ದುಂದುವೆಚ್ಚದ ಮತ್ತು ಆಡಂಬರದ ಕಾರ್ಯಕ್ರಮಗಳಿಂದ ಪ್ರಜಾತಂತ್ರ ದೇಶದ ಚುನಾಯಿತ ಸರಕಾರ ದೂರ ಇರಬೇಕು. ಅಧಿಕಾರ ದುರುಪಯೋಗಮಾಡಿಕೊಂಡು ಧನಿಕನೊಬ್ಬನ ಕಾರ್ಯಕ್ರಮಕ್ಕೆ ಬೆಂಬಲ, ಸಹಕಾರ ನೀಡುತ್ತಾ ಜನಾಮಾನ್ಯರ ನಿತ್ಯ ಜೀವನಕ್ಕೆ ತೊಂದರೆ ಮಾಡುವುದು ಅಕ್ಷಮ್ಯ. ಎಲ್ಲಕ್ಕೂ ಮುಖ್ಯವಾಗಿ ಬಿಲಿಯಾಧಿಪತಿಯೊಬ್ಬನ ಶ್ರೀಮಂತಿಕೆಯ ಅಸಹ್ಯ ಪ್ರದರ್ಶನದ ಕಾರ್ಯಕ್ರಮಕ್ಕೆ ಬಡ ದೇಶದ ಪ್ರಧಾನಿಯ ಪ್ರತಿಕ್ರಿಯೆ ಹೇಗಿರಬೇಕು ಎಂದರೆ ರಾಹುಲ್ ಗಾಂಧಿ ನೀಡಿದ ಪ್ರತಿಕ್ರಿಯೆಯಂತಿರಬೇಕು- ಶ್ರೀನಿವಾಸ ಕಾರ್ಕಳ.
‘ಮದುವೆ’ ಎನ್ನುವುದು, ಒಂದು ಹೆಣ್ಣು ಮತ್ತು ಒಂದು ಗಂಡು, ಅಂದರೆ ಎರಡು ವ್ಯಕ್ತಿಗಳ ನಡುವೆ ನಡೆಯುವ ಕಾರ್ಯಕ್ರಮ. ಹೆಚ್ಚೆಂದರೆ ಎರಡು ಕುಟುಂಬಗಳ ನಡುವೆ ನಡೆಯುವ ಖಾಸಗಿ ಕಾರ್ಯಕ್ರಮ. ಅದು ಖಾಸಗಿಯೇ ಆಗಿರಬೇಕೇ ಹೊರತು ಸಾರ್ವಜನಿಕ ಕಾರ್ಯಕ್ರಮ ಆಗಬಾರದು. ಹಾಗೆ ಸಾರ್ವಜನಿಕ ಕಾರ್ಯಕ್ರಮವಾಗುವುದು, ಆಡಂಬರದೊಂದಿಗೆ ಶ್ರೀಮಂತಿಕೆಯ ಪ್ರದರ್ಶನಕ್ಕೆ ಕಾರಣವಾಗುವುದು ಅಸಹ್ಯ ಮಾತ್ರವಲ್ಲ, ಪ್ರತಿಶತ 80 ಜನಸಂಖ್ಯೆ ರೇಷನ್ ನಲ್ಲಿ ಬದುಕುವ ಬಡ ದೇಶದಲ್ಲಿ ಅದೊಂದು ನೈತಿಕ ಅಪರಾಧ ಮತ್ತು ಕ್ರೌರ್ಯ ಕೂಡಾ.
ಹೀಗಂದಾಕ್ಷಣ, ‘ಅವರಲ್ಲಿ ಹಣ ಇದೆ, ಅವರು ತಮಗೆ ಬೇಕಾದ ಹಾಗೆ ಖರ್ಚು ಮಾಡುತ್ತಾರೆ, ಅದರಲ್ಲಿ ತಪ್ಪೇನು?’ ಎಂದು ಕೇಳುವವರಿದ್ದಾರೆ. ಇಲ್ಲಿ ಅನೇಕ ಪ್ರಶ್ನೆಗಳು ಮೂಡಿ ಬರುತ್ತವೆ. ಅವರು ಶ್ರೀಮಂತರು ನಿಜ. ಆದರೆ ಅವರಿಗೆ ಆ ಶ್ರೀಮಂತಿಕೆ ಹೇಗೆ ಬಂತು? ಬಡವರಿಗೆ ಸೇರಬೇಕಾದ ಹಣ ಅಸಮಾನ ಆರ್ಥಿಕ ಹಂಚಿಕೆಯ ಕಾರಣವಾಗಿ ಶ್ರೀಮಂತರಿಗೆ ಸೇರಿದ್ದರಿಂದಲ್ಲವೇ ಅವರು ಶ್ರೀಮಂತರಾದುದು? ಸರಿಯಪ್ಪ, ಅವರು ತಮ್ಮ ಶ್ರೀಮಂತಿಕೆಯನ್ನು ಬಹಿರಂಗವಾಗಿ ಪ್ರದರ್ಶಿಸ ಬಯಸುತ್ತಾರೆ, ಅದಕ್ಕೆ ಪ್ರಜ್ಞಾವಂತ ಸಮಾಜದ ಪ್ರತಿಕ್ರಿಯೆ ಹೇಗಿರಬೇಕು? ಬಾಯಿ ತೆರೆದರೆ ಬಡವರು ಹಿಂದುಳಿದವರು ದೀನದಲಿತರು ಎಂದು ಬಡಬಡಿಸುವ ರಾಜಕೀಯ ನಾಯಕರ ಪ್ರತಿಕ್ರಿಯೆ ಹೇಗಿರಬೇಕು? ಅವರು ಅವುಗಳಿಂದ ದೂರ ಇರಬೇಡವೇ?
ಅಂಬಾನಿ ಮಗನ ಮದುವೆ
ಈ ಎಲ್ಲ ಪ್ರಶ್ನೆಗಳು ಮುನ್ನೆಲೆಗೆ ಬರಲು ಕಾರಣ ಕಳೆದ ಸರಿಸುಮಾರು ಒಂದು ವರ್ಷದಿಂದ ಸುದ್ದಿ ಮಾಡುತ್ತಿರುವ ಮುಕೇಶ್ ಅಂಬಾನಿ ಮಗ ಅನಂತ ಅಂಬಾನಿಯ ಮದುವೆ. ಕಳೆದ ಅನೇಕ ತಿಂಗಳಿಂದ ಸೋಶಿಯಲ್ ಮೀಡಿಯಾ ತುಂಬಾ ಈ ಹೈಫೈ ಮದುವೆಯದ್ದೇ ಸುದ್ದಿ. ಶುಭ ಸಮಾರಂಭದ ಸಂಭ್ರಮದ ಸುದ್ದಿಯಾಗಬೇಕಾದ ಇದು ಬರಬರುತ್ತಾ ಅನೌಚಿತ್ಯತೆ, ಆಡಂಬರ ಇತ್ಯಾದಿಗಳ ಕಾರಣ ಹಾಸ್ಯಾಸ್ಪದ ಮತ್ತು ಗೇಲಿಯ ಸುದ್ದಿಯಾದುದೇ ಹೆಚ್ಚು.
ಮದುವೆ ಸಂಬಂಧದ ಒಂದೆರಡು ಖಾಸಗಿ ಕಾರ್ಯಕ್ರಮಗಳಿಗೆ ಸೀಮಿತವಾಗಬೇಕಿದ್ದ ಇದು ವಿವಾಹಪೂರ್ವ ಸಂಭ್ರಮಾಚರಣೆಗಳಿಂದ ಹೆಚ್ಚು ಸುದ್ದಿ ಮಾಡಿತು. ಗುಜರಾತ್ ನ ಜಾಮ್ ನಗರದ ಮಿಲಿಟರಿ ಮಹತ್ವದ ಸಣ್ಣದೊಂದು ವಿಮಾನ ನಿಲ್ದಾಣವನ್ನು ಕೆಲ ದಿನಗಳ ಮಟ್ಟಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿಸಿ, ಖಾಸಗಿ ಮದುವೆಗೆ ನೆರವಾಗುವ ಮೂಲಕ ಸರಕಾರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡಿತು. ಧನಿಕನೊಬ್ಬನ ಮನೆಯ ಖಾಸಗಿ ಕಾರ್ಯಕ್ರಮಕ್ಕೆ ಭಾರತ ಸರಕಾರವೇ ಕೈ ಜೋಡಿಸಿತು. ಆಳುವವರಿಗೆ ತಮ್ಮನ್ನು ತಾವು ಮಾರಿಕೊಂಡ ಮಾಧ್ಯಮಗಳೂ ಈ ಖಾಸಗಿ ಮದುವೆಯನ್ನು ಅದೇನೋ ರಾಷ್ಟ್ರೀಯ ಮಹತ್ವದ ಕಾರ್ಯಕ್ರಮ ಎಂಬಂತೆ ಬಿಂಬಿಸಿದವು.
