ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಕಳೆದ ತಿಂಗಳು ಬಂಧನಕ್ಕೆ ಒಳಗಾಗಿದ್ದ ಹಾಸನದ ವಿಧಾನ ಪರಿಷತ್ ಡಾ.ಸೂರಜ್ ರೇವಣ್ಣ ಅವರಿಗೆ ಬೆಂಗಳೂರಿನ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಸೂರಜ್ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ಕೋರ್ಟ್, ಆದೇಶ ಕಾಯ್ದಿರಿಸಿತ್ತು. ಇಂದು ಎರಡೂ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಆರೋಪಿ ಸೂರಜ್ ರೇವಣ್ಣ ಸಂತ್ರಸ್ತರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಬಾರದು. ತನಿಖಾಧಿಕಾರಿ ಮುಂದೆ ಪ್ರತಿ ತಿಂಗಳ ಎರಡನೇ ಭಾನುವಾರ ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಡಾ.ಸೂರಜ್ ರೇವಣ್ಣ ಅವರಿಗೆ ಜಾಮೀನು ದೊರೆತಿರುವುದರಿಂದ ಮಂಗಳವಾರದ ಮಧ್ಯಾಹ್ನದ ಹೊತ್ತಿಗೆ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.