ಸ್ಥಳೀಯ ಮಣ್ಣಿನ ಗುಣಮಟ್ಟ, ನೀರಿನ ಲಭ್ಯತೆ, ಹವಾಗುಣಗಳಂತಹ ಸಂಗತಿಗಳ ಆಧಾರದ ಮೇಲೆ ಪರಿಸರ ವ್ಯವಸ್ಥೆ ಪುನರ್ಜನ್ಮ ಪಡೆಯಲು ಅಲ್ಲಿ ಮನುಷ್ಯ ಹಸ್ತಕ್ಷೇಪದ ಅವಶ್ಯಕತೆ ಇದೆಯೋ ಇಲ್ಲವೋ ಎಂದು ನಿರ್ಧರಿಸಬೇಕಾಗುತ್ತದೆ. ಅದನ್ನು ಬಿಟ್ಟು ಖಾಲಿ ಜಾಗ ಕಂಡಲೆಲ್ಲಾ ಗಿಡ ನೆಡಲು ಹೋಗುವುದು ಅವಿವೇಕವಾಗುತ್ತದೆ – ನಾಗರಾಜ ಕೂವೆ, ಪರಿಸರ ಬರಹಗಾರರು
ಇತ್ತೀಚೆಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್ ಡಿ ಕುಮಾರಸ್ವಾಮಿಯವರು, ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ ಗಣಿಗಾರಿಕೆ ಕಡತಕ್ಕೆ ಸಹಿ ಮಾಡಿದರು. ಕೂಡಲೇ ಈ ಅಮೂಲ್ಯ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಕುರಿತು ಪರಿಸರ ಪ್ರಿಯರಿಂದ ಆಕ್ಷೇಪಣೆ ಎದ್ದಿತು. ಆಗ ಕುಮಾರಸ್ವಾಮಿಯವರು ‘ಗಣಿಗಾರಿಕೆ ನಡೆಯುವ ದೇವದಾರಿ ಶ್ರೇಣಿಯಲ್ಲಿ ದಟ್ಟ ಅರಣ್ಯವಿಲ್ಲ. ಅಲ್ಲಿ ದೊಡ್ಡ ಗಾತ್ರದ ಮರಗಳೂ ಇಲ್ಲ. ಅಲ್ಲಿ ಕುರುಚಲು ಗಿಡಗಳು ಮಾತ್ರ ಇವೆ’ ಎಂಬ ಹೇಳಿಕೆ ಕೊಟ್ಟರು. ಇಂತಹ ಪ್ರದೇಶಗಳ ಬಗೆಗೆ ಇವರದ್ದು ಮಾತ್ರವಲ್ಲ ಸಮಾಜದ ಹೆಚ್ಚಿನ ಜನರ ಅಭಿಪ್ರಾಯ ಇದೇ ಆಗಿದೆ.
ಪರಿಸರ ಎಂದರೆ ದಟ್ಟ ಕಾಡು, ಎತ್ತರಕ್ಕೆ ತಲುಪಿರುವ ಗಿಡ-ಮರಗಳೆಂಬ ಸೀಮಿತ ದೃಷ್ಟಿಕೋನ ಹೊಂದಿರುವ ಹೆಚ್ಚಿನವರು ಹುಲ್ಲುಗಾವಲು ಮತ್ತು ಹೆಚ್ಚು ಮರಗಳಿಲ್ಲದ ಗುಡ್ಡಗಳನ್ನು ನಿಷ್ಪ್ರಯೋಜಕ ಎಂದುಕೊಳ್ಳುತ್ತಾರೆ. ನಮ್ಮಲ್ಲಿ ಹೆಚ್ಚಿನವರು ದೊಡ್ಡ ದೊಡ್ಡ ಮರಗಳು ಮತ್ತು ಕೆಲವೇ ಕೆಲವು ಪ್ರಾಣಿ ಪಕ್ಷಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರದೇಶವೊಂದರ ಜೀವವೈವಿಧ್ಯದ ಬಗೆಗೆ ಸೀಮಿತ ನಿಲುವು ತಾಳುತ್ತಾರೆ.
