ಹೆಚ್.ಡಿ ರೇವಣ್ಣ ಅಂಡ್ ಸನ್ಸ್ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತಾಗಿ ಪವರ್ ಟಿವಿ ನಿರಂತರ ವರದಿಗಳನ್ನು ಪ್ರಕಟ ಮಾಡುತ್ತಿದ್ದ ಬೆನ್ನಲ್ಲೇ ಪವರ್ ಟಿವಿ ತನ್ನ ಪರವಾನಗಿಯನ್ನ 2021ರಿಂದ ನವೀಕರಣ ಮಾಡಿಕೊಂಡಿಲ್ಲ ಎಂದು ಆಪಾದಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಹೀಗಾಗಿ, ಹೈಕೋರ್ಟ್ ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು. ಇದೀಗ ಸುಪ್ರೀಂ ಕೋರ್ಟ್ ಅದನ್ನು ತೆರವುಗೊಳಿಸಿ ಇದೊಂದು ರಾಜಕೀಯ ದ್ವೇಷ ಎಂದು ಕಿಡಿಕಾರಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಈ ವಿಚಾರದ ಕುರಿತಾಗಿ ನಾವು ಇನ್ನೇನನ್ನು ಕೇಳಲು ಬಯಸಲ್ಲ. ಇದೊಂದು ರಾಜಕೀಯ ದ್ವೇಷದ ಕ್ರಮ ಅನ್ನೋದು ಸ್ಪಷ್ಟವಾಗುತ್ತಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡೋದು ಸರ್ಕಾರಗಳ ಕರ್ತವ್ಯ ಆದರೆ ಇಲ್ಲಿ ಆಗಿಲ್ಲ. ಇದನ್ನು ಈಗ ನಾವು ರಕ್ಷಿಸದಿದ್ದರೆ ನ್ಯಾಯಾಲಯವು ತನ್ನ ಕರ್ತವ್ಯದಲ್ಲಿ ವಿಫಲವಾದಂತೆ ಎಂದು ಮುಖ್ಯ ನ್ಯಾಯಮೂರ್ತಿಗಳು ಚಾಟಿ ಬೀಸಿದ್ದಾರೆ.
ಅದರಿಂದ ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ವಾಹಿನಿಯು ಪರವಾನಗಿಯನ್ನ ನವೀಕರಣ ಮಾಡಿಕೊಂಡಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಎಲ್ಲಾ ಪ್ರಸಾರಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ನೀಡಿದ ಶೋಕಾಸ್ ನೋಟಿಸ್ ನಂತರ ಈ ಆದೇಶವನ್ನು ಹೊರಡಿಸಿತ್ತು.
ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಕುರಿತು ಸಾಲು ಸಾಲು ಸುದ್ದಿ ಪ್ರಸಾರ ಮಾಡಿದ ನಂತರ ಈ ಕ್ರಮವನ್ನು ಕೈಕೊಳ್ಳಲಾಗಿದೆ ಎಂದು ಪವರ್ ಟಿವಿ ಪರ ವಕೀಲರು ವಾದ ಮಂಡಿಸಿದ್ದಾರೆ.
ಈ ಕುರಿತು ಮಾತನಾಡಲು ಏಪ್ರಿಲ್ 25 ರಂದು ಪ್ರಜ್ವಲ್ ರೇವಣ್ಣ ಪವರ್ ಟಿವಿ ಸಿಇಒ ರಾಕೇಶ್ ಶೆಟ್ಟಿ ಅವರನ್ನು ಭೇಟಿ ಮಾಡಿ, ಪ್ರಜ್ವಲ್ ರೇವಣ್ಣ ವಿರುದ್ಧದ ಎಲ್ಲಾ ಪ್ರಸಾರವನ್ನು ಕೈಬಿಟ್ಟರೆ ಚಾನಲ್ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು ಎಂಬುದನ್ನು ಕೋರ್ಟ್ ಮುಂದೆ ಹೇಳಿದ್ದಾರೆ.
ಕೇಂದ್ರ ಸಂಪುಟ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಏಪ್ರಿಲ್ 27 ರಂದು ರಾಕೇಶ್ ಶೆಟ್ಟಿಗೆ ಕರೆ ಮಾಡಿ, ಟಿವಿ ಚಾನೆಲ್ನಲ್ಲಿ ಪ್ರಜ್ವಲ್ ರೇವಣ್ಣ ಅವರ ಕುರಿತಾದ ಸುದ್ದಿ ಪ್ರಸಾರವನ್ನು ರದ್ದುಗೊಳಿಸದಿದ್ದರೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿಯನ್ನು ಕೋರ್ಟ್ ಮುಂದೆ ಇರಿಸಿದ್ದಾರೆ.
ಜೂನ್ 21 ರಂದು ಪವರ್ ಟಿವಿ ಪ್ರಜ್ವಲ್ ಅವರ ಸಹೋದರ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ವರದಿ ಮಾಡಿತ್ತು.
ಪವರ್ ಟಿವಿ ತನ್ನ ಪರವಾನಗಿಯನ್ನ 2021ರಿಂದ ನವೀಕರಣ ಮಾಡಿಕೊಂಡಿಲ್ಲ ಎಂದು ಜೂನ್ 25 ರಂದು, ಕರ್ನಾಟಕ ಹೈಕೋರ್ಟ್‌ನ ಏಕ ನ್ಯಾಯಾಧೀಶರು ಪವರ್ ಟಿವಿಯ ಎಲ್ಲಾ ಪ್ರಸಾರವನ್ನು ತಡೆಹಿಡಿಯುವ ಮಧ್ಯಂತರ ಆದೇಶ ನೀಡಿತ್ತು.
ಇದಲ್ಲದೇ ಪವರ್ ಟಿವಿ ಪ್ರಸಾರ ಸ್ಥಗಿತಗೊಳಿಸುವಂತೆ ಐಎಎಸ್ ಅಧಿಕಾರಿಯೊಬ್ಬರಿಗೆ ಜೆಡಿಎಸ್ ನ ನಾಯಕ ಕರೆ ಮಾಡಿ ಮನಬಂದಂತೆ ಮಾತನಾಡಿದ್ದಾರೆ. ಈ ಕುರಿತು ದೂರು ನೀಡಿದರು ಸಹ ಅಧಿಕಾರಿಗೆ ಒತ್ತಡ ತಂದು ಪ್ರಸಾರ ನಿಲ್ಲಿಸಿದೆ ಎಂದು ಕೋರ್ಟ್ ಮುಂದೆ ಪವರ್ ಟಿವಿ ವಕೀಲರು ವಾದಿಸಿದ್ದಾರೆ.
2023 ರಲ್ಲೇ ನಮ್ಮ ಚಾನೆಲ್‌ಗೆ ಹತ್ತು ವರ್ಷಗಳ ಪರವಾನಗಿ ನವೀಕರಣವನ್ನು ನೀಡಲಾಗಿದೆ ಎಂದು ಪವರ್ ಟಿವಿ ಕೋರ್ಟ್ ನಲ್ಲಿ ಗಮನಸೆಳೆದಿದೆ.
ಈ ವಾದವನ್ನು ಆಲಿಸಿದ ಕೋರ್ಟ್, ಇದೊಂದು ರಾಜಕೀಯ ದ್ವೇಷದ ಕ್ರಮ ಅನ್ನೋದು ಸ್ಪಷ್ಟವಾಗುತ್ತಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಲು ಬಯಸುತ್ತೇವೆ ಎಂದು ಪವರ್ ಟಿವಿಗೆ ಮಧ್ಯಂತರ ಪರಿಹಾರ ನೀಡಿದೆ.
ಪವರ್ ಟಿವಿ ಪರವಾಗಿ ಹಿರಿಯ ವಕೀಲರಾದ ರಂಜಿತ್ ಕುಮಾರ್, ಸುನಿಲ್ ಫೆರ್ನಾಂಡಿಸ್ ಮತ್ತು ವಕೀಲರಾದ ಮಿಥು ಜೈನ್ ಮತ್ತು ಸಂಚಿತ್ ಗರ್ಗಾ ಅವರು ವಾದ ಮಂಡಿಸಿದ್ದರು.