ಒಂದು ಕಾಲಕ್ಕೆ ಅತ್ಯುತ್ತಮ ಸ್ಥಿತಿಯಲ್ಲಿದ್ದ ವಿಶ್ವವಿದ್ಯಾನಿಲಯದಲ್ಲಿ ನಿವೃತ್ತರ ಜಾಗಕ್ಕೆ ಹೊಸ ನೇಮಕಾತಿ ಇಲ್ಲದೇ ಕೆಲವೊಂದು ವಿಭಾಗಗಳಲ್ಲಿ ಖಾಯಂ ಪ್ರಾಧ್ಯಾಪಕರೇ ಇಲ್ಲದ ಸ್ಥಿತಿ, ರಾಜಕೀಯ ಬಲಾಬಲದ ಮೇಲೆ ಸಂಸ್ಥೆಯ ಮುಖ್ಯಸ್ಥರ ನೇಮಕಾತಿ, ಆಡಳಿತ ಮಂಡಳಿಗೆ ಶೈಕ್ಷಣಿಕ ಆಡಳಿತ ಅನುಭವಕ್ಕಿಂತ ರಾಜಕಾರಣಿಗಳಲ್ಲಿ ಪಕ್ಷದ ಬಗೆಗಿನ ನಿಷ್ಠೆ, ಹಣಬಲ, ಜಾತಿ ಬಲದ ಮೇಲೆ ನಾಮನಿರ್ದೇಶನಗಳು, ರಾಜಕಾರಣಿಗಳ ಮರ್ಜಿಗನುಸಾರ ತಾತ್ಕಾಲಿಕ ಸಿಬ್ಬಂದಿಗಳ ನೇಮಕ, ಗೊಂದಲಮಯ ಆಡಳಿತ ನೀತಿಗಳು ಸಾರ್ವಜನಿಕ ಸಂಸ್ಥೆಯನ್ನು ಇನ್ನಿಲ್ಲದಂತೆ ಕಳಾಹೀನವಾಗಿಸಿವೆ – ಡಾ.ಉದಯ ಕುಮಾರ ಇರ್ವತ್ತೂರು
ದೇಶದಲ್ಲಿ ಉದಾರೀಕರಣದ ನಂತರ ಮಾರುಕಟ್ಟೆಯ ಪ್ರಭಾವ ಎಲ್ಲಾ ವಲಯಗಳ ಮೇಲೂ ಗಾಢವಾದ ಪರಿಣಾಮವನ್ನು ಬೀರುತ್ತಿರುವುದನ್ನು ಗಮನಿಸಬಹುದು. ಸರಕಾರ ಬಹಳಷ್ಟು ಉತ್ಪಾದನಾ ರಂಗಗಳಿಂದ ಹಿಂದೆ ಸರಿದು ಖಾಸಗೀ ರಂಗಕ್ಕೆ ಅಥವಾ ದೇಶೀಯ ಉದ್ಯಮಶೀಲರಿಗೆ ಅವಕಾಶಗಳನ್ನು ಕಲ್ಪಿಸತೊಡಗಿದೆ. ಮೇಲ್ನೋಟಕ್ಕೆ ಇದೊಂದು ಪ್ರಗತಿದಾಯಕ ಹೆಜ್ಜೆ ಎನಿಸಿದರೂ, ಇಂತಹ ನೀತಿ ಕೆಲವೊಂದು ಸವಾಲುಗಳಿಗೂ ದಾರಿ ಮಾಡಿಕೊಟ್ಟಿದೆ ಎನ್ನಬಹುದು. ಬದಲಾದ ಮಾರುಕಟ್ಟೆ ನಿರ್ದೇಶಿತ ಇಂತಹ ನೀತಿಯಿಂದಾಗಿ ಕೆಲವು ಆರ್ಥಿಕ ಚಟುವಟಿಕೆಗಳಿಗೆ ಸರಕಾರದ ಸಹಾಯ ಅಥವಾ ಆರ್ಥಿಕ ಬೆಂಬಲ ಇಲ್ಲದೇ ಹೋಗಿ ಸರಕು ಮತ್ತು ಸೇವೆಯ ಬೆಲೆಯಲ್ಲಿ ಏರಿಕೆಯಾಗುತ್ತಿರುವುದನ್ನು ಕಾಣಬಹುದು.
ಉದಾರೀಕರಣದ ನಂತರದ ದಿನಗಳಲ್ಲಿ ಅತ್ಯಂತ ಹೆಚ್ಚು ತೊಂದರೆಗೆ ಒಳಗಾಗಿರುವುದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ. ಸಾರ್ವಜನಿಕ ರಂಗದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯನ್ನು ಅವಲಂಬಿಸಿರುವ ಬಡ ಜನರು ಇದರಿಂದ ದಿನಗಳು ಕಳೆದಂತೆ ಹೆಚ್ಚು ಹೆಚ್ಚು ತೊಂದೆರೆಗೆ ಒಳಗಾಗುತ್ತಿದ್ದಾರೆ. ಉದಾಹರಣೆಗೆ ಸರಕಾರೀ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯೊಬ್ಬನ ಮೇಲೆ ಅಂದಾಜು ಮೂರು ಲಕ್ಷದ ವರೆಗೆ ವಿನಿಯೋಗಿಸಲಾಗುತ್ತದೆ (ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ವೆಚ್ಚವಾಗುತ್ತದೆ ಯಾ ಹೂಡಿಕೆ ಮಾಡಲಾಗುತ್ತದೆ). ಸರಕಾರದ ಸಹಾಯವಿಲ್ಲದೇ ಹೋದರೆ ಪದವಿ ಪಡೆಯಲು ಬಯಸುವ ವಿದ್ಯಾರ್ಥಿಯೊಬ್ಬ ಮೂರು ಲಕ್ಷ ಮೊತ್ತದಷ್ಟು ಶುಲ್ಕ ಭರಿಸಬೇಕಾಗುತ್ತದೆ. ಅಷ್ಟು ಮೊತ್ತದ ಹಣ ವಿನಿಯೋಗಿಸಿದ ಮೇಲೆ ಪದವಿ ಶಿಕ್ಷಣ ಪಡೆದ ವ್ಯಕ್ತಿಯೊಬ್ಬ ಉದ್ಯೋಗದಲ್ಲಿ ನಿರೀಕ್ಷಿಸುವ ವೇತನದ ಪ್ರಮಾಣವೂ ಸಹಜವಾಗಿಯೇ ಅಧಿಕವಾಗಿರುತ್ತದೆ. ಉದ್ಯೋಗ ನೀಡುವ ಸಂಸ್ಥೆ ಹೆಚ್ಚಿನ ಅಧಿಕ ವೇತನ ಪಾವತಿಸಬೇಕಾಗಿ ಬಂದಾಗ ಅದರ ಉತ್ಪನ್ನ ಮತ್ತು ಸೇವೆಯ ಒಟ್ಟಾರೆ ವೆಚ್ಚವೂ ಅಧಿಕವಾಗಿ ಮಾರುಕಟ್ಟೆಯಲ್ಲಿ ಅದರ ಉತ್ಪನ್ನದ ಬೆಲೆಯೂ ಏರಿಕೆಯಾಗುತ್ತದೆ. ಇದರ ಪರಿಣಾಮವಾಗಿ ಹಣದುಬ್ಬರ, ಬೆಲೆ ಏರಿಕೆ ಮುಂತಾದ ಕಾರಣಗಳಿಂದ ಬಡವರ ಮತ್ತು ಕಡಿಮೆ ವೇತನ ಪಡೆಯುವ ಎಲ್ಲಾ ಜನವರ್ಗಗಳ ಬದುಕು ದುಸ್ತರವಾಗುತ್ತದೆ.
ಇಷ್ಟಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಉದ್ಯೋಗಾಕಾಂಕ್ಷಿಗಳಾದ ಭಾರತೀಯರು ಉದ್ಯೋಗ ಪಡೆಯುವುದೂ ಕಡಿಮೆಯಾಗಬಹುದಾಗಿದೆ. ಪ್ರಸ್ತುತ ಹೊರಗುತ್ತಿಗೆಯ ಆಧಾರದಲ್ಲಿ ಭಾರತೀಯರಿಗೆ ಅಥವಾ ತೃತೀಯ ಜಗತ್ತಿನ ಉದ್ಯೋಗಿಗಳಿಗೆ ನೀಡುವ ವೇತನ ಉಳಿದವರಿಗಿಂತ ಕಡಿಮೆ ಇದೆ. ಈ ಕಾರಣದಿಂದಾಗಿ ನಮ್ಮ ತಂತ್ರಜ್ಞರು ಮತ್ತು ಇತರ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕೆಲಸ ಲಭ್ಯವಾಗುತ್ತಿದೆ. ಒಂದು ವೇಳೆ ಭಾರತೀಯ ಉದ್ಯೋಗಿಗಳ ವೇತನವೂ ಏರಿಕೆಯಾದಲ್ಲಿ, ಈಗ ಸಿಗುತ್ತಿರುವ ಉದ್ಯೋಗಗಳು ಬೇರೆಡೆಗೆ ಪಲಾಯನ ಮಾಡಬಹುದಾಗಿದೆ. ಅಂದರೆ ಒಂದು ವಸ್ತುವಿಗೆ ಮಾರುಕಟ್ಟೆ “ಎ” ಯಲ್ಲಿ 100 ರೂ ಇದ್ದು ಮಾರುಕಟ್ಟೆ “ಬಿ” ಯಲ್ಲಿ 90 ರೂಪಾಯಿ ಇದ್ದರೆ, ಆಗ ಮಾರುಕಟ್ಟೆ “ಬಿ” ಯಿಂದ ನಾವು ಖರೀದಿ ಮಾಡಬಯಸುತ್ತೇವೆ. ಕಾರಣ ಸ್ಪಷ್ಟವಿದೆ, ಹಾಗೆ ಮಾಡುವುದರಿಂದ ನಮಗೆ 10 ರೂಪಾಯಿ ಉಳಿತಾಯವಾಗುತ್ತದೆ ಮತ್ತು ನಮ್ಮ ಉತ್ಪಾದನಾ ವೆಚ್ಚವೂ ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ. ಉತ್ಪಾದನಾ ವೆಚ್ಚ ಕಡಿಮೆಯಾದಾಗ ಮಾರಾಟದ ದರವೂ ಕಡಿಮೆ ಆಗುತ್ತದೆ. ಇದರಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗಿ ವ್ಯಾಪಾರ ವಹಿವಾಟು ವಿಸ್ತರಿಸಲು ಸಾಧ್ಯವಾಗುತ್ತದೆ. ವ್ಯಾಪಾರ ವಹಿವಾಟು ವೃದ್ಧಿಸಿದಾಗ ನಮ್ಮ ಸಂಪತ್ತು ಕೂಡಾ ಹೆಚ್ಚಿ, ನಮ್ಮ ಆರ್ಥಿಕ ಶಕ್ತಿಯು ಬಲವರ್ಧನೆಗೊಳ್ಳುತ್ತದೆ. ಚೀನಾ ಅತ್ಯಂತ ಕಡಿಮೆ ಅಥವಾ ಸ್ಪರ್ಧಾತ್ಮಕ ದರದಲ್ಲಿ ಉತ್ಪಾದನೆ ಮಾಡುವ ಕಾರಣ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಿ ವಿಶ್ವದಲ್ಲಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲು ಶಕ್ತವಾಯಿತು.
ನಮ್ಮ ದೇಶದಲ್ಲಿ ಸರಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಂಪನ್ಮೂಲ ವಿನಿಯೋಗ ಮಾಡಿರುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿತ್ತು. ಹೀಗಾಗಿ ಅತ್ಯುತ್ತಮ ವೈದ್ಯರು, ತಂತ್ರಜ್ಞರು, ವಿಜ್ಞಾನಿಗಳು ರೂಪುಗೊಳ್ಳಲು ಸಾಧ್ಯವಾಯಿತು. ಒಂದು ವೇಳೆ ಸರಕಾರ ದೊಡ್ಡ ಮಟ್ಟದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿಲ್ಲದೇ ಹೋಗಿದ್ದರೆ ಇದು ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂತಹ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ರಂಗ ಇಂತಹ ಬದಲಾವಣೆಯಿಂದ, ಆರ್ಥಿಕವಾಗಿ ಶಕ್ತಿ ಇಲ್ಲದಿರುವ ಪ್ರತಿಭಾವಂತರನ್ನು ಅನಿವಾರ್ಯವಾಗಿ ಕಳೆದುಕೊಳ್ಳುತ್ತಿದೆ. ನಿಧಾನವಾಗಿ ಆದರೆ ಬಹಳ ಸ್ಪಷ್ಟವಾಗಿ ಈ ಎರಡೂ ರಂಗಗಳು ಪರಿವರ್ತನೆಗೊಳ್ಳುತ್ತಿವೆ. ಇಂತಹ ಪರಿವರ್ತನೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉನ್ನತ ಶಿಕ್ಷಣ ದುಬಾರಿಯಾಗುತ್ತಿರುವುದು ಮಾತ್ರವಲ್ಲ ಭವಿಷ್ಯದಲ್ಲಿ ಸಮಾಜಕ್ಕೂ ಕೆಲವೊಂದು ಅವಶ್ಯಕ ಸೇವೆಯೂ ದುಬಾರಿಯಾಗಲಿದೆ.
ದಕ್ಷಿಣ ಕನ್ನಡ, ಕೊಡಗು ಮತ್ತು ಉಡುಪಿ ಜಿಲ್ಲೆಯನ್ನು ಗಮನಿಸಿದರೆ ಇಂತಹ ಬದಲಾವಣೆಯ ಪರಿಣಾಮ ನಮಗೆ ಗೋಚರವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೃತ್ತಿಪರ ಶಿಕ್ಷಣ ರಂಗದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಖಾಸಗೀ ಬಂಡವಾಳ ಹೂಡಿಕೆಯಾಗುತ್ತಿದ್ದು ದೊಡ್ಡ ಸಂಖ್ಯೆಯಲ್ಲಿ ವೈದ್ಯರು, ಇಂಜಿನಿಯರುಗಳು ಪಧವೀಧರರಾಗಿ ಹೊರಬರುತ್ತಿದ್ದಾರೆ. ಇವರಲ್ಲಿ ಬಹುಪಾಲು ಜನ ಕರ್ನಾಟಕದ ಹೊರಗಿನವರು, ಸ್ಥಳೀಯರ ಸಂಖ್ಯೆ ಬಹಳ ಕಡಿಮೆ. ಸರಕಾರದ ಸೀಟು ಪಡೆದವರು ಕೂಡಾ ದುಬಾರಿ ಶುಲ್ಕ ಪಾವತಿಸಿ ಶಿಕ್ಷಣ ಮುಂದುವರಿಸುವ ಪರಿಸ್ಥಿತಿ ಇದೆ. ಇದರೊಂದಿಗೇ ರೋಗಿಗಳ ಶುಶ್ರೂಷಾ ಶುಲ್ಕವೂ ಅಧಿಕವೇ ಇದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ಏರಿಕೆಯಾದರೂ ಸರಕಾರಿ ವೈದ್ಯಕೀಯ ಕಾಲೇಜುಗಳು ಆರಂಭಗೊಳ್ಳುತ್ತಿಲ್ಲ. ಬದಲಿಗೆ ಜಿಲ್ಲಾ ಕೇಂದ್ರದಲ್ಲಿರುವ ಪ್ರಮುಖ ಸರಕಾರೀ ಆಸ್ಪತ್ರೆ ಯಾ ಖಾಸಗೀ ವೈದ್ಯಕೀಯ ಕಾಲೇಜಿನ ಕೃಪಾಕಟಾಕ್ಷದಿಂದ ನಡೆಯುವ ಪರಿಸ್ಥಿತಿ ಇದೆ. ಸದ್ಯಕ್ಕೆ ಸರಕಾರದ ಈ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ದೊರೆಯುವ ಸೇವೆಯ ಗುಣಮಟ್ಟ ತೀರಾ ಕಳಪೆಯೇನೂ ಅಲ್ಲ. ಆದರೆ ಇಷ್ಟೊಂದು ದೊಡ್ಡ ಜಿಲ್ಲಾ ಆಸ್ಪತ್ರೆ ಮತ್ತು ಸಾಕಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವಾಗ ಸರಕಾರದ ವೈದ್ಯಕೀಯ ಕಾಲೇಜು ಇಲ್ಲದಿರುವುದು ಜಿಲ್ಲೆಯ ಮಟ್ಟಿಗೆ, ಅದರಲ್ಲಿಯೂ ಬುದ್ಧಿವಂತರ ಜಿಲ್ಲೆಯಾದ ದಕ್ಷಿಣ ಕನ್ನಡದ ಮಟ್ಟಿಗೆ ದೊಡ್ಡ ಕೊರತೆಯೇ ಸರಿ.
ಸಾಮಾನ್ಯ ಶಿಕ್ಷಣ ನೀಡುವ ಪದವಿ ಕಾಲೇಜುಗಳಲ್ಲಿ ಶೇಕಡಾ 78 ಖಾಸಗೀ ಕಾಲೇಜುಗಳಾದರೆ ಶೇಕಡಾ 19 ರಷ್ಟು ಸರಕಾರೀ ಕಾಲೇಜುಗಳು ಮತ್ತು ಶೇಕಡಾ 3 ರಷ್ಟು ಖಾಸಗಿ ವಲಯದ ಸ್ವಾಯತ್ತ ಕಾಲೇಜುಗಳು, ಸ್ವಾಯತ್ತ ಕಾಲೇಜುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಲಿದೆ. ಸರಕಾರೀ ಕಾಲೇಜುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು, ವಿದ್ಯಾರ್ಥಿಗಳ ಸಂಖ್ಯೆಯೂ ಸಾಕಷ್ಟಿರುವುದು ಉತ್ತಮ ಬೋಧಕವರ್ಗ, ಮೂಲಭೂತ ಸೌಕರ್ಯಗಳನ್ನು ಸರಕಾರ ಕೊಡ ಮಾಡುತ್ತಿರುವುದು ಒಂದು ಉತ್ತಮ ಬೆಳವಣಿಗೆ ಎಂದೇ ಹೇಳಬಹುದಾಗಿದೆ. ಇದರ ಜೊತೆಗೇನೇ ಈ ಪ್ರದೇಶದ ಹೆಮ್ಮೆಯ ವಿಶ್ವವಿದ್ಯಾನಿಲಯ ಇತ್ತೀಚಿನ ದಿನಗಳಲ್ಲಿ ಅನೇಕ ಸಮಸ್ಯೆಗಳಿಂದ ಬಳಲುತ್ತಾ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿಯೇ ಉತ್ತಮ ವಿಶ್ವವಿದ್ಯಾನಿಲಯವಾಗಿ ಭರವಸೆ ಮೂಡಿದ ಈ ಸಂಸ್ಥೆಯ ಭವಿಷ್ಯದ ಬಗ್ಗೆ ಈ ಪ್ರದೇಶದ ಜನ ಈಗ ಚಿಂತಿತರಾಗಿದ್ದಾರೆ.
ಒಂದೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಖಾಸಗೀ ವಿಶ್ವವಿದ್ಯಾನಿಲಯಗಳು ಅಸ್ತಿತ್ವಕ್ಕೆ ಬರುತ್ತಿವೆ. ಉತ್ತಮವಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ವಾಯತ್ತತೆ ಪಡೆದುಕೊಂಡು ವಿಶ್ವವಿದ್ಯಾನಿಲಯದಿಂದ ಹೊರ ನಡೆಯುತ್ತಿವೆ. ಇನ್ನೊಂದೆಡೆ ಒಂದು ಕಾಲಕ್ಕೆ ಅತ್ಯುತ್ತಮ ಸ್ಥಿತಿಯಲ್ಲಿದ್ದ ವಿಶ್ವವಿದ್ಯಾನಿಲಯದಲ್ಲಿ ನಿವೃತ್ತರ ಜಾಗಕ್ಕೆ ಹೊಸ ನೇಮಕಾತಿ ಇಲ್ಲದೇ ಕೆಲವೊಂದು ವಿಭಾಗಗಳಲ್ಲಿ ಖಾಯಂ ಪ್ರಾಧ್ಯಾಪಕರೇ ಇಲ್ಲದ ಸ್ಥಿತಿ, ರಾಜಕೀಯ ಬಲಾಬಲದ ಮೇಲೆ ಸಂಸ್ಥೆಯ ಮುಖ್ಯಸ್ಥರ ನೇಮಕಾತಿ, ಆಡಳಿತ ಮಂಡಳಿಗೆ ಶೈಕ್ಷಣಿಕ ಆಡಳಿತ ಅನುಭವಕ್ಕಿಂತ ರಾಜಕಾರಣಿಗಳಲ್ಲಿ ಪಕ್ಷದ ಬಗೆಗಿನ ನಿಷ್ಠೆ, ಹಣಬಲ, ಜಾತಿ ಬಲದ ಮೇಲೆ ನಾಮನಿರ್ದೇಶನಗಳು, ರಾಜಕಾರಣಿಗಳ ಮರ್ಜಿಗನುಸಾರ ತಾತ್ಕಾಲಿಕ ಸಿಬ್ಬಂದಿಗಳ ನೇಮಕ, ಗೊಂದಲಮಯ ಆಡಳಿತ ನೀತಿಗಳು ಸಾರ್ವಜನಿಕ ಸಂಸ್ಥೆಯನ್ನು ಇನ್ನಿಲ್ಲದಂತೆ ಕಳಾಹೀನವಾಗಿಸಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ವಾಯುಯಾನ ಕ್ಷೇತ್ರದಲ್ಲಿ ಏರ್ಇಂಡಿಯಾಕ್ಕೆ ಆದ ಗತಿಯೇ ವಿಶ್ವವಿದ್ಯಾನಿಲಯಗಳಿಗೂ ಆಗಬಹುದೇನೋ? ಹಾಗಾದಾಗ ಬಡ, ಮಧ್ಯಮವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಗತಿ ಏನು? ಬಡವರ ಬಗ್ಗೆ ಬಹುಸಂಖ್ಯಾತ, ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ರಾಜಕೀಯ ಪಕ್ಷಗಳ ನಿಲುವು ಇದರ ಕುರಿತು ಏನಿದೆ? ಬದುಕಿನ ನೈಜ ಸವಾಲುಗಳ ಬಗ್ಗೆ ರಾಜಕೀಯ ಪಕ್ಷಗಳನ್ನು ಸಾಮಾನ್ಯ ಜನ ಪ್ರಶ್ನಿಸದೇ ಹೋದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಸರಕಾರಿ ಸಂಸ್ಥೆಗಳಲ್ಲಿ ಅನಗತ್ಯ ಗೊಂದಲಗಳನ್ನು ಉಂಟುಮಾಡುವ ಪ್ರವೃತ್ತಿಯನ್ನೂ ರಾಜಕೀಯ ಹಿತಾಸಕ್ತಿಗಳು ಕಾಣಬಹುದಾಗಿದೆ.
ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರಕಾರ ಬಹಳ ಸ್ಪಷ್ಟವಾದ ನೀತಿ ಒಂದನ್ನು ಹೊಂದಬೇಕಿದೆ. ಖಾಸಗೀ ವಲಯದ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ, ಉದ್ಯೋಗ, ಆಡಳಿತ ಶುಲ್ಕ ಇತ್ಯಾದಿಗಳಿಗೆ ನಿಯಮ ರೂಪಿಸಿ ಅದರ ಅನುಷ್ಠಾನಕ್ಕೆ ಸ್ವಾಯತ್ತ ಆಯೋಗ ಒಂದರ ನೇಮಕಾತಿ ತುಂಬಾ ಅಗತ್ಯವಿದೆ. ಸರಕಾರೀ ಸಂಸ್ಥೆಗಳಲ್ಲಿ ಅಗತ್ಯವಿರುವಷ್ಟು ಪ್ರಮಾಣದ ಶಿಕ್ಷಕ ಮತ್ತು ಆಡಳಿತ ಸಿಬ್ಬಂದಿಯ ನೇಮಕ, ಮೂಲಭೂತ ಸೌಕರ್ಯ ಮತ್ತು ಕಟ್ಟುನಿಟ್ಟಿನ ಮೇಲುಸ್ತುವಾರಿಯ ಮೂಲಕ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕಿದೆ. ಅದರೊಂದಿಗೇ ಓಬೀರಾಯನ ಕಾಲದ ಅನಗತ್ಯ ನಿಯಮಗಳಲ್ಲಿ ಬದಲಾವಣೆ ತಂದು ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಸರಿಹೊಂದುವ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟು ಸರಕಾರೀ ಸಂಸ್ಥೆಗಳು ಖಾಸಗೀ ಶಿಕ್ಷಣ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸುವ ರೀತಿಯಲ್ಲಿ ಅವುಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಇದೇ ರೀತಿಯ ಬದಲಾವಣೆಗಳು ಆರೋಗ್ಯ ಕ್ಷೇತ್ರದಲ್ಲಿಯೂ ಅಗತ್ಯವಾಗಿ ಆಗಬೇಕಿದೆ ಇದನ್ನು ಒತ್ತಾಯಿಸುವ ಮಟ್ಟಿಗೆ ನಾಗರಿಕ ಸಮಾಜ ಜಾಗೃತವಾಗುವುದು ಮತ್ತು ರಾಜಕೀಯ ನಾಯಕರು ಚುನಾವಣೆಯ ಚಿಂತೆ ಮರೆತು ನಾಡಿನ ನಾಳಿನ ಬಗ್ಗೆ ಚಿಂತಿತರಾಗುವುದು ಯಾವಾಗ?
ಡಾ. ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ-“ಬದಲಾವಣೆ – ಯಾರಿಂದ?”