ಪರಿಸರ ಸಂರಕ್ಷಣೆ ಎಂದೊಡನೆ ಎಲ್ಲರಿಗೂ ಥಟ್ಟನೆ ನೆನಪಿಗೆ ಬರುವುದು ಗಿಡ ನೆಡುವುದು ಮತ್ತು ಪ್ಲಾಸ್ಟಿಕ್ ಎತ್ತುವುದು. ಜೂನ್ ಐದರ ಪರಿಸರ ದಿನಾಚರಣೆಯಿಂದ ಪ್ರಾರಂಭವಾಗಿ ಇಡೀ ತಿಂಗಳು ಎಲ್ಲೆಡೆ ಗಿಡ ನೆಡುವ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತವೆ. ಒಂದೇ ತಿಂಗಳಿನಲ್ಲಿ ಕೋಟಿ ಕೋಟಿ ಗಿಡಗಳನ್ನು ಭೂಮಿಗೆ ಊರಲಾಗುತ್ತದೆ. ಪುನಃ ಮುಂದಿನ ಪರಿಸರ ದಿನಾಚರಣೆಗೆ ಅಷ್ಟೇ ಸಡಗರದಲ್ಲಿ ಗಿಡ ನೆಡುವುದು ನಡೆಯುತ್ತದೆ!
ಅರಣ್ಯ ಸಂವರ್ಧನೆಗೆ ಸುಲಭವಾದ ಪರಿಹಾರವೆಂದರೆ ಗಿಡ ನೆಡುವುದು ಎಂಬುದು ಹೆಚ್ಚಿನವರ ಅಭಿಪ್ರಾಯ. ನಿಸರ್ಗ ರಕ್ಷಣೆಗೆ ಸುಲಭವಾದ, ಆಕರ್ಷಕವಾದ ಮತ್ತು ಒಮ್ಮತದ ದೃಷ್ಟಿಕೋನವಿದು. ‘ಮರ ಕಡಿಯಬೇಡಿ’ ಎಂದಾಗ ಹುಟ್ಟಿಕೊಳ್ಳುವ ಅಭಿವೃದ್ಧಿ ವಿರೋಧಿ ಮತ್ತು ಪರಿಸರವ್ಯಾಧಿ ಎಂಬ ಹಣೆಪಟ್ಟಿ ಯಾವುದೂ ಗಿಡ ನೆಡುವ ಕಾರ್ಯಕ್ರಮಕ್ಕೆ ಅಡ್ಡಿಯಾಗುವುದಿಲ್ಲ. ಆದರೆ ಈ ಕೆಲಸ ಒಳ್ಳೆಯ ಆಶಯಗಳನ್ನು ಹೊಂದಿದ್ದರೂ ಅದು ತನ್ನದೇ ಆದ ಲೋಪದೋಷಗಳನ್ನೂ ಒಳಗೊಂಡಿದೆ.
