿದ್ದಕ್ಕೆ ಕ್ಷಮಾಪಣೆ ಕೇಳುತ್ತಿದ್ದೇವೆ”. “ಸಹ ನಿರ್ಮಾಪಕರಾದ ಟ್ರೈಡೆಂಟ್ ಆರ್ಟ್ಸ್ನ ಸಂಸ್ಥೆಯೊಂದಿಗೆ ಮಾತನಾಡಿಕೊಂಡು ಸಿನಿಮಾದಲ್ಲಿ ಅಗತ್ಯ ಬದಲಾವಣೆ ಮಾಡುವವರೆಗೂ ಅದನ್ನು ನೆಟ್ ಫ್ಲಿಕ್ಸ್ ನಿಂದ ತೆಗೆದು ಹಾಕಲು ಪ್ರಯತ್ನ ನಡೆಸಿದ್ದೇವೆ” ಎಂದು ತಿಳಿಸಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಅನ್ನಪೂರ್ಣಿ ಸಿನಿಮಾವು ಕೇಂದ್ರ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ಪಡೆದಿರುವುದೇ ಅಲ್ಲದೇ ಕಳೆದ ಡಿಸೆಂಬರ್ ತಿಂಗಳಿನಲ್ಲೇ ತಮಿಳುನಾಡಿನ ಎಲ್ಲಾ ಕಡೆಗಳಲ್ಲಿ ಟಾಕೀಸುಗಳಲ್ಲಿ ತೆರೆ ಕಂಡಿತ್ತು.
ಹಿಂದು ಐಟಿ ಸೆಲ್ ಸ್ಥಾಪಕ ರಮೇಶ್ ಸೋಲಂಕಿ ಎಂಬಾತ ನೀಡಿದ್ದ ದೂರಿನ ಮೇಲೆ ಕಳೆದ ಜನವರಿ 8 ರಂದು, ಮುಂಬೈನಲ್ಲಿ ಪ್ರಕರಣ ದಾಖಾಗಿತ್ತು. ಈ ಹಿನ್ನೆಲೆಯಲ್ಲಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ನಯನತಾರಾ ಮತ್ತು ಜಯ್, ನಿರ್ದೇಶಕ ನೀಲೇಶ್ ಕೃಷ್ಣ, ನಿರ್ಮಾಪಕರಾದ ಜತಿನ್ ಸೇಥಿ, ಆರ್ ರವೀಂದ್ರನ್, ಪುನೀತ್ ಗೊಯೆಂಕಾ, ಝೀ ಸ್ಟುಡಿಯೋಸ್ ಮುಖ್ಯ ಉದ್ಯಮಾಧಿಕಾರಿ ಶಾರಿಖ್ ಪಟೇಲ್ ಹಾಗೂ ನೆಟ್ ಫ್ಲಿಕ್ಸ್ ಮುಖ್ಯಸ್ಥ ಮೊನಿಕಾ ಶೇರ್ಗಿಲ್ ಇವರುಗಳ ಮೇಲೆ ಎಫ್ ಐ ಆರ್ ದಾಕಲಾಗಿತ್ತು.
ವಿವಾದ ಏಕೆ?
ಅನ್ನಪೂರ್ಣಿ ಸಿನಿಮಾದಲ್ಲಿ ಒಂದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಹುಡುಗಿ (ನಯನತಾರಾ) ದೇಶದಲ್ಲೇ ಟಾಪ್ ಚೆಫ್ ಆಗುವ ಬಯಕೆಯಿಂದ ಹೊಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಸೇರುತ್ತಾಳೆ. ಈ ಸಿನಿಮಾದಲ್ಲಿ ಆಕೆ ಅಡುಗೆ ಕಲಿಯಲು ಚಿಕನ್ (ಕೋಳಿ ಮಾಂಸ) ಮುಟ್ಟುವುದು, ಬೇಯಿಸಿ ತಿನ್ನುವುದು, ಬಿರಿಯಾನಿ ಮಾಡುವುದು, ಆಕೆ ಮುಸ್ಲಿಂ ವ್ಯಕ್ತಿ ಫರಾನ್ (ಜಯ್) ನೊಂದಿಗೆ ಗೆಳೆತನ ಇಟ್ಟುಕೊಳ್ಳುವುದು, ಒಂದು ಸಂಭಾಷಣೆಯಲ್ಲಿ ವನವಾಸದಲ್ಲಿದ್ದ ರಾಮ ಲಕ್ಷ್ಮಣ ಮತ್ತು ಸೀತೆ ಸಹ ಮಾಂಸಾಹಾರ ಸೇವಿಸುತ್ತಿದ್ದ ಬಗ್ಗೆ ವಾಲ್ಮೀಕಿ ಬರೆದಿರುವ ಸಾಲುಗಳನ್ನು ಹೇಳುವುದು ಇಂತಹ ವಿಷಯಗಳನ್ನು ಅನಗತ್ಯವಾಗಿ ವಿವಾದಕ್ಕೆ ಒಳಪಡಿಸಲಾಗಿದೆ. ಸಿನಿಮಾ ಬ್ರಾಹ್ಮಣ ಸಮುದಾಯದ ಭಾವನೆಗಳಿದೆ ಘಾಸಿ ಮಾಡಿದೆ, ಲವ್ ಜಿಹಾದ್ ಗೆ ಪ್ರೇರಣೆ ನೀಡಿದೆ ಎಂಬೆಲ್ಲಾ ಆರೋಪಗಳನ್ನು ಮಾಡಲಾಗಿತ್ತು. ವಾಸ್ತವದಲ್ಲಿ “ಅನ್ನಪೂರ್ಣೀ” ಸಿನಿಮಾ ಯಾವುದೇ ಸಮುದಾಯಕ್ಕೆ ಅವಮಾನ ಮಾಡುವ ರೀತಿ ಇಲ್ಲದೇ, ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವ ಸಿನಿಮಾ ಎಂದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಸೋಷಲ್ ಮೀಡಿಯಾ ಟ್ರೋಲ್ ಮತ್ತು ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯ ತಲುಪಿರುವ ಸ್ಥಿತಿಗೆ ಈ ಪ್ರಕರಣ ಸಾಕ್ಷಿಯಾಗಿದೆ.