ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿರಾಡಿಘಾಟ್ನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಇಂದು ಮುಂಜಾನೆ ದೊಡ್ಡತಪ್ಲು ಬಳಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. ಈ ಘಟನೆಯಿಂದಾಗಿ ಸರಿಸುಮಾರು 10 ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಟ್ರಕ್, ಲಾರಿ ಟ್ಯಾಕರ್ ಓಡಾಟಕ್ಕೆ ತಾತ್ಕಾಲಿಕ ತಡೆ ಹೇರಲಾಗಿದೆ. ಹಾಸನದ ಕಂದಲಿ ಗ್ರಾಮದ ಬಳಿ ಚೆಕ್ ಪೋಸ್ಟ್ ನಿರ್ಮಿಸಿ ಪೊಲೀಸರು ವಾಹನಗಳನ್ನು ಶಿರಾಡಿಘಾಟ್ಗೆ ತೆರಳದಂತೆ ಅಲ್ಲೇ ತಡೆಯುತ್ತಿದ್ದಾರೆ.
ಇನ್ನೊಂದೆಡೆ ಬೆಂಗಳೂರು ಮಂಗಳೂರಿಗೆ ಸಂಪರ್ಕಿಸುವ ಮತ್ತೊಂದು ಘಾಟ್ ರಸ್ತೆ ಚಾರ್ಮಾಡಿ ಘಾಟ್ ರಸ್ತೆಯಲ್ಲೂ ಪ್ರಯಾಣ ದುಸ್ತರವಾಗಿದ್ದು, ಹಾಸನ ಬಳಿಯೇ ವಾಹನ ನಿಲ್ಲಿಸಲು ಪೊಲೀಸರು ಸೂಚನೆ ನೀಡಿದ್ದಾರೆ.
ಘಾಟ್ ರಸ್ತೆ ಮೂಲಕ ಮಂಗಳೂರಿಗೆ ತಲುಪಬೇಕಿರುವ ಪ್ರಯಾಣಿಕರನ್ನು ಹಾಸನದಲ್ಲೇ ತಡೆದು ಗುಡ್ಡ ಕುಸಿತದ ಮಾಹಿತಿ ನೀಡಿ ವಾಪಸ್ ಕಳಿಹಿಸುತ್ತಿದ್ದಾರೆ. ಸಾರಿಗೆ ಬಸ್ ನಲ್ಲಿ ಮಾತ್ರ ಸಕಲೇಶಪುರದ ವರೆಗೆ ಚಲಿಸಲು ಪೊಲೀಸರು ಅನುವು ಮಾಡಿದ್ದಾರೆ. ರಸ್ತೆಗೆ ಕುಸಿದ ಮಣ್ಣು ತೆರವು ಮಾಡಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.
ಇಂದು ದೊಡ್ಡತಪ್ಲು ಬಳಿಯ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಡರಾತ್ರಿ ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.