ಖಾಲಿ ಜಾಗ ಕಂಡಲೆಲ್ಲಾ ಗಿಡ ನೆಡುವ ಖಯಾಲಿಯಿಂದಾಗಿ ಹುಲ್ಲುಗಾವಲು ಮತ್ತು ಕುರುಚಲು ಕಾಡಿನ ಪರಿಸರ ವ್ಯವಸ್ಥೆಯಲ್ಲಿ ಮಾತ್ರ ಬದುಕುವ ಸಸ್ಯಗಳು, ಕ್ರಿಮಿಕೀಟಗಳು, ಪಕ್ಷಿಗಳು, ಸರೀಸೃಪಗಳು, ಸಸ್ತನಿಗಳು ಇವತ್ತು ತೀವ್ರ ಅಪಾಯದಲ್ಲಿವೆ. ಅಂತಹ ಪ್ರದೇಶಗಳ ಮೂಲ ಸ್ವರೂಪ ಬದಲಾಯಿಸಿದರೆ ಆ ವಿಶಿಷ್ಟ ಜೀವಿಗಳು ಅಲ್ಲಿಂದ ಕಣ್ಮರೆಯಾಗುತ್ತವೆ. ಇದಕ್ಕೆ ಅತ್ಯುತ್ತಮ ಉದಾಹರಣೆ, ಪಶ್ಚಿಮ ಘಟ್ಟದ ಶೋಲಾ ಹುಲ್ಲುಗಾವಲುಗಳಲ್ಲಿ ಹಸಿರೀಕರಣದ ಹೆಸರಿನಲ್ಲಿ ಅರಣ್ಯ ಇಲಾಖೆ ಅಕೇಶಿಯಾ-ಕ್ಯಾಸುರೀನಾ ಮೊದಲಾದ ಗಿಡಗಳನ್ನು ನೆಟ್ಟು, ಆ ನೆಲ ಇಂದು ಬರಡಾಗಿರುವುದು. ಅಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಜಾತಿಯ ಹುಲ್ಲುಗಳು ಕಣ್ಮರೆಯಾಗಿರುವುದಾಗಿ ಅಧ್ಯಯನಗಳು ದೃಢಪಡಿಸಿವೆ.
ಮಳೆಗಾಲ ದಟ್ಟವಾಗಿದೆ. ಗಿಡ ನೆಡುವ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತಿದೆ. ಐದು ಸಾವಿರ, ಹತ್ತು ಸಾವಿರ ಮೊದಲಾದ ದೊಡ್ಡ ಸಂಖ್ಯೆಯಲ್ಲಿ ಗಿಡ ನೆಡಲು ತಂಡಗಳು ಹೊರಟಿವೆ.
ನಮ್ಮ ಅಭಿವೃದ್ಧಿ ಮಾದರಿಗಳು ಪಟ್ಟಣಗಳಲ್ಲಿರುವ ಎಲ್ಲಾ ವೈವಿಧ್ಯಗಳನ್ನು ನಾಶಪಡಿಸಿರುವುದರಿಂದ ಅಲ್ಲಿ ಇಂದು ಗಿಡ ನೆಡಬೇಕಾದ ಅವಶ್ಯಕತೆ ತುಂಬಾ ಇದೆ. ಪಟ್ಟಣದಲ್ಲಿ ಹಸಿರು ಹೆಚ್ಚಿಸಬೇಕಾದುದು ಅಗತ್ಯವಾಗಿ ಆಗಬೇಕಾದ ಕೆಲಸ. ಆದರೆ ಯಾವುದೋ ಕಾಡಿಗೋ ಗುಡ್ಡಕ್ಕೋ ಹೋಗಿ, ಪರಿಸರ ಸಂರಕ್ಷಣೆಯ ಉತ್ಸುಕತೆಯಿಂದ ಸಾವಿರ ಸಾವಿರ ಗಿಡ ನೆಡಲು ಹೋಗುವುದೋ ಅಥವಾ ಬೀಜದುಂಡೆ ಎಸೆಯುವುದೋ ಪರಿಸರದ ಮೇಲೆ ದುಷ್ಪರಿಣಾಮ ಬೀರುವುದೇ ಹೆಚ್ಚು ಎಂಬ ತಿಳುವಳಿಕೆ ಹೆಚ್ಚಿನವರಿಗಿಲ್ಲ. ಅವರು ನೆಟ್ಟ ಗಿಡಗಳಲ್ಲಿ ಆಕ್ರಮಣಕಾರಿ ಪ್ರಭೇದ ಇರಬಹುದು. ಅದು ಸ್ಥಳೀಯ ಪರಿಸರದ ಜೀವವೈವಿಧ್ಯತೆಯನ್ನು ಅಸ್ಥಿರಗೊಳಿಸಲೂ ಬಹುದು. ಅವರು ಎಸೆದ ಬೀಜದುಂಡೆಯಿಂದ ಗಿಡಗಳು ಹುಟ್ಟುತ್ತವೋ ಇಲ್ಲವೋ ಅದು ಬೇರೆಯದೇ ಚರ್ಚೆ. ಆದರೆ ಬೀಜದುಂಡೆಗೆ ಬಳಸುವ ಮಣ್ಣಿನಲ್ಲಿ ಪಾರ್ಥೇನಿಯಂ, ಲಂಟಾನಾದಂತಹ ವಿದೇಶಿ ಕಳೆಗಳ ಬೀಜಗಳಿರಬಹುದು. ನಮ್ಮ ಪರಿಸರ ವ್ಯವಸ್ಥೆಯ ಆರೋಗ್ಯಕ್ಕೆ ಮಾರಕವಾದ ಅಂತಹವನ್ನು ನಾವೇ ಪಸರಿಸದಂತಾಗುತ್ತದೆ. ಇನ್ನು ಗಿಡ ನೆಡುವುದೆಂದರೆ ಅರಳಿ, ಆಲ, ಮತ್ತಿ, ಬೇವು, ಹೊಂಗೆ ಎಂಬ ಭಾವನೆಯಿದೆ. ಅವು ಎಲ್ಲಾ ಕಡೆಗೂ ಸ್ಥಳೀಯ ಜಾತಿಯ ಗಿಡಗಳಾಗಿರಲು ಸಾಧ್ಯವಿಲ್ಲ.
ಮೊದಲನೆಯದಾಗಿ, ವನಮಹೋತ್ಸವ ಕಾರ್ಯಕ್ರಮ ಆಯೋಜಿಸುವವರಿಗೆ ಪರಿಸರ ಸೂಕ್ಷ್ಮತೆ, ವೈಜ್ಞಾನಿಕ ಪ್ರಜ್ಞೆಯ ತಿಳಿವು ಇರಬೇಕು. ಗಿಡ ನೆಡುವಾಗ ಆ ಸ್ಥಳದ ಮಣ್ಣು, ನೀರು, ಗಾಳಿ, ಮಳೆ, ವಾಯುಗುಣದ ಅರಿವು ಇರಲೇಬೇಕು. ಜೊತೆಗೆ ನೆಡುವ ಗಿಡಗಳು ಸ್ಥಳೀಯ ಜಾತಿಯವಾಗಿರಬೇಕು. ಹವಾಗುಣ ಬದಲಾವಣೆಯನ್ನು ಎದುರಿಸಿ ಬೆಳೆಯುವ ಶಕ್ತಿ ಸ್ಥಳೀಯ ಜಾತಿಯ ಸಸ್ಯಗಳಿಗೆ ಹೆಚ್ಚಿರುತ್ತದೆ ಎಂಬ ಜ್ಞಾನ ಕೂಡಾ ಅತಿ ಅಗತ್ಯ. ಹಾಗೆಯೇ ಮನುಷ್ಯ ಹಸ್ತಕ್ಷೇಪವಿಲ್ಲದ ಕಾಡಿನಲ್ಲಿ ಅಥವಾ ಕುರುಚಲು ಗಿಡಗಳಿರುವ ಗುಡ್ಡಗಳಲ್ಲಿ ಗಿಡ ನೆಡಲು ಹೋಗಲೇಬಾರದು ಎಂಬ ಅರಿವು ಅತೀ ಅಗತ್ಯ.
