ಐಸಿಸಿ ಚಾಂಪಿಯನ್ಸ್ ಟೂರ್ನಿ ನಡೆಸುವ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೊಂದಿದೆ. ಪಾಕಿಸ್ತಾನ್ ಈ ಟೂರ್ನಿಯ ಆತಿಥ್ಯವಹಿಸಲು ಸಜ್ಜಾಗಿದೆ. ಆದರೆ ಇದರ ನಡುವೆಯೇ, ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವ ಸಾಧ್ಯವಿಲ್ಲ. ಹೀಗಾಗಿ ಭಾರತದ ಪಂದ್ಯಗಳನ್ನು ಸ್ಥಳಾಂತರಿಸಲು ಬಿಸಿಸಿಐ ಐಸಿಸಿಗೆ ಮನವಿ ಮಾಡಿದೆ.
ಭಾರತೀಯ ಆಟಗಾರರ ಸುರಕ್ಷತೆಯ ಹಿತದೃಷ್ಟಿಯಿಂದ ಪಾಕ್ನಲ್ಲಿ ಟೂರ್ನಿ ಆಡಲು ಸಾಧ್ಯವಿಲ್ಲ. ಹಾಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆಯೋಜನೆಯ ಹಕ್ಕಿನಲ್ಲೇ ತಟಸ್ಥ ಸ್ಥಳದಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸುವಂತೆ ಐಸಿಸಿಗೆ ಮನವಿ ಮಾಡಲಾಗಿದೆ. ಅದರಂತೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪಂದ್ಯಗಳು ಶ್ರೀಲಂಕಾ ಅಥವಾ UAEಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ.
ಈ ಪಂದ್ಯಾವಳಿಯು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದ್ದು, ಎಲ್ಲಾ ಪಂದ್ಯಗಳು ಪಾಕಿಸ್ತಾನದ 3 ಸ್ಥಳಗಳಲ್ಲಿ ನಡೆಯಲಿವೆ ಎಂದು ಪಿಸಿಬಿ ಐಸಿಸಿಗೆ ಸಲ್ಲಿಕೆ ಮಾಡಿರುವ ಕರುಡು ವೇಳಾಪಟ್ಟಿಯಲ್ಲಿ ತಿಳಿದುಬಂದಿದೆ.
ಗುಂಪು-ಎ ನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಇದ್ದರೆ. ಗುಂಪು -ಬಿ ನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ.
2008ರ ನಂತರ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಂಡಿರಲಿಲ್ಲ. ಭಾರತದ ಗಡಿ ವಿಷಯದಲ್ಲಿ ಕೆಲವು ಅಸಮಾಧಾನ ಮತ್ತು ಸಂಘರ್ಷ ಇರುವ ಕಾರಣ ಎರಡು ರಾಷ್ಟುಗಳ ನಡುವೆ ಉತ್ತಮ ಬಾಂಧವ್ಯ ಇಲ್ಲ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಲೆ ಇರುತ್ತದೆ. ಹಾಗಾಗಿ ಈ ಟೂರ್ನಿಯನ್ನು ಪಾಕಿಸ್ತಾನದಲ್ಲಿ ಆಯೋಜನೆ ಮಾಡಿದ್ದು ಭಾರತ ಪಂದ್ಯಗಳನ್ನು ಮಾತ್ರ ಬೇರೆಡೆ ಹಾಡಿಸಿ ಎಂದು ಬಿಸಿಸಿಐ ಕೇಳಿದೆ.