ಇದೀಗ ಮುಂಬೈಯಲ್ಲಿ ಮದುವೆಯ ಅಂತಿಮ ಕಾರ್ಯಕ್ರಮ ನಡೆಯುತ್ತಿದ್ದು ದೇಶ ವಿದೇಶದಿಂದ ಗಣ್ಯರನ್ನು ಈ ಮದುವೆಗೆ ಕರೆ ತರಲಾಗಿದೆ. ಜುಲೈ 12-15ರ ವರೆಗೆ ಮುಂಬೈಯ ಜನ ನಿಬಿಡ ಬಾಂದ್ರ ಕುರ್ಲಾ ಪ್ರದೇಶವನ್ನು (ಜಿಯೋ ಕನ್ವೆನ್ಶನ್ ಸೆಂಟರ್ ನ ಹತ್ತಿರದ ಎಲ್ಲ ರಸ್ತೆಗಳು) ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧಿಸಿ ಒಂದು ರೀತಿಯಲ್ಲಿ ಕರ್ಫ್ಯೂ ಹೇರಲಾಗಿದೆ. ಮದುವೆ ಸಮಾರಂಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರೂ ಪಾಲ್ಗೊಂಡಿದ್ದಾರೆ. ಲಾಲೂ ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ ಮೊದಲಾದ ಘಟಾನುಘಟಿ ರಾಜಕೀಯ ನಾಯಕರೂ ಭಾಗವಹಿಸಿದ್ದಾರೆ.
ಇನ್ನು, ಮದುವೆಯಲ್ಲಿ ಪಾಲ್ಗೊಂಡ ಸಿನಿಮಾ ನಟ ನಟಿಯರು, ಕ್ರಿಕೆಟರುಗಳ ಬಗ್ಗೆ ಹೇಳದಿರುವುದೇ ಒಳ್ಳೆಯದು. ದೇಶದಲ್ಲಿ ಜನಸಾಮಾನ್ಯರಿಗೆ ಅನ್ಯಾಯವಾದಾಗ, ದೇಶದ ಸಂವಿಧಾನ, ಪ್ರಜಾತಂತ್ರಕ್ಕೆ ಬೆದರಿಕೆ ಎದುರಾದಾಗ, ಇದರ ವಿರುದ್ಧ ದೇಶಕ್ಕೆ ದೇಶವೇ ಪ್ರತಿಭಟನೆಗಿಳಿದರೂ ತುಟಿ ಪಿಟಕ್ಕೆನ್ನದ ಸೆಲೆಬ್ರಿಟಿಗಳಿವರು.!
5000 ಕೋಟಿಯ ಮದುವೆ!
ಧನಿಕನೊಬ್ಬನ ಮನೆಯ ಈ ಮದುವೆಗೆ ಈಗಾಗಲೇ ಆಗಿರುವ ಖರ್ಚು ಎಷ್ಟು? 2500 ಕೋಟಿ ರುಪಾಯಿ ಎಂದು ಕೆಲವು ವರದಿಗಳು ಹೇಳಿದರೆ, 5000 ಕೋಟಿ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಈ ಸಂದರ್ಭದಲ್ಲಿ ಇತ್ತೀಚೆಗೆ ಖ್ಯಾತ ಪತ್ರಕರ್ತ ಸಾಮಾಜಿಕ ಹೋರಾಟಗಾರ ಪಿ ಸಾಯಿನಾಥ್ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳಬೇಕು- “ಮಹಾರಾಷ್ಟ್ರದಲ್ಲಿ ರೈತರು ಎಷ್ಟೊಂದು ಕಷ್ಟದಲ್ಲಿದ್ದಾರೆಂದರೆ ಸಾಲ ತೀರಿಸಲಾಗದ ಕಾರಣ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿದರ್ಭಾ, ಮರಾಠವಾಡಾ ಪ್ರದೇಶಗಳಲ್ಲಿ ಮಗಳಿಗೆ ಮದುವೆ ವಯಸು ದಾಟಿದರೂ ಅವರಿಗೆ ಮದುವೆ ಮಾಡಿಸಲಾಗದ ಕೊರಗಿನಲ್ಲಿ ಅಪ್ಪ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಅಪ್ಪ ಸಾಯಲು ತಾನು ಕಾರಣ ಎಂದು ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ. ಅಂಬಾನಿಯ ಮಗನ ಮದುವೆಯ ಪ್ರಿವೆಡ್ಡಿಂಗ್ ಕಾರ್ಯಕ್ರಮಗಳಿಗೆ ಮಾಡುತ್ತಿರುವ 120 ಮಿಲಿಯ ಡಾಲರ್ ಹಣದಲ್ಲಿ ಅಷ್ಟೂ ಬಡ ಕುಟುಂಬಗಳ ಹೆಣ್ಣುಮಕ್ಕಳನ್ನು ಮದುವೆ ಮಾಡಿಸಿ ಸಾವಿರ ಸಾವಿರ ಜೀವಗಳನ್ನು ಉಳಿಸಬಹುದಿತ್ತು. ಈಗ ದೇಶದಲ್ಲಿ ಆದಾಯ ಅಸಮಾನತೆ ಯಾವ ಮಟ್ಟದಲ್ಲಿದೆಯೆಂದರೆ 1920 ರ ಬ್ರಿಟಿಷ್ ರಾಜ್ ನಲ್ಲಿ ಇದ್ದುದಕ್ಕಿಂತಲೂ ಹೆಚ್ಚು” ಎನ್ನುತ್ತಾರೆ ಅವರು.
“90% ಕುಟುಂಬಗಳು ಮಾಸಿಕ 10,000 ರುಪಾಯಿಗಿಂತಲೂ ಕಡಿಮೆ ಆದಾಯದಲ್ಲಿ ದಿನದೂಡುವ ದೇಶದಲ್ಲಿ ಅಂಬಾನಿಯ ಮದುವೆಗೆ 2,673 ಕೋಟಿ ರುಪಾಯಿ ವ್ಯಯಿಸುತ್ತಿರುವುದು ಅಸಹ್ಯದ ಪರಮಾವಧಿ. ಕಾನೂನು ಪ್ರಕಾರ ಅದು ಅವರ ಹಣವಾಗಿರಬಹುದು. ಆದರೆ ಅಂತಹ ದುಂದುವೆಚ್ಚ ತಾಯಿ ಭೂಮಿ ಮತ್ತು ಬಡವರ ವಿರುದ್ಧದ ಪಾಪ” ಎಂದು ಸಿಪಿಐ ಎಂ ಸೆಂಟ್ರಲ್ ಕಮಿಟಿ ಸದಸ್ಯ ಥಾಮಸ್ ಐಸಾಕ್ ಹೇಳುತ್ತಾರೆ.
ರಾಹುಲ್ ಗಾಂಧಿ ರವಾನಿಸಿದ ಸಂದೇಶ
ಈ ಬಿಲಿಯಾಧಿಪತಿಯ ಮನೆಯ ಮದುವೆಗೆ ನಿರೀಕ್ಷೆಯಂತೆ ಬಾಲಿವುಡ್ ನಟರು, ಕ್ರಿಕೆಟರುಗಳು ಹೀಗೆ ದೇಶದ ಎಲ್ಲ ಸೆಲೆಬ್ರಿಟಿಗಳಿಗೆ, ರಾಜಕೀಯ ನಾಯಕರಿಗೆ ಆಹ್ವಾನ ಹೋಗಿದೆ. ಸೆಲೆಬ್ರಿಟಿಗಳಿಗಾದರೋ ಯಾವ ಸಿದ್ಧಾಂತವೂ ಇಲ್ಲ, ಅವರಿಗ ಹಣವೇ ಸಿದ್ಧಾಂತ. ಆದರೆ ಬಡವರ ಓಟುಗಳಿಂದ ರಾಜಕೀಯ ಜೀವನ ನಡೆಸುವ ನಮ್ಮ ರಾಜಕೀಯ ನಾಯಕರುಗಳಿಗೆ ಏನಾಗಿದೆ? ತಮ್ಮ ನಡೆವಳಿಕೆಯಿಂದ ಮಾದರಿಯಾಗಬೇಕಾದ ರಾಜಕಾರಣಿಗಳು ಕರೆಬಂದಾಕ್ಷಣ ಅಲ್ಲಿಗೆ ಹೋಗುವ ಅಗತ್ಯವಿದೆಯೇ? ರಾಜಕಾರಣಿಗಳ ಇಂತಹ ನಡೆವಳಿಕೆ ದೇಶದ ಜನಸಾಮಾನ್ಯರಿಗೆ ಯಾವ ಸಂದೇಶವನ್ನು ನೀಡುತ್ತದೆ?
ಇಂತಹ ಹೊತ್ತಿನಲ್ಲಿ ಬಿಲಿಯಾಧಿಪತಿಯ ಆಹ್ವಾನದ ಹೊರತಾಗಿಯೂ ಅಲ್ಲಿಗೆ ಹೋಗದವರು ನಮಗೆ ಮುಖ್ಯರಾಗುತ್ತಾರೆ, ಆದರ್ಶರಾಗುತ್ತಾರೆ. ನಾವು ನೆನಪಿನಲ್ಲಿಡಬೇಕಾದುದು ಅಂಥವರನ್ನು. ಮದುವೆಗೆ ಬರಬೇಕು ಎಂದು ಸ್ವತಃ ಮುಕೇಶ್ ಅಂಬಾನಿ ಸೋನಿಯಾ ಗಾಂಧಿಯವರ ಮನೆಗೆ ಹೋಗಿ ಕರೆಯೋಲೆ ನೀಡಿದರೂ ಅವರಾಗಲೀ, ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಅವರ ಮಗ ರಾಹುಲ್ ಗಾಂಧಿಯವರಾಗಲೀ ಅಲ್ಲಿಗೆ ಹೋಗಿಲ್ಲ.
ವರ್ಷ ಕಾಲದ ಅಂತರ್ಯುದ್ಧದಿಂದ ನಲುಗಿರುವ ಮಣಿಪುರಕ್ಕೆ ಹೋಗಲು ಸಮಯ ಸಿಗದ ದೇಶದ ಪ್ರಧಾನಿಗೆ ಅಂಬಾನಿ ಮದುವೆಗೆ ಹಾಜರಾಗಲು ಸಮಯ ಸಿಕ್ಕಿದೆ. ಅದೇ ಹೊತ್ತಿನಲ್ಲಿ ರಾಹುಲ್ ಗಾಂಧಿ ಧನಿಕನ ಆಡಂಬರದ ಮದುವೆಗೆ ಹಾಜರಾಗದೆ, ಗುಜರಾತ್, ಹಾತರಸ್, ದೆಹಲಿ ಹೀಗೆ ನಾನಾ ಪ್ರದೇಶಗಳಲ್ಲಿನ ಬಡವರು, ಕಾರ್ಮಿಕರು, ನೊಂದವರನ್ನು ಭೇಟಿಯಾಗುತ್ತಾ, ಮಣಿಪುರಕ್ಕೆ ಹೋಗಿ ಅಲ್ಲಿನ ಜನರ ಅಳಲನ್ನು ಆಲಿಸುತ್ತಾ, ಅವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಾ ಏಕಕಾಲಕ್ಕೆ ಅಂಬಾನಿಗೆ, ದೇಶದ ಪ್ರಧಾನಿಗೆ, ಹಾಗೆಯೇ ಇಡಿಯ ದೇಶಕ್ಕೆ ಒಂದು ಒಳ್ಳೆಯ ಸಂದೇಶವನ್ನು ರವಾನಿಸಿದ್ದಾರೆ. ಬಿಲಿಯಾಧಿಪತಿ ಅಂಬಾನಿಗಿಂತಲೂ ದೇಶದ ಜನಸಾಮಾನ್ಯರು ಮುಖ್ಯ, ಆರ್ಥಿಕ ಶ್ರೀಮಂತಿಕೆಗೆ ಮನ್ನಣೆ ಕೊಡಬಾರದು, ಶ್ರೀಮಂತಿಕೆಯ ಅಸಹ್ಯ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಬಾರದು ಎನ್ನುವ ಘನವಾದ ಸಂಗತಿ ಆ ಸಂದೇಶದಲ್ಲಿದೆ.
ಸ್ವರ ಭಾಸ್ಕರ್ ಮದುವೆಯಲ್ಲಿ ರಾಹುಲ್
ಹಾಗಂತ ರಾಹುಲ್ ಗಾಂಧಿ ಯಾರ ಮದುವೆಗೂ ಹೋಗುವುದಿಲ್ಲವೇ? ಖ್ಯಾತ ಬಾಲಿವುಡ್ ನಟಿ ಎನ್ನುವುದಕ್ಕಿಂತಲೂ ಹೆಚ್ಚಾಗಿ ಜನರ ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳ ಪರ ನಿಲ್ಲತ್ತಾ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಮದುವೆಯಾಗುವ ಮೂಲಕ ಮತೀಯ ಸಾಮರಸ್ಯದ ಸಂದೇಶವನ್ನೂ ರವಾನಿಸಿದ ಹೋರಾಟಗಾರ್ತಿ ಸ್ವರ ಭಾಸ್ಕರ್ ಅವರ ಮದುವೆಗೆ ರಾಹುಲ್ ಹೋಗಿದ್ದರು. ಪ್ರಜಾತಂತ್ರ ದೇಶದ ರಾಜಕಾರಣಿಯಾದವರ ನಡೆ ಎತ್ತ ಇರಬೇಕು, ಯಾವುದನ್ನು ಪ್ರೋತ್ಸಾಹಿಸಬೇಕು ಎನ್ನುವ ಒಂದು ಮಾದರಿ ಸಂದೇಶ ಇದರಲ್ಲಿದೆ.
ಮತ್ತೆ ಮೊದಲಿನ ವಿಷಯಕ್ಕೇ ಬರೋಣ. ಅಂಬಾನಿಯ ಬಳಿಯಲ್ಲಿ ಅಪಾರ ಹಣ ಇದೆ. ಅದು ನೇರ ಮಾರ್ಗದಲ್ಲಿ ಬಂದ ಹಣವಂತೂ ಅಲ್ಲ. ಎಲೆಕ್ಟೋರಲ್ ಬಾಂಡ್ ರೀತಿಯ ಸರಕಾರದೊಂದಿಗಿನ ಕೊಡುಪಡೆಯ ಮೂಲಕ ಗಳಿಸಿದ ಹಣ ಇದು. ಕಾರ್ಮಿಕರನ್ನು ಶೋಷಿಸಿ ಕೂಡಿಹಾಕಿದ ಹಣ ಇದು. ಮದುವೆ ಅವರ ಮನೆಯ ಖಾಸಗಿ ಕಾರ್ಯಕ್ರಮ. ಅದನ್ನು ಖಾಸಗಿಯಾಗಿ ಅವರು ಹೇಗೆ ಬೇಕಾದರೂ ಸಂಭ್ರಮಿಸಲಿ. ಆದರೆ, ಅದನ್ನು ಸಾರ್ವಜನಿಕವಾಗಿಸಿ ಮಾಡುವ ಸಂಪತ್ತಿನ ಅಸಹ್ಯ ಪ್ರದರ್ಶನ ಈ ದೇಶದ ಕೋಟಿ ಕೋಟಿ ಬಡವರ ಗಾಯದ ಮೇಲೆ ಬರೆ ಎಳೆಯುವ ಕಾರ್ಯಕ್ರಮ.
ಇಂತಹ ದುಂದುವೆಚ್ಚದ ಮತ್ತು ಆಡಂಬರದ ಕಾರ್ಯಕ್ರಮಗಳಿಂದ ಪ್ರಜಾತಂತ್ರ ದೇಶದ ಚುನಾಯಿತ ಸರಕಾರ ದೂರ ಇರಬೇಕು. ಅಧಿಕಾರ ದುರುಪಯೋಗಮಾಡಿಕೊಂಡು ಧನಿಕನೊಬ್ಬನ ಕಾರ್ಯಕ್ರಮಕ್ಕೆ ಬೆಂಬಲ, ಸಹಕಾರ ನೀಡುತ್ತಾ ಜನಾಮಾನ್ಯರ ನಿತ್ಯ ಜೀವನಕ್ಕೆ ತೊಂದರೆ ಮಾಡುವುದು ಅಕ್ಷಮ್ಯ. ಎಲ್ಲಕ್ಕೂ ಮುಖ್ಯವಾಗಿ ಬಿಲಿಯಾಧಿಪತಿಯೊಬ್ಬನ ಶ್ರೀಮಂತಿಕೆಯ ಅಸಹ್ಯ ಪ್ರದರ್ಶನದ ಇಂತಹ ಕಾರ್ಯಕ್ರಮಕ್ಕೆ ಬಡ ದೇಶದ ಪ್ರಧಾನಿಯ ಪ್ರತಿಕ್ರಿಯೆ ಹೇಗಿರಬೇಕು ಎಂದರೆ ರಾಹುಲ್ ಗಾಂಧಿ ನೀಡಿದ ಪ್ರತಿಕ್ರಿಯೆಯಂತಿರಬೇಕು.
ಶ್ರೀನಿವಾಸ ಕಾರ್ಕಳ