ಅಕೇಶಿಯಾ, ನೀಲಗಿರಿ, ಕ್ಯಾಸುರೀನದಂತಹ ಏಕಜಾತಿಯ ನೆಡುತೋಪುಗಳನ್ನು ನೆಟ್ಟ ಪ್ರದೇಶ ಮತ್ತು ವಿಪರೀತ ಮನುಷ್ಯ ಹಸ್ತಕ್ಷೇಪದಿಂದ ಮಣ್ಣಿನ ಸಾರವೇ ನಾಶವಾಗಿರುವಂತಹ ಪ್ರದೇಶಗಳಲ್ಲಿ ಪುನಃ ಪರಿಸರ ವ್ಯವಸ್ಥೆ ರೂಪುಗೊಳ್ಳಲು ಗಿಡ ನೆಡುವ, ನೀರು ಹಾಕುವ, ರಕ್ಷಣೆ ಒದಗಿಸುವಂತಹ ಅವಶ್ಯಕತೆ ಇರುತ್ತದೆ. ಅದನ್ನು ಬಿಟ್ಟು ಉಳಿದ ಜಾಗಗಳಲ್ಲಿ ಮನುಷ್ಯ ಹಸ್ತಕ್ಷೇಪ ಮಾಡದಿರುವುದೇ ನಾವಲ್ಲಿಗೆ ಮಾಡಬಹುದಾದ ದೊಡ್ಡ ಉಪಕಾರ. ಅಷ್ಟರಮಟ್ಟಿಗೆ ಪರಿಸರದ ಸಂಕೀರ್ಣ ವ್ಯವಸ್ಥೆಯನ್ನು ಕೆಡಿಸುವುದನ್ನು ನಾವು ಸಣ್ಣ ಮಟ್ಟಿಗಾದರೂ ತಡೆಯಬಹುದು.
‘ಮನುಷ್ಯ ನೆಟ್ಟು ಬೆಳೆಸಿದ ಕಾಡಿಗಿಂತ, ಸಹಜ ಹುಲ್ಲುಗಾವಲುಗಳು ಹೆಚ್ಚು ಕಾರ್ಬನ್ ಹೀರಿಕೊಳ್ಳುತ್ತವೆ’ ಎಂದು ವೈಜ್ಞಾನಿಕ ಸಂಶೋಧನೆಯೊಂದು ಅಭಿಪ್ರಾಯ ಪಡುತ್ತದೆ.
ಸ್ಥಳೀಯ ಮಣ್ಣಿನ ಗುಣಮಟ್ಟ, ನೀರಿನ ಲಭ್ಯತೆ, ಹವಾಗುಣಗಳಂತಹ ಸಂಗತಿಗಳ ಆಧಾರದ ಮೇಲೆ ಪರಿಸರ ವ್ಯವಸ್ಥೆ ಪುನರ್ಜನ್ಮ ಪಡೆಯಲು ಅಲ್ಲಿ ಮನುಷ್ಯ ಹಸ್ತಕ್ಷೇಪದ ಅವಶ್ಯಕತೆ ಇದೆಯೋ ಇಲ್ಲವೋ ಎಂದು ನಿರ್ಧರಿಸಬೇಕಾಗುತ್ತದೆ. ಅದನ್ನು ಬಿಟ್ಟು ಖಾಲಿ ಜಾಗ ಕಂಡಲೆಲ್ಲಾ ಗಿಡ ನೆಡಲು ಹೋಗುವುದು ಅವಿವೇಕವಾಗುತ್ತದೆ.
ಗಿಡ ನೆಡುವುದು ಸಂಪೂರ್ಣ ತಪ್ಪು ಎಂದು ಹೇಳಲಾಗದು. ಆದರೆ ಸ್ಥಳೀಯ ಪರಿಸರ ವ್ಯವಸ್ಥೆಯ ಅರಿವಿಲ್ಲದೇ ಪರಿಸರ ಕಾಳಜಿಯ ಹೆಸರಿನಲ್ಲಿ ಮತ್ತೊಂದು ರೀತಿಯ ಅವಘಡ ಜರಗದಂತೆ ಎಚ್ಚರ ವಹಿಸಬೇಕು. ಗಿಡ ನೆಡುವ ಚಟುವಟಿಕೆಯಲ್ಲಿ ವೈಜ್ಞಾನಿಕ ವಿಧಾನ ಅನುಸರಿಸುವುದು, ತಜ್ಞರ ಸಲಹೆ ಪಡೆಯುವುದು ವಿವೇಕದ ನಡೆಯಾಗುತ್ತದೆ.
ಇವತ್ತು ಗಣಿಗಾರಿಕೆ, ಹೆದ್ದಾರಿ ನಿರ್ಮಾಣ, ಸುರಂಗ ಮಾರ್ಗ, ರೋಪ್ ವೇ, ಭೂಗರ್ಭ ಜಲವಿದ್ಯುತ್ ಯೋಜನೆ, ಕಲ್ಲುಕ್ವಾರಿ, ಬೃಹತ್ ನೀರಾವರಿ ಯೋಜನೆ, ಹೊಸ ರೈಲು ಮಾರ್ಗ ಮೊದಲಾದ ಸರ್ಕಾರಗಳ ದೊಡ್ಡ ದೊಡ್ಡ ಅವೈಜ್ಞಾನಿಕ ಯೋಜನೆಗಳು ನಮ್ಮ ಪರಿಸರ ಮತ್ತು ಜೀವವೈವಿಧ್ಯವನ್ನು ಬಲಿ ತೆಗೆದುಕೊಳ್ಳುತ್ತಿವೆ. ಇಂತಹುದರ ವಿರುದ್ಧ ಮಾತನಾಡಬೇಕಾದುದು, ಜಾಗೃತಿ ಹುಟ್ಟಿಸ ಬೇಕಾದುದು, ವಿವಿಧ ರೂಪಗಳಲ್ಲಿ ಪ್ರತಿಭಟಿಸ ಬೇಕಾದುದು ಇವತ್ತಿನ ಅತೀ ಅಗತ್ಯ. ಪ್ರಭುತ್ವವನ್ನು ಪ್ರಶ್ನಿಸದೇ ಪರಿಸರ ಉಳಿಯುವುದಿಲ್ಲ ಎಂದು ಕೇವಲ ಗಿಡ ನೆಡುವ, ಪ್ಲಾಸ್ಟಿಕ್ ಎತ್ತುವ ಪರಿಸರ ಪ್ರೇಮಿಗಳು ಅರ್ಥೈಸಿಕೊಳ್ಳಬೇಕು. ಹಾಗೆಯೇ ಭಾರತದ ಯಾವುದೇ ಮುಖ್ಯ ರಾಜಕೀಯ ಪಕ್ಷಗಳೂ ಪರಿಸರ ಸಂರಕ್ಷಣೆಯ ಬಗೆಗೆ ಕಿಂಚಿತ್ತೂ ಆಸಕ್ತಿ ಹೊಂದಿಲ್ಲ. ಹೀಗಿರುವಾಗ ‘ಪಕ್ಷ ಪ್ರೇಮಿಗಳು ನೈಜ ಪರಿಸರ ಪ್ರೇಮಿಗಳಾಗಲು ಸಾಧ್ಯವಿಲ್ಲ’ ಎಂಬುದು ಜೀವವಿಸ್ಮಯಗಳನ್ನು ಅತೀ ವೇಗದಲ್ಲಿ ಕಳೆದು ಕೊಳ್ಳುತ್ತಿರುವ ಈ ಕಾಲದ ಕಹಿ ಸತ್ಯ.
ಪರಿಸರ ಬರಹಗಾರರು
ಇದನ್ನೂ ಓದಿ- http://‘ಪರಿಸರ ಪ್ರಜ್ಞೆ’ ರೂಪುಗೊಳ್ಳಬೇಕಿದೆ https://kannadaplanet.com/environmental-consciousness-needs-to-be